ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪರಂಪರೆ ಕಟ್ಟಿಕೊಟ್ಟ ಪ್ರಾತಃಸ್ಮರಣೀಯರು

ನೆಲಸಿರಿ
Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನಮ್ಮ ಪ್ರಾಚೀನ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವಾಗ ಅವುಗಳನ್ನು ಸಂಪಾದಿಸಿ, ಪರಿಷ್ಕರಿಸಿ, ಪ್ರಕಟಿಸಿಕೊಟ್ಟ ಪೂರ್ವಸೂರಿಗಳನ್ನು ನೆನೆದು ಮನಸ್ಸು ಕೃತಜ್ಞತೆಯಿಂದ ತುಂಬುತ್ತದೆ.

ಕನ್ನಡ ಪರಂಪರೆಯನ್ನು ರೂಪಿಸುವಲ್ಲಿ, ಕನ್ನಡ ಸಂಸ್ಕೃತಿ ಕಟ್ಟುವಲ್ಲಿ ಅತ್ಯಂತ ಮಹತ್ವದ ಹಂತವೆಂದರೆ ಪ್ರಾಚೀನ ಗ್ರಂಥಗಳ ಸಂಪಾದನೆ. ಇದು ಎಂತಹ ವಿದ್ವತ್ತು, ತಾಳ್ಮೆಯನ್ನು ಬೇಡುವಂಥದು, ಎಷ್ಟು ಕಷ್ಟದ ಕೆಲಸ ಎಂಬುದನ್ನು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಷ್ಟೇ ಬಲ್ಲರು. ಈಗ ಆಧುನಿಕ ತಂತ್ರಜ್ಞಾನ ಅನೇಕ ಸವಲತ್ತುಗಳನ್ನು ನಮಗೆ ಒದಗಿಸಿ ಕೊಟ್ಟಿದೆ.

ಆದರೆ ಆಗ ಹೆಚ್ಚು ಅನುಕೂಲಗಳಿರಲಿಲ್ಲ. ಹಳೆಯ ತಾಳೆಯೋಲೆಗಳು ಮುಟ್ಟಿದರೆ ಮುರಿದು ಹೋಗುವ ಹಾಗಿರುತ್ತಿದ್ದವು. ಅವುಗಳನ್ನು ಕಡತದಿಂದ ನಾಜೂಕಿನಿಂದ ಬಿಡಿಸಿ ಪ್ರತ್ಯೇಕ ಪಡಿಸಿಕೊಳ್ಳಬೇಕಿತ್ತು. ಆ ಮೇಲೆ ಅವುಗಳಿಗೆ ಸೊಪ್ಪಿನ ರಸ ಸವರಿದರೆ ಅಕ್ಷರಗಳು ಕಪ್ಪಾಗಿ ಎದ್ದು ಕಾಣುತ್ತಿದ್ದವು. ಆ ಹಳೆಯ ಕಾಲದ ಮೋಡಿ ಅಕ್ಷರಗಳನ್ನು ಅರ್ಥಮಾಡಿಕೊಳ್ಳಬೇಕು. ಅಭ್ಯಾಸವಿಲ್ಲದಿದ್ದರೆ ಅರ್ಥವಾಗುವುದು ಅಸಾಧ್ಯವೇ ಸರಿ.

ಜೊತೆಗೆ ತಾಳೆಯೋಲೆಯ ಪ್ರತಿಗಳಲ್ಲಿ ಕಾವ್ಯದ ಪದ್ಯಗಳನ್ನು ಪಾದಗಳಾಗಿ ವಿಂಗಡಿಸಿ ಬರೆದಿರುವುದಿಲ್ಲ. ಇಡೀ ಗ್ರಂಥ ಒಂದೇ ವಾಕ್ಯ ಎನ್ನುವಂತೆ ಮೊದಲಿನಿಂದ ಕಡೆಯವರೆಗೂ ಒಂದೇ ಸರಪಳಿಯ ರೀತಿಯಲ್ಲಿ ಬರೆದಿರುತ್ತಾರೆ. ಅದನ್ನೆಲ್ಲಾ ಅಧ್ಯಯನ ಮಾಡಿ ಶುದ್ಧ ಪ್ರತಿ ಸಿದ್ಧಪಡಿಸಿಕೊಳ್ಳಬೇಕು.

ಹೀಗೆ ಹಸ್ತಪ್ರತಿ ಸಿದ್ಧಪಡಿಸುವ ಮೊದಲು ತಾಳೆಯೋಲೆಯನ್ನು ಪಡೆಯುವುದೇ ಒಂದು ಸಾಹಸದ ಕೆಲಸವಾಗಿದ್ದಿತು. ಹಸ್ತಪ್ರತಿ ಸಂಗ್ರಹಿಸುವ ಮದ್ರಾಸಿನ ಓರಿಯಂಟಲ್‌ ಮ್ಯಾನುಸ್ಕ್ರಿಪ್ಟ್ ಲೈಬ್ರರಿ, ಮೈಸೂರಿನ ಓರಿಯಂಟಲ್‌ ಲೈಬ್ರರಿ, ಅರಮನೆಯ ಸರಸ್ವತೀ ಭಂಡಾರ,  ಪುರಾತತ್ವ ಇಲಾಖೆ – ಮೊದಲಾದ ಸಂಸ್ಥೆಗಳಿದ್ದವು ನಿಜ. ಆದರೆ ಅನೇಕ ವೇಳೆ ವ್ಯಕ್ತಿಗಳ ಬಳಿಯೇ ಅವರ ಮನೆಯ ಅಟ್ಟದ ಮೇಲೆಯೋ, ಪೂಜಾ ಗೃಹದಲ್ಲಿಯೋ ಉಳಿದು ಬಿಡುತ್ತಿದ್ದವು. ಅಂಥವರಿಂದ ಕಾಡಿ ಬೇಡಿ ದಾನವಾಗಿಯೋ, ಎರವಲಾಗಿಯೋ ಅಥವಾ ಹಣ ನೀಡಿಯೋ ತಾಳೆಯೋಲೆಗಳನ್ನು ಪಡೆಯಬೇಕಾಗುತ್ತಿತ್ತು. ಕೆಲವು ಮಹನೀಯರು ಈ ಯಾವ ರೀತಿಯಲ್ಲಿಯೂ ನೀಡದಿದ್ದಾಗ ಅವರಲ್ಲಿಗೇ ಹೋಗಿ ನಕಲು ಮಾಡಿಕೊಳ್ಳಬೇಕಿತ್ತು.

ಹಸ್ತಪ್ರತಿಗಳನ್ನು ಸಂಪಾದನೆಗೆ ಬಳಸುವ ಮೊದಲು ಅವು ಎಷ್ಟರಮಟ್ಟಿಗೆ ಶುದ್ಧ, ಒಂದು ಇನ್ನೊಂದರ ನಕಲೇ ಅಥವಾ ಬೇರೆ ಬೇರೆಯೇ, ಬೇರೆಯಾಗಿದ್ದರೆ ಎರಡಕ್ಕೂ ಬೇರೊಂದು ಮಾತೃಕೆಯಿವೆಯೇ, ಪ್ರಕ್ಷೇಪಗಳಿವೆಯೇ ಮೊದಲಾದ ಸಂಗತಿಗಳನ್ನು ಪರಿಶೀಲಿಸಬೇಕಿತ್ತು. ನಂತರ ಆಧಾರ ಪ್ರತಿಯೊಂದನ್ನು ಇಟ್ಟುಕೊಂಡು ಉಳಿದ ಪ್ರತಿಗಳ ಜೊತೆ ಹೋಲಿಸಿ ನೋಡಿ ಪಾಠಭೇದಗಳನ್ನು ಅಡಿಟಿಪ್ಪಣಿಗಳಲ್ಲಿ ಸೂಚಿಸಿ, ಲಿಪಿಕಾರ ಸ್ಖಾಲಿತ್ಯಗಳನ್ನು ಸರಿಪಡಿಸಿ, ಕ್ಲಿಷ್ಟ ಪದಗಳಿಗೆ ಅರ್ಥ ನೀಡಿ, ವಿಶೇಷ ಅಂಶಗಳಿದ್ದರೆ ಅವುಗಳಿಗೆ ಕಿರುಟಿಪ್ಪಣಿ ಬರೆದು ಮುದ್ರಿತ ಪ್ರತಿ ತಯಾರಿಸಬೇಕಿತ್ತು.

ನಂತರ ಅದರ ಮುದ್ರಣ ಮತ್ತೊಂದು ಸಾಹಸದ ಅಧ್ಯಾಯ. ಕೆಲವೊಮ್ಮೆ ತಾವೇ ಹಣ ಹಾಕಿ ಮುದ್ರಿಸಿರುವುದೂ ಉಂಟು. ಎಸ್‌. ಜಿ. ಗೋವಿಂದರಾಜ ಅಯ್ಯಂಗಾರರ ‘ಶ್ರೀ ರಾಮಾನುಜ ಸೂರಿ ಚರಿತ’ ಎಂಬ ಕೃತಿಯಲ್ಲಿ ಗ್ರಂಥ ಸಂಪಾದನೆಯ ಸ್ವರೂಪ ಕುರಿತಂತೆ ಒಂದು ಪದ್ಯವಿದೆ:

ಪುಳುಗಳ ಬೋನಮಾಗಿ ಇಲಿಗಳ್‌ ಕಡಿದುಂ
ಪುಡಿಯಾಗಿ ಮುಗ್ಗಿ ಕೆ
ಟ್ಟಳಿದುಳಿದಿರ್ದ ಕನ್ನಡದ ಕಬ್ಬಿಗರಗ್ಗದ
ಕಾವ್ಯಮಾಲೆಯಂ
ಗಳಿಸಿಯವಂ ಪರಿಷ್ಕರಿಸಿ ಮುದ್ರಿಸಿ ಕನ್ನಡದ ಬಾಸೆವೆಣ್ಣನು      
ಜ್ವಳಿಸಿದ ಕೀರ್ತಿಗಿಂತವರ ಮಾಳ್ಕೆಯೊಳಾವನೊ   
ನೋಂತನುರ್ವಿಯೊಳ್‌

ಇದೊಂದು ರೀತಿ ಗ್ರಂಥ ಸಂಪಾದನೆ ಕುರಿತಂತಹ ಪ್ರಾತಿನಿಧಿಕ ಪದ್ಯ. ಹುಳುಗಳಿಗೆ ಆಹಾರವಾಗಿ, ಇಲಿಗಳು ಕಡಿದುಹಾಕಿ, ಹುಡಿಯಾಗಿ, ಮುಗ್ಗಲು ಹಿಡಿದು ಕೆಟ್ಟು ಹಾಳಾಗಿದ್ದರೂ ಸಹ, ಅವುಗಳನ್ನೇ ಸರಿಪಡಿಸಿ ಕನ್ನಡ ಕವಿಗಳ ಶ್ರೇಷ್ಠವಾದ ಕಾವ್ಯಮಾಲೆಯನ್ನು ಸಂಗ್ರಹಿಸಿ ತಂದು, ಪರಿಷ್ಕರಿಸಿ, ಮುದ್ರಿಸಿ ಕನ್ನಡ ಭಾಷಾವನಿತೆಯ ಮಹತ್ತನ್ನು ಉಜ್ವಲಗೊಳಿಸಿದ ಕೀರ್ತಿಗೆ ನಿನ್ನಂತೆ ಬೇರೆ ಯಾರು ತಾನೇ ಭಾಜನರಾದಾರು? ನಾವೂ ಇದಕ್ಕೆ ದನಿಗೂಡಿಸಬಹುದು.

ಹೀಗೆ ತಮ್ಮ ಜೀವಿತವನ್ನೇ ಮುಡುಪಾಗಿರಿಸಿ, ನಮಗೆ ಕನ್ನಡ ಪರಂಪರೆಯ ಮಹತ್‌ ಕೃತಿಗಳನ್ನು ಸಂಪಾದಿಸಿ, ಪರಿಷ್ಕರಿಸಿ, ಕವಿ ಕೃತಿಯ ಬಗ್ಗೆ ಅಧ್ಯಯನ ಪೂರ್ಣ ಮಾಹಿತಿ ಒದಗಿಸಿ ಮಹದುಪಕಾರ ಮಾಡಿರುವ ವಿದ್ವತ್‌ ಸಾಹಸಿಗಳ ಪರಂಪರೆಯೇ ಇದೆ. ಕನ್ನಡ ಭಾಷೆ ಸಾಹಿತ್ಯಕ್ಕೆ ತಕ್ಕ ಪ್ರೊತ್ಸಾಹ ಇಲ್ಲದಿದ್ದ  ಕಾಲದಲ್ಲಿ ಹೀಗೆ ಗ್ರಂಥಗಳನ್ನು ಸಂಪಾದಿಸಿ, ಪ್ರಕಟಿಸಿ, ಕನ್ನಡ ಪರಂಪರೆಗೆ ಪ್ರವೇಶ ಒದಗಿಸಿದ ಮಹನೀಯರನ್ನು ನಾವಿಂದು ಸ್ಮರಿಸಬೇಕಿದೆ.

* * *

ಬಿ.ಎಂ.ಶ್ರೀಯವರ ‘ಇಂಗ್ಲಿಷ್‌ ಗೀತಗಳು’ 1921 ರಲ್ಲಿ ಪ್ರಕಟವಾಯಿತು. ನಂತರ 1924 ರಲ್ಲಿ ಅದರ ಪರಿಷ್ಕೃತ ರೂಪ ಪ್ರಕಟಗೊಂಡಿತು. ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ಇಲ್ಲಿಂದಲೇ ಗುರ್ತಿಸುವುದು ರೂಢಿಯಲ್ಲಿದೆ. ಆದರೆ ಹೊಸಗನ್ನಡ ಸಾಹಿತ್ಯದ ಚರಿತ್ರೆ ಇದಕ್ಕೆ ಮುಂಚಿನಿಂದಲೇ ಆರಂಭವಾಗುತ್ತದೆ. ಎಲ್‌. ಎಸ್‌. ಶೇಷಗಿರಿರಾಯರು 1870 ರಿಂದ 1920ರ ಅವಧಿಯಲ್ಲಿ ಹೊಸಗನ್ನಡ ಸಾಹಿತ್ಯದ ಮೊದಲ ಹಂತ ಎಂದು ಗುರ್ತಿಸುತ್ತಾರೆ. ಈ ಹಂತದಲ್ಲಿ ಕನ್ನಡ ಸಾಹಿತ್ಯ ಪಡೆದುಕೊಂಡ ಸ್ವರೂಪದ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ. ವಸಾಹತೋತ್ತರ ಚಿಂತನೆಯ ಹಿನ್ನೆಲೆಯಲ್ಲಿ ಈ ಹಂತದ ಬಗೆಗಿನ ಮರುಪರಿಶೀಲನೆ ಅತ್ಯಗತ್ಯ.

ಈ ಹಂತದಲ್ಲಿ ಕನ್ನಡದ ಕೆಲಸ ಮೂರು ನೆಲೆಗಳಲ್ಲಿ ನಡೆಯಿತು. ಮೊದಲನೆಯದು ಸಂಸ್ಕೃತ ಹಾಗೂ ಇತರ ದೇಸೀ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ್ದು; ಎರಡನೆಯದು ವಸಾಹತುಶಾಹಿಯ ಪರಿಣಾಮವಾಗಿ ಭಾರತೀಯ ಪರಿಸರದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ಸಾಮ್ರಾಜ್ಯಶಾಹಿ ಸಂಸ್ಕೃತಿ ಕನ್ನಡ ಜಗತ್ತನ್ನು ಪ್ರವೇಶ ಮಾಡಿದ್ದು. ಇವುಗಳಲ್ಲಿ ಎರಡನೆಯ ಧಾರೆಯೇ ಮುಂದೆ ಆಧುನಿಕ ಕನ್ನಡ ಸಾಹಿತ್ಯಚರಿತ್ರೆಯ ಸ್ವರೂಪವನ್ನು ರೂಪಿಸಿದ್ದು. ಇವೆರಡು ಧಾರೆಗಳ ಜೊತೆಗೆ ಆ ಕಾಲಕ್ಕೆ ಮತ್ತೊಂದು ಧಾರೆಯೂ  ಕ್ರಿಯಾ ಶೀಲವಾಗಿತ್ತು.

ಅದು ಕನ್ನಡದ ಪ್ರಾಚೀನ ಕೃತಿಗಳನ್ನು ಸಂಪಾದಿಸಿ, ಪ್ರಕಟಿಸಿ ಕನ್ನಡ ಪರಂಪರೆಯನ್ನು ಕಟ್ಟುವ ಪ್ರಯತ್ನ. ವಸಾಹತುಶಾಹಿಯ ಗಾಢ ಪ್ರಭಾವದಿಂದಾಗಿ ಮುಂದೆ ಈ ಪರಂಪರೆ ಪ್ರಭಾವಿಯಾಗಿ ಬೆಳೆಯಲಿಲ್ಲ; ಸ್ಥಗಿತಗೊಂಡಿತು. ವಾಸ್ತವವಾಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಪ್ರೇರಕ ಶಕ್ತಿಯಾಗಬೇಕಿದ್ದ ಈ ಪರಂಪರೆಯ ಜೊತೆ ಸಂಬಂಧ ಕಡಿದುಬಿದ್ದದ್ದು ವಸಾಹತುಶಾಹಿ ಸಂಸ್ಕೃತಿಯ ಫಲ. ಈ ಬಗ್ಗೆ 1927ರ ವೇಳೆಗೇ ಸೇಡಿಯಾಪು ಕೃಷ್ಣಭಟ್ಟರು ಹೀಗೆ ಹೇಳಿದ್ದಾರೆ: ‘ಕನ್ನಡ ಸಾಹಿತ್ಯದ ನವೋದಯಕ್ಕೆ ಅದರ ಸರ್ವಾಯವಗಳ ಸಮುನ್ನತಿಗೆ ಆಂಗ್ಲಸಾಹಿತ್ಯವೇ ಪ್ರತ್ಯಕ್ಷವಾಗಿ, ನೇರಾಗಿ ಪ್ರೇರಕವಾಯಿತೆಂದು ಈಗ ಸಾಧಾರಣವಾಗಿ ತಿಳಿಯಲಾಗುತ್ತದೆ. ಆದರೆ ಇದು ಪೂರ್ಣ ಸತ್ಯವಲ್ಲ. ನವಕವಿತೋದ್ಯಮದ ಮೂಲಗಳು ಕೇವಲ ಆಂಗ್ಲಸಾಹಿತ್ಯದಲ್ಲಿಲ್ಲ. ಅವು ನಮ್ಮ ದೇಶೀಯ ಪರಿಸರದಲ್ಲೂ ಇವೆ’. ಸೇಡಿಯಾಪುರವರ ಈ ಚಿಂತನೆ ಅತ್ಯಂತ ಮಹತ್ವದ್ದು.

ಆ ಕಾಲದ ಕನ್ನಡ ಸಂಸ್ಕೃತಿಯ ಸ್ಥಿತಿಯನ್ನು ಎಂ.ಎ. ರಾಮಾನುಜ ಅಯ್ಯಂಗಾರ್‌ ಅವರು ಹೀಗೆ ಗುರ್ತಿಸುತ್ತಾರೆ: ‘ಆ ಕಾಲದಲ್ಲಿ ಕನ್ನಡ ಭಾಷೆಯ ಉನ್ನತಿ ವೈಶಿಷ್ಟ್ಯಗಳನ್ನೂ, ವಾಙ್ಮಯದ ಸಮೃದ್ಧಿಯನ್ನೂ ತಿಳಿಸಲು ಯಾವ ಸೂಚನೆಯೂ ಇರಲಿಲ್ಲ. ತೇಜಸ್ವಿಗಳಾದ ನಕ್ಷತ್ರಗಳು ಪ್ರಕಾಶಿಸದೆ ಇರುವ ಅಂಧಕಾರದಲ್ಲಿ ಎಲ್ಲವೂ ಅಂಧಕಾರವೇ ಎಂದು ತಿಳಿಯವುದು ಸಹಜ. ಕನ್ನಡ ಭಾಷೆಯ ಮೆಯ್ಸಿರಿಯೂ, ಆಭರಣಕಾಂತಿಯೂ ಜನಗಳ ವಿಸ್ಮೃತಿಯೆಂಬ ಆವರಣದಲ್ಲಿ ಮುಚ್ಚಲ್ಪಟ್ಟಿರಲು ಹೇಗೆ ತಾನೇ ಅವಳು ಪ್ರಾಜ್ಞರ ಕಣ್ಣನ್ನು ತೆರೆಯಿಸಿ, ತನ್ನ ಕಡೆ ಅವರನ್ನು ತಿರುಗಿಸಿ, ತನ್ನನ್ನು ಆಶ್ರಯಿಸುವಂತೆ ಮಾಡಿಯಾಳು?’ (ಪ್ರಬುದ್ಧ ಕರ್ನಾಟಕ 7–2, 1925).
ವಸಾಹತೋತ್ತರ ಚಿಂತನೆಯ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚಿತವಾಗುತ್ತಿರುವ ವಿಸ್ಮೃತಿಯ ಪರಿಕಲ್ಪನೆಯನ್ನು ರಾಮಾನುಜಅಯ್ಯಂಗಾರ್‌ ಅವರು 1925ರ ವೇಳೆಗೇ ಪ್ರಸ್ತಾಪಿಸಿದ್ದರು.

ವಿಸ್ಮೃತಿಗೆ ಪ್ರತಿಯಾಗಿ ಕನ್ನಡ ಸಾಹಿತ್ಯ ಪರಂಪರೆಯನ್ನು ಉಜ್ಜೀವಿಸುವ, ವರ್ತಮಾನದಲ್ಲಿ ಎಲ್ಲರೆದುರು ಅದನ್ನು ಪ್ರಕಾಶಿಸುವ ಧ್ಯೇಯದಿಂದ ಅನೇಕ ಮಹನೀಯರು ಶ್ರಮಿಸಿದರು.

ಎಸ್‌.ಜಿ. ನರಸಿಂಹಾಚಾರ್‌ ಹಾಗೂ ಎಂ.ಎ. ರಾಮಾನುಜಅಯ್ಯಂಗಾರ್‌ ಅವರು ಸಹಭಾಗಿತ್ವದಲ್ಲಿ ಕರ್ನಾಟಕ ಕಾವ್ಯಮಂಜರಿ ಹಾಗೂ ಕರ್ನಾಟಕ ಕಾವ್ಯ ಕಲಾನಿಧಿ ವಿದ್ವತ್‌ ಪತ್ರಿಕೆಗಳ ಮೂಲಕ ಸುಮಾರು ನಲವತ್ತಕ್ಕಿಂತ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದಿಸಿ, ಪರಿಷ್ಕರಿಸಿ, ಪ್ರಕಟಿಸಿದರು.

ಆಂಡಯ್ಯನ ‘ಕಬ್ಬಿಗರ ಕಾವಂ’, ನೇಮಿಚಂದ್ರನ ‘ಲೀಲಾವತಿ ಪ್ರಬಂಧಂ’, ದುರ್ಗಸಿಂಹನ ‘ಪಂಚತಂತ್ರ’, ರನ್ನನ ‘ಗದಾಯುದ್ಧ’, ನಾಗಚಂದ್ರನ ’ಮಲ್ಲಿನಾಥಪುರಾಣ’, ಹರಿಹರನ ’ಗಿರಿಜಾಕಲ್ಯಾಣ’, ಕನಕದಾಸನ  ‘ನಳಚರಿತ್ರೆ’, ಅಗ್ಗಳನ  ‘ಚಂದ್ರಪ್ರಭ ಪುರಾಣ’, ಕವಿಕಾಮನ ‘ಶೃಂಗಾರ ರತ್ನಾಕರ’ ಹೀಗೆ ಅನೇಕ ಪ್ರಮುಖ ಕೃತಿಗಳನ್ನು ಕನ್ನಡ ಜಗತ್ತಿಗೆ ಪರಿಚಯಿಸಿದರು.
ಕನ್ನಡದಲ್ಲಿ ಗ್ರಂಥ ಸಂಪಾದನೆಯ ಕಾರ್ಯವನ್ನು ಆರಂಭಿಸಿದವರಲ್ಲಿ ಬೆಂಜಮಿನ್‌ ಲೂಯಿ ರೈಸ್‌ ಅವರೂ ಪ್ರಮುಖರು. ಕನ್ನಡದ ಮುಖ್ಯ ಕೃತಿಗಳಾದ ‘ವಿಕ್ರಮಾರ್ಜುನವಿಜಯ’, ‘ಕವಿರಾಜಮಾರ್ಗ’, ‘ಪಂಪರಾಮಾಯಣ’, ಶಬ್ಧಾನುಶಾಸನ – ಮೊದಲಾದ ಕೃತಿಗಳನ್ನು ಅವರು ‘ಬಿಬ್ಲಿಯಾಟಿಕಾ ಕರ್ನಾಟಕ ಮಾಲೆ’ಯಲ್ಲಿ ಸಂಪಾದಿಸಿ ಪ್ರಕಟಿಸಿದರು.

ಆರ್‌. ನರಸಿಂಹಾಚಾರ್‌ ಅವರಂತೂ ’ಕರ್ನಾಟಕ ಕವಿ ಚರಿತೆ’ಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿ ಕನ್ನಡ ಪರಂಪರೆಯನ್ನು ಅಧಿಕೃತವಾಗಿ ಸ್ಥಾಪಿಸಿದರು. ಫ.ಗು. ಹಳಕಟ್ಟಿಯವರು ವಚನಸಾಹಿತ್ಯ ಹಾಗೂ ಹರಿಹರನ ರಗಳೆಗಳನ್ನು ಅಪಾರ ಶ್ರಮವಹಿಸಿ ಸಂಪಾದಿಸಿ ಪ್ರಕಟಿಸಿದರು.

ಕವಿಚರಿತೆಕಾರರು ಐವತ್ತು ವಚನಕಾರರನ್ನು ಗುರ್ತಿಸಿದ್ದರೆ ಹಳಕಟ್ಟಿಯವರು ಇನ್ನೂರ ಐವತ್ತಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಹರಿಹರನ ನಲವತ್ತಕ್ಕೂ ಹೆಚ್ಚು ರಗಳೆಗಳನ್ನು ಸಂಪಾದಿಸಿ ಪ್ರಕಟಿಸಿದರು. ಶೂನ್ಯ ಸಂಪಾದನೆಯನ್ನು ಒದಗಿಸಿಕೊಟ್ಟರು. ಉತ್ತಂಗಿ ಚನ್ನಪ್ಪನವರು ಸರ್ವಜ್ಞನ ಸುಮಾರು ಎರಡು ಸಾವಿರ ವಚನಗಳನ್ನು ಇಪ್ಪತ್ತಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಪರಿಶೀಲಿಸಿ, ಸ್ಖಾಲಿತ್ಯಗಳನ್ನು ಸರಿಪಡಿಸಿ, ಸಂಪಾದಿಸಿ ಪ್ರಕಟಿಸಿದರು.

ಟಿ.ಎಸ್‌. ವೆಂಕಣ್ಣಯ್ಯ, ಎ.ಆರ್‌. ಕೃಷ್ಣಶಾಸ್ತ್ರಿ, ಕೆ.ಜಿ. ಕುಂದಣಗಾರ, ಕ.ವೆಂ. ರಾಘವಾಚಾರ್‌, ಶಿ.ಶಿ. ಬಸವನಾಳ, ಎಲ್‌. ಗುಂಡಪ್ಪ, ಭೂಸನೂರಮಠ, ಡಿ.ಎಲ್‌. ನರಸಿಂಹಾಚಾರ್‌, ತೀನಂ ಶ್ರೀಕಂಠಯ್ಯ, ಆರ್‌.ಸಿ. ಹಿರೇಮಠ, ಎಲ್‌. ಬಸವರಾಜು, ತ.ಸು. ಶಾಮರಾಯ, ಎಂ.ವಿ. ಸೀತಾರಾಮಯ್ಯ– ಹೀಗೆ ಅನೇಕರು ಈ ಕ್ಷೇತ್ರದಲ್ಲಿ ಶ್ರಮಿಸಿದ್ದಾರೆ. ಕನ್ನಡ ನಿಧಿಯನ್ನು ಹುಡುಕಿ ತೆಗೆದು ಸಂಸ್ಕರಿಸಿ ನೀಡಿದ್ದಾರೆ. ನಿಜವಾದ ಕನ್ನಡ ವಿಮರ್ಶಾ ವಿವೇಕವನ್ನು ನಾವು ಇಲ್ಲಿಂದಲೇ ಗುರ್ತಿಸಬೇಕಾಗಿದೆ ಹೊಸ ತಿಳಿವಿನ ಬೆಳಕಿನಲ್ಲಿ ಕನ್ನಡ ಸಂಸ್ಕೃತಿ ಚರಿತ್ರೆಯನ್ನು ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT