ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಲೋಕ ಕಣ್ಣೆದುರು ತೆರೆದುಕೊಳ್ಳುವ ಕ್ಷಣ

Last Updated 26 ಜುಲೈ 2012, 19:30 IST
ಅಕ್ಷರ ಗಾತ್ರ

ಒಲಿಂಪಿಕ್ ಕೂಟದ ಉದ್ಘಾಟನಾ ಸಮಾರಂಭದ ಸೊಬಗು ಹೆಚ್ಚಿಸಲಿರುವ ಪ್ರಕೃತಿಯ ಪ್ರತಿಕೃತಿ  
 

ಉದ್ಘಾಟನಾ ಸಮಾರಂಭ ಆರಂಭ
(ಭಾರತೀಯ ಕಾಲಮಾನ)
ಶನಿವಾರ ಬೆಳಗಿನ ಜಾವ: 1.00ಕ್ಕೆ

ಲಂಡನ್ (ಪಿಟಿಐ/ಐಎಎನ್‌ಎಸ್): ಪ್ರಕೃತಿಯೇ ಪ್ರತಿಕೃತಿಯಾಗಿ ಸಜ್ಜಾಗಿದೆ. ಅದೇ ಒಲಿಂಪಿಕ್ ಮುಖ್ಯ ಕ್ರೀಡಾಂಗಣದ ಅಂಗಳ. ಸುತ್ತ ಕಣ್ಣು ಹರಿಸಿದತ್ತ ಕಾಡು-ನಾಡು ತಾಯಿಮಕ್ಕಳು ಎನ್ನುವಂತೆ ಬೆಸೆದುಕೊಂಡ ನಂಟಿನ ಸಂಕೇತ.

ದೇಶದ ರಾಜಧಾನಿಯಲ್ಲಿನ ಕ್ರೀಡಾಂಗಣದಲ್ಲಿಯೇ ಕುಳಿತು ಇಂಗ್ಲೆಂಡ್‌ನ ಗ್ರಾಮೀಣ ಭಾಗದ ವಾತಾವರಣವನ್ನು ಅನುಭವಿಸುವ ಅವಕಾಶ ಪ್ರೇಕ್ಷಕರಿಗೆ ಸಿಗಲಿದೆ. ಇನ್ನೂ ವಿಶೇಷವೆಂದರೆ ಮಳೆ ಹಾಗೂ ಮಂಜು ಕೂಡ ಅಂಗಳದಲ್ಲಿ ಹರಡಿಕೊಂಡಿರುವ ಹಸಿರಿನ ಮೇಲೆ ಸುರಿಯಲಿದೆ.

ಶುಕ್ರವಾರ ಇಲ್ಲಿ ನಡೆಯುವ ಒಲಿಂಪಿಕ್ ಉದ್ಘಾಟನಾ ಸಮಾರಂಭದ ವಿಶೇಷಗಳು ಹೀಗೆ ಮಾಧ್ಯಮಗಳತ್ತ ಹರಿದು ಬಂದಿವೆ. ಭಾರತೀಯ ಕಾಲಮಾನ ಶನಿವಾರ ಬೆಳಗಿನ ಜಾವ 1.00 ಗಂಟೆಗೆ ಆರಂಭವಾಗಲಿರುವ ಉದ್ಘಾಟನಾ ಸಮಾರಂಭವು ಸುದೀರ್ಘವಾಗಿ ಸಾಗಲಿದೆ.

ಆದರೆ ಈ ಮೊದಲು ನಿಗದಿ ಮಾಡಿದ್ದ ಕೆಲವು ಪ್ರದರ್ಶನಗಳನ್ನು ಕಾರ್ಯಕ್ರಮ ಪಟ್ಟಿಯಿಂದ ಕೈಬಿಡಲಾಗಿದೆ. ಸೈಕಲ್ ಸಾಹಸವು ಅತ್ಯಂತ ಆಕರ್ಷಕವಾಗಿತ್ತು. ಅದನ್ನೇ ಕೈಬಿಡಬೇಕಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಇನ್ನು ಬಾಕಿ ಎಲ್ಲವೂ ನಿಗದಿಯಂತೆ ನಡೆಯಲಿದೆ ಎಂದು ಹೇಳಿದ್ದರೂ ಕಾರ್ಯಕ್ರಮದ ಗುಟ್ಟನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿಲ್ಲ.

ಈ ಹಿಂದೆ ಪ್ರತಿಯೊಂದು ಒಲಿಂಪಿಕ್ ಕೂಟಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಪ್ರೇಕ್ಷಕರು ಅನೇಕ ಅಚ್ಚರಿಗಳನ್ನು ಕಂಡಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಕ್ರೀಡಾಂಗಣದಲ್ಲಿ ಜ್ಯೋತಿಯು ಹೇಗೆ ಪ್ರಜ್ವಲಿಸುತ್ತದೆ ಎನ್ನುವುದು ಹೆಚ್ಚು ಕುತೂಹಲಕ್ಕೆ ಕಾರಣ. ಲಂಡನ್‌ನಲ್ಲಿ ಹೇಗಿರುತ್ತದೆ? ಎಂದು ಎಲ್ಲರೂ ಯೋಚಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಖ್ಯಾತ ಫುಟ್‌ಬಾಲ್ ತಾರೆ ಡೇವಿಡ್ ಬೆಕಮ್ ಉರಿಯುವ ಚೆಂಡನ್ನು ಜ್ಯೋತಿ ಕುಂಡದತ್ತ ಒದೆಯುತ್ತಾರೆ.
 
ಆಗ ಕ್ರೀಡಾ ಜ್ಯೋತಿ ಬೆಳಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಂಘಟಕರು ಮಾತ್ರ ಮೌನವಾಗಿದ್ದಾರೆ.

ಇಂಥ ಕಸರತ್ತು ನಡೆಯುವುದಿಲ್ಲ. ಏಕೆಂದರೆ ಪವಿತ್ರ ಜ್ಯೋತಿಯನ್ನು ಒದೆಯುವುದರಿಂದ ಅವಮಾನ ಮಾಡಿದಂತಾಗುತ್ತದೆ ಎಂದು ಇನ್ನೊಂದು ಮೂಲದಿಂದ ತಿಳಿದ ಅಂಶ. ಒಟ್ಟಿನಲ್ಲಿ ಜ್ಯೋತಿ ಕುಂಡದ ಸ್ವರೂಪ ಹಾಗೂ ಹೇಗೆ ಅದರಲ್ಲಿ ಅಗ್ನಿ ದೇವ ಪ್ರತ್ಯಕ್ಷವಾಗುವುದು...? ಎನ್ನುವುದು ಖಚಿತವಾಗಲು ರಾತ್ರಿಯವರೆಗೆ ಕಾಯಲೇಬೇಕು. ಅಚ್ಚರಿಯನ್ನು ನೀಡುವ ಪ್ರಯತ್ನವನ್ನು ಸಂಘಟಕರು ಮಾಡಿರುತ್ತಾರೆ ಎನ್ನುವುದು ದೇಶ ವಿದೇಶಗಳಿಂದ ಬಂದಿರುವ ಕ್ರೀಡಾ ಪ್ರೇಮಿಗಳ ನಿರೀಕ್ಷೆ.

ಉದ್ಘಾಟನಾ ಸಮಾರಂಭ ರೂಪಿಸಿರುವ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಡ್ಯಾನಿ ಬೊಯ್ಲ ಅವರು ಏನು ಹೊಸತನ್ನು ನೀಡುತ್ತಾರೆಂದು ವಿಶ್ವವೇ ಕಾದು ಕುಳಿತ್ತಿದೆ. ಅವರೊಂದಿಗೆ ನಿರಂತರವಾಗಿ ಕೆಲಸ ಮಾಡಿರುವ ಸ್ಟೀಫನ್ ಡಾಲ್‌ಡ್ರೈ ಸಾಮರ್ಥ್ಯದ ಬಗ್ಗೆ ಅಭಿಮಾನಿಗಳಿಗೆ ವಿಶ್ವಾಸವಂತೂ ಇದೆ. ಆ ಭರವಸೆ ಕಾಯ್ದುಕೊಳ್ಳುವಂಥ ಕಾರ್ಯಕ್ರಮ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆಯುತ್ತದೆಂದು ಆಶಿಸಲಾಗಿದೆ.

ಸಿನಿಮಾ ಕ್ಷೇತ್ರದಲ್ಲಿ ಅದ್ಭುತವನ್ನು ಸಾಧಿಸಿರುವ ಬೊಯ್ಲ ಮತ್ತು ಸ್ಟೀಫನ್ ಅವರು ಧ್ವನಿ ಹಾಗೂ ದೃಶ್ಯವನ್ನು ಭವ್ಯವಾದ ಅನುಭವ ನೀಡುವಂತೆ ಮಾಡಿದ್ದಾರೆಂದು ಸಂಘಟಕರು ಸಮಾಧಾನದಿಂದ ಇದ್ದಾರೆ.

ಕ್ರೀಡಾಂಗಣದಲ್ಲಿ 80,000 ಪ್ರೇಕ್ಷಕರು ಕಾರ್ಯಕ್ರಮವನ್ನು ಆಸ್ವಾದಿಸಲಿದ್ದಾರೆ. 205 ದೇಶಗಳ ಹತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುವರು. ಕುಸ್ತಿಪಟು ಸುಶೀಲ್ ಕುಮಾರ್ ಅವರು ಪಥಸಂಚಲನದಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ನಡೆಯಲಿದ್ದಾರೆ.

ಕಲಾವಿದರ ಪರದಾಟ
ಉದ್ಘಾಟನಾ ಸಮಾರಂಭಕ್ಕೆ ಅಂತಿಮ ತಾಲೀಮು ಮಾಡುವುದಕ್ಕೆ ಮುಖ್ಯ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಲು ಕಲಾವಿದರು ಎರಡು ಮೂರು ತಾಸು ಕಾಯಬೇಕಾಯಿತು. ಸುರಂಗ ಮಾರ್ಗದಿಂದ ಒಳಗೆ ಬರಲು 10,000ಕ್ಕೂ ಹೆಚ್ಚು ಕಲಾವಿದರು ಪರದಾಡಿದರು

ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್‌ಗೆ ಆಹ್ವಾನ
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಅವರು ಕ್ರೀಡಾ ಜ್ಯೋತಿ ರಿಲೆಯ ಕೊನೆಯ ಲೆಗ್‌ನಲ್ಲಿ ಜ್ಯೋತಿ ಹಿಡಿಯುವ ಅವಕಾಶ ಪಡೆಯುವರು.

ವರ್ಣಾಲಂಕೃತ ದೀಪಗಳ ದೋಣಿಗಳು
ಶುಕ್ರವಾರ ಸಂಜೆಯ ಹೊತ್ತಿಗೆ ಇಲ್ಲಿನ ಲಂಡನ್ ಬ್ರಿಜ್ ಸಮೀಪದಲ್ಲಿ ವರ್ಣಾಲಂಕೃತಗೊಂಡ ನೂರಾರು ದೋಣಿಗಳು ಗಮನ ಸೆಳೆಯಲಿವೆ. ಒಲಿಂಪಿಕ್ ರಿಂಗ್ ಹಾಗೂ ಕ್ರೀಡಾ ಲಾಂಛನಗಳ ಸ್ವರೂಪದಲ್ಲಿ ದೀಪಗಳನ್ನು ಬೆಳಗಿಸಿದ ದೋಣಿಗಳು ಸಾಲು ಸಾಲಾಗಿ ಸಾಗಲಿವೆ. ಅಷ್ಟೇ ಅಲ್ಲ ಪ್ರವಾಸಿಗಳು ದೋಣಿಗಳಲ್ಲಿಯೇ ಕುಳಿತು ಕ್ರೀಡಾಕೂಟದ ಉದ್ಘಾಟನೆಯ ಪ್ರಸಾರವನ್ನು ನೋಡುವುದಕ್ಕೂ ಕೆಲವು ಪ್ರವಾಸಿ ಸಂಸ್ಥೆಗಳು ವ್ಯವಸ್ಥೆ ಮಾಡಿವೆ.

ಬೃಹತ್ ಪರದೆಗಳಲ್ಲಿ ನೇರ ಪ್ರಸಾರ
ಎಲ್ಲರಿಗೂ ಒಲಿಂಪಿಕ್ ಮುಖ್ಯ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ನೋಡುವ ಅವಕಾಶ ಸಿಗದು. ಆದರೆ ನಿರಾಸೆಗೊಳ್ಳುವ ಅಗತ್ಯವಿಲ್ಲ. ಮೂರಡಿ ಕಟ್ಟಡದಷ್ಟು ದೊಡ್ಡ ಬೃಹತ್ ಪರದೆಯ ಮೇಲೆ ವರ್ಣರಂಜಿತವಾದ ಉದ್ಘಾಟನಾ ಸಮಾರಂಭವನ್ನು ನೋಡಿ ಆನಂದಿಸಬಹುದು. ಜೊತೆಗೆ ಚಳಿಗೆ ಮೈಯೊಡ್ಡಿಕೊಂಡು ಕುಳಿತು ಬಿಯರ್ ಹೀರುತ್ತಾ ಸಮಾರಂಭವನ್ನು ಕಣ್ಣತುಂಬಾ ತುಂಬಿಕೊಳ್ಳಬಹುದು. ಇಂಥ ವ್ಯವಸ್ಥೆಯನ್ನು ಲಂಡನ್‌ನಲ್ಲಿ ಮಾತ್ರವಲ್ಲ ಇಂಗ್ಲೆಂಡ್‌ನ ವಿವಿಧ ಭಾಗಗಳಲ್ಲಿ ಮಾಡಲಾಗಿದೆ.

ಕ್ರೀಡಾಂಗಣದಲ್ಲಿ ಹರಡಿರುವ ಹಸಿರು
ಉದ್ಘಾಟನಾ ಸಮಾರಂಭ ನಡೆಯುವ ಮುಖ್ಯ ಕ್ರೀಡಾಂಗಣದಲ್ಲಿ ಹಸಿರು ಹೊದ್ದುಕೊಂಡ ಬೆಟ್ಟಗಳು ಹಾಗೂ ಬಯಲು ಪ್ರದೇಶಗಳು ವಿನ್ಯಾಸಗೊಂಡಿವೆ. ವಿಶೇಷವೆಂದರೆ ಈಗಾಗಲೇ ಅಲ್ಲಿಗೆ ಬ್ರಿಟನ್‌ನಲ್ಲಿ ಹೆಚ್ಚಾಗಿರುವ ತಳಿಯ ಹಸುಗಳು ಹಾಗೂ ಕುರಿಗಳು ಕೂಡ ಬಂದಿವೆ. ನೂರಾರು ಲಾರಿಗಟ್ಟಲೆ ಹುಲ್ಲು ಹಾಸನ್ನು ಕ್ರೀಡಾಂಗಣಕ್ಕೆ ಈಗಾಗಲೇ ಸಾಗಿಸಲಾಗಿದ್ದು ಇಂಗ್ಲೆಂಡ್‌ನ ಗ್ರಾಮೀಣ ಪ್ರದೇಶದ ತುಣುಕೊಂದನ್ನು ಇಲ್ಲಿ ತಂದಿಟ್ಟಂತಾಗಿದೆ.

ನೇರಪ್ರಸಾರ ವೀಕ್ಷಿಸಲಿರುವ ನಾನೂರು ಕೋಟಿ ಜನರು
ವಿಶ್ವದ ಅತಿದೊಡ್ಡ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಸಹಜವಾಗಿಯೇ ಟೆಲಿವಿಷನ್ ವೀಕ್ಷಕರನ್ನು ಆಕರ್ಷಿಸುತ್ತದೆ. ಲಂಡನ್‌ನಲ್ಲಿ ನಡೆಯುವ ಸಮಾರಂಭದ ನೇರಪ್ರಸಾರವನ್ನು ಟೆಲಿವಿಷನ್‌ಗಳಲ್ಲಿ ಸುಮಾರು ನಾನೂರು ಕೋಟಿ ಜನರು ವೀಕ್ಷಿಸಲಿದ್ದಾರೆಂದು ಅಂದಾಜು ಮಾಡಲಾಗಿದೆ.

ಲಂಡನ್ ಬೀದಿ ಬೀದಿಗಳಲ್ಲಿ ನೃತ್ಯ
ಒಲಿಂಪಿಕ್ ಉದ್ಘಾಟನೆಗೆ ಮುನ್ನ ಲಂಡನ್ ಬೀದಿಗಳಲ್ಲಿ ಬಣ್ಣಗಳು ಹರಡಿಕೊಳ್ಳಲಿವೆ. ಸ್ಥಳೀಯ ನೃತ್ಯಕಲಾವಿದರು, ಸಂಗೀತಗಾರರು, ವಾದ್ಯ ಮೇಳದವರು ರಸ್ತೆಗಳಲ್ಲಿ ನೃತ್ಯ-ಸಂಗೀತದ ರಸದೌತಣವನ್ನು ಪ್ರವಾಸಿಗಳಿಗೆ ಉಣಬಡಿಸಲಿದ್ದಾರೆ. ಆದರೆ ಮುಖ್ಯ ಬೀದಿಗಳಲ್ಲಿ ರಸ್ತೆ ಸಂಚಾರಕ್ಕೆ ತೊಡಕಾಗದಂತೆ ಕಲಾ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಣಿಜ್ಯ ಮಳಿಗೆಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರವಾಸಿಗಳನ್ನು ರಂಜಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಕ್ರೀಡಾಗ್ರಾಮದಲ್ಲಿಯೇ ಉಳಿಯಲಿರುವ ಕೆಲವು ಕ್ರೀಡಾಪಟುಗಳು

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಸೆ ಇದ್ದರೂ ಮರುದಿನವೇ ನಡೆಯುವ ತಮ್ಮ ಕ್ರೀಡಾ ಸ್ಪರ್ಧೆಗಳಿಗೆ ಸಜ್ಜಾಗುವ ಉದ್ದೇಶದಿಂದ ಕೆಲವು ಕ್ರೀಡಾಪಟುಗಳು ಕ್ರೀಡಾಗ್ರಾಮದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಉದ್ಘಾಟನಾ ಸಮಾರಂಭವು ತಡರಾತ್ರಿಯವರೆಗೆ ಮುಂದುವರಿಯಲಿದೆ. ಆದ್ದರಿಂದ ಮುಖ್ಯ ಕ್ರೀಡಾಂಗಣದಿಂದ ಕ್ರೀಡಾಗ್ರಾಮ ತಲುಪುವುದು ಕಷ್ಟ ಎನ್ನುವ ಕಾರಣಕ್ಕಾಗಿ ಅವರು ಈ ರೀತಿಯ ನಿರ್ಣಯ ಕೈಗೊಂಡಿದ್ದಾರೆ. ಆದರೆ ಇತರ ಕ್ರೀಡಾಪಟುಗಳು ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾತರದಿಂದ ಕಾಯ್ದಿದ್ದಾರೆ.

ಟ್ರಾಫಿಕ್ ಜಾಮ್ ಆಗುವುದಿಲ್ಲ
ಟ್ರಾಫಿಕ್ ಜಾಮ್ ಆಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಸಂಘಟಕರು ಭರವಸೆ ನೀಡಿದ್ದಾರೆ. ಸಮಾರಂಭ ಮುಗಿದ ನಂತರ ಸಾರ್ವಜನಿಕ ಸಂಚಾರ ಸೇವೆಯಲ್ಲಿ ಎಲ್ಲರೂ ಸುಗಮವಾಗಿ ತಮ್ಮ ವಾಸಸ್ಥಾನಕ್ಕೆ ತೆರಳಬಹುದೆಂದು ಕೂಡ ತಿಳಿಸಿದ್ದಾರೆ. ಕ್ರೀಡಾ ಗ್ರಾಮ ಹಾಗೂ ಮುಖ್ಯ ಕ್ರೀಡಾಂಗಣದ ನಡುವಣ ಸಂಚಾರ ವ್ಯವಸ್ಥೆಯಲ್ಲಿ ತೊಡಕಾಗದಂತೆ ಎಚ್ಚರವಹಿಸಲಾಗುವುದೆಂದೂ ತಿಳಿಸಿದ್ದಾರೆ.

ಒಂದಿಷ್ಟು ಗಾಳಿ ಸುದ್ದಿ...!

-ಡೇವಿಡ್ ಬೆಕಮ್ ಅವರು ಉರಿಯುವ ಚೆಂಡನ್ನು ಜ್ಯೋತಿ ಬುಟ್ಟಿಯೊಳಗೆ ಒದೆಯುವುದರೊಂದಿಗೆ ಕ್ರೀಡಾ ಜ್ಯೋತಿ ಹೊತ್ತಿಕೊಳ್ಳಲಿದೆ.

-ಇಂಗ್ಲೆಂಡ್‌ನ ಚಾನಲ್‌ಗಳಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮಗಳ ಸೆಟ್‌ಗಳ ಅನುಕರಣೆ ಮಾಡಲಾಗಿದೆ.


-ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನೆಯಷ್ಟು ವರ್ಣರಂಜಿತವಾಗಿಲ್ಲ.

-ಇಂಗ್ಲೆಂಡ್‌ನ ಪ್ರಕೃತಿ ಸೊಬಗು ತೋರಿಸುವ ಕಸರತ್ತು ದುಬಾರಿ ಎನಿಸಿದೆ.

ಮೂರನೇ ಬಾರಿ ಆತಿಥ್ಯ: ಲಂಡನ್ ವಿಶೇಷ

-ಒಲಿಂಪಿಕ್ಸ್‌ಗೆ ಅತಿ ಹೆಚ್ಚು ಬಾರಿ ಆತಿಥ್ಯ ವಹಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕಾದ ನಂತರದ ಸ್ಥಾನ ಇಂಗ್ಲೆಂಡ್‌ಗೆ.

-ಮೂರನೇ ಬಾರಿ ಆಧುನಿಕ ಒಲಿಂಪಿಕ್ ಕೂಟವನ್ನು ಆಯೋಜಿಸುತ್ತಿರುವ ನಗರ ಲಂಡನ್. 1908 ಹಾಗೂ 1948ರಲ್ಲಿ  ಈ ಮೊದಲು ಆತಿಥ್ಯ.

-1944ರಲ್ಲಿಯೂ ಆತಿಥ್ಯದ ಅವಕಾಶವಿತ್ತು. ಆದರೆ ಎರಡನೇ ವಿಶ್ವಯುದ್ಧದ ಕಾರಣ ಆ ಕೂಟ ರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT