ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಸೆರಗೊಂದು ಸೋಕಿಹೋದಂತೆ... ಬಯಲಾಟ ಮುಗಿದ ಮೇಲಿನ ಒಂದು ಹಗಲು

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡದಲ್ಲಿ ಇಡೀ ರಾತ್ರಿ ನಡೆಯುವ ಬಯಲಾಟಗಳಿಗೆ ಸಂಕ್ಷಿಪ್ತವಾಗಿ `ಆಟ~ ಎಂದು ಕರೆಯುತ್ತಾರೆ. ಅದು ಕೊಂಕಣಿಯಲ್ಲಿ `ಕೇಳ್~ ಆಗುತ್ತದೆ. ಕರಾವಳಿಯ ಜಿಲ್ಲೆಗಳಲ್ಲಿ ಹಿಲಾಲು ಬೆಳಕಿನಲ್ಲಿ, ಬಳಿಕ ಪೆಟ್ರೋಮ್ಯಾಕ್ಸ್ ದೀಪದ ಬೆಳಕಿನಲ್ಲಿ ನಡೆಯುವ ಇವೇ ಹಿಂದಿನ ಮನರಂಜನೆಯಾಗಿದ್ದವು. ಈಗವು ಇಲ್ಲ ಎಂದೇನಲ್ಲ. ಅದರ ಸಂಭ್ರಮ, ಉತ್ಸಾಹ ಯಾಕೋ ಕಡಿಮೆಯಾಗಹತ್ತಿದೆ. ಟೀವಿ ಬಂದ ಮೇಲೆ,  ಮನರಂಜನೆಯ ಹೆಸರಿನಲ್ಲಿ ಗಂಡು ಹೆಣ್ಣಿನ ಸಂಬಂಧದ, ಮನೆತನದ ವಿಘಟನೆಗಳೇ ಧಾರಾವಾಹಿಗಳಾಗಿ ಪ್ರಸಾರವಾಗುತ್ತಿವೆ. ಜನರೂ ಇದೂ ಒಂದು ಇರಲಿ ಎಂಬಂತೆ ಅದರ ಸೆಳೆತದಿಂದ ತಪ್ಪಿಸಿಕೊಳ್ಳಲೂ ಆಗದೆ, ನೋಡಲೂ ಆಗದೆ ಸಮಯವನ್ನು ತಳ್ಳುತ್ತಿದ್ದಾರೆ.

ಆಟವನ್ನು ಶುರು ಮಾಡುವ ಮೊದಲಿನ ಸಂಭ್ರಮ, ಅದಕ್ಕಾಗಿ ನಡೆಸುವ ತಾಲೀಮು, ನಡೆಸುವ ಸಿದ್ಧತೆ, ಓಡಾಟ ಬೇರೆಯದೇ ಬಗೆಯದು. ಅದು ಹಳ್ಳಿಗಳ ಸಂಕೀರ್ಣ ಚಿತ್ರವನ್ನು ಕೊಡುತ್ತದೆ. ಅದು ಮುಗಿದ ಮೇಲಿನ ನಿರಾಳತೆ, ಖಾಲಿತನ ಮತ್ತೊಂದು ಬಗೆಯದು.

ಊರಿನ ಗದ್ದೆ ಬಯಲಿನಲ್ಲೋ, ಪಂಚಾಯ್ತಿಯ ಎದುರಿನ ಆಲದ ಮರದ ಮುಂದೆಯೋ ಹಾಕಿದ ಚಪ್ಪರದಲ್ಲಿನ ಆಟ ಮುಗಿದ ಬೆಳಗ್ಗೆ ಯುದ್ಧದಲ್ಲಿ ಸೋತು ಜನರು ರಾಜ್ಯವನ್ನೇ ತ್ಯಜಿಸಿದ ಅರಮನೆಯಂತಿರುತ್ತದೆ. ಅಲ್ಲಿ ನೂರಾರು ಯುದ್ಧಗಳು ನಡೆದಿವೆ. ಐದಾರು ಸ್ವಯಂವರಗಳು ಉಲ್ಲಾಸದಿಂದ, ಸಖಿಯರ ಕುಣಿತದ ನಡುವೆ ಜರುಗಿವೆ. ಸಾವುಗಳು ಬೇರೊಂದು ಬಿಡುಗಡೆಯನ್ನು ನೋಡಿದವರಿಗೆ ಕೊಟ್ಟಿವೆ. ಇವೆಲ್ಲ ಒಂದೇ ರಾತ್ರಿಯಲ್ಲಿ ಆಗಿಹೋಗಿವೆ. ಆದರೆ, ನಡೆದ ಕತೆಯ ಸತ್ಯ ಹಗಲಿನಲ್ಲಿ ಕರಗಿ ಹೋಗಿದೆ. ರಾಜರು ಕಿರೀಟಗಳನ್ನು, ಅಪ್ಪ ಕಟ್ಟಿದ ಪಟ್ಟವನ್ನು ಕಳಚಿಟ್ಟಿದ್ದಾರೆ. ಸೂಜಿಮೊನೆ ಜಾಗವನ್ನೂ ಕೊಡದವರು ಅಖಂಡ ಭರತ ಭೂಮಿಯನ್ನೇ ಕಳೆದುಕೊಂಡಿದ್ದಾರೆ. ಐವರನ್ನು ಮೋಹಿಸಿಯೂ ಐದೆಯಾಗುಳಿದ ದ್ರೌಪದಿ ಬಿಚ್ಚಿದ ಕೂದಲನ್ನು ಮತ್ತೆ ಕಟ್ಟಿಲ್ಲ. ಇಂಥ ಕೆಚ್ಚಿನ ದ್ರೌಪದಿಯ ಬಟ್ಟೆಗಳಿಂದ ಉಬ್ಬಿಸಿದ ಎದೆ ಮೇಲೆ ಕೆಲವು ಹುಡುಗರು ತಮಾಷೆಗೆಂದು ಚೌಕಿಯಲ್ಲಿ ಕೈ ಆಡಿಸಿದ್ದಾರೆ!

ಅದೇ ದ್ರೌಪದಿಯ ಪಾತ್ರದ ವೆಂಕಟ ಸೀರೆ, ಲಂಗವನ್ನು ಬಿಚ್ಚಿಹಾಕಿ, ಮುಡಿದ ಅಬ್ಬಲಿಗೆ ದಂಡೆಯನ್ನು ಹೆಂಡತಿಗೆ ಕೊಟ್ಟು ತನ್ನ ದೈನಿಕದ ಕೆಲಸಕ್ಕೆ ನಡೆದಿದ್ದಾನೆ. ಅವನು ಹಾಲು ಕೊಟ್ಟು ಬರಲು ಅಂಕೋಲೆ ಪೇಟೆಗೆ ಸೈಕಲ್ಲು ಹತ್ತಿದ್ದಾನೆ. ಅವನು ವೇಷಕ್ಕೆಂದು ಉಡಲು ತಂದಿದ್ದ ಗೌರಕ್ಕನ ಎಂಟು ಮೊಳದ ಸೀರೆ ಹೌದೋ ಅಲ್ಲವೋ ಎನ್ನುವಂತೆ ಕುಣಿಯುವಾಗ ತುಸುವೇ ಹರಿದಿದೆ. ಅದನ್ನು ಹೇಗೆ ಗೌರಕ್ಕನಿಗೆ ಮರಳಿಸುವುದು ಎಂಬ ಚಿಂತೆಯಲ್ಲಿ ಅವನ ಹೆಂಡತಿಯಿದ್ದಾಳೆ. ಅದನ್ನು ಯಾರಿಂದಲಾದರೂ ಹೊಲಿಸಿ ಕೊಡುವ ಎಂದುಕೊಂಡಿದ್ದಾಳೆ- ಗೌರಕ್ಕನ ಬಾಯಿಗೆ ಹೆದರಿ.

ಚಿನ್ನವೇ ಇಲ್ಲದ ಕಿರೀಟ, ತೋಳ ಪಟ್ಟಿಗಳು, ವೇಷಗಳು ತುಂಬಿದ ಚಿನ್ನದ ಪೆಟ್ಟಿಗೆ, ನೀಲಿ ಪರದೆ, ಮೈಕುಗಳು ಹೆದ್ದಾರಿಯಲ್ಲಿ ಅಘನಾಶಿನಿಗೆ ಹೋಗುವ ಮೊದಲ ಬಸ್ಸಿಗೆ ಕಾದಿವೆ. ರಾತ್ರಿ ಬೆಳಕಲ್ಲಿ ಕಂಡ ಅಂಗಡಿಗಳೂ, ಕುಟಕುಟಿ ಎಂಬ ಅಂದರ್‌ಬಾಹರ್ ಪೊಲೀಸರ ಭಯವಿಲ್ಲದೆ ಯಕ್ಷಗಾನದ ಅಭಯದಲ್ಲಿ ನಡೆದಿವೆ. ಏಕೆಂದರೆ ಶಕುನಿಯ ಪಾತ್ರ ಮಾಡಿದ ಪೊಲೀಸ್ ಪ್ರದೀಪ ಇದೇ ಆಟದಲ್ಲಿ ಶಕುನಿಯ ಪಾತ್ರ ಮಾಡಿದ್ದಾನೆ. ಅವನಿಗೂ ಚೌಕಿಯಲ್ಲಿ ಆಗಾಗ ಚಹಾದ, ಒಂದು ಕಟ್ಟು ಬೀಡಿ ಬೆಂಕಿಪೊಟ್ಟಣದ ಸಪ್ಲೈ ಮಾಡಲಾಗಿದೆ. ವೇಷದಲ್ಲೇ ರಂಗಸ್ಥಳದಿಂದ ಹೊರಗೆ ಬಂದು ಅವನು ನೂರು ರೂಪಾಯಿನ ಅಂದರ್ ಬಾಹರ್ ಆಡಿದ್ದಾನೆ. ಅಂದಮೇಲೆ ಯಾರಿಗೇನು ಭಯ, ಎಲ್ಲರಿಗೂ ಯಕ್ಷಗಾನದ್ದೇ ಅಭಯ. `ಯಾರು ಕೇಳುವರು ನನ್ನ ಭುಜ ಬಲ ಪರಾಕ್ರಮವ...~ ಎನ್ನುತ್ತ ಅವನು ಕೆಲಸಕ್ಕಾಗಿ ಹಳಿಯಾಳ ಬಸ್ಸಿಗೆ ಹತ್ತಿದ್ದಾನೆ.

ಆಟದ ವೇಷ ಹಾಕಿದ ಶಾಂತ ಕಿವಿಯ ಹತ್ತಿರದ ಬಣ್ಣವನ್ನೂ ಸರಿಯಾಗಿ ಒರೆಸದೆ ಊರನ್ನು ಒಂದು ಸುತ್ತು ತಿರುಗಲು ಬಂದಿದ್ದಾನೆ. ಅವನು ಊರಿನ ಎಲ್ಲ ಮನೆಗಳ ಮುಂದೆ ಹಾದರೂ ಅವನ್ನು ಕೇಳುವವರೇ ಇಲ್ಲ. ಅವನು ಮಿಂದಿಲ್ಲ, ತುಸುವೂ ನಿದ್ದೆ ಮಾಡಿಲ್ಲ. ಯಾರೂ ಅವನ ಪಾತ್ರದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ರಾತ್ರಿ ಕುಣಿದಿದ್ದರಿಂದಲೋ ಏನೋ ಕಾಲು ಕುಸಿಯುತ್ತಿರುವ ಅನುಭವ. ಆದರೂ ಸಮಾಧಾನ ಮಾಡಿಕೊಂಡಿದ್ದಾನೆ. ಪಾತ್ರ ಸಮಾ ಇಲ್ಲದಿದ್ದರೆ ಬೇರೆ ಊರಿನವರು ಮುಂದಿನ ತಿಂಗಳು ಒಂದೇ ರಾತ್ರಿ ಬೇರೆ ಬೇರೆ ಪ್ರಸಂಗಗಳ ಪರಶುರಾಮ, ಲಕ್ಷ್ಮಣನ ಪಾತ್ರ ಮಾಡಲು ಕರೆಯುತ್ತಿದ್ದರು ಎಂದು ಧರ್ಮರಾಯನಂತೆ ತನ್ನನ್ನು ತಾನು ಸಮಾಧಾನ ಮಾಡಿಕೊಂಡಿದ್ದಾನೆ.

ಮಕ್ಕಳು ಸ್ವಪ್ನದಲ್ಲಿ ಕಂಡೆವೋ ಎನ್ನುವುಂತೆ ಪಾತ್ರಧಾರಿಗಳು ಕುಣಿಯುವಾಗ ಅವರ ಕಿರೀಟದಿಂದ ಉದುರಿದ ಮಿಂಚುವ ಬೇಗಡೆ (ಸುನೇರಿ) ಕಾಗದದ ಚೂರುಗಳನ್ನು ಕೈಯಲ್ಲಿಟ್ಟುಕೊಂಡೇ ನಿದ್ದೆ ಹೋಗಿದ್ದಾರೆ. ಅವರು ಬೆಳಗ್ಗಿನ ಚಹಾಕ್ಕೂ ಎದ್ದಿಲ್ಲ. ಅಂತೂ ಕಾವೇರಕ್ಕ ಮಾತ್ರ ಅವನಿಗೆ ಬಾವಿ ಕಟ್ಟೆಯ ಬಳಿ ಸಿಕ್ಕಿದ್ದಾಳೆ. ಅವಳಿಗೆ ಅಣ್ಣನ ಮನೆಯ ದೇವರ ಕಾರ್ಯಕ್ಕೆ ಹೋಗುವ ಅವಸರ. ಗಂಡನಿಗೆ ಅಡಿಗೆ ಮಾಡಿ ಹೋಗಬೇಕಿದೆ. ಆದರೂ ಪೇಟೆಯಿಂದ ಆಗಾಗ ಮೀನು ತಂದುಕೊಡುತ್ತಾನೆ ಎಂಬ ಕಾರಣಕ್ಕೆ ಅವನ ಪಾತ್ರದ ತಾರೀಪು ಮಾಡುತ್ತಾಳೆ. ಮಳ್ಳ ತುಕಾರಾಮನಿಂದ ಹಾಳಾಗಿ ಹೋಗಿದ್ದ ನಾಟಕವನ್ನು ಜನರು ನೋಡುವಂತೆ ಚಕ್ರಮಂಡಿ ಕುಣಿತ ಹೊಡೆದು ತಾನೇ ಮೇಲಕ್ಕೆ ಏಳಿಸಿದೆ ಎನ್ನುವಂತೆ ಅವನು ಮಾತನಾಡುತ್ತಾನೆ. ಅದೂ ಕೂಡ ನಿಜವೇ. ಅವರೂ ಕೂಡ ಹೌದು ಹೌದು ಅನ್ನುತ್ತಾರೆ. ಆದರೆ ಅವರು ನಿದ್ದೆ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಸಂಗ ಅರ್ಧಕ್ಕೆ ಬಂದಾಗ ಭಾಗವತನ ಒಂದೆರಡು ಹಾಡು ಕೇಳಿ ಮನೆಗೆ ಬಂದು ಮಲಗಿದ್ದು ಶಾಂತನಿಗೆ ಗೊತ್ತಿಲ್ಲ. ರಂಗಸ್ಥಳದ ಚೌಕಿಯಿಂದ ಯಾರ‌್ಯಾರು ಬಂದಿದ್ದಾರೆ ಎಂದು ಹಣಕಿ ನೋಡಿದಾಗ ಅಬ್ಬಲಿಗೆ ಹೂವು ಮುಡಿದುಕೊಂಡು ಹೊಸ ಸೀರೆ ಉ್ಟುಕೊಂಡು ಬಂದ ಕಾವೇರಕ್ಕನೂ ಕಂಡಿದ್ದಳು. ಮಾತು ಮರೆಸಲು ಎಂಬಂತೆ ಅವರು, ಶಾಂತ ಕಳೆದುಕೊಂಡ ನೌಕರಿ ಮತ್ತೆ ಸಿಗುವ ಬಗ್ಗೆ ಮಾತೆತ್ತುತ್ತಾರೆ. ಸ್ವಪ್ನಗಳೇ ತುಂಬಿದ ತಣ್ಣನೆ ಗಾಳಿ ಹಾಯುವ ಚಾದರವನ್ನು ನಡುರಾತ್ರಿಯಲ್ಲಿ ಕುಡುಗಿದಂತಾಗಿ ನನಗೇನೊ ಕೆಲಸವಿದೆ ಎನ್ನುತ್ತ ಶಾಂತ ಬಾವಿ ಕಟ್ಟೆಯ ರಂಗಸ್ಥಳದಿಂದ ನಿರ್ಗಮಿಸುತ್ತಾನೆ.

ಹೌದು, ಅವನಿಗೆ ಆಟದ್ದೇ ಖರ್ಚು ವೆಚ್ಚದ ಲೆಕ್ಕಹಾಕುವ ಕೆಲಸ ಉಂಟು. ಕೌರವನ ವೇಷ ಕಟ್ಟಿದ ಆಟದ ತಲಬುಗಾರ ಮೋಹನನೊಂದಿಗೆ ಅದನ್ನು ನೋಡಬೇಕಾಗಿದೆ. ಊರಿನ ದೊಡ್ಡ ಕುಳಗಳು ಕೊಟ್ಟ ನೂರು ಇನ್ನೂರು ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ. ಅದು ಕೇವಲ ಚಿನ್ನದ ಪೆಟ್ಟಿಗೆ, ಪರದೆ, ಬಣ್ಣದವರಿಗೆ, ಮೈಕಿಗೆ ಸಾಕು. ಇದು ಬೇರೆ ಊರಿನಿಂದ ತರಿಸಿದ ವೇಷಧಾರಿಗಳ ಚಹಾ, ಊಟದ ಖರ್ಚಿಗೆ ಸಾಕಾಗುವುದಿಲ್ಲ. ಭಾಗವತರಿಗೆ ಬೇರೆ ಕೊಡಬೇಕು. ಅವರೂ ಊರೂರು ತಿರುಗುತ್ತ ಶಾಂತನಿಗೆ ಪರಿಚಯವಾದವರೇ. ಪರಿಚಯ ಇರುವುದರಿಂದ ಮಾತಾಡಿದ್ದಕ್ಕಿಂತ ಕಡಿಮೆ ಕೊಡಬಹುದು. ಅಂತೂ ಸಾವಿರ ಎರಡು ಸಾವಿರ ಒಬ್ಬೊಬ್ಬರ ತಲೆಯ ಮೇಲೆ ಬೀಳುತ್ತದೆ ಎಂದು ಅವನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾನೆ. ಮುಂದಿನ ವರ್ಷ `ಕೋಡಂಗಿ~ ಪಾತ್ರವನ್ನು ಬೇರೆ ಹುಡುಗನಿಗೆ ಕೊಡಬೇಕು. ಈ ಬಾರಿ ವಿದೂಷಕ ಮಾತನಾಡಿದ ಹಲ್ಕಟ್ ಮಾತುಗಳು ಹೆಚ್ಚಾದವು. ಅವನನ್ನು ಕರೆಸದಿರುವಂತಿಲ್ಲ. ಜನರೆಲ್ಲ ಕೇಕೆ ಹಾಕಿ ನಕ್ಕಿದ್ದು ಅವನ ಮಾತಿಗೇ.

ದೀಪಾವಳಿ ಮುಗಿಯಿತು ಎಂದರೆ ಮೇಳಗಳ ತಿರುಗಾಟ, ಬಯಲಾಟಗಳು ಶುರು ಆಗುತ್ತವೆ. ಊರು ಎಂದ ಮೇಲೆ ವರ್ಷದ ಊರ ಹಬ್ಬ, ಒಂದೆರಡು ಯಕ್ಷಗಾನವನ್ನು ಮಾಡದೇ ಇರುವುದಿಲ್ಲ. ಏನೇ ಆದರೂ ಒಂದಾದ ಮೇಲೆ ಒಂದು ಊರಿನಲ್ಲಿ ಒಂದು ಆಟ ಇದ್ದೇ ಇರುತ್ತದೆ. ಕೆಲವರು ಹೋಳಿ ಹಬ್ಬಕ್ಕೆ, ಉಗಾದಿಗೆ ಎಂದು ಹಬ್ಬಗಳ ಹೊತ್ತಿನಲ್ಲಿ, ಅದರ ನೆಪದಲ್ಲಿ ಮಾಡಿದರೆ ಇನ್ನು ಕೆಲವರು ಅದ್ಯಾವುದಕ್ಕೂ ಕಾಯದೆ ಊರಿನ ಸರ್ಕಾರಿ ನೌಕರರು ಊರಿಗೆ ಬಂದು ಆಟ ನೋಡಲು ಅನುಕೂಲವಾಗುತ್ತದೆ ಎಂದು ರಜೆಯ ದಿನಗಳಲ್ಲಿ ಆಟ ಕುಣಿಯುತ್ತಾರೆ. ಇವೆಲ್ಲ ಮಳೆಗಾಲ ಒಂದನ್ನು ಬಿಟ್ಟು ಆಗುತ್ತವೆ. ಮಳೆಗಾಲದಲ್ಲಿ ಆಟದ ತಲುಬು ಇರುವವರು ತಾಳಮದ್ದಲೆ ಮಾಡಿಕೊಳ್ಳುತ್ತಾರೆ. ಅಲ್ಲಿ ತೆರೆಯುವ ಅರ್ಥದ ದಿಕ್ಕುಗಳೇ ಬೇರೆ.

ಗಾಳಿಯಲ್ಲಿ ತೇಲಿ ಬಂದ ದನಿಯ ದಿಕ್ಕಿನಿಂದಲೇ ಇದು ಇಂಥ ಊರಿನಲ್ಲಿ, ಇಂಥ ಪ್ರಸಂಗದ ಯಕ್ಷಗಾನ ಎಂದು ಊಟ ಮಾಡಿ ಕೂತ ಕೆಲವರು ನೆನಪು ಮಾಡಿಕೊಳ್ಳುತ್ತಾರೆ. ಅದಕ್ಕೂ ಮೊದಲು ರಿಕ್ಷಾಕ್ಕೆ ಕಟ್ಟಿದ ಮೈಕಿನಲ್ಲಿ `ಭಸ್ಮಾಸುರ ಮೋಹಿನಿ~ ಆಟವನ್ನು ಇಂದೇ ನೋಡಿ, ಮರೆತು ನಿರಾಶರಾಗದಿರಿ ಎಂಬ ಪ್ರಚಾರ ನಡೆದಿದೆ. ಆಟದ ಹಳದಿ, ನೀಲಿ, ಕೆಂಪು, ಬಿಳಿ ಬಣ್ಣದ ಹ್ಯಾಂಡ್‌ಬಿಲ್ಲುಗಳೂ ಹಾರಾಡಿವೆ. ಆಟ ಆಗುವುದು ಮೊದಲೇ ಪ್ರಚಾರವಾಗಿದೆ. ಒಂದೆರಡು ತಾಸು ಹೋಗಿ ಬರುವ ಎಂದು ಕೆಲವರು ಹೋಗಿ ಬರುವುದೂ ಉಂಟು. ಅಲ್ಲಿ ಅವನಿಗೆ ಬಹಳ ಬೇಕಾದ ವ್ಯಕ್ತಿ ಪಾತ್ರ ಮಾಡಿದ್ದಾನೆ. ಅವನು ಸಿಕ್ಕಾಗ ಅವನ ಪಾತ್ರದ ಗುಣಗಾನ ಮಾಡಬಹುದು. ಅಥವಾ ಪಾತ್ರ ಮಾಡಿದ ವ್ಯಕ್ತಿ ಬಹಳ ಕೇಳಿಕೊಂಡಿದ್ದಾನೆ ಎಂಬುದೂ ಹೋಗಿ ಬರುವುದರ ಹಿಂದಿನ ಉದ್ದೇಶವಾಗಿರುತ್ತದೆ.

ಭಾಗವತನ ಚಂಡೆಯ ಅಲೆಯಲ್ಲಿ ಬಂದ ಒಂದು ಸೊಲ್ಲು, ಒಂದು ರಾಗ, `ಕುರುರಾಯ ಇದನೆಲ್ಲವನು ಕಂಡು ಸಂತಪದಿ....~ ಎಂಬ ಒಂದು ಹಾಡು, ಧರ್ಮರಾಯನ ಮಾತಿನ ಇಂದಿನ ರಾಜಕೀಯ ಜೀವ ತಳೆಯುವುದು ಅಲ್ಲೇ. ಕತ್ತಲಲ್ಲಿ ತಳೆದ ಲೋಕ ನಿಜವಲ್ಲ ಎಂಬಂತೆ ಅದು ಮರುದಿನವೂ ಜನರ ಮಾತಿನಲ್ಲಿ ಮರುಸೃಷ್ಟಿಯಾಗುತ್ತಲೇ ಹೋಗುತ್ತದೆ. ಹಾಗಾಗಿ ಯಕ್ಷಗಾನ ಹಗಲಿನಲ್ಲಿ ಮತ್ತೆ ಮತ್ತೆ ಜೀವ ತಳೆಯುವ ಮೋಹಕ ಲೋಕ.

ರಾತ್ರಿಯ ಕನಸಿನ ಸೆರಗೊಂದು ಸೋಕಿಹೋದ ಮೇಲೆ ಮಧ್ಯಾಹ್ನ ಆಗುತ್ತ ಬಂದಂತೆ ಆಟ ನಡೆದಲ್ಲಿ ಯಾವುದೂ ಉಳಿದುಕೊಂಡಿಲ್ಲ. ಉದುರಿದ ಮಾವಿನ ತೋರಣ, ಚಹ, ಬಜ್ಜಿ ಮಾಡಿದ ಒಲೆ ಬೂದಿಯ ಕಾವು, ಮೋಟು ಬೀಡಿ, ಸಿಗರೇಟು- ಇಲ್ಲಿ ಯಾವುದು ನಿಜ? ಯಾವುದು ಸುಳ್ಳು?

ಆಟದ ಮಾರನೇ ದಿನದ ನಸುಕು ನಿಜ. ಬೆಳಕು ಹರಿದ ಮೇಲೆ ಕೊನೆಗೆ ಹಾಡಲು ಮಂಗಳ ಪದವನ್ನು ಎತ್ತಿಕೊಂಡ ಭಾಗವತ, ಅವನ ಕಂಠ ನಿಜ. ಬೇಗನೆ ಮುಗಿಸಿರೋ ಎಂಬಂತೆ ಬಿದ್ದ ಎರಡು ಮಳೆ ಹನಿ ನಿಜ. ಅದರ ಹಿಂದಿನ ತಯಾರಿ, ಕುಣಿತ, ಪದ ಕಲಿಸಿದ ಆಟದ ಮಾಸ್ತರು, ಮನೆಗೊಂದರಂತೆ ಇರುವ ಪಾತ್ರಧಾರಿಗಳು ಎಬ್ಬಿಸಿದ ನವಿರು ಕಂಪನ, ಪೇಟೆಯಿಂದ ತಂದ ಹೂವಿನ ಮಾಲೆಗಳು ನಿಜ.

ಚಂಡೆ ಮದ್ದಳೆ ಸದ್ದನ್ನು ಹಗಲಿನ ನಿದ್ದೆಯಲ್ಲೂ ಚಿಣ್ಣರು ಕೇಳುತ್ತಿದ್ದಾರೆ. ಅದೇ, ಹಗಲಿನಲ್ಲಿ ನಿದ್ದೆ ಬರದೆ ಹೊರಳಾಡುತ್ತಿರುವ ಎಲ್ಲರನೂ ಅನುಗಾಲವೂ ಸಲುಹಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT