ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಹೊತ್ತು ಕಾಮನಬಿಲ್ಲು ನಾಡಿಗೆ...

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗೆದ್ದ ಪಂದ್ಯಗಳು ಕೇವಲ ಎರಡೇ ಎರಡು!

ಹೌದು, ಭಾರತ ಮೊದಲ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು 1992ರಲ್ಲಿ. ಆಗ ತಾನೇ ದಕ್ಷಿಣ ಆಫ್ರಿಕಾ ವರ್ಣಭೇದ ನೀತಿಯಿಂದ ಮುಕ್ತವಾಗುತ್ತಾ ಕ್ರಿಕೆಟ್‌ ಆಡಲು ಶುರು ಮಾಡಿತ್ತು. ವಿಪರ್ಯಾಸವೆಂದರೆ ಅಂದಿನಿಂದ ಇಂದಿನವರೆಗೆ ಆ ದೇಶದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ಒಮ್ಮೆಯೂ ಜಯಿಸಿಲ್ಲ. ಗೆದ್ದಿರುವುದು ಕೇವಲ ಎರಡು ಪಂದ್ಯಗಳು ಅಷ್ಟೇ. ಆ ಗೆಲುವುಗಳು ಇತ್ತೀಚೆಗೆ ಬಂದಂಥವು.

ಭಾರತದ ಯುವ ಪಡೆ ಮತ್ತೊಮ್ಮೆ ಹರಿಣಗಳ ನಾಡಿನ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು ಎನಿಸಿರುವ ಸಚಿನ್‌, ಸೆಹ್ವಾಗ್‌, ದ್ರಾವಿಡ್‌, ಲಕ್ಷ್ಮಣ್‌ ಹಾಗೂ ಗಂಭೀರ್‌ ಯಾರೂ ಈಗ ತಂಡದಲ್ಲಿಲ್ಲ. ಹಾಗಾಗಿ ಯುವ ಪಡೆಗೆ ಇದೊಂದು ಭಾರಿ ಸವಾಲಿನ ಸರಣಿ. ಸಚಿನ್‌ ವಿದಾಯದ ಬಳಿಕ ನಡೆಯುತ್ತಿರುವ ಮೊದಲ ಟೆಸ್ಟ್ ಸರಣಿ ಕಾರಣ ಸಹಜವಾಗಿಯೇ ಎಲ್ಲರ ಗಮನ ಸೆಳೆಯುತ್ತಿದೆ. ಏಕೆಂದರೆ ಯುವ ಆಟಗಾರರು ಯಾವ ರೀತಿ ಜವಾಬ್ದಾರಿ ನಿಭಾಯಿಸಬಲ್ಲರು ಎಂಬ ಕುತೂಹಲವಿದೆ. ಕೇವಲ ಎರಡು ಟೆಸ್ಟ್‌ ಎಂಬ ನಿರಾಸೆಯೂ ಕಾಡುತ್ತಿದೆ.

ವಿವಾದದೊಳಗೆ...
ವಿಶೇಷವೆಂದರೆ ಈ ಮೊದಲು ನಿಗದಿಯಾದಂತೆ ಭಾರತದವರು ಈ ದೇಶದಲ್ಲಿ ಮೂರು ಟೆಸ್ಟ್‌ ಹಾಗೂ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಬೇಕಿತ್ತು. ಆದರೆ ‘ಕ್ರಿಕೆಟ್‌ ದಕ್ಷಿಣ ಆಫ್ರಿಕಾ’ದ ಮುಖ್ಯ ಕಾರ್ಯನಿರ್ವಾಹಕ ಹರೂನ್‌ ಲಾರ್ಗಟ್‌ ಈ ಹಿಂದೆ ಐಸಿಸಿಯಲ್ಲಿ ಅಧಿಕಾರ ದಲ್ಲಿದ್ದಾಗ ಬಿಸಿಸಿಐ ಧೋರಣೆಯನ್ನು ಖಂಡಿಸಿದ್ದರು.

ಈ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಕಳುಹಿಸಲು ಬಿಸಿಸಿಐ ಹಿಂದೇಟು ಹಾಕಿತ್ತು. ಅಷ್ಟು ಮಾತ್ರ ವಲ್ಲದೇ, ಸಚಿನ್‌ ಅವರ ವಿದಾಯದ ಸರಣಿಯನ್ನು ವಿಂಡೀಸ್‌ ಎದುರು ಭಾರತದಲ್ಲೇ ತುರ್ತಾಗಿ ಆಯೋಜಿಸಿತ್ತು. ಈ ಹಿಂದೆ ರೂಪಿಸಿದ ವೇಳಾಪಟ್ಟಿ ಪ್ರಕಾರ ಸಚಿನ್‌ ಅವರ 200ನೇ ಟೆಸ್ಟ್‌ ಪಂದ್ಯ ಹರಿಣಗಳ ನಾಡಿನಲ್ಲಿ ನಡೆಯಬೇಕಿತ್ತು.

ಆದರೆ ಸುದೀರ್ಘ ಸಮಾಲೋಚನೆ ಬಳಿಕ ‘ಕ್ರಿಕೆಟ್‌ ದಕ್ಷಿಣ ಆಫ್ರಿಕಾ’ವು ಹಣದ ಆಸೆಗಾಗಿ ಲಾರ್ಗಟ್‌ ಅವರನ್ನು ಮೂಲೆಗುಂಪು  ಮಾಡಿ ಬಿಸಿಸಿಐನತ್ತ ಹಸ್ತ ಚಾಚಿದೆ. ಹಾಗಾಗಿ ಸರಣಿಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಕೊನೆಕ್ಷಣದಲ್ಲಿ ಒಪ್ಪಿಗೆ ಸೂಚಿಸಿತು. ಆದರೆ ಒಂದು ಟೆಸ್ಟ್‌ ಹಾಗೂ ಎರಡು ಏಕದಿನ ಪಂದ್ಯಗಳನ್ನು ಕಡಿತಗೊಳಿಸಲಾಯಿತು. 

ಅಗ್ರ ರ್‍ಯಾಂಕ್‌ನ ಸವಾಲು...
ದಕ್ಷಿಣ ಆಫ್ರಿಕಾ ಸದ್ಯ ಟೆಸ್ಟ್‌ನಲ್ಲಿ ಅಗ್ರ ರ್‍ಯಾಂಕ್‌ನ ತಂಡ. ಡೇಲ್‌ ಸ್ಟೇಯ್ನ್‌, ಮಾರ್ನ್‌ ಮಾರ್ಕೆಲ್‌, ವೆರ್ನಾನ್‌ ಫಿಲ್ಯಾಂಡರ್‌ ಅವರಂಥ ಪ್ರಚಂಡ ವೇಗಿಗಳಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಸದ್ಯದ ಮಟ್ಟಿಗೆ ಅತ್ಯುತ್ತಮ ವೇಗದ ಬೌಲಿಂಗ್‌ ಹೊಂದಿರುವ ತಂಡವಿದು. ಸ್ವದೇಶದಲ್ಲಿ ಈ ತಂಡ ಇತ್ತೀಚಿನ ವರ್ಷಗಳಲ್ಲಿ ಸೋತಿದ್ದೇ ಕಡಿಮೆ. ಹಾಶೀಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌, ನಾಯಕ ಗ್ರೇಮ್‌ ಸ್ಮಿತ್‌ ಅವರಂಥ ಬ್ಯಾಟ್ಸ್‌ಮನ್‌ಗಳಿದ್ದಾರೆ. ಹಾಗಾಗಿ ಮತ್ತೊಮ್ಮೆ ಪಾರಮ್ಯ ಮೆರೆಯಲು ಸಜ್ಜಾಗಿದ್ದಾರೆ.

ಅಮೋಘ ಫಾರ್ಮ್‌ನಲ್ಲಿ...
ಭಾರತ ತಂಡದವರೂ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಗೆದ್ದಿರುವ ಟೂರ್ನಿ ಹಾಗೂ ಸರಣಿಗಳೇ ಅದಕ್ಕೆ ಸಾಕ್ಷಿ. ಆ ವಿಶ್ವಾಸದಿಂದಲೇ ಭಾರತದ ಯುವ ಪಡೆ ಹರಿಣಗಳನ್ನು ಕೆಣಕಲು ಸಜ್ಜಾಗಿದೆ.

ಹೊಸದಾಗಿ ಟೆಸ್ಟ್‌ ತಂಡಕ್ಕೆ ಸೇರ್ಪಡೆಯಾಗಿರುವ ರೋಹಿತ್‌ ಸತತ ಎರಡು ಟೆಸ್ಟ್‌ಗಳಲ್ಲಿ ಶತಕ ದಾಖಲಿಸಿ ಈಗ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಭವಿಷ್ಯದ ಸಚಿನ್‌ ಎನಿಸಿಕೊಳ್ಳುತ್ತಿರುವ ಕೊಹ್ಲಿ ಕೂಡ ಅಬ್ಬರದ ಆಟ ಪ್ರದರ್ಶಿಸುತ್ತಿದ್ದಾರೆ. ಶಿಖರ್‌, ಪೂಜಾರ ಮೇಲೂ ಭರವಸೆ ಇಡಲಾಗಿದೆ. ಆದರೆ ವಿಂಡೀಸ್‌ನಂಥ ದುರ್ಬಲ ಎದುರಾಳಿ ಎದುರು ಭಾರತ ಆಡಿದೆ ಎಂಬ ಟೀಕೆಗಳೂ ಇವೆ. ಹಾಗಾಗಿ ಇವರಿಗೆಲ್ಲಾ ದಕ್ಷಿಣ ಆಫ್ರಿಕಾದ ವೇಗಿಗಳು ಹಾಗೂ ಅಲ್ಲಿನ ಪಿಚ್‌ಗಳು ದೊಡ್ಡ ಸವಾಲೊಡ್ಡುವುದು ಖಂಡಿತ.

ಈ ದೇಶದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಈ ಯುವ ಬ್ಯಾಟ್ಸ್‌ಮನ್‌ಗಳ ಭವಿಷ್ಯ ನಿರ್ಧಾರವಾಗಲಿದೆ. ವೇಗಿ ಮೊಹಮ್ಮದ್‌ ಶಮಿ ಕೂಡ ಆಡಿದ ಮೊದಲ ಟೆಸ್ಟ್‌ನಲ್ಲಿಯೇ ಮಿಂಚು ಹರಿಸಿದ್ದರು. ಭುವನೇಶ್ವರ್‌ ಕುಮಾರ್‌ ಮೇಲೂ ಭರವಸೆ ಇಡಲಾಗಿದೆ. ಅವರ ಮುಂದೆ ಈಗ ವೇಗಿಗಳಿಗೆ ಹೇಳಿ  ಮಾಡಿಸಿದ ಪಿಚ್‌ಗಳಿವೆ.

ಟೆಸ್ಟ್‌ನಲ್ಲಿ ಎಂ.ಎಸ್‌.ದೋನಿ, ಚೇತೇಶ್ವರ ಪೂಜಾರ, ಇಶಾಂತ್‌ ಶರ್ಮ ಹಾಗೂ ಜಹೀರ್‌ ಖಾನ್‌ ಹೊರತುಪಡಿಸಿದರೆ ಇನ್ನುಳಿದವರು ಇದೇ ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಆಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಪೂಜಾರ ಅವರ ಸಾರಥ್ಯದ ಭಾರತ ‘ಎ’ ತಂಡ ಇಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.

ಆದರೆ ದೋನಿ ಸಾರಥ್ಯದ ಭಾರತ 2010–11ರಲ್ಲಿ ವಿದೇಶದಲ್ಲಿ ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಸೋಲು ಕಂಡಿತ್ತು. ಹಾಗಾಗಿ ವೇಗಿಗಳಿಗೆ ನೆರವು ನೀಡುವ ದಕ್ಷಿಣ ಆಫ್ರಿಕಾದ ಪಿಚ್‌ಗಳು ಯುವ ಬ್ಯಾಟ್ಸ್‌ಮನ್‌ಗಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಿವೆ.

ಅಂಕಿ-ಅಂಶಗಳತ್ತ ಕಣ್ಣು ಹರಿಸಿದರೆ ದಕ್ಷಿಣ ಆಫ್ರಿಕಾ ತಂಡದ್ದೇ ಹೆಚ್ಚು ಪ್ರಾಬಲ್ಯ. ಆದರೆ ಕಳೆದ ಆರು ವರ್ಷಗಳಲ್ಲಿ ಉಭಯ ತಂಡಗಳು ಆಡಿದ ಮೂರೂ ಸರಣಿಗಳು ಡ್ರಾನಲ್ಲಿ ಕೊನೆಗೊಂಡಿವೆ. ಪ್ರವಾಸದ ವೇಳೆ ಮೊದಲು ಏಕದಿನ ಸರಣಿ ನಡೆಯಲಿದೆ. ಏಕದಿನ ಪಂದ್ಯಗಳು ಜೋಹಾನ್ಸ್‌ಬರ್ಗ್‌ (ಡಿಸೆಂಬರ್‌ 5), ಡರ್ಬನ್‌ (ಡಿ.8) ಹಾಗೂ ಸೆಂಚೂರಿಯನ್‌ನಲ್ಲಿ (ಡಿ.11) ನಡೆಯಲಿವೆ. ಟೆಸ್ಟ್‌ ಪಂದ್ಯಗಳು ಜೋಹಾನ್ಸ್‌ಬರ್ಗ್‌ (ಡಿ.18–22) ಹಾಗೂ ಡರ್ಬನ್‌ನಲ್ಲಿ (ಡಿ.26–30) ಜರುಗಲಿವೆ.

ಏಕದಿನ ಸರಣಿಯಲ್ಲಿ ಭಾರತವೇ ಫೇವರಿಟ್‌. ಏಕೆಂದರೆ ಸತತ ಆರು ಸರಣಿ ಗೆದ್ದಿರುವ ದೋನಿ ಬಳಗದ ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಸ್ವದೇಶದಲ್ಲಿಯೇ ಪಾಕ್‌ ಎದುರು ಏಕದಿನ ಸರಣಿ ಸೋತಿದೆ. ಈ ವರ್ಷ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳು ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಕೊಹ್ಲಿ, ರೋಹಿತ್‌ ಹಾಗೂ ಶಿಖರ್‌ ಈ ಸಾಧನೆ ಮಾಡಿದ ಆಟಗಾರರು. ಅದರಲ್ಲೂ ಕೊಹ್ಲಿ ನಾಲ್ಕು ಶತಕ ಹಾಗೂ ಶಿಖರ್‌ ಐದು ಶತಕ ಗಳಿಸಿದ್ದಾರೆ.

ಆದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಇದುವರೆಗೆ ಏಕದಿನ ಸರಣಿ ಕೂಡ ಗೆದ್ದಿಲ್ಲ. ಅದೇನೇ ಇರಲಿ, ಯುವ ಆಟಗಾರರು ಹಲವು ಕನಸು ಹೊತ್ತು ಕಾಮನಬಿಲ್ಲಿನ ನಾಡಿನತ್ತ ಹೆಜ್ಜೆ ಇಟ್ಟಿದ್ದಾರೆ... ಸರಣಿಯ ಫಲಿತಾಂಶಕ್ಕಿಂತ ಶಿಖರ್‌, ಕೊಹ್ಲಿ, ರೋಹಿತ್‌ ಯಾವ ರೀತಿ ಆಡುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಭಾರತದ ಕ್ರಿಕೆಟ್‌ನ ಭವಿಷ್ಯ ಇರುವುದೇ ಈ ಬ್ಯಾಟ್ಸ್‌ಮನ್‌ಗಳ ಕೈಯಲ್ಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT