ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನಸು ಕಾಣಲು ಕಣ್ಣೇ ಬೇಕೆಂದಿಲ್ಲ'

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಾಧನೆಯ ಹಾದಿಗೆ ಅಂಧತ್ವ ಅಡ್ಡಿಯಾಗುವುದಿಲ್ಲ ಎಂಬುದನ್ನು ಬೆಂಗಳೂರಿನ ಅಶ್ವಿನಿ ಅಂಗಡಿ (24) ಸಾಧಿಸಿ ತೋರಿದ್ದಾರೆ. ಎರಡು ವರ್ಷಗಳಿಂದ `ಯುವಧ್ವನಿ' ಸಂಘಟನೆಯ ಮೂಲಕ ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ವಿಶ್ವಸಂಸ್ಥೆಯು ಜುಲೈ 12ರ `ಮಲಾಲಾ ದಿನಾಚರಣೆ'ಯಂದು `ಗಾರ್ಡನ್ ಬ್ರೌನ್' ಯುವ ಸಾಧಕ ಪ್ರಶಸ್ತಿಯನ್ನು ಅವರಿಗೆ ನೀಡಿದೆ.

ಅಂಗವಿಕಲರ ಶಿಕ್ಷಣದಲ್ಲಿನ ನ್ಯೂನತೆ ತೊಡೆದು ಹಾಕುವ ಕಾರ್ಯದಲ್ಲಿ ನಿರತರಾಗಿರುವ ಅಶ್ವಿನಿ, ಸದ್ಯ `ಯುವಧ್ವನಿ'ಯ ಜತೆಗೆ ಲಿಯೋನಾರ್ಡ್ ಚೆಶೈರ್ ಡಿಸೆಬಿಲಿಟಿ  ಸ್ವಯಂಸೇವಾ ಸಂಸ್ಥೆಯಲ್ಲಿ ಅಂಗವಿಕಲರಿಗೆ ಮಾಹಿತಿ ನೀಡುವ ಕೆಲಸ ಮತ್ತು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯ ಚೆಳ್ಳಗುರ್ಕಿಯವರಾದ ಅವರು ಸದ್ಯ ನಗರದ ಶೇಷಾದ್ರಿಪುರದಲ್ಲಿ ಅಪ್ಪ, ಅಮ್ಮನ ಜತೆ ವಾಸವಾಗಿದ್ದಾರೆ. ಜೆ.ಪಿ.ನಗರದ ರಮಣಶ್ರೀ ಅಂಧರ ಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪಿಯುಸಿ, ಮಹಾರಾಣಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿದ್ದಾರೆ. `ಕನಸುಗಳನ್ನು ಕಾಣಲು ಕಣ್ಣುಗಳ ಅಗತ್ಯವಿಲ್ಲ' ಎಂದು ಆತ್ಮವಿಶ್ವಾಸದಿಂದ ನುಡಿಯುವ ಅಶ್ವಿನಿ, `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಆಯ್ದ ಭಾಗ ಇಲ್ಲಿದೆ...

* ನಿಮ್ಮ ಕಾರ್ಯವನ್ನು ವಿಶ್ವಸಂಸ್ಥೆ ಗುರುತಿಸಿ ಗಾರ್ಡನ್ ಬ್ರೌನ್ ಪ್ರಶಸ್ತಿ ನೀಡಿದೆ. ಮಲಾಲಾ ದಿನಾಚರಣೆಯಂದೇ ಪ್ರಶಸ್ತಿ ಪಡೆದ ಬಗ್ಗೆ ಏನು ಅನಿಸುತ್ತಿದೆ?
ವಿಶ್ವಸಂಸ್ಥೆಯು ನನ್ನ ಹೋರಾಟ ಗುರುತಿಸಿ ಪ್ರಶಸ್ತಿ ನೀಡುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಇದೊಂದು ಕನಸು ಅನಿಸುತ್ತಿದೆ. ಅದರಲ್ಲೂ ಒಬ್ಬ ಅಂಗವಿಕಲೆಗೆ ಪ್ರಶಸ್ತಿಯ ಗೌರವ ನೀಡಿರುವುದು ಸಂತಸ ತಂದಿದೆ. ಮಲಾಲಾ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೋರಾಟ ನಡೆಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಅವರೊಂದಿಗಿದ್ದ ಕ್ಷಣಗಳು ಎಂದಿಗೂ ನನಗೆ ಅವಿಸ್ಮರಣೀಯ. ಆಕೆಯನ್ನು ಭೇಟಿ ಮಾಡಿದ ನಂತರ ನನ್ನಲ್ಲಿ ಹೊಸ ಉತ್ಸಾಹ ತುಂಬಿದೆ. ಅಂಗವಿಕಲರ ಶಿಕ್ಷಣಕ್ಕಾಗಿ ಹೋರಾಟ ನಡೆಸಲು ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಮಲಾಲಾ ದಿನಾಚರಣೆಯಂದೇ ಈ ಪ್ರಶಸ್ತಿ ಪಡೆದಿರುವುದರಿಂದ ಸಂತಸ ಇಮ್ಮಡಿಯಾಗಿದೆ.

* ಅಂಧತ್ವ ನಿಮ್ಮ ಹೋರಾಟಕ್ಕೆ ತೊಡಕಾಗುತ್ತಿಲ್ಲವೇ?
ಅಂಗವಿಕಲರಿಗಾಗಿ ಅದರಲ್ಲೂ ಅಂಧರ ಶಿಕ್ಷಣಕ್ಕಾಗಿ ಸರ್ಕಾರ ಯಾವುದೇ ವಿಶೇಷ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇದು ಬಹಳ ನೋವುಂಟು ಮಾಡುತ್ತದೆ. ಇದುವರೆಗೂ ನನ್ನ ಶಿಕ್ಷಣದ ಅವಧಿಯಲ್ಲಿ ಸೌಕರ್ಯಗಳ ಕೊರತೆಯನ್ನು ಅನುಭವಿಸಿದ್ದೇನೆ. ಇದರಿಂದ, ಅಂಗವಿಕಲರಿಗೆ ಉತ್ತಮವಾದ ಶಿಕ್ಷಣ ದೊರೆಯಬೇಕೆಂದು ಹೋರಾಟದ ದಾರಿಯನ್ನು ಆಯ್ದುಕೊಂಡೆ. ಇದು ನಾನೇ ಆಯ್ದುಕೊಂಡ ಹಾದಿ ಆಗಿರುವುದರಿಂದ ಹೋರಾಟಕ್ಕೆ ತೊಡಕಿನ ಪ್ರಶ್ನೆಯೇ ಇಲ್ಲ.

* ನಿಮ್ಮ ಹೋರಾಟದ ಮುಂದಿರುವ ಹೆಜ್ಜೆಗಳು ಯಾವುವು?
ಪ್ರಶಸ್ತಿಯಿಂದ ಜವಾಬ್ದಾರಿಗಳು ಹೆಚ್ಚಿವೆ. ನಾನು ಮಾಡಿರುವುದು ಅತ್ಯಲ್ಪ. ಆದರೂ ನನ್ನನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗಿದೆ. ಇದಕ್ಕಾಗಿ ನಾನು ಸಮಾಜಕ್ಕೆ ಏನನ್ನಾದರೂ ಮರಳಿಸಬೇಕು ಎಂಬ ಹಂಬಲವಿದೆ. ಅಂಗವಿಕಲರಿಗೆ ಬೇಕಾದ ಸೌಕರ್ಯಗಳ ಕುರಿತು ಹೋರಾಟ ಮತ್ತು ಅಂಗವಿಕಲರ ಏಳಿಗೆಗಾಗಿ ಸರ್ಕಾರವು ಗಮನ ಹರಿಸುವಂತಹ ಕಾರ್ಯಗಳನ್ನು ಮಾಡಬೇಕು ಎಂಬ ಯೋಜನೆಯಿದೆ. ಅಂಗವಿಕಲರೆಂದು ಸಮಾಜ ಎಂದಿಗೂ ಹೀಗಳೆಯಬಾರದು. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಮಾನ ಸ್ಥಾನಮಾನ ಲಭಿಸಬೇಕು. ಅಂಗವಿಕಲರು ಸ್ವಾಭಿಮಾನದಿಂದ ಬದುಕುವಂತೆ ಮಾಡುವುದು ನನ್ನ ಮುಂದಿನ ಕನಸಾಗಿದೆ.

* ಹೋರಾಟದ ಆರಂಭಿಕ ದಿನಗಳು ಹೇಗಿದ್ದವು?
ನನ್ನಂತೆ ಅನೇಕ ಅಂಗವಿಕಲ ಹೆಣ್ಣುಮಕ್ಕಳು ಕಷ್ಟಪಡುವುದು ನನ್ನ ಅನುಭವಕ್ಕೆ ಬಂದಿತ್ತು. ಅವರ ಶಿಕ್ಷಣಕ್ಕೆ ಯಾವುದೇ ಸೌಲಭ್ಯ ಅಥವಾ ಸೌಕರ್ಯಗಳು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಶಿಕ್ಷಣದಲ್ಲಿನ ಮೂಲ ಕೊರತೆ  ಸರಿಪಡಿಸಬೇಕಿರುವುದು ಇಂದಿನ ಆದ್ಯತೆಯಾಗಬೇಕು. ಅಂಗವಿಕಲತೆಯಿಂದಲೇ ವ್ಯಕ್ತಿತ್ವ ಅಳೆಯಬೇಕಿಲ್ಲ. ಅವರು ಸ್ವಾಭಿಮಾನದಿಂದ ಬದುಕಲು ಏನಾದರೂ ಮಾಡಬೇಕೆಂದು ಹೋರಾಟದ ದಾರಿಯಲ್ಲಿ ಸಾಗಿದ್ದೇನೆ. ಈ ದಾರಿಯಲ್ಲಿ ನನ್ನನ್ನು ಹಲವರು ಪ್ರೋತ್ಸಾಹಿಸಿದ್ದಾರೆ. ಹೋರಾಟದ ಹಾದಿ ಎಂದ ಮೇಲೆ ಕಷ್ಟ-ನಷ್ಟಗಳು ಇದ್ದದ್ದೇ.

* `ಯುವ ಧ್ವನಿ' ಸಂಘಟನೆಯ ಬಗ್ಗೆ ಹೇಳಿ...
`ಯುವ ಧ್ವನಿ' ಅಂಗವಿಕಲರ ಸಮಾನ ಮನಸ್ಕರ ಗುಂಪು ಅಥವಾ ಸಂಘಟನೆ. 2011 ರಲ್ಲಿ ಸ್ಥಾಪನೆಯಾಗಿರುವ ಸಂಘಟನೆಯು ಅಂಗವಿಕಲರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತ ಬಂದಿದೆ. ಅಂಗವಿಕಲರಿಗೆ ಶಿಕ್ಷಣದಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ಸಂಘಟನೆಯು ಹೋರಾಟ ನಡೆಸುತ್ತಿದೆ. ನನ್ನೊಂದಿಗೆ ಹಲವು ಅಂಗವಿಕಲರು ಈ ಸಂಘಟನೆಯಲ್ಲಿದ್ದಾರೆ. ಅಂಗವಿಕಲರ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ನಮ್ಮ ಧ್ಯೇಯ. ಇದರ ಜತೆಗೆ ಇತ್ತೀಚೆಗೆ ಲಿಯೋನಾರ್ಡ್ ಚೆಶೈರ್ ಡಿಸೆಬಿಲಿಟಿ ಸ್ವಯಂಸೇವಾ ಸಂಸ್ಥೆಯಲ್ಲಿ ಅಂಗವಿಕಲರಿಗೆ ಮಾಹಿತಿ ನೀಡುವ ಕಾರ್ಯನಿರ್ವಹಿಸುತ್ತಿದ್ದೇನೆ.

* ಅಂಗವಿಕಲತೆಯ ವಿಚಾರದಲ್ಲಿ ನಿಮಗೆ ಬೇಸರ ತಂದ ಸಂಗತಿ ಯಾವುದು?
ನಾವು ಮೊದಲು ಅಂಧರ ಶಾಲೆಯಲ್ಲಿ ಓದಿರುತ್ತೇವೆ. ನಂತರ ಸಾಮಾನ್ಯರ ಕಾಲೇಜಿಗೆ ಸೇರಿದಾಗ ಅಲ್ಲಿ ಒಂಟಿಯಾಗಿ ಬಿಡುತ್ತೇವೆ. ಬೇರೆ ವಿದ್ಯಾರ್ಥಿಗಳಿಗೆ ಅವರದ್ದೇ ಆದ ತಂಡವಿರುತ್ತದೆ. ನಮಗೆ ಅವರಲ್ಲಿ ಒಂದಾಗಲು ಸಾಧ್ಯವಾಗುವುದಿಲ್ಲ. ಕಾಲೇಜಿನಲ್ಲಿ ಅಂಗವಿಕಲರಿಗೆ ಬೇಕಾದ ಸೌಕರ್ಯಗಳು ಇರುವುದಿಲ್ಲ. ಈ ಸಂಗತಿ ಬೇಸರ ತರಿಸುತ್ತದೆ. ಆದರೆ, ಕಾಲೇಜಿನಲ್ಲಿ ಅಂಗವಿಕಲರಿಗೆ ಪ್ರಾಧ್ಯಾಪಕರ ಪ್ರೋತ್ಸಾಹವಿರುತ್ತದೆ ಎಂಬುದು ಸಮಾಧಾನದ ವಿಷಯವಾಗಿದೆ.

* ಅಂಗವಿಕಲರಲ್ಲಿ ಆತ್ಮ ವಿಶ್ವಾಸ ಮೂಡಿಸಲು ನಿಮ್ಮ ಸಲಹೆ?
ನಾವು ಎಲ್ಲರಂತಿಲ್ಲ ಎಂದು ಕೊರಗುವುದನ್ನು ಅಂಗವಿಕಲರು ಮೊದಲು ಬಿಡಬೇಕು. ನಮಗೇನೂ ದೊರೆತಿಲ್ಲ, ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎಂಬ ಧೋರಣೆ ಬೇಡ. ನಮ್ಮಿಂದಾಗುವ ಕಾರ್ಯಗಳನ್ನು ಮೊದಲು ಮಾಡಬೇಕು. ಹೆಚ್ಚಿನ ಸೌಕರ್ಯಗಳನ್ನು ಪಡೆಯಲು ಹೋರಾಟ ನಡೆಸಬೇಕು. ಆದರೆ, ದೀನರಾಗಿ ಯಾರ ಮುಂದೆಯೂ ಬೇಡಬಾರದು.

* ನಿಮ್ಮ ಹೋರಾಟಕ್ಕೆ ಕುಟುಂಬದವರ ಪ್ರೋತ್ಸಾಹ ಹೇಗಿದೆ?
ಅಪ್ಪ ಪ್ರಕಾಶ್, ಟ್ರಾವೆಲ್ ಏಜೆನ್ಸಿ ಮತ್ತು ಖಾನಾವಳಿ ಇಟ್ಟಿದ್ದಾರೆ. ಅಮ್ಮ ವೇದಾವತಿ ಗೃಹಿಣಿ. ಮೊದಲಿಗೆ ಅವರಿಗೆ ಅಂಗವಿಕಲರ ಕುರಿತು ಇರುವ ಸೌಲಭ್ಯಗಳ ಮಾಹಿತಿಯೇ ಇರಲಿಲ್ಲ. ನಾನು ಎಲ್ಲ ಸೌಲಭ್ಯಗಳ ಕುರಿತು ಹೇಳಿದ ನಂತರ ನಾನು ಎಂದಿಗೂ ಸ್ವಾಭಿಮಾನದಿಂದ ಬದುಕಬೇಕು ಎಂದು ಪ್ರೋತ್ಸಾಹ ನೀಡುತ್ತಾರೆ. ಅಣ್ಣ, ಅಪ್ಪನ ಟ್ರಾವೆಲ್ ಏಜೆನ್ಸಿ ನಡೆಸಿಕೊಂಡು ಹೋಗುತ್ತಾನೆ. ತಮ್ಮ ಬೆಸ್ಕಾಂ ನೌಕರ. ನನ್ನ ಹೋರಾಟಕ್ಕೆ ಮನೆಯವರೆಲ್ಲ ಬೆನ್ನೆಲುಬಾಗಿ ನಿಂತಿದ್ದಾರೆ.

* ಮದುವೆ ಯಾವಾಗ?
ನಾನು ಅಂಗವಿಕಲೆಯಾದರೂ ನನಗೆ ನನ್ನದೇ ಆದ ಕನಸುಗಳಿವೆ. ಅದರಲ್ಲಿ ಮದುವೆಯೂ ಒಂದು. ಮದುವೆ ಕೂಡ ನನ್ನ ಹಕ್ಕು. ಆದ್ದರಿಂದ, ನಾನು ಅಂಗವಿಕಲೆ ಎಂಬುದನ್ನು ಪರಿಗಣಿಸದೆ ಮುಂದೆ ಬರುವ ಯುವಕನನ್ನು ಮದುವೆಯಾಗುತ್ತೇನೆ. ಆ ರೀತಿ ಯೋಚನೆ ಮಾಡುವವರು ಸಿಗುತ್ತಾರೆ ಎಂಬ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT