ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸೊಂದು ಶುರುವಾಗಿದೆ.....

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ಈಜಿನಲ್ಲಿ ರಾಷ್ಟ್ರಪ್ರಶಸ್ತಿ. ನೃತ್ಯದಲ್ಲಿ ಅತೀವ ಆಸಕ್ತಿ. ಎಂಜಿನಿಯರಿಂಗ್‌ನಲ್ಲಿ ಪದವಿ. ಈಗ ಸಿನಿಮಾದಲ್ಲಿ ಸವಾರಿ.

ಮಿಲನಾ! ಹೆಸರಿನಲ್ಲೇ ಕಚಗುಳಿಯ ಭಾವ ಹೊಂದಿರುವ ಈ ಚೆಲುವೆ ಚಿನಕುರಳಿ ವ್ಯಕ್ತಿತ್ವದವಳು. ಕನ್ನಡವನ್ನು ಇಂಗ್ಲಿಷ್‌ನಂತೆ ಮಾತನಾಡುವ ಹುಡುಗಿಯರ ನಡುವೆ, ಕನ್ನಡವನ್ನು ಕನ್ನಡದಂತೆಯೇ ಮಾತನಾಡುವ `ಕನ್ನಡತಿ~ ಈ ಮಿಲನಾ.

ಈಗಷ್ಟೇ ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಊರಿರುವ ಮಿಲನಾ ಹಾಸನದ ಹುಡುಗಿ. ಚಿಕ್ಕಂದಿನಲ್ಲೇ ನೃತ್ಯದ ಹುಚ್ಚು ಹತ್ತಿಸಿಕೊಂಡಿದ್ದ ಈ ಹುಡುಗಿ, ಶಾಸ್ತ್ರೀಯ ನೃತ್ಯಕ್ಕೂ ಸೈ ಪಾಶ್ಚಾತ್ಯ ಕುಣಿತಕ್ಕೂ ಸೈ ಎನ್ನುವ ಪ್ರತಿಭಾವಂತೆ. ಎಂಜಿನಿಯರಿಂಗ್ ಕಲಿಯಲಿಕ್ಕೆಂದು ಬೆಂಗಳೂರಿಗೆ ಬಂದವರು, ಈಗ ಸಿನಿಮಾ ನೆಪದಲ್ಲಿ ಗಾಂಧಿನಗರದಲ್ಲಿ ಸುಳಿದಾಡುತ್ತಿದ್ದಾರೆ. `ಸವಾರಿ ಟು 1000 ಎಡಿ~ ಚಿತ್ರದ ನಾಯಕಿಯಾಗಿ ಕನಸುಗಳ ಸವಾರಿ ಮಾಡುತ್ತಿದ್ದಾರೆ.

ಮಾಡೆಲಿಂಗ್ ಹಾಗೂ ಸೌಂದರ್ಯ ಸ್ಪರ್ಧೆಗಳು ಸಿನಿಮಾ ಪ್ರವೇಶಕ್ಕಿರುವ ಅಡ್ಡ ದಾರಿಗಳಷ್ಟೇ. ಮಿಲನಾ ಕೂಡ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದದ್ದು ಸೌಂದರ್ಯ ಸ್ಪರ್ಧೆ ಮೂಲಕವೇ. 2011ನೇ ಸಾಲಿನ `ಮಿಸ್ ಕರ್ನಾಟಕ~ ಸ್ಪರ್ಧೆಯಲ್ಲಿ `ಅತ್ಯುತ್ತಮ ಮೈಕಟ್ಟಿನ ಹುಡುಗಿ~ ಎಂಬ ಪ್ರಶಸ್ತಿ ಆಕೆಯ ಮುಡಿಗೇರಿತ್ತು. ಆಕರ್ಷಕ ಮೈಕಟ್ಟಿದ್ದ ಮೇಲೆ ಸಿನಿಮಾ ಕಣ್ಣು ಮಿಟುಕಿಸದೆ ಇದ್ದೀತೆ?
 
ಆದರೆ, ಬಂದ ಅವಕಾಶಗಳಿಗೆಲ್ಲ ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಜಾಯಮಾನ ಅವರದಲ್ಲವಂತೆ. ಎದುರಿಗಿದ್ದ ಅವಕಾಶಗಳನ್ನು ಸೋಸಿದ ನಂತರ `ಸವಾರಿ ಟು 1000 ಎಡಿ~ ಚಿತ್ರತಂಡಕ್ಕೆ ಹೂಂ ಎಂದಿದ್ದಾರೆ. `ನಾನು ಈ ಸಿನಿಮಾ ಒಪ್ಪಿಕೊಳ್ಳಲು ಮೂಲ ಕಾರಣ ಸ್ಕ್ರಿಪ್ಟ್. ನಿರ್ದೇಶಕರ ಉತ್ಸಾಹ ಹಾಗೂ ಆತ್ಮವಿಶ್ವಾಸ~ ಎನ್ನುವ ಮಿಲನಾ, ಕನ್ನಡದಲ್ಲಿಯೇ ಅವಕಾಶಗಳನ್ನು ಕಂಡುಕೊಳ್ಳುವ ಹಂಬಲ ಹೊಂದಿದ್ದಾರೆ.

ಎಂಜಿನಿಯರಿಂಗ್ ನಂತರ ಸ್ವಲ್ಪ ಸಮಯ ಮಿಲನಾ ದುಡಿಯುವ ಹೆಣ್ಣಾಗಿ ಉದ್ಯೋಗ ಪರ್ವವನ್ನೂ ಕಂಡಿದ್ದಾರೆ. ಅಭಿನಯದ ಹಿನ್ನೆಲೆ ಇಲ್ಲದಿದ್ದರೂ, ಸಿನಿಮಾಕ್ಕೆ ಸಾಕಷ್ಟು ಆತ್ಮವಿಶ್ವಾಸದಿಂದಲೇ ಅಡಿಯಿಟ್ಟಿದ್ದಾರೆ. `ಚಿತ್ರತಂಡದಿಂದ ಸಾಕಷ್ಟು ಬೆಂಬಲ, ಮಾರ್ಗದರ್ಶನ ಸಿಕ್ಕಿದೆ. ಹಿರಿಯ ನಟರೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಅದರಿಂದ ಅಭಿನಯ ಕಷ್ಟವಾಗುತ್ತಿಲ್ಲ~ ಎನ್ನುತ್ತಾರೆ.

ಈ ಮೊದಲು ನೃತ್ಯ ಕಾರ್ಯಕ್ರಮಗಳಿಗೆಂದು ವೇದಿಕೆ ಹತ್ತಿದ್ದ ಕಾರಣ ಕ್ಯಾಮೆರಾ ಭಯವೂ ಅವರಿಗಿಲ್ಲ.`ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳು ಬೇಕು. ಅದರಲ್ಲೂ ಲವಲವಿಕೆಯಿಂದ ಕೂಡಿದ ಪಾತ್ರಗಳೆಂದರೆ ಅಚ್ಚುಮೆಚ್ಚು~ ಎನ್ನುವ ಈ ಸುಂದರಿ, ಇಷ್ಟವಾದ ಸ್ಕ್ರಿಪ್ಟ್ ಗ್ಲಾಮರ್ ಬಯಸಿದರೆ ಸಿದ್ಧ ಎನ್ನುತ್ತಾರೆ.
 
`ನಟನೆಯನ್ನು ಹವ್ಯಾಸ ಎಂದುಕೊಂಡಿಲ್ಲ. ಆದರೆ ನನಗೆ ಸಿಗುವ ಅವಕಾಶಗಳನ್ನು ನೋಡಿ ಅದನ್ನು ವೃತ್ತಿ ಎಂದು ನಿರ್ಧರಿಸುವೆ~ ಎನ್ನುವ ಈ ಚೆಲುವೆ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯ ವಿಜೇತೆಯೂ ಹೌದು.

`ಸಣ್ಣಂದಿನಿಂದಲೂ ಈಜು ಸ್ಪರ್ಧೆಯಲ್ಲಿ ಗೆಲ್ಲಬೇಕು ಎನ್ನುವುದು ನನ್ನ ಗುರಿಯಾಗಿತ್ತು. ರಾಷ್ಟ್ರಮಟ್ಟದಲ್ಲಿ ವಿಜೇತಳಾಗಬೇಕೆಂಬ ನನ್ನ ಕನಸು ಕಾಲೇಜು ದಿನಗಳಲ್ಲಿ ನನಸಾಯಿತು. ಅದರಿಂದ ನನ್ನ ಮೈಕಟ್ಟು ಕೂಡ ಸುಂದರವಾಯಿತು. ಇದೀಗ ನಿರಂತರವಾಗಿ ಅಲ್ಲದಿದ್ದರೂ ಆಗಾಗ್ಗೆ ಈಜಲು ಹೋಗುತ್ತಿರುತ್ತೇನೆ.
 
ಅದು ನನ್ನ ಸಿನಿಮಾ ಬದುಕಿಗೂ ಸಹಕಾರಿಯಾಗಿದೆ. ಸಿನಿಮಾಗೆ ಸೇರಬೇಕು ಎಂದು ನಾನು ಮೈಕಟ್ಟನ್ನು ನಿರ್ವಹಿಸುತ್ತಿಲ್ಲ. ಆರೋಗ್ಯದ ಕಾಳಜಿಯಿಂದ ಮೊದಲಿನಿಂದಲೂ ಯೋಗ ಮಾಡುತ್ತೇನೆ. ಡಯಟ್ ಎನ್ನುವುದಕ್ಕಿಂತ ಆರೋಗ್ಯಕರ ಆಹಾರವನ್ನು ಸೇವಿಸುತ್ತೇನೆ~ ಎನ್ನುತ್ತಾರೆ.

ಆಟ, ಕುಣಿತ, ಎಂಜಿನಿಯರಿಂಗ್ ಪದವಿ- ಹೀಗೆ, ಹಲವು ಕಾರಣಗಳಿಗಾಗಿ ನಿರೀಕ್ಷೆಗಳನ್ನು ಹುಟ್ಟಿಸುವ ಮಿಲನಾ ಆತ್ಮವಿಶ್ವಾಸದ ಹುಡುಗಿ. ಕನ್ನಡ ಚಿತ್ರರಂಗದ ನಾಯಕಿಯರ ಕೊರತೆ ಹಿನ್ನೆಲೆಯಲ್ಲಿ ಅವರು ಆಶಾಕಿರಣವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT