ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳೊಡನೆ ಕುಣಿದಾಡುವ ವಿದ್ಯಾರ್ಥಿಗಳು

Last Updated 11 ಫೆಬ್ರುವರಿ 2012, 9:40 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ವಿದ್ಯಾರ್ಥಿ ಜೀವನದ ನಿಜವಾದ ಕನಸಿನ ದಿನಗಳು ಕಾಲೇಜು ಹಂತ. `ಕತ್ತಲೆಯ ದಾರಿಯಲ್ಲಿ ನಡೆಯ ಬಲ್ಲೆ. ಆದರೆ ಕನಸಿರದ ದಾರಿಯಲ್ಲಿ ನಡೆಯಲಾರೆ~ ಎಂಬ ಯೌವ್ವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಪುರಾಣದ ಯಯಾತಿಯ ಮಾತುಗಳು ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಅನ್ವಯಿಸುತ್ತವೆ.

ಇಂತಹ ಕನಸಿನ ರಾಜಕುಮಾರನನ್ನು ಸದಾ ನೆನಪಿಸುತ್ತಾರೆ ಇಲ್ಲಿಯ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು. 
ಇತ್ತೀಚೆಗೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆಯಿತು. ನೂರಾರು ಯುವತಿಯರು ವಾರ್ಷಿಕೋತ್ಸವ ದಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಅವರ ವೇಷ ಭೂಷಣಗಳು ದೇವ ಕನ್ನಿಕೆಯರನ್ನು ನಾಚಿಸುವಂತಿದ್ದರೆ, ವೈಯ್ಯಾರದ ನಡಿಗೆ, ಬಳುಕುವ ನರ್ತನ ನವಿಲಿನ ನಾಟ್ಯ ಮೀರುವಂತಿತ್ತು.

ಪ್ರತಿದಿನವೂ ಸಮವಸ್ತ್ರದಲ್ಲಿ ಕಂಡು ಬರುತ್ತಿದ್ದ ಯುವಕ, ಯುವತಿಯರು ವಾರ್ಷಿಕೋತ್ಸವದಂದು ಬಣ್ಣ ಬಣ್ಣದ ಬಟ್ಟೆ ತೊಟ್ಟು ವರ್ಣರಂಜಿತ ದುಂಬಿಗಳಂತೆ  ಎಲ್ಲೆಡೆಯೂ ಓಡಾಡುತ್ತಿದ್ದರು. ವಿಶಾಲವಾದ ಕಾಲೇಜಿನ ಮೈದಾನದ ತುಂಬ ಸಂಭ್ರಮಿಸಿ ವಾರ್ಷಿಕೋತ್ಸವ ಆಚರಿಸಿದರು. ಮರಗಿಡ, ಹೂ ತೋಟ ಹೀಗೆ ಎಲ್ಲೆಂದರಲ್ಲಿ ತಮ್ಮ ಗೆಳತಿಯರೊಡನೆ ನಿಂತು ಛಾಯಾಚಿತ್ರಗ್ರಾಹಕ ಎಸ್.ಎಲ್. ಶಿವಣ್ಣ ಅವರಿಂದ ಫೋಟೊ ತೆಗೆಸಿಕೊಂಡರು.

ಮಧ್ಯಾಹ್ನದ ಬಳಿಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕೊಡಗಿನ ಸಾಂಪ್ರದಾಯಿಕ ನೃತ್ಯಗಳಾದ ಬೊಳಕಾಟ್ ಉಮ್ಮತ್ತಾಟ್, ಕೋಲಾಟ ಮೊದಲಾದವುಗಳನ್ನು  ಪ್ರದರ್ಶಿಸಿ ತಮ್ಮ ಪ್ರತಿಭೆ ಮೆರೆದರು. ಜತೆಗೆ ಆಧುನಿಕ ಗೀತೆಗಳಿಗೆ ನೃತ್ಯ, ಜನಪದ ಸಂಗೀತ, ನಾಟಕ, ದೇಶಿ ಮತ್ತು ಪಾಶ್ಚಿಮಾತ್ಯ ಹಾಡುಗಳಿಗೆ ಹೆಜ್ಜೆ ಕುಣಿತ ಮೊದಲಾದವುಗಳನ್ನು ಅಭಿನಯಿಸಿ ತಾವು ಯಾವುದೇ ಸಿನಿಮಾ ನಟನಟಿಯರಿಗೆ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದರು.

ಕೊಡಗಿನ ಬುಡಕಟ್ಟು ಜನಾಂಗದವರಾದ ಎರವರು, ಕುರುಬರು ಮೊದಲಾದ ಜನಾಂಗದ ಸಾಂಸ್ಕೃತಿಕ ನೃತ್ಯಗಳಿಗೆ ನವನಾಗರಿಕತೆಯ ಯುವಕ ಯುವತಿಯರು ಮನಮೋಹಕವಾಗಿ ಹೆಜ್ಜೆ ಹಾಕಿದರು. ಕಾವೇರಿ ಕಾಲೇಜಿನ ವಾರ್ಷಿಕೋತ್ಸವವೆಂದರೆ ಅದೊಂದು ದೊಡ್ಡ ಸಾಂಸ್ಕೃತಿಕ ಉತ್ಸವ. ಇಲ್ಲಿ ವೇದಿಕೆಯನ್ನು ಆಕರ್ಷಕವಾಗಿ ವಿದ್ಯಾರ್ಥಿಗಳೇ ಅಲಂಕರಿಸಿದ್ದರು.

ಕ್ರೀಡೆಯಲ್ಲಿಯೂ ಇಲ್ಲಿಯ ವಿದ್ಯಾರ್ಥಿಗಳು ಎತ್ತಿದ ಕೈ. ಇಲ್ಲಿಯ ತಂಡ ಪ್ರತಿವರ್ಷ ಹಾಕಿ ಟೂರ್ನಿಯಲ್ಲಿ  ಮಂಗಳೂರು  ವಿಶ್ವವಿದ್ಯಾನಿಲಯ ಪ್ರತಿನಿಧಿಸಿ ದೈಹಿಕ ನಿರ್ದೇಶಕ ಸಂತೋಷ್ ಅವರ ಮಾರ್ಗದರ್ಶನದಲ್ಲಿ ಪ್ರತಿ ಟೂರ್ನಿಯಲ್ಲೂ ಪ್ರಶಸ್ತಿ ಪಡೆದುಕೊಳ್ಳುತ್ತಿದೆ.
 
ಜತೆಗೆ ಬಾಸ್ಕೆಟ್ ಬಾಲ್‌ನಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲೆ ಕಾರ್ಯಕ್ರಮವಾದರೂ ಕಾಲೇಜಿನ ಬೊಳಕಾಟ್ ಮತ್ತು ಉಮ್ಮತ್ತಾಟ್ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಕೊಡಗಿನ ಸಂಸ್ಕೃತಿಯನ್ನು ಮೆರೆಯುತ್ತಾರೆ.

ಕ್ರೀಡೆ, ಸಂಸ್ಕೃತಿಯಲ್ಲಿ ಮುಂದಿರುವ ಇಲ್ಲಿಯ ವಿದ್ಯಾರ್ಥಿಗಳು ಓದಿನಲ್ಲಿಯೂ ಮುಂದಿದ್ದಾರೆ. ಪರೀಕ್ಷೆ ಬಂತೆಂದರೆ ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿ ಕಾಲೇಜಿಗೆ ಉತ್ತಮ ಫಲಿತಾಂಶ ತರುತ್ತಿದ್ದಾರೆ. ಪ್ರತಿವರ್ಷ ಕಾಲೇಜಿನ ಸರಾಸರಿ ಫಲಿತಾಂಶ ಶೇ.80ಕ್ಕೂ ಹೆಚ್ಚಿದೆ.

ಕಾಲೇಜು ಕ್ಯಾಂಪಸ್ ಹಸಿರು ಪರಿಸರದಿಂದ ಕಂಗೊಳಿಸುತ್ತಿದೆ. ಸಾಕಷ್ಟು ಮರಗಿಡಗಳನ್ನು ಬೆಳೆಸಲಾಗಿದೆ. ಸುತ್ತ ಕಂಪೌಂಡ್ ಇದ್ದು ವಿವಿಧ ಬಗೆಯ ಹೂಗಿಡಗಳು ಅರಳಿ ನಳನಳಿಸುತ್ತಿವೆ. ಉತ್ತಮ ಕಟ್ಟಡ, ನುರಿತ ಬೋಧಕ ವೃಂದ, ದಕ್ಷ ಆಡಳಿತ ಮಂಡಳಿ ಉತ್ಸಾಹಭರಿತ ವಿದ್ಯಾರ್ಥಿವೃಂದ ಇವೆಲ್ಲವೂಗಳಿಂದ ಇಡೀ ಕಾಲೇಜು ಕ್ಯಾಂಪಸ್ ಬಣ್ಣಬಣ್ಣವಾಗಿ ಕಂಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT