ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೃತಿಗಳಿಗಿಲ್ಲ `ಯುವ ಪ್ರೀತಿ'!

Last Updated 23 ಏಪ್ರಿಲ್ 2013, 12:59 IST
ಅಕ್ಷರ ಗಾತ್ರ

ಬಹುಮಾಧ್ಯಮಗಳ ಭರಾಟೆಯಿಂದಾಗಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗು ಇವತ್ತಿನದಲ್ಲ.

ಟೀವಿ, ಮೊಬೈಲ್ ಕಾಲಿಟ್ಟ ದಿನಗಳಿಂದಲೂ ಇದೇ ಮಾತು ಚಾಲ್ತಿಯಲ್ಲಿದೆ. ಟೀವಿ ಯುಗ ಆರಂಭಕ್ಕೂ ಮುನ್ನ ಕಾದಂಬರಿಗಳನ್ನು ಓದುತ್ತಾ ಗೃಹಿಣಿಯರು ಸಮಯ ಕಳೆಯುತ್ತಿದ್ದರು. ಮೊಬೈಲ್ ಬರುವ ಮುನ್ನ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕೈಯಲೊಂದು ಪುಸ್ತಕ ಇರುತ್ತಿತ್ತು. ಆದರೆ ಈಗ ಯುವ ಪೀಳಿಗೆಗೆ ಪುಸ್ತಕಗಳು ಬೇಕಿಲ್ಲ. ಅವರಿಗೆ ಬೇಕಿರುವ ಮಾಹಿತಿ, ಮನರಂಜನೆ ಅಂಗೈಯಲ್ಲೇ ಸಿಗುತ್ತಿದೆ.
ಇಂತಹ ಎಲ್ಲ ಇಲ್ಲಗಳ ನಡುವೆಯೂ ನಗರದಲ್ಲಿ ವಾರಾಂತ್ಯ ಪುಸ್ತಕ ಬಿಡುಗಡೆಯ ಒಂದು ಕಾರ್ಯಕ್ರಮವಾದರೂ ಇದ್ದೇ ಇರುತ್ತದೆ. ಕನ್ನಡದಲ್ಲಿ ವರ್ಷಕ್ಕೆ ಏಳು ಸಾವಿರ ಪುಸ್ತಕಗಳು ಹೊರಬರುತ್ತಿವೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿಗರ ಓದುವ ಸಂಸ್ಕೃತಿ ಬಗ್ಗೆ `ಮೆಟ್ರೊ' ನಗರದ ಪ್ರಮುಖ ಪುಸ್ತಕದಂಗಡಿಗಳ ಮಾಲೀಕರನ್ನು ಮಾತನಾಡಿಸಿದಾಗ ಕೆಲ ಭಿನ್ನ ಆಭಿಪ್ರಾಯಗಳು ವ್ಯಕ್ತವಾದವು.

ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇದೆ. ಕಾದಂಬರಿ ಕೃತಿಗಳಿಗೆ ಬಂದರೆ ಈಗಲೂ ಶಿವರಾಮ ಕಾರಂತ, ಕುವೆಂಪು, ಬೇಂದ್ರೆ, ತರಾಸು, ಅನಕೃ, ಡಿವಿಜಿ, ಬಿ.ಜಿ.ಎಲ್. ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಡಾ.ಯು.ಆರ್. ಅನಂತಮೂರ್ತಿ ಮುಂತಾದವರ ಪುಸ್ತಕಗಳು ಜನಪ್ರಿಯತೆ ಉಳಿಸಿಕೊಂಡಿವೆ. ಹೊಸ ತಲೆಮಾರಿನ ಲೇಖಕರಲ್ಲಿ ಬೆರಳೆಣಿಕೆಯ ಲೇಖಕರ ಪುಸ್ತಕಗಳು ಮಾತ್ರ ಮಾರಾಟವಾಗುತ್ತಿವೆ. ವಿಮರ್ಶೆ, ಕವನಸಂಕಲನ, ಪ್ರಬಂಧ ಮುಂತಾದ ಪುಸ್ತಕಗಳಿಗೆ ಅಂಥ ಬೇಡಿಕೆಯೇನೂ ಇಲ್ಲ.

ಹಳೇ ಲೇಖಕರೇ ಅಚ್ಚುಮೆಚ್ಚು
`ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚು ಜನ ಕೊಳ್ಳುತ್ತಿದ್ದಾರೆ. ಕನ್ನಡದ ಓದುಗರಿಗೆ ಈಗಲೂ ಶಿವರಾಮ ಕಾರಂತ, ಕುವೆಂಪು, ತೇಜಸ್ವಿ, ಮಾಸ್ತಿ, ಬೇಂದ್ರೆ, ಬೀಚಿ, ತರಾಸು, ಡಿವಿಜಿ, ಭೈರಪ್ಪ, ಡಾ.ಯು.ಆರ್. ಅನಂತಮೂರ್ತಿಯವರ ಪುಸ್ತಕಗಳೇ ಹೆಚ್ಚು ಇಷ್ಟವಾಗುತ್ತಿವೆ.

ಹೊಸ ತಲೆಮಾರಿನ ಲೇಖಕರಲ್ಲಿ ವಸುಧೇಂದ್ರ, ನಾಗರಾಜ್ ವಸ್ತಾರೆ, ಲೋಕೇಶ್ ಅಗಸನಕಟ್ಟೆ, ಪ್ರಹ್ಲಾದ್ ಅನಸಗಕಟ್ಟೆ ಮುಂತಾದವರ ಪುಸ್ತಕಗಳಿಗೆ ಬೇಡಿಕೆ ಇದೆ. ಇದರ ಜೊತೆಗೆ ಶಿಕ್ಷಣಕ್ಕೆ ಮಹತ್ವ ಹೆಚ್ಚಿದ ಪರಿಣಾಮವಾಗಿ ಮಕ್ಕಳ ಪುಸ್ತಕಗಳಿಗೆ ಬೇಡಿಕೆ ಧಾರಾಳ' ಎನ್ನುತ್ತಾರೆ ಸಪ್ನ ಬುಕ್‌ಹೌಸ್‌ನ ದೊಡ್ಡೇಗೌಡ.

ಕನ್ನಡಕ್ಕೆ 


 ಯುವ ಓದುಗರು ಕಡಿಮೆ
ಅಂಕಿತ ಪುಸ್ತಕದ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಹೇಳುವುದು ಹೀಗೆ: `ನಗರದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತಿದೆ.
ಆರೋಗ್ಯ ಮಾಹಿತಿ, ವ್ಯಕ್ತಿತ್ವ ವಿಕಸನ ಮತ್ತು ಜ್ಯೋತಿಷ್ಯ ಸಂಬಂಧಿ ಪುಸ್ತಕಗಳಿಗೆ ಬಹು ಬೇಡಿಕೆ ಇದೆ. ಪ್ರಬಂಧ, ವಿಮರ್ಶೆ, ಕವನ ಸಂಕಲನಕ್ಕೆ ಬೇಡಿಕೆ ಕಡಿಮೆಯಾಗಿದೆ. ಮಕ್ಕಳ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಆದರೆ ಕನ್ನಡ ಪುಸ್ತಕಗಳನ್ನು ಕೊಳ್ಳುವವರು 40 ವರ್ಷ ದಾಟಿದವರು. ಅಲ್ಲದೆ, ಈಗ ಇಂಟರ್‌ನೆಟ್‌ನಲ್ಲಿ ಪುಸ್ತಕಗಳನ್ನು ಓದಬಹುದಾಗಿದೆ. ಕಿಂಡಲ್ ಎಂಬ ಸಾಧನದಲ್ಲಿ ಸುಮಾರು 10,000 ಪುಸ್ತಕಗಳನ್ನು ತುಂಬಬಹುದಾಗಿದೆ. ಇದು ಜಾಗದ ಕೊರತೆಯನ್ನೂ ನೀಗಿಸುತ್ತಿದೆ. ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರಿಗೆ ಇದೇ ದೊಡ್ಡ ಸವಾಲಾಗಿದೆ'.
                                                                                                                                                                   ಪ್ರಕಾಶ್ ಕಂಬತ್ತಳ್ಳಿ

ರೋಚಕತೆ ಇಷ್ಟ

`ನಗರ ದುಗರಿಗೆ ನಿಜ ಜೀವನದ ತೊಂದರೆಗಳು ಬೇಡ. ರೋಚಕತೆ ಮತ್ತು ಭ್ರಮಾಲೋಕವೇ ಇಷ್ಟ. ಯಂಡಮೂರಿ ವೀರೇಂದ್ರನಾಥ್, ರವಿ ಬೆಳಗೆರೆ ತರಹದ ಲೇಖಕರ ಕೃತಿಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ವೈಚಾರಿಕ ಕೃತಿಗಳಿಗೆ ಓದುಗರು ಕಡಿಮೆಯೇ. ಇನ್ನು ಗಂಭೀರ ಮತ್ತು ಬೃಹತ್ ಗಾತ್ರದ ಕೃತಿಗಳನ್ನು ಕೊಳ್ಳುವ

ವರಂತೂ ಬೆರಳೆಣಿಕೆಯಷ್ಟು. ಆದರೆ ಉತ್ತರ ಕರ್ನಾಟಕ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಧಾರವಾಡಗಳಲ್ಲಿ ಇನ್ನೂ ಒಳ್ಳೆಯ ಓದುಗರಿದ್ದಾರೆ. ಬೆಂಗಳೂರಿನಲ್ಲಿ ಈ ದಿನಮಾನಕ್ಕೆ ಸರಿಯಾಗಿ ಓದುವ ಅಭಿರುಚಿಯೂ ಬದಲಾಗಿದೆ' ಎಂಬುದು ನವಕರ್ನಾಟಕ ಪಬ್ಲಿಕೇಷನ್ಸ್ ಮುಖ್ಯಸ್ಥ ರಾಜಾರಾಮ್ ಅವರ ಅಭಿಪ್ರಾಯ.

ಯುವ ಓದುಗರನ್ನು ಕಳೆದುಕೊಳ್ಳುತ್ತಿರುವುದರ ಜೊತೆಗೆ ಹೊಸ ಕಾಲದ ತಾಂತ್ರಿಕ ಪ್ರಗತಿಯಿಂದಲೂ ಕನ್ನಡ ಪುಸ್ತಕೋದ್ಯಮದ ಸವಾಲುಗಳು ಹೆಚ್ಚಾಗಿವೆ ಎಂಬುದು ಪ್ರಕಾಶಕರ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗುತ್ತದೆ. ಹೀಗಿದ್ದೂ ಅಷ್ಟೊಂದು ಕೃತಿಗಳು ಬರುತ್ತಿರುವುದು ಅಚ್ಚರಿಯ ಸಂಗತಿಯಂತೂ ಹೌದು.

ರಾಜಾರಾಮ್

ಸಂಚಾರಿ ಗ್ರಂಥಾಲಯ
ಸಾರ್ವಜನಿಕ ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಎರವಲು ಪಡೆದು ಓದುವವರ ಸಂಖ್ಯೆಯೂ ಕಡಿಮೆಯಾಗಿದೆ. ಆದರೂ ನಗರದಲ್ಲಿ ಎರಡು ಸಂಚಾರಿ ಗ್ರಂಥಾಲಯಗಳಿವೆ. ಇಡೀ ಮಹಾನಗರಕ್ಕೆ ಎರಡೇ ಸಂಚಾರಿ ಗ್ರಂಥಾಲಯಗಳಿರುವುದು ಹೆಮ್ಮೆ ಏನಲ್ಲ. ಆದರೂ ಸಂಚಾರಿ ಗ್ರಂಥಾಲಯಗಳಿಗೆ ಓದುಗರು ಇದ್ದಾರೆ ಎಂಬುದೇ ಆಶಾದಾಯಕ ಅಂಶ.

ಗ್ರಂಥಾಲಯವಿರುವ ಬಸ್ ನಗರದ ಕೆಲ ನಿಗದಿತ ಸ್ಥಳಗಳಲ್ಲಿ ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ ನಿಲ್ಲುತ್ತದೆ. ವಿಧಾನಸೌಧದ ಬಳಿ ಪುಸ್ತಕಗಳನ್ನು ಹೊತ್ತ ಬಸ್ ಪ್ರತಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹಾಜರಾಗುತ್ತದೆ. ಸುತ್ತಲಿನ ಕಚೇರಿಗಳ ನೌಕರರು ಇ್ಲ್ಲಲಿಗೆ ಬಂದು ಪುಸ್ತಕಗಳನ್ನು ಎರವಲು ಪಡೆಯುತ್ತಾರೆ.

ಸಂಚಾರಿ ಗ್ರಂಥಾಲಯದ ಮುಖ್ಯ ಓದುಗರು ಮಹಿಳೆಯರು ಎಂಬುದು ವಿಶೇಷ. ಉಷಾ ನವರತ್ನರಾಂ, ತರಾಸು, ಎಂ.ಕೆ. ಇಂದಿರಾ, ಅನುಪಮಾ ನಿರಂಜನ ಮುಂತಾದವರ ಕಾದಂಬರಿಗಳು ಬೇಡಿಕೆಯಲ್ಲಿವೆ. ಇಲ್ಲಿ ಸುಮಾರು 5000 ಪುಸ್ತಕಗಳಿವೆ. ಸರ್ಕಾರದ ಅನುದಾನದ ಕೊರತೆ, ಸಿಬ್ಬಂದಿ ಕೊರತೆ ಮುಂತಾದ ಸವಾಲುಗಳ ನಡುವೆಯೂ ಗ್ರಂಥಾಲಯ ಬಸ್ ಸಂಚರಿಸುತ್ತಲೇ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT