ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬಸ್‌ನಿಲ್ದಾಣ!

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಆ ಬಸ್ ನಿಲ್ದಾಣದಲ್ಲಿ ಎಲ್ಲೆಡೆ ಕಣ್ಣಿಗೆ ರಾಚುವುದು ಕನ್ನಡ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು, ಕನ್ನಡ ಕಾಗುಣಿತ, ಕರ್ನಾಟಕ ಇತಿಹಾಸದಲ್ಲಿ ಬರುವ ರಾಜ ವಂಶಸ್ಥರು, ಪ್ರಸಿದ್ಧ ರಾಜರು, ರಾಜಧಾನಿಗಳು, ಜಾನಪದ ಕಲೆಗಳು, ಕರ್ನಾಟಕದ ಪ್ರಸಿದ್ದ ಸ್ಥಳಗಳು, ಕ್ರೀಡಾಪಟುಗಳು ಹೀಗೆ ಕಣ್ಣಾಡಿಸಿದೆಡೆಯೆಲ್ಲಾ ಕನ್ನಡವೇ ಸತ್ಯ ಎಂಬ ನೋಟ.

ಮಾತೃಭಾಷೆಯ ಬಗೆಗಿನ ಅಭಿಮಾನ, ಕಾಳಜಿ, ವ್ಯಾಮೋಹ ಎಲ್ಲವುಗಳ ಮೊತ್ತವೇ ಸಹಕಾರನಗರದಲ್ಲಿರುವ `ಕನ್ನಡದ ಬಸ್ ನಿಲ್ದಾಣ~. ಇದನ್ನು ಸ್ಥಾಪಿಸಲು ಕಾರಣಕರ್ತರಾದವರಲ್ಲಿ ಸುರೇಶ್ ಪ್ರಮುಖರು. ಉದ್ಯಮಿಯಾದ ಇವರ ಪ್ರವೃತ್ತಿ ಕನ್ನಡ ಪ್ರೇಮ. ಹಾಗಾಗಿಯೇ ಇಲ್ಲಿನ ಬಸ್ ನಿಲ್ದಾಣಕ್ಕೆ `ಸುವರ್ಣ ಕರ್ನಾಟಕ ಬಸ್ ನಿಲ್ದಾಣ~ ಎಂದು ಹೆಸರಿಟ್ಟಿದ್ದಾರೆ.

ಇಲ್ಲಿ ಕನ್ನಡತನವೆಂಬುದು ಬರೀ ನೋಡಲಷ್ಟೇ ಅಲ್ಲ; ಓದಲೂ ಸಿಗುತ್ತದೆ. ಇಲ್ಲಿ ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳನ್ನು ಇಡಲಾಗಿದೆ. ಬಸ್ ಕಾಯುವ ಹೊತ್ತನ್ನು ಸದುಪಯೋಗಪಡಿಸಿಕೊಂಡು ಪ್ರಯಾಣಿಕರು ತಂಗುದಾಣದಲ್ಲಿ ಕುಳಿತು ಅವನ್ನು ಓದಬಹುದು.

ನಿರ್ಮಾಣ ಉದ್ಯಮದಲ್ಲಿ ತೊಡಗಿರುವ ನಡೆಸುವ ಸುರೇಶ್ ಸಹಕಾರ ನಗರದ ನಿವಾಸಿ. ತಮ್ಮ ತಂದೆಯ ಸ್ಮರಣಾರ್ಥ ಅವರು ಈ ಬಸ್ ನಿಲ್ದಾಣ ಕಟ್ಟಿದ್ದಾರೆ. ಸಹಕಾರ ನಗರದಲ್ಲಿನ 800 ಮನೆಗಳಿಗೆ ಕನ್ನಡದ ನಾಮಫಲಕಗಳನ್ನು ಹಂಚಿದ್ದಾರೆ. ಎಲ್ಲ ಮನೆಗಳ ಮುಂದೆಯೂ ಕನ್ನಡದ ಪದಗಳು ಮೂಡಲಿ ಎಂಬುದು ಅವರ ಉಮೇದು. ಇದನ್ನು ಅವರ ಪ್ರೀತಿಯ ಕೊಡುಗೆಯೆಂದು ಎಲ್ಲರೂ ಸ್ವೀಕರಿಸಿದ್ದಾರೆ.

ಸುರೇಶ್ ಅಪರೂಪ ಎನ್ನಿಸಲು ಇನ್ನೊಂದು ಕಾರಣ ಅವರಿಗಿರುವ ಪರಿಸರ ಪ್ರೀತಿ. ಇಲ್ಲಿನ ರೈಲ್ವೆ ಹಳಿಗಳ ಅಕ್ಕಪಕ್ಕ ಅವರ ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ರಸ್ತೆ ಬದಿಗಳ್ಲ್ಲಲಿ  ಮತ್ತು ಉದ್ಯಾನವನಗಳಲ್ಲಿ ಕೂಡ ಸುರೇಶ್ ನೀರೆರೆದ ಹಸಿರು ಮುಕ್ಕಳಿಸುತ್ತಿದೆ.

`ಮೊದಲು ಇಂಥ ಕೆಲಸ ಮಾಡುವಾಗ ಹಲವರು ವಿರೋಧ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಸುತ್ತ ಕನ್ನಡದ ಮಾಹಿತಿ ಫಲಕಗಳನ್ನು ಅನೇಕರು ಅಲ್ಲಿ ಕವಳ, ಉಗುಳು ಉಗಿದು ಹಾಳುಮಾಡಬಹುದು ಎಂದು ಚಕಾರವೆತ್ತಿದರು. ಇನ್ನು ಕೆಲವರು ಸುಮ್ಮನೆ ಹಣ ಪೋಲು ಮಾಡುತ್ತಿರುವಿರಿ ಎಂದೂ ಬುದ್ಧಿ ಹೇಳಲು ಬಂದಿದ್ದರು. ಆ ಯಾವ ಮಾತುಗಳಿಗೂ ಕಿವಿಗೊಡದೆ ಸುಮಾರು ಆರು ತಿಂಗಳು ಕನ್ನಡ ಪ್ರೀತಿಯಿಂದ ಈ ಕೆಲಸ ಮಾಡ್ದ್ದಿದೀನಿ~ ಎನ್ನುವ ಸುರೇಶ್ ಈ ಬಸ್‌ನಿಲ್ದಾಣವನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಟ್ಟು ನಾಲ್ಕು ವರ್ಷಗಳಾಗಿವೆ.

ಮಹಾಗನಿ, ಜಕರಾಂಡ, ಟಬೋಬಿಯಾ, ರೋಸಿಯಾ, ಜಂಬು ನೇರಳೆ, ಹೊಂಗೆ, ಡಾಲಿಚಂದ, ಕ್ಯಾಶಿಯಾ, ಆಕಾಶ ಮಲ್ಲಿಗೆ ಗಿಡಗಳನ್ನು ನೆಡಲಾಗಿದೆ. ಈ ಗಿಡ ಮರಗಳಿಗೆ ಕನ್ನಡದ ಪ್ರಾಚೀನ ಕವಿಗಳ ಹೆಸರನ್ನು ಇಡಲಾಗಿದೆ. `ಕನ್ನಡದ ಕವಿಗಳೆಲ್ಲಾ ಈ ಕಾಲದ ಹುಡುಗರಿಗೆ ಗೊತ್ತಿರಲಿಕ್ಕಿಲ್ಲ. ಇಲ್ಲಿ ಫಲಕಗಳನ್ನು ಓದಿದರೆ ಕವಿಗಳ ಪರಿಚಯ ಅಂಥವರಿಗಾಗುತ್ತದೆ. ಹಾಗಾಗಿ ಅವರ ಹೆಸರನ್ನು ಗಿಡಗಳಿಗೆ ಇಟ್ಟೆ ಎನ್ನುವ ಸುರೇಶ್‌ಗೆ ತಾವು ಮಾಡಿದ ಕೆಲಸದ ಬಗ್ಗೆ ತೃಪ್ತಿ ಇದೆ.

ಸಹಕಾರ ನಗರದ  ಸುತ್ತಮುತ್ತ ಇರುವ ಹಕ್ಕಿಗಳಿಗೆ ನೀರು ದೊರೆಯುವಂತೆ ಮಾಡಿರುವುದು ಅವರ ಇನ್ನೊಂದು ಗಮನಾರ್ಹ ಕೆಲಸ. ಗಿಡಗಳ ನಡುವೆ ಎರಡು ಮೂರು ದಿನಗಳ ಅವಧಿವರೆಗೆ ತಟ್ಟೆ ಖಾಲಿಯಾದಂತೆ ರಾಗಿ, ಜೋಳ, ಅಕ್ಕಿಯನ್ನು ತುಂಬುತ್ತಾರೆ. ನೀರನ್ನೂ ಇರಿಸುತ್ತಾರೆ.

`ಸಹಕಾರ ನಗರದ  ಸುತ್ತಮುತ್ತ ಸುಮಾರು 32 ಜಾತಿಯ ಹಕ್ಕಿಗಳಿರಬಹುದು. ಈ ಗಿಡಗಳೆಲ್ಲ ಬೆಳೆದಾಗ ಅವುಗಳಿಗೆ ಆಶ್ರಯ ತಾಣವಾಗಬಹುದು~ ಎಂಬುದು ಅವರ ಕಾಳಜಿ.
ಸುರೇಶ್ ನೆಟ್ಟ ಗಿಡಗಳು ಈಗ ಎತ್ತರವಾಗುತ್ತಿವೆ. ಅವರ ಕನಸುಗಳು ಕೂಡ ಅವುಗಳೊಟ್ಟಿಗೇ ಬೆಳೆಯುತ್ತಲೇ ಇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT