ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಾಭಿಷಕ್ತ `ಪ್ರಾಣ'

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

 ಒಂಬತ್ತು ವರ್ಷಗಳ ಹಿಂದೆ ಮರಿಮೊಮ್ಮಗ ಹುಟ್ಟಿದ. ಎಂಬತ್ತನಾಲ್ಕು ವಯಸ್ಸಿನ ಅಜ್ಜ ಹಿರಿಹಿರಿ ಹಿಗ್ಗಿದರು. ಕನಕಾಭಿಷೇಕದ ಭಾಗ್ಯ. ಮನೆಯವರೆಲ್ಲಾ ಮರಿಮೊಮ್ಮಗನಿಗೆ ಹೆಸರಿಡುವ ಜವಾಬ್ದಾರಿಯನ್ನೂ ಅವರಿಗೇ ವಹಿಸಿದರು. ಅಜ್ಜ ಮಗುವಿನ ಕಿವಿಯಲ್ಲಿ ಉಸುರಿದ್ದು `ಅಮರ್‌ಪ್ರಾಣ್'.

ಏಳು ದಶಕ ಬಣ್ಣದ ಲೋಕದ ಸಹವಾಸ ಮಾಡಿದ ನಂತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗುತ್ತಿರುವ ಪ್ರಾಣ್ ಈಗ ಮೊದಲಿನಷ್ಟು ನಿರರ್ಗಳವಾಗಿ ಮಾತನಾಡಲಾರರು. ಆದರೆ ಅವರ ನೆನಪಿನ ಶಕ್ತಿ ಮಾತ್ರ ಕುಂದಿಲ್ಲ. ಜೀವನದಲ್ಲಿ ಸಿಕ್ಕ ಪ್ರಶಸ್ತಿಗಳಲ್ಲಿ ಯಾವುದು ತುಂಬಾ ಮೆಚ್ಚು ಎಂದರೆ, ಅವರು ಎರಡನೇ ಯೋಚನೆಯೇ ಇಲ್ಲದೆ ಹೇಳುವುದು- `ಅಮರ್‌ಪ್ರಾಣ್' ಜನನ.

ದೆಹಲಿಯಲ್ಲಿ ಹುಟ್ಟಿದ ಪ್ರಾಣ್ ಸರ್ಕಾರಿ ಗುತ್ತಿಗೆದಾರರಾಗಿದ್ದ ಅಪ್ಪನ (ಲಾಲಾ ಕೇವಲ್ ಕೃಷ್ಣನ್ ಸಿಕಂದ್) ವರ್ಗಾವಣೆಯಿಂದಾಗಿ ಉತ್ತರ ಭಾರತದ ಹಲವು ಊರುಗಳನ್ನು ಸುತ್ತಬೇಕಾಯಿತು. ಕಪುರ್ತಲ, ಮೀರತ್, ಡೆಹ್ರಾಡೂನ್, ರಾಮ್‌ಪುರ್ ಹೀಗೆ ವಿವಿಧ ಕಡೆ ಓದು. ಕೊನೆಗೆ ಕ್ಯಾಮೆರಾ ಹಿಡಿದು ಅದನ್ನು ವೃತ್ತಿಪರವಾಗಿ ಕಲಿಯಲೆಂದು ಲಾಹೋರ್‌ನಲ್ಲಿ ನೆಲೆಗೊಂಡರು. ಸಿನಿಮಾ ಸಹವಾಸ ಸಾಧ್ಯವಾದದ್ದು ಬರಹಗಾರ ವಾಲಿ ಮೊಹಮ್ಮದ್ ವಾಲಿ ಪರಿಚಯದಿಂದ. `ಜಮ್ಲಾ ಜತ್' ಪಂಜಾಬಿ ಚಿತ್ರಕ್ಕೆ ಬಣ್ಣಹಚ್ಚುವುದರ ಮೂಲಕ 1940ರಲ್ಲಿ ಅಭಿನಯ ಸಿನಿಮಾ ವೃತ್ತಿಬದುಕು ಶುರುವಾಯಿತು. ಆಮೇಲೆ ಒಂದೆರಡು ಸಣ್ಣ ಪುಟ್ಟ ಪಾತ್ರಗಳು ಸಿಕ್ಕಮೇಲೆ ನಿರ್ದೇಶಕ ದಾಲ್‌ಸುಖ್ ಎಂ.ಪಾಂಚೋಲಿ `ಖಾಂದಾನ್' ಚಿತ್ರದ ನಾಯಕನ ಪಾತ್ರವನ್ನು ಪ್ರಾಣ್‌ಗೆ ನೀಡಿದರು.

ಮೊದಮೊದಲು ಸಿಕ್ಕ ಅವಕಾಶದಿಂದ ಪುಳಕಗೊಂಡ ಪ್ರಾಣ್ ಆಮೇಲೆ ಅದು ಪೀಕಲಾಟದ ವಿಷಯ ಎಂದು ಅರಿತರು. `ಜಮ್ಲಾ ಜತ್'ನಲ್ಲಿ ಬಾಲನಟಿಯಾಗಿದ್ದ ನೂರ್ ಜೆಹಾನ್ ಈ ಚಿತ್ರದಲ್ಲಿ ಅವರಿಗೆ ನಾಯಕಿ. ಹೇಳಿಕೇಳಿ ಹದಿನೈದು ವರ್ಷ ಚಿಕ್ಕ ಹುಡುಗಿ. ಎತ್ತರದ ನಿಲುವಿನ ಪ್ರಾಣ್ ಪಕ್ಕ ಆಕೆಯನ್ನು ನಿಲ್ಲಿಸಲು ಇಟ್ಟಿಗೆಗಳನ್ನು ಜೋಡಿಸುತ್ತಿದ್ದರು. ಕ್ಲೋಸ್‌ಅಪ್ ದೃಶ್ಯಗಳು ಬಂದಾಗಲೆಲ್ಲಾ ಪ್ರಾಣ್ ಇಟ್ಟಿಗೆ ಜೋಡಿಸುವವರನ್ನು ಕಂಡು ಮರುಗುತ್ತಿದ್ದರು. ಹಾಡುಗಳ ಚಿತ್ರೀಕರಣ ಬಂದಾಗ ಅದಕ್ಕೆ ತುಟಿ ಆಡಿಸುವುದು ತುಂಬಾ ಕಷ್ಟ ಎನಿಸಿತು.

ಈಗಲೂ ಪ್ರಾಣ್ ಆ ಅನುಭವದ ಕುರಿತು ಹೇಳುತ್ತಲೇ ಇರುತ್ತಾರೆ: `ಹಾಡುಗಳಿಗೆ ತುಟಿ ಚಲನೆ ತಮಾಷೆಯ ಮಾತಲ್ಲ. ಎಷ್ಟೇ ಸಹಜವಾಗಿ ನಾನು ಅಭಿನಯಿಸಲು ಹೊರಟರೂ ಅದು ಕೃತಕ ಎನಿಸುತ್ತಿತ್ತು. ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಅದಕ್ಕೇ ನಾನು ಇನ್ನು ಮುಂದೆ ನಾಯಕ ಆಗಲೇಬಾರದು ಎಂದು ನಿರ್ಧರಿಸಿದೆ. ಅದರಲ್ಲೂ ರೊಮ್ಯಾಂಟಿಕ್ ನಾಯಕನಾಗುವುದೆಂದರೆ ನನ್ನ ಪಾಲಿಗೆ ದುಃಸ್ವಪ್ನ. ಖಳ, ಪೋಷಕ ನಟ ಆದಮೇಲೆ ಕೆಲವು ಹಾಡುಗಳಲ್ಲಿ ಕಾಣಿಸಿಕೊಂಡೆನಾದರೂ ನಾಯಕ ಪಡುವ ಹಾಡಿನ ಕಷ್ಟದಿಂದ ಪಾರಾದೆ'.

ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯಾದ ಮೇಲೆ ಪ್ರಾಣ್ ಸಿನಿಮಾ ಅಭಿನಯಕ್ಕೆ ಅಲ್ಪವಿರಾಮ. ಲೇಖಕ ಸಾದತ್ ಹಸನ್ ಮಾಂಟೋ ಸಹಾಯದಿಂದ `ಬಾಂಬೆ ಟಾಕೀಸ್' ಚಿತ್ರದಲ್ಲಿ ಪ್ರಾಣ್‌ಗೆ ಅವಕಾಶ ಸಿಕ್ಕಿತು. ನಾಯಕನಾಗಿ ದೇವಾನಂದ್‌ಗೆ ಬ್ರೇಕ್ ನೀಡಿದ ಆ ಚಿತ್ರವೇ ಪ್ರಾಣ್ ಚಿತ್ರಪಯಣಕ್ಕೆ ರಹದಾರಿ ತೋರಿದ್ದು.

1945ರಲ್ಲಿ ಶುಕ್ಲಾ ಅವರನ್ನು ಮದುವೆಯಾಗಿದ್ದ ಪ್ರಾಣ್ ಒಂದಿಷ್ಟು ಕಾಲ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದೂ ಇದೆ. ಅವರ ಗಂಡುಮಕ್ಕಳಾದ ಅರವಿಂದ್, ಸುನಿಲ್‌ಗೆ ಆ ಕಥೆಗಳು ಅಷ್ಟಾಗಿ ನೆನಪಿಲ್ಲ. ಆದರೆ ಹೆಣ್ಣುಮಗಳು ಪಿಂಕಿ ಕುತೂಹಲದಿಂದ ಅಪ್ಪನ ಬದುಕಿನ ಅಷ್ಟೂ ಸಂಗತಿಗಳನ್ನು ಅಮ್ಮನಿಂದ ಕೇಳಿ ತಿಳಿದುಕೊಂಡಿದ್ದಾರೆ. ಪ್ರಾಣ್‌ಗೂ ಪಿಂಕಿ ಅಂದರೆ ಪ್ರಾಣ. ಇನ್ನೊಂದು ಪ್ರಾಣ ಫುಟ್‌ಬಾಲ್. ಅವರಿಗೆ ಫುಟ್‌ಬಾಲ್ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ `ಡೈನಮೋಸ್ ಫುಟ್‌ಬಾಲ್ ಕ್ಲಬ್' ಹುಟ್ಟುಹಾಕಿ, ಅದಕ್ಕೆ 1950ರ ದಶಕದಲ್ಲಿ ಹಣ ಸಹಾಯವನ್ನೂ ಮಾಡಿದರು. ಅವಕಾಶ ಸಿಕ್ಕಾಗ ತಾವೂ ಆಟವಾಗಿ ಖುಷಿಪಡುತ್ತಿದ್ದರು.

`ಜಿದ್ದಿ', `ಬಡಿ ಬೆಹನ್' ಚಿತ್ರಗಳಲ್ಲಿ ಖಳನ ಪಾತ್ರದಲ್ಲಿ ಮನಸೂರೆಗೊಂಡ ಮೇಲೆ ದಿಲೀಪ್ ಕುಮಾರ್, ದೇವಾನಂದ್, ರಾಜ್‌ಕುಮಾರ್ ನಾಯಕರಾದ ಚಿತ್ರಗಳಲ್ಲಿ ಪ್ರಾಣ್‌ಗೆ ಅವಕಾಶ ಕಾಯಂ ಆಯಿತು. ಆ ಎಲ್ಲಾ ಚಿತ್ರಗಳ ಖಳ ಅವರೇ. `ಆಜಾದ್', `ದೇವದಾಸ್', `ಮಧುಮತಿ', `ಅಮರ್‌ದೀಪ್', `ಜಾಗತೇ ರಹೋ', `ಜಿಸ್ ದೇಶ್ ಮೆ ಗಂಗಾ ಬೆಹತೇ ಹೈ' ಎಲ್ಲದರಲ್ಲೂ ಪ್ರಾಣ್ ಛಾಪು.

ಕಿಶೋರ್‌ಕುಮಾರ್, ಮೆಹಮೂದ್ ಹಾಸ್ಯಪಾತ್ರಗಳಲ್ಲಿ ಅಭಿನಯಿಸಿದ ಹಲವು ಚಿತ್ರಗಳಲ್ಲಿ ಇವರಿಗೆ ಅವಕಾಶ ಸಿಕ್ಕಿದ್ದು ಇನ್ನೊಂದು ವಿಶೇಷ. 1969ರಿಂದ 82ರ ಅವಧಿಯಲ್ಲಿ ಪ್ರಾಣ್ ಸಿನಿಮಾ ಬದುಕು ಉತ್ತುಂಗದಲ್ಲಿತ್ತು. ವಿನೋದ್ ಖನ್ನಾ, ಅಮಿತಾಭ್ ಬಚ್ಚನ್, ಶತ್ರುಘ್ನ ಸಿನ್ಹ, ರಣಧೀರ್ ಕಪೂರ್, ರಿಶಿ ಕಪೂರ್ ಮೊದಲಾದ ನಾಯಕರು ಪ್ರವೇಶ ಕೊಟ್ಟಾಗ ಅವರೆಲ್ಲರಿಗಿಂತ ಹೆಚ್ಚು ಸಂಭಾವನೆ ಪ್ರಾಣ್‌ಗೆ ಸಲ್ಲುತ್ತಿದ್ದುದೇ ಇದಕ್ಕೆ ಸಾಕ್ಷಿ.

1984ರಲ್ಲಿ `ಶರಾಬಿ' ಚಿತ್ರದಲ್ಲಿ ನಟಿಸಿದ ನಂತರ ಪ್ರಾಣ್ ತೆರೆಮೇಲಿನ ಉಪಸ್ಥಿತಿ ಕಡಿಮೆಯಾಗುತ್ತಾ ಬಂತು. 1990ರ ದಶಕದಲ್ಲಿ ಅವರೇ ವಯೋಸಹಜ ಆರೋಗ್ಯದ ಸಮಸ್ಯೆಗಳಿಂದಾಗಿ ಪಾತ್ರಗಳನ್ನು ನಿರಾಕರಿಸಿದರು. ಅಮಿತಾಭ್ ಬಚ್ಚನ್ ಒತ್ತಡಕ್ಕೆ ಮಣಿದು `ತೇರೆ ಮೇರೆ ಸಪ್ನೆ' (1996), `ಮೃತ್ಯುದಂಡ್' (1997) ಚಿತ್ರಗಳಲ್ಲಿ ಅಭಿನಯಿಸಿದರಷ್ಟೆ. ಅಷ್ಟು ಹೊತ್ತಿಗೆ ದಣಿದಿದ್ದ ಪ್ರಾಣ್ `ತೇರೆ ಮೇರೆ ಸಪ್ನೆ'ಯ ತಮ್ಮ ಅಭಿನಯದ ಅಷ್ಟೂ ದೃಶ್ಯಗಳಲ್ಲಿ ಕುಳಿತೇ ಇದ್ದರು. ನಿರ್ದೇಶಕರಿಗೆ ಅವರಿಂದ ಅಷ್ಟು ಮಾತ್ರ ಅಭಿನಯ ತೆಗೆಸಲು ಸಾಧ್ಯವಾದದ್ದು. 2000ದ ದಶಕದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಪ್ರಾಣ್ ಬಣ್ಣದ ಜಗತ್ತನ್ನು ದೂರದಿಂದಲೇ ನೋಡತೊಡಗಿದರು.

ಡಬ್ಬಿಂಗ್ ಮಾಡುವಾಗಷ್ಟೇ ತಮ್ಮ ಚಿತ್ರಗಳನ್ನು ನೋಡುತ್ತಿದ್ದ ಪ್ರಾಣ್‌ಗೆ ಆಗೀಗ ಟೀವಿಯಲ್ಲಿ ಆ ಸಿನಿಮಾಗಳನ್ನು ಮತ್ತೆ ನೋಡಿದಾಗ ಸಂಕಟವಾಗುತ್ತದಂತೆ. ಮನೆಯಲ್ಲಿ ಎಲ್ಲರ ಎದುರು `ಎಷ್ಟು ಕೆಟ್ಟದಾಗಿ ನಟಿಸಿದ್ದೇನೆ' ಎಂದು ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುವ ಅವರಿಗೆ ಹೊಸ ನಾಯಕರ ಅಬ್ಬರ ಹೇವರಿಕೆ ಹುಟ್ಟಿಸುತ್ತದಂತೆ. ಖಳ ಮಾಡುವ ಕೆಲಸವನ್ನು ನಾಯಕನೇ ಮಾಡುತ್ತಿರುವುದು ಅವರ ಕಣ್ಣಿಗೆ ದುರಂತದಂತೆ ಕಾಣುತ್ತಿದೆ.

1956ರ `ಹಾಲಾಕು' ಚಿತ್ರದ ತಮ್ಮ ಅಭಿನಯವನ್ನು ತುಂಬಾ ಇಷ್ಟಪಡುವ ಪ್ರಾಣ್‌ಗೆ `ಪರಿಚಯ್'ನಲ್ಲಿ ತಾತನ ಪಾತ್ರಕ್ಕೂ ನ್ಯಾಯ ಸಲ್ಲಿಸಿದ ತೃಪ್ತಿ ಇದೆ. `ಕೆಟ್ಟ ನಟನೆ, ದೇಶದ ಬಡತನ ಎರಡನ್ನೂ ಕಂಡರೆ ಮನಸ್ಸು ಕುದಿಯುತ್ತದೆ' ಎಂಬ ಪ್ರಾಣ್ ಮಾತು ಎಷ್ಟು ಅರ್ಥಪೂರ್ಣ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT