ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸ ನೆನಪಿನ ಚಿತ್ರ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಣ್ಣಿಗೆ ಬಣ್ಣದ ಕನ್ನಡಕ, ಹಣೆಗೆ ಎದ್ದು ಕಾಣುವ ಕೆಂಪು ತಿಲಕ, ಕಣ್ಸೆಳೆವ ಮೂಗುತಿ. ಮೈಯನ್ನಾವರಿಸಿದ ಜಗಮಗ ಎನ್ನುವ ಕೆಂಪು ಸೀರೆ, ಕೊರಳನ್ನೇ ಮುಚ್ಚುವಷ್ಟು ಚಿನ್ನದಾಭರಣ, ತಲೆಯಲ್ಲೂ ಆಭರಣಗಳದ್ದೇ ಕಾರುಬಾರು, ಕೈಯಲ್ಲಿ ಮಿಣುಗುಡುವ ಬಂಗಾರದ ಬಳೆಗಳು. ಜೊತೆಗೊಂದು ಮೊಬೈಲ್ ಹಿಡಿದು ನಿಂತ ಬೆಡಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದಾಳೆ.

ಪಕ್ಕದಲ್ಲೇ ತುಸು ಅಲಂಕರಿಸಿಕೊಂಡಿರುವ ವರ. ಆದರೆ ಅವನ ಮೈತುಂಬ ಕೋಳಿಯದ್ದೇ ಚಹರೆ. ಪಕ್ಕದಲ್ಲೇ ನಿಂತಿದೆ ಸಭ್ಯ ಪ್ರಾಮಾಣಿಕ ನಾಯಿ. ಯುದ್ಧಕ್ಕೆ ಸಜ್ಜಾದ ತುಪಾಕಿಗಳು, ಖಡ್ಗ. ಗ್ರಹಣ ಹಿಡಿದ ಚಂದ್ರ. ಇವೆಲ್ಲವುಗಳ ಮಧ್ಯೆ ಹೂವು ಹಿಡಿದ ಕೈ ಸದ್ದಿಲ್ಲದೆ ನೆಲಕ್ಕೊರಗಿದೆ. ಈ ಎಲ್ಲಾ ಅನಾಹುತಗಳ ಸಂಕೇತದಲ್ಲೂ ಸಣ್ಣನೆಯ ತುಂಟ ನಗು ಬೀರುವ ಮದುವಣಗಿತ್ತಿಯ ಈ ಚಿತ್ರಕ್ಕೆ ಕಲಾವಿದ ಚಂದ್ರನಾಥ ಆಚಾರ್ಯ ಅವರು ನೀಡಿದ ಒಕ್ಕಣಿಕೆ `ಲವ್ ಸಾಂಗ್'.

ಆಚಾರ್ಯ ಅವರ ಬಣ್ಣದೋಕುಳಿಯಲ್ಲಿ ಮಿಂದೆದ್ದ ಈ ಚಿತ್ರ ಪ್ರೀತಿ, ದ್ವೇಷ, ಯುದ್ಧ, ಅಹಂಕಾರ, ಮೋಸ ಎಲ್ಲವನ್ನೂ ಒಮ್ಮೆಲೇ ಹೇಳಹೊರಟಿರುವ ಈ ಛಾಯೆ ದೇಶದ, ಜನರ ಮನಸ್ಥಿತಿಯನ್ನು ವಿಡಂಬಿಸುವಂತಿದೆ.

ಕೆಂಪು ತುಟಿಯ, ಮುಚ್ಚಿದ ಕಂಗಳ ತುಂಟ ಕೃಷ್ಣ ಕೊಳಲನೂದುತ್ತಿದ್ದಾನೆ. ಹಕ್ಕಿಗಳ ಹಾರಾಟ ತಾಣ ಆಕಾಶ ಅವನ ಉಡುಗೆ. ಕೆಂಪು ಹಳದಿಯ ಶಾಲು ಮುರಳಿಯ ಅಂದ ಹೆಚ್ಚಿಸಿದೆ. ಬಣ್ಣದಲ್ಲಿ ಕೃಷ್ಣನನ್ನು ಸೃಷ್ಟಿಸಿದ್ದು ಕಲಾವಿದ ಸುಬ್ರಹ್ಮಣ್ಯನ್ ಜಿ.

ಚಿತ್ರಕಾರ ವಾಸುದೇವ ಎಸ್.ಜಿ. ಅವರ ಕಲ್ಪನೆಯಲ್ಲಿ ಮೂಡಿಬಂದ ಬುದ್ಧನ ಚಿತ್ರ ಕಣ್ಸೆಳೆಯುತ್ತದೆ. ವಿಶಾಲ ಕಂಗಳ ಬುದ್ಧನದ್ದು ನಿರ್ವಿಕಾರ ಮುಖಭಾವ.

ಹೀಗೆ ವಿವಿಧ ಕಲಾವಿದರಾದ ಗುರುದಾಸ ಶೆಣೈ, ಭಾಸ್ಕರ ರಾವ್, ಜಸು ರಾವಲ್, ಜೆ.ಎಂ.ಎಸ್. ಮಣಿ, ಮಿಲಿಂದ್ ನಾಯಕ್, ಎಂ.ಎಸ್.ಮೂರ್ತಿ, ಶಿವಾನಂದ ಬಿ, ಸುಬ್ರಾ ಹಾಗೂ ಯೂಸುಫ್ ಅರಕ್ಕಲ್ ಅವರ ಕಲ್ಪನೆಯಲ್ಲಿ ರೂಪು ತಳೆದ ಅನೇಕ ಚಿತ್ರಗಳನ್ನು ಒಂದೇ ಸ್ಥಳದಲ್ಲಿ ನೋಡುವ ಅವಕಾಶವನ್ನು ನಗರಿಗರಿಗಾಗಿ ಕಲ್ಪಿಸಲಾಗಿದೆ. `ರಿಫ್ಲೆಕ್ಶನ್ಸ್ ಆಫ್ ಡ್ರೀಮ್ಸ ಅಂಡ್ ಮೆಮೊರೀಸ್' ಹೆಸರಿನ ಚಿತ್ರಕಲಾ ಪ್ರದರ್ಶನವನ್ನು ಏಪ್ರಿಲ್ 25ರಿಂದ ಮೇ 5ರವರೆಗೆ ಹಸ್ತಾ ಗ್ಯಾಲರಿ ವತಿಯಿಂದ ಆಯೋಜಿಸಲಾಗಿದೆ.

ಊರ್ಮಿಳಾ ದೇವಿ ಕೊಟದಾಸಂಗಣಿ ಹಾಗೂ ಹರೀಶ್ ಜೆ.ಪದ್ಮನಾಭ ಕಾರ್ಯಕ್ರಮವನ್ನು ಸಂಜೆ 6.30ಕ್ಕೆ ಉದ್ಘಾಟಿಸಲಿದ್ದಾರೆ.
ಸ್ಥಳ: ಗ್ಯಾಲರಿ ಕ್ರೆಸೆಂಟ್, ನಲಪದ್ಸ್ ಹೋಟೆಲ್, ಕ್ರೆಸೆಂಟ್ ರಸ್ತೆ. ಸಂಪರ್ಕಕ್ಕೆ- 9886642636.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT