ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಡ್ಡಾಯ: ಜಿಪಂ ಅಧ್ಯಕ್ಷೆ ಸೂಚನೆ

Last Updated 23 ಡಿಸೆಂಬರ್ 2013, 6:54 IST
ಅಕ್ಷರ ಗಾತ್ರ

ರಾಯಚೂರು: ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸ­ಬೇಕು ಹಾಗೂ ಮುಂದಿನ ಮಾಸಿಕ ಪ್ರಗತಿ ವರದಿಯಲ್ಲಿ ಹಾಗೂ ಕೆಡಿಪಿ ಸಭೆಯಲ್ಲಿ ಎಲ್ಲ ಇಲಾಖಾ ವರದಿ ಕನ್ನಡದಲ್ಲಿಯೇ ಅನುಷ್ಠಾನವಾ­ಗಿರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾ­ಭವನ­ದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೊಳ್ಳೆಗಳ ನಿವಾರಣೆಗೆ ಪ್ಯಾಗಿಂಗ್ ನಗರ ಮತ್ತು ಗ್ರಾಮಾಂತರ ಪ್ರದೇಶ­ಗಳಲ್ಲಿ ವಿವಿಧ ಇಲಾಖೆಯ ಸಹಯೋಗ­ದಲ್ಲಿ ಕಾರ್ಯ­ನಿರ್ವಹಿಸಬೇಕು. ಉದ್ಯೋಗ ಖಾತರಿ ಯೋಜನೆ ಅಡಿ ಅರಣ್ಯ ಇಲಾಖೆಯಿಂದ ರಸ್ತೆಗಳ ಪಕ್ಕದಲ್ಲಿಯೇ ಸಸಿಗಳ ನೆಡುವುದರಿಂದ ಮಳೆಗಾಲದಲ್ಲಿ ಅನುಕೂಲವಾ­ಗುತ್ತದೆ. ಅರಣ್ಯ ಇಲಾಖೆ  ಅಧಿಕಾರಿ­ಗಳು ಈ ಕುರಿತು ಯೋಜನೆ ಸಿದ್ದಪಡಿಸಿ, ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಶರಣಪ್ಪ ಮಾತನಾಡಿ, ಎಲ್ಲ ಇಲಾಖೆಗಳ ಯೋಜನೆಗಳ ಕಾರ್ಯ­ಕ್ರಮ ಹಾಗೂ ಅನುಪಾಲನಾ ವರದಿ­ಯನ್ನು ಮುಂದಿನ ಸಭೆಯಲ್ಲಿ ಸಲ್ಲಿಸಬೇಕು ಹಾಗೂ ಹಿಂದಿನ ಕೆಡಿಪಿ ಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಕುರಿತು ಎಲ್ಲ ಇಲಾಖೆ  ಅಧಿಕಾರಿಗಳು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಯಾವುದೇ ಇಲಾಖೆಯ ಅನುದಾನ­ವನ್ನು ಸಂಪೂರ್ಣವಾಗಿ ಮಾರ್ಚ್ ಅಂತ್ಯದೊಳಗಾಗಿ ಬಳಕೆ ಮಾಡಬೇಕು ಹಾಗೂ ಜೆಸ್ಕಾಂ ಇಲಾಖೆ ವತಿಯಿಂದ ಮುಂಗಡ ಠೇವಣಿ ಪಡೆದರೂ ವಿದ್ಯುತ್‌ ಪರಿವರ್ತಕ ಅಳವಡಿಸಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ಮೇರೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿಲ್ಲ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ ಅಸಮಾ­ಧಾನ ವ್ಯಕ್ತಪಡಿಸಿದರು.

ಮಾನ್ವಿಯಿಂದ ಬೆಂಗಳೂರಿಗೆ ರಾತ್ರಿ­ವೇಳೆ ಮರಳು ಸಾಗಾಣಿಕೆ ನಡೆಯು­ತ್ತಿದೆ. ರಾಜಧನದ ಒಂದು ರಸೀದಿ ಪಡೆದು ಇಡೀ ದಿನ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಇಂದರಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟು ಹೋಗಿವೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರಪ್ಪ ಗಮನಹರಿಸಬೇಕು ಎಂದು ಸೂಚಿಸಿದರು.

ಕಾಂಮಾಂಗೋ ಅಭಿಯಾನ ಕಾರ್ಯ­ಕ್ರಮ ಈಗಾಗಲೇ ಆರಂಭ­ಗೊಂಡಿದ್ದು, ರಾಯಚೂರು ತಾಲ್ಲೂಕಿ­ನಲ್ಲಿ ಮಂದಗತಿಯಲ್ಲಿ ಸಾಗುತ್ತದೆ. ಇತರ ತಾಲ್ಲೂಕುಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವ­ಹಣೆ ನಡೆದಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ­ಗಳು, ಕರವಸೂಲಿಕಾರರು, ಕಾರ್ಯನಿರ್ವಾಹಕ ಅಧಿಕಾರಿಗ­ಳೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ­ನಿರ್ವಾ­ಹಕ ಅಧಿಕಾರಿ ಡಾ.ಮುದ್ದು­ಮೋಹನ ತಿಳಿಸಿದರು.

ಪಂಚಾಯತ್ ರಾಜ್‌ ಎಂಜಿನಿ­ಯರಿಂಗ್‌ ವಿಭಾಗದಿಂದ ಗ್ರಾಮೀಣ ಪ್ರದೇಶದಗಳಲ್ಲಿ ಕುಡಿಯುವ ಯೋಜನೆ ಸಮರ್ಪಕ  ಅನುಷ್ಠಾನವಾ­ಗುತ್ತಿಲ್ಲ. ಈ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಿ ವರದಿ ನೀಡಬೇಕು ಎಂದು ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪ­ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಮುಖ್ಯಯೋಜನಾಧಿಕಾರಿ ಡಾ.ರೋಣಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT