ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನುಡಿತೇರುಜಾಗೃತಿ ಜಾಥಾಕ್ಕೆ ಅದ್ದೂರಿ ಚಾಲನೆ

Last Updated 16 ಜನವರಿ 2011, 7:55 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಜಾಗೃತಿ ಮೂಡಿಸುವ ಮತ್ತು ಕನ್ನಡೇತರರನ್ನು ಕನ್ನಡದ ವಾತಾವರಣದ ಒಳಗೆ ತರುವ ‘ಕನ್ನಡ ನುಡಿತೇರು’ ಜಾಗೃತಿ ಜಾಥಾಕ್ಕೆ ನಗರದಲ್ಲಿ ಶನಿವಾರ ಸಂಜೆ ಅದ್ದೂರಿ ಚಾಲನೆ ನೀಡಲಾಯಿತು.ವಿಧಾನಸೌಧದ ಮುಂಭಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಮುಖ್ಯಮಂತ್ರಿ ಪರವಾಗಿ ಬಂದಿದ್ದ ಕಾನೂನು ಸಚಿವರಾದ ಸುರೇಶ್‌ಕುಮಾರ್, ಆರ್.ಅಶೋಕ ಅವರು ಈ ಜಾಥಾಕ್ಕೆ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.

ರಾಜಧಾನಿಯಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಆತಂಕದಿಂದ ಕನ್ನಡತನ ಉಳಿಸಿ, ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೇ 21ರವರೆಗೆ ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಪ್ರಾಧಿಕಾರ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.ರಾಷ್ಟ್ರಕವಿ ಶಿವರುದ್ರಪ್ಪ ಮಾತನಾಡಿ ‘ಕನ್ನಡ ನಾಡಿನಲ್ಲಿ ಕನ್ನಡ ಉಳಿದೀತೋ ಇಲ್ಲವೋ ಎನ್ನುವ ಆತಂಕವಿದೆ. ಇದಕ್ಕೆ ಕಾರಣ ಕನ್ನಡದ ಸಮಸ್ಯೆಗಳನ್ನು ಎದುರಿಸುವಂತಹ ರಾಜಕೀಯ ಸಂಕಲ್ಪ ನಮ್ಮ ಜನಪ್ರತಿನಿಧಿಗಳಲ್ಲಿ ಇಲ್ಲದಿರುವುದು’ ಎಂದು ವಿಷಾದಿಸಿದರು.

ಅನೇಕ ಕನ್ನಡ ಚಳವಳಿಗಳ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಹಲವಾರು ಆಯೋಗಗಳನ್ನು ರಚಿಸಿ, ಅವುಗಳಿಂದ ವರದಿಗಳನ್ನು ಪಡೆದು, ಅನುಷ್ಠಾನಗೊಳಿಸುವ ಪ್ರಯತ್ನವನ್ನೂ ಮಾಡಿದೆ. ಇದಕ್ಕೆ ಸಾಕಷ್ಟು ಹಣಕಾಸಿನ ನೆರವು ಕೂಡ ನೀಡಿದೆ. ಆದರೆ, ಜಾರಿಯಾಗಬೇಕಾದ ವರದಿ ಮಾತ್ರ ಇನ್ನೂ ಇವೆ. ಅವುಗಳ ಅನುಷ್ಠಾನವೂ ಆಗಬೇಕು ಎಂದರು.

ಸಚಿವ ಸುರೇಶ್‌ಕುಮಾರ್ ಮುಖ್ಯಮಂತ್ರಿಗಳ ಲಿಖಿತ ಭಾಷಣ ಓದಿದರು. ‘ಕನ್ನಡ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದೂ ನುಡಿದರು. ಸಂಸದ ಅನಂತಕುಮಾರ್ ಮಾತನಾಡಿ, ‘ಪ್ರಾದೇಶಿಕ ಭಾಷೆಗೆ ಒತ್ತು ನೀಡುವ ಹಾಗೂ ಸ್ಥಳೀಯರಿಗೇ ಉದ್ಯೋಗದಲ್ಲಿ ಮೀಸಲು ಕಲ್ಪಿಸುವ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಅಗತ್ಯ ಇದೆ’ ಎಂದರು.
                       
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವ ಅಶೋಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ, ನಟ ಪ್ರೇಮ್ ಜಾಥಾಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್.ರೋಷನ್‌ಬೇಗ್, ಸಂಸದರಾದ ಡಿ.ಬಿ.ಚಂದ್ರೇಗೌಡ, ಪಿ.ಸಿ.ಮೋಹನ್, ಸಾಹಿತಿ ಜಿ.ನಾರಾಯಣ ಸೇರಿದಂತೆ ಇತರರು ಹಾಜರಿದ್ದರು.

ಗಮನ ಸೆಳೆದ ವೆುರವಣಿಗೆ: ಕನ್ನಡ ನುಡಿ ತೇರು ವಿಧಾನಸೌಧದಿಂದ ಹೊರಟು ಮೈಸೂರು ಬ್ಯಾಂಕ್ ವೃತ್ತ, ಗಾಂಧಿನಗರ, ಚಿಕ್ಕಪೇಟೆ ಮೂಲಕ ರಾತ್ರಿ ಬಸವನಗುಡಿ ಸೇರಿತು. ದಾರಿಯುದ್ದಕ್ಕೂ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ ಎಲ್ಲರ ಗಮನ ಸೆಳೆಯಿತು. ನುಡಿ ತೇರನ್ನು ಚಿಂತನಾ ತೇರು, ಸಂಗೀತ ತೇರು ಮತ್ತು ಜಾನಪದ ತೇರು ಹಿಂಬಾಲಿಸಿತು. ಪ್ರತಿಯೊಂದು ತೇರಿನಲ್ಲೂ ಆ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT