ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಂಪು ಪಸರಿಸಿದ ಮೆರವಣಿಗೆ

Last Updated 12 ಏಪ್ರಿಲ್ 2011, 10:35 IST
ಅಕ್ಷರ ಗಾತ್ರ

ಸವಣೂರ: ನವಾಬರ ಐತಿಹಾಸಿಕ ನಗರವಾದ ಸವಣೂರಿನ ಅಂಗಳದಲ್ಲಿ ಸಾಹಿತ್ಯದ ತಂಗಾಳಿ ಬೀಸಲು ಆರಂಭಿಸಿದೆ. ತಾಲ್ಲೂಕು ಮಟ್ಟದ ದ್ವಿತೀಯ ಸಾಹಿತ್ಯ ಸಮ್ಮೇಳನದ ಸೊಬಗಿಗೆ, ಅದ್ದೂರಿಯ ಕಲಾ ತಂಡಗಳ ಮೆರವಣಿಗೆಗೆ ಸವಣೂರಿನ ಜನರು ಸಾಕ್ಷಿಯಾದರು.

ಸೋಮವಾರದ ಮುಂಜಾವಿನಲ್ಲಿ ಜನಜಾತ್ರೆಯನ್ನು ಕಂಡ ಸವಣೂರಿನ ಪ್ರತಿಯೊಂದು ಬೀದಿಗಳಲ್ಲಿಯೂ ಕನ್ನಡದ ಕಂಪು ಪಸರಿಸಿಕೊಂಡಿದ್ದು, ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಕನ್ನಡದ ಹಬ್ಬಕ್ಕೆ ಅಣಿಯಾದರು.

ಸವಣೂರಿನ ಡಾ. ವಿ.ಕೃ ಗೋಕಾಕ ವೃತ್ತದಿಂದ ಮಧ್ಯಾಹ್ನ ಆರಂಭಗೊಂಡ ಸಾಂಸ್ಕೃತಿಕ ಮೆರವಣಿಗೆಗೆ ಸಚಿವ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಚಾಲನೆ ನೀಡಿದರು. ಮೆರವಣಿಗೆ ಸಾರಥ್ಯವನ್ನು ವಹಿಸಿಕೊಂಡಿದ್ದ ಗಜರಾಜನಿಗೆ ಹಾಗೂ ತಾಯಿ ಭುವನೇಶ್ವರಿಯ ರೂಪಕಕ್ಕೆ ಪೂಜೆ ಸಲ್ಲಿಸಿದರು. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಾಹಿತಿ ಡಾ. ಸದಾನಂದ ಕನವಳ್ಳಿ ಅವರನ್ನು ಬೆಳ್ಳಿಯ ಸಾರೋಟಿನವರೆಗೆ ಕರೆತಂದರು.

ನಾಡಿನ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಹತ್ತಾರು ಕಲಾ ತಂಡಗಳು, ಸ್ಥಳೀಯ ಕಲಾವಿದರು, ಸಾಹಿತ್ಯಾಸಕ್ತರು, ಕನ್ನಡ ಪರ ಸಂಘಟನೆಗಳ ಸದಸ್ಯರು, ಅಧಿಕಾರಿಗಳು, ನೌಕಕರು, ರೈತರನ್ನೊಳಗೊಂಡಿದ್ದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.
 
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ಸದಾನಂದ ಕನವಳ್ಳಿ ದಂಪತಿಯನ್ನು ಬೆಳ್ಳಿಯ ಸಾರೋಟಿನಲ್ಲಿ ಕೂರಿಸಿ ಆರತಿಯೊಂದಿಗೆ ತಿಲಕ, ಪುಷ್ಪಗಳನ್ನು ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ದಕ್ಷಿಣ ಕನ್ನಡದ ಶಿಲ್ಪಾ ಗೊಂಬೆ ಬಳಗದ ಸದಸ್ಯರ ಗೊಂಬೆಯಾಟ, ಕೀಲು ಕುದುರೆ ನೃತ್ಯ, ಸುರಶೆಟ್ಟಿ ಕೊಪ್ಪದ ಕರಡಿ ಮಜಲು, ಶಿಗ್ಗಾಂವ ತಾಲ್ಲೂಕಿನ ಚಕ್ಕಲಗಿ ಮೇಳ, ಹೆಗ್ಗೋಡಿನ ಮಹಿಳಾ ಡೊಳ್ಳಿನ ಮೇಳಗಳು ಸಮ್ಮೇಳನದ ವೈಭವವನ್ನು ಹೆಚ್ಚಿಸಿದವು.

ಸುರಶೆಟ್ಟಿಕೊಪ್ಪದ ಜಗ್ಗಲಗಿ ಮೇಳ, ಸವಣೂರಿನ ಗೌಡ್ರ ಓಣಿಯ ದೊಡ್ಡಾಟದ ಪಾತ್ರಗಳ ರೂಪಕಗಳು, ಪದಗಳೊಂದಿಗೆ ಬೀಸುವುದು- ಕುಟ್ಟುವುದು, ಕೌದಿ ಕಸೂತಿಗಳ ನೇಯ್ಗೆ ಸೇರಿದಂತೆ ಹಲವು ಗ್ರಾಮೀಣ ಕಲೆಗಳು ಅನಾವರಣಗೊಂಡವು.

ಸವಣೂರಿನ ದುರ್ಗಾದೇವಿ ಗುಡಿಯಿಂದ ಆರಂಭಗೊಂಡ ಮೆರವಣಿಗೆ, ಕೆ.ಇ.ಬಿ. ರಸ್ತೆ, ದಂಡಿನಪೇಟೆ, ಸಿಂಪಿಗಲ್ಲಿ, ಮಾರುಕಟ್ಟೆ ರಸ್ತೆ, ಚಿತ್ರಗಾರ ಓಣಿ, ಉಪ್ಪಾರ ಓಣಿ ಮೂಲಕ ಸಾಗಿ ಬಂದು, ಕೋರ್ಟ್ ಆವರಣದಲ್ಲಿ ರೂಪಿಸಲಾಗಿದ್ದ ಗೋಕಾಕರ ವೇದಿಕೆಯಲ್ಲಿ ಸಮಾವೇಶಗೊಂಡಿತು. ಮೆರವಣಿಗೆಗೆ ಮುನ್ನ ತಹಸೀಲ್ದಾರ ಡಾ. ಪ್ರಶಾಂತ ನಾಲವಾರ ಧ್ವಜಾರೋಹಣ ಕೈಗೊಂಡು ಸಮ್ಮೇಳನದ ಪ್ರಕ್ರಿಯೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT