ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನುಡಿಯರಿಮೆಗೆ ಹೊಸ ತಾತ್ವಿಕ ಚೌಕಟ್ಟು

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಕೆ.ವಿ. ನಾರಾಯಣ ಅವರ ಇತ್ತೀಚಿನ ಹೊಸ ಹೊತ್ತಿಗೆ `ಕನ್ನಡದ ಉಲಿಕಂತೆಗಳು~. ಇದು ಕನ್ನಡದ ಆಡುನುಡಿಯನ್ನು ಅನುಸರಿಸಿಕೊಂಡು ಬರೆದಿರುವ ಸೊಲ್ಲರಿಮೆ ಕಂತು-1.

ನುಡಿಯರಿಮೆಯ ಮೂಲ ಕಾಳಜಿ ಇರುವುದೇ ಆಡುನುಡಿಯನ್ನು ಕುರಿತಾದದ್ದು. ನುಡಿಯರಿಮೆಗೆ ಆಡು ಮಾತಿನ ರೂಪಗಳೇ ಮುಖ್ಯ, ಬರಹ ರೂಪಗಳಲ್ಲ ಎಂಬುದು ಗಮನಾರ್ಹ. ನುಡಿಯೊಂದರ ರಚನೆ ಮೊದಲಾದದ್ದು ಮಾತಿನಿಂದಲೇ.

ಇಂತಹ ಆಡು ಮಾತನ್ನು ಅನುಸರಿಸಿ ನುಡಿಯನ್ನು ಬಿಡಿಸಿ ನೋಡಿದರೆ, ಆ ನುಡಿಯ ದಿಟ ರಚನೆಗಳೇ ನಮಗೆ ಗೊತ್ತಾಗುತ್ತವೆ. ಯಾವುದನ್ನು ಲಿಂಗ್ವಿಸ್ಟಿಕ್ ಪ್ರಾಪರ್ ಎಂದು ಕರೆಯುತ್ತಾರೋ ಅಂತಹ ಹೊಣೆಗಾರಿಕೆಯನ್ನು ಕೆವಿಎನ್ ಅವರು ಇಲ್ಲಿ ನಿರ್ವಹಿಸಿದ್ದಾರೆ.

ಈ ನಿಲುವಿನ ಬಗೆಗೆ ಚರ್ಚೆಯನ್ನು ಬೆಳೆಸುವುದರ ಬದಲಾಗಿ ಕೆವಿಎನ್ ಅವರ ಈ ಹೊತ್ತಿಗೆಯ ಹೆಚ್ಚಳವೇನು ಎಂಬುದನ್ನು ಚರ್ಚಿಸುವ ಜರೂರಿದೆ. ಏಕೆಂದರೆ ಕನ್ನಡ ನುಡಿಯರಿಮೆಯ ಚರಿತ್ರೆಯಲ್ಲಿಯೇ ಇದೊಂದು ಮಹತ್ವದ ಹೊತ್ತಿಗೆಯಾಗಿದೆ. ಹೀಗೆ ಹೇಳುವುದಕ್ಕೆ ಬಲವಾದ ಕಾರಣಗಳಿವೆ.

1. ಕನ್ನಡ ನುಡಿ ರಚನೆಯನ್ನು ಕುರಿತು ಚಿಂತನೆ ನಡೆಸಿದವರು ಕನ್ನಡದ ಉಲಿಕಂತೆ `ಸಿಲೆಬಲ್~ ಗಳನ್ನು ಕುರಿತು ಇದುವರೆಗೂ ಯಾವ ಬಗೆಯ ಚರ್ಚೆಗಳನ್ನೂ ಬೆಳೆಸಿರಲಿಲ್ಲ. `ಎಸ್.ಎನ್.ಶ್ರಿಧರ, ಯು.ಪಿ.ಉಪಾಧ್ಯಾಯ, ಎಚ್.ಸ್ಪೆನ್ಸರ್ ಇವರು ಕನ್ನಡ ಸೊಲ್ಲರಿಮೆ ಕುರಿತು ಇಂಗ್ಲಿಷಿನಲ್ಲಿ ಬರೆದ ಹೊತ್ತಿಗೆಗಳಲ್ಲಿ ಉಲಿಕಂತೆ ಕುರಿತ ಪ್ರಸ್ತಾಪವಿದೆ ಅಷ್ಟೇ~.

2. ಕನ್ನಡದಲ್ಲಿ ಬಂದಿರುವ ಸೊಲ್ಲರಿಮೆ ಕುರಿತ ಯಾವ ಚಿಂತನೆಗಳು ಕೂಡ, ಕೆವಿಎನ್ ಅವರು ತಮ್ಮ ಈ ಹೊತ್ತಿಗೆಯಲ್ಲಿ ಬಳಸಿರುವ ವಿಶ್ಲೇಷಣಾ ಮಾದರಿಯನ್ನು ಇಲ್ಲಿವರೆಗೂ ಅನುಸರಿಸಿರಲಿಲ್ಲ.

3. ಮಹಾಪ್ರಾಣ ಇರುವ ಪದಗಳನ್ನು ಅಲ್ಪಪ್ರಾಣವಾಗಿಸಿ ಬರೆಯುವ ಕ್ರಮವೊಂದು ಕನ್ನಡದಲ್ಲಿ ಈಗಾಗಲೇ ಮೊದಲಾಗಿದೆ. ಆದರೆ ಈಗಾಗಲೇ ಅವರು ಈ ತೊಡಕನ್ನು ಬೇರೊಂದು ಬಗೆಯಲ್ಲಿ ಬಗೆಹರಿಸಿಕೊಂಡಿದ್ದಾರೆ. ಅದೇನೆಂದರೆ, ಕನ್ನಡದ್ದೇ ಪದಗಳನ್ನು ಬಳಸಿಕೊಂಡು ಆ ಮೂಲಕ ಕನ್ನಡದಲ್ಲಿಯೇ ಅರುವು / ಚಿಂತನೆಗಳನ್ನು ಹೇಗೆ ಬೆಳಸಬಹುದು ಎಂಬ ಮಾದರಿಯೊಂದನ್ನು ಇಲ್ಲಿ ಹುಟ್ಟು ಹಾಕಿದ್ದಾರೆ. ಇದು ಕೇವಲ ಮಹಾಪ್ರಾಣಗಳನ್ನು ಕೈಬಿಡುವುದಲ್ಲದೇ, ಕನ್ನಡದ ಕಸುವಿನ ಬಗೆಗೆ ನಂಬಿಕೆಯನ್ನು ಹೆಚ್ಚಿಸುವ ಬಗೆಯೂ ಇವರ ಈ ನಿಲುವಿನಿಂದ ಮೊದಲಾಗಿದೆ. ಹಾಗಾಗಿ ಇದೊಂದು ನುಡಿ ಕ್ರಾಂತಿಯೇ ಸರಿ.

ನಾವೀಗ ಚರ್ಚಿಸಬೇಕಿರುವುದು ಮೊದಲ ಎರಡು ಕಾರಣಗಳನ್ನು ಮಾತ್ರ. ನುಡಿ ರಚನೆಯನ್ನು ಅರಿಯುವಲ್ಲಿ ಉಲಿ (ದನಿ), ಪದ, ಸೊಲ್ಲು (ವಾಕ್ಯ) ಹಾಗೂ ಪದನೆರಿಕೆ (ಪದಕೋಶ) ಎಂಬಿತ್ಯಾದಿ ನೆಲೆಗಳು ಮಹತ್ವದ್ದಾಗಿದ್ದರೂ, ನುಡಿ ರಚನೆಯ ಒಟ್ಟು ಸ್ವರೂಪವನ್ನು ಇವು ಹೇಳಲಾರವು.

ಇವುಗಳೊಂದಿಗೆ `ಉಲಿಕಂತೆ~ಯೂ ಮಹತ್ವದ ನೆಲೆಯಾಗಿದೆ. ಉಲಿಕಂತೆ ಎಂಬ ಈ ತಿಳಿವಿನ ಮಾದರಿ ಕನ್ನಡಕ್ಕೆ ಹೊಸದಲ್ಲ. ಕನ್ನಡ ನುಡಿಯರಿಮೆಯಲ್ಲಿ ಉಲಿಕಂತೆ ಕುರಿತ ಚರ್ಚೆಗಳು ಬೆಳೆದಿರಲಿಲ್ಲ. ಆದರೆ ಈ ಕಲ್ಪನೆಗೆ ಪೂರಕವಾದ ಹೊಳವುಗಳು ಛಂದಸ್ಸಿನಲ್ಲಿ ಬೆಳೆದಿದ್ದರೂ, ಅದರಿಂದ ಕನ್ನಡ ಕಾವ್ಯಶಾಸ್ತ್ರ ಇಲ್ಲವೇ ಭಾಷಾಶಾಸ್ತ್ರೀಯ ತಿಳಿವಳಿಕೆಗೆ ಯಾವ ಪ್ರಯೋಜನವೂ ಆಗಿರಲಿಲ್ಲ. ಅಂತಹ ಪ್ರಯೋಜನ ಇವತ್ತು ಈ ಹೊತ್ತಿಗೆಯಿಂದ ಸಿಗುತ್ತದೆ.

ಉಲಿಕಂತೆ ಎಂದರೇನು? ಎಂಬ ಕೇಳ್ವಿ ಯಾರಿಗಾದರೂ ಇಲ್ಲಿ ಎದುರಾಗಬಹುದು. ಇಂಗ್ಲಿಷಿನ ಸಿಲೆಬಲ್‌ಗೆ ಸಾಟಿಯಾಗಿ ಕನ್ನಡದಲ್ಲಿ ಇದನ್ನು ಕೆಲವರು `ಅಕ್ಷರ~ಯೆಂದು ಕರೆದಿದ್ದಾರೆ. ಅಕ್ಷರ ಮತ್ತು ಉಲಿಕಂತೆಗಳ ನಡುವೆ ಕೆವಿಎನ್ ವ್ಯತ್ಯಾಸ ಗುರುತಿಸುತ್ತಾರೆ. ಅಕ್ಷರವೆಂಬುದು ಕೇವಲ ಕಣ್ಣಿಗೆ ಕಾಣುವ ಬರಹಕ್ಕೆ ಸೇರಿದ್ದಾಗಿದೆ. ಆದರೆ ಉಲಿಕಂತೆ ಎನ್ನುವುದು ಉಲಿ, ಪದಗಳ ರಚನೆಗೆ ಸಂಬಂಧಿಸಿದ ಕಲ್ಪನೆ. ಇದನ್ನು ಕೆಲವರು ಪದಪೂರ್ವದ `ಪ್ರೀ ಲೆಕ್ಷಿಕಲ್ ಲೆವಲ್~ ಹಂತವೆಂದೂ ಕರೆಯುತ್ತಾರೆ. ಉಲಿ ನುಡಿಯ ಅತ್ಯಂತ ಚಿಕ್ಕ (ಘಟಕ) ಗುರುತು (ಪ್, ಮ್, ಅ, ಎ). ಇದರಲ್ಲಿ ಎರಡು ಬಗೆಯ ಗುಂಪುಗಳಿವೆ. ತೆರೆದ ಉಲಿ (ಸ್ವರ) ಮತ್ತು ಮುಚ್ಚಿದ ಉಲಿ (ವ್ಯಂಜನ).

ಅದರೆ ಉಲಿಕಂತೆಯನ್ನು ಏರು (ಆನ್‌ಸೆಟ್), ನಡು (ನ್ಯೂಕ್ಲಿಯಸ್), ಇಳಿ (ಕೋಡಾ) ಎಂಬ ಲಕ್ಷಣಗಳಿಂದ ಗುರುತಿಸಬಹುದು. ಏರು, ಇಳಿ ಮುಚ್ಚಿದ ಉಲಿಗಳಿಗೆ ಸಂಬಂಧಿಸಿದರೆ, ನಡು ಎಂಬುದು ತೆರದ ಉಲಿಗೆ ಸಂಬಂಧಿಸಿದೆ. ಉಲಿಕಂತೆಯಲ್ಲಿ ತೆರದ ಉಲಿ ಕಡ್ಡಾಯ. ಎತ್ತುಗೆಗಾಗಿ (ಹುಲಿ- ಹು ಹಾಗೂ ಲಿ) ಹೀಗೆ ತೋರಿಸಬಹುದಾದರೂ, ಅದನ್ನು ರಚನೆಯ ನೆಲೆಯಿಂದಲೇ ಬಣ್ಣಿಸಲು ಸಾಧ್ಯ.

ಕೆಲವು ಸಲ ಮುಚ್ಚಿದ ಉಲಿಗಳೂ ಉಲಿಕಂತೆಗಳಾಗಿ ವರ್ತಿಸುತ್ತವೆ. ಕನ್ನಡ ನುಡಿಯ ಪದಗಳಲ್ಲಿ ಒಂದು ಉಲಿಯಿಂದ ಮೊದಲಾಗಿ ಆರು ಉಲಿಗಳಿರುವ ಪದಗಳೇ ಹೆಚ್ಚಾಗಿ ಇರುವುದು. ಪದಗಳನ್ನು ಅರಿಯಲು ಉಲಿ, ಉಲಿಕಂತೆ ಹಾಗೂ ಉಲಿಕಂತೆಗಳ ಗಡಿಗೆರೆಗಳನ್ನು ತಿಳಿದುಕೊಳ್ಳುವುದು ಅಗತ್ಯ. ಪದಗಳಲ್ಲಿರುವ ಉಲಿಕಂತೆ ಮತ್ತು ಉಲಿಗಳು ತಮ್ಮದೇ ಒಳಗುಂಪನ್ನು ಮಾಡಿಕೊಂಡಿರುತ್ತವೆ.

ಈ ಗುಂಪುಗಳು ಉಲಿಯರಿಮೆಯ ನಿಯತತೆ ಹಾಗೂ ರಾಚನಿಕ ವ್ಯವಸ್ಥೆಯನ್ನು ಹೊಂದಿರುತ್ತವೆ. ಅವು ಅಮೂರ್ತರೂಪದಲ್ಲಿದ್ದರೂ, ಕನ್ನಡ ಪದಗಳ ಚಹರೆಗಳನ್ನೂ ತಿಳಿಸುತ್ತವೆ. ಆಯಾ ನುಡಿಯ ಪದ ಹಾಗೂ ಹೊರಗಿನ ನುಡಿಯ ಪದಗಳ ನಡುವಿನ ವ್ಯತ್ಯಾಸವನ್ನು ಈ ಉಲಿಕಂತೆಗಳ ನೆರವಿನಿಂದ ನಿಚ್ಚಳವಾಗಿ ಗುರುತಿಸಬಹುದು.
ಬೇರೆ ಬೇರೆ ನುಡಿಗಳಲ್ಲಿ ಒಂದಕ್ಕಿಂತ ಹೆಚ್ಚು ತಡೆಉಲಿಗಳು ಪದದ ಮೊದಲಲ್ಲಿ ಬರುತ್ತವೆ.

ಎತ್ತುಗೆಗಾಗಿ ಸಂಸ್ಕೃತದಲ್ಲಿ ಕ್ರಮ, ಶ್ಲೇಷೆ, ನ್ಯಾಯ, ಇಂಗ್ಲಿಷಿನಲ್ಲಿ ಕ್ಲಾಸ್, ಕ್ರಾಸ್, ಸ್ಪ್ರಿಂಗ್ ಮುಂತಾದವುಗಳನ್ನು ನೋಡಬಹುದು. ಕನ್ನಡ ಪದರಚನೆಯಲ್ಲಿ ಒಂದಕ್ಕಿಂತ ಹೆಚ್ಚು ತಡೆಉಲಿಗಳು ಪದದ ಮೊದಲಲ್ಲಿ ಬರುವುದಿಲ್ಲ ಎಂಬುದು ಗಮನಾರ್ಹ. ಅದಕ್ಕಾಗಿ ಸಂಸ್ಕೃತ, ಇಂಗ್ಲಿಷಿನ ಪದಗಳು ಕನ್ನಡದ ಒಳನುಡಿಗಳಲ್ಲಿ; ಬ್ರಹ್ಮ-ಬರಮ, ಪ್ರೀತಿ-ಪಿರೂತಿ, ಇಂಗ್ಲಿಷಿನ ಗ್ಲಾಸ್-ಗಳಾಸು/ಗಲಾಸು, ಪ್ಲೇಟ್-ಪಿಲೇಟು ಎಂದಾಗುತ್ತವೆ. ಉಲಿಕಂತೆ ಕುರಿತ ಈ ತಿಳಿವಳಿಕೆ  ಪದರಚನೆಯ ಒಳಕಟ್ಟುಗಳು ಒಂದು ಒಳನುಡಿಯಿಂದ ಮತ್ತೊಂದು ಒಳನುಡಿಗೆ ಬೇರೆ ಬೇರೆಯಾಗಿರುತ್ತವೆ ಎಂಬ ತಿಳಿವಳಿಕೆಯನ್ನೂ ಹುಸಿಗೊಳಿಸುತ್ತದೆ.

ಎತ್ತುಗೆಗಾಗಿ, ಮನೆ, ಮನಿ, ಮನ, ಸಾಲಿ, ಶಾಲಾ, ಶಾಲೆ, ಎಲೆ, ಯಲೆ ಮುಂತಾದವು. ಇಂತಹ ಒಳನುಡಿಗಳ ಪದರಚನೆಯಲ್ಲಿ ವ್ಯತ್ಯಾಸ ಕಾಣಿಸುವುದು ಕೇವಲ ಉಲಿರೂಪಗಳಲ್ಲಿಯೇ ಹೊರತು ಇಡೀ ಪದರಚನೆಯಲ್ಲಿ ಅಲ್ಲ. ಅಂದರೆ, ಪ್ರತೀ ಒಳನುಡಿಯು ತನ್ನದೆಯಾದ ಪದರಚನೆಯ ಕಟ್ಟುಗಳನ್ನು ಹೊಂದಿರುವುದಿಲ್ಲ, ಬದಲಾಗಿ ಪ್ರತಿಯೊಂದು ನುಡಿ ತನ್ನೆಲ್ಲ ಒಳನುಡಿಗಳಿಗೆ ಹೊಂದಿಕೆಯಾಗುವ ಸಮಾನ ಒಳ ರಚನೆಗಳನ್ನು `ಕಾಮನ್ ಅಂಡರ್‌ಲಯಿಂಗ್ ಸ್ಟ್ರಕ್ಟರ್~ ಆಯಾ ನುಡಿ ಹೊಂದಿರುತ್ತದೆ ಎಂದಾಯ್ತು.

ಕೆವಿಎನ್ ಅವರು ಈ ಹೊತ್ತಿಗೆಯಲ್ಲಿ ಜನರೇಟಿವ್ ಫೋನಾಲಜಿಯ ಮಾದರಿಯ ವಿಶ್ಲೇಷಣೆಯನ್ನು ಬಳಸಿದ್ದಾರೆ. ಇದು ಚಾಮ್‌ಸ್ಕಿ ಪ್ರಣೀತ ಮಾದರಿ. ಈ ಮಾದರಿ ಕೇವಲ ಸೊಲ್ಲರಿಮೆಯ ತತ್ವಗಳನ್ನು ಹೇಳದೇ, ನುಡಿಯರಿಮೆಯ ತತ್ವಗಳನ್ನು ಹೇಳುತ್ತದೆ. ಸೊಲ್ಲರಿಮೆಯ ತತ್ವ ಹಾಗೂ ನುಡಿಯರಿಮೆಯ ತತ್ವಗಳ ನಡುವಿನ ವ್ಯತ್ಯಾಸವೇನೆಂದರೆ, ಯಾವುದೇ ಒಂದು ನುಡಿಯ ಕಟ್ಟುಗಳನ್ನು ಅನುಸರಿಸಿ ಸೊಲ್ಲರಿಮೆ ರೂಪುಗೊಳ್ಳುತ್ತದೆ.

ಲೋಕದ ನುಡಿಗಳಿಗೆ ಅನ್ವಯವಾಗಬಹುದಾದ ಬಹುತೇಕ ನುಡಿ ತತ್ವಗಳನ್ನು ಒಳಗೊಂಡಿರುವ ಬಗೆಯನ್ನೇ ನುಡಿಯರಿಮೆ ಎಂದು ಕರೆಯಲಾಗುತ್ತದೆ. ಅಂತಹ ಆಲೋಚನಾ ಕ್ರಮವನ್ನು ಚಾಮ್‌ಸ್ಕಿಯ ನುಡಿಯರಿಮೆಯ ತತ್ವಗಳಲ್ಲಿ ಕಾಣಬಹುದು. ಇದನ್ನು ಕೆವಿಎನ್ ಅವರು ಕನ್ನಡದ್ದೇ ಮಾದರಿಯನ್ನಾಗಿ ರೂಪಿಸಿದ್ದಾರೆ. ಈ ಮಾದರಿಯ ಇನ್ನೊಂದು ಹೆಚ್ಚುಗಾರಿಕೆ- ನುಡಿರಚನೆಯ ತತ್ವಗಳನ್ನು ಕೇವಲ ಬಣ್ಣಿಸದೇ (ಡಿಸ್ಕ್ರೈಬ್), ತತ್ವಗಳನ್ನು ವ್ಯಾಖ್ಯಾನಿಸುವ (ಎಕ್ಸಪ್ಲೇನೇಟರಿ) ಬಗೆಯೂ ಇಲ್ಲಿ ಮುಖ್ಯವಾಗಿರುತ್ತದೆ.

ಇಲ್ಲಿಯ ಉಲಿಕಂತೆಯ ತತ್ವಗಳನ್ನು ಬಿಡಿಸಿ ನೋಡುವ ಮಾದರಿ ಕೇವಲ ತೆರದ ಉಲಿ ಇಲ್ಲವೇ ಮುಚ್ಚಿದ ಉಲಿಗಳೆಂದು ಮಾತ್ರ ಬಣ್ಣಿಸದೇ, ದ್ವಿಭಾವ ಲಕ್ಷಣ (ಬೈನರಿ ಕ್ಲಾಸಿಫಿಕೇಶನ್)ಗಳನ್ನು ಅನುಸರಿಸಿ ವ್ಯಾಖ್ಯಾನಿಸಲಾಗಿದೆ. ಕನ್ನಡದಲ್ಲಿ ಬಂದಿರುವ ಸೊಲ್ಲರಿಮೆಯ ಚಿಂತನೆಗಳ ಮಟ್ಟಿಗೆ ಇದೊಂದು ಹೊಸ ಮಾದರಿಯ ನುಡಿ ಓದು. ಜೊತೆಗೆ ಅತ್ಯಂತ ಮಹತ್ವದ ತಾತ್ವಿಕ ಚಿಂತನೆಗಳನ್ನು ರೂಪಿಸುವ ಬಗೆಯೂ ಆಗಿದೆ. ಹಾಗಾಗಿ ಈ ಹೊತ್ತಿನ ಕನ್ನಡ ನುಡಿಯರಿಮೆ ರೂಪುಗೊಳ್ಳಲು ಬೇಕಾದ ತಾತ್ವಿಕ ಚೌಕಟ್ಟುಗಳು ಈ ಹೊತ್ತಿಗೆಯಿಂದ ಸಿಗುತ್ತವೆ ಎನ್ನುವುದು ಸ್ಪಷ್ಟ. 
 

ಕನ್ನಡ ಆಡುನುಡಿಯ ಸೊಲ್ಲರಿಮೆ : 1
ಲೇ: ಕೆ.ವಿ. ನಾರಾಯಣ
ಪ್ರ: ಪ್ರಗತಿ ಗ್ರಾಫಿಕ್ಸ್, ನಂ. 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT