ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನ್ನಡ ಭಾಷೆ ಮೇಲಿನ ದಬ್ಬಾಳಿಕೆ ಸಹಿಸಲ್ಲ'

ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 1 ಜುಲೈ 2013, 5:28 IST
ಅಕ್ಷರ ಗಾತ್ರ

ಸೊರಬ: ಸಾಹಿತ್ಯ ರೂಪ ಕೊಡಬಲ್ಲ ಕವಿ, ಸಾಹಿತಿಗಳು ಇರುವವರೆಗೆ ಕನ್ನಡ ಭಾಷೆ ಜೀವಂತವಾಗಿ ಉಳಿಯುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಸಣ್ಣರಾಮಪ್ಪ ಹೇಳಿದರು.

  ಭಾನುವಾರ ಸೊರಬ ತಾಲ್ಲೂಕಿನ ಆನವಟ್ಟಿ ಯಲ್ಲಿ ನಡೆದ 2ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಜಗತ್ತನ್ನು ಆಳುವ  ಇಂಗ್ಲಿಷ್ ಭಾಷೆ ಇತ್ತೀಚೆಗೆ ತನ್ನ ವೈಭವವನ್ನು ಕಂಡುಕೊಳ್ಳುತ್ತಿದೆ. ಆದರೆ ನಮ್ಮ  ಕನ್ನಡ ಭಾಷೆ 10ನೇ ಶತಮಾನದಲ್ಲಿಯೇ ಸುವರ್ಣ ಯುಗವನ್ನು ಕಂಡು ಕನ್ನಡಿಗರ ನಾಡಿಮಿಡಿತವಾಗಿದೆ ಎಂಬುದನ್ನು ಯಾರು ಮರೆಯಬಾರದು ಎಂದು ಹೇಳಿದರು.

ತಮಿಳಿನ ವ್ಯಾಕರಣ ಗ್ರಂಥವಾದ ಶಿಲಪ್ಪದಿಗಾರಂ ಕೃತಿಯಲ್ಲಿ ಕನ್ನಡದ ಪದ ಬಳಕೆಯಾಗಿದೆ. ಕ್ರಿ.ಪೂ. 5ನೇ ಶತಮಾನದಲ್ಲಿಯೇ  ಕನ್ನಡ ಲಿಪಿಯ ರೂಪ ಧಾರಣಿಯಾಗಿರುವಾಗ ಕನ್ನಡ ಮನಸ್ಸುಗಳು ಜೀವಂತ ಇರುವ ತನಕ ಕನ್ನಡ ಭಾಷೆಗೆ ಯಾವ ಭಾಷೆಯ ದಬ್ಬಾಳಿಕೆ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಪಸಿದರು.

ಕಾವ್ಯದಲ್ಲಿ ಸಮಾನತೆಯ ಹಂಬಲ ಮತ್ತು ಪ್ರತಿಭಟನೆಯ ರೂಪ ವಸ್ತುವಾದಾಗ ಸಹೃದಯರ ಮೆಚ್ಚುಗಗೆ ಕಾರಣವಾಗುತ್ತದೆ. ಈ ಹಿನ್ನಲೆಯಲ್ಲಿ ಪಂಪನ ಕಾವ್ಯಗಳಲ್ಲಿ ಸಮಾನತೆಯ ಹುಡುಕಾಟದ ಚಿಂತನೆಯಿದೆ ಎಂದು ಹೇಳಿದರು.

ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ನಮ್ಮಲ್ಲಿ ಜಾತಿ ವರ್ಗದ ಅಪವಾದದ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಅದರ ವಿರುದ್ಧ ಕವಿಗಳು ಕಾವ್ಯದಲ್ಲಿ ಕೇಂದ್ರ ವಸ್ತುವನ್ನಾಗಿ ವಿಮರ್ಶೆ ಮಾಡಿದ್ದಾರೆ. ಪಂಪ ರಾಜಾಶ್ರದಲ್ಲಿದ್ದು ಪ್ರಭುತ್ವವನ್ನು ವಿರೋಧಿಸಿದ್ದಾನೆ. ಹಾಗೆಯೇ ಬಸವಣ್ಣ ಧರ್ಮದ ವಿರುದ್ಧವಾದ ವಿಚಾರಗಳನ್ನು ಖಂಡಿಸಿ, ರಾಜ ಪ್ರಭುತ್ವದ ನಿಲುವುಗಳನ್ನು ಖಂಡಿಸಿ ಜನಸಾಮಾನ್ಯರ ಬದುಕಿಗೆ ಆಶಾಕಿರಣವಾಗಿ ಇಂದಿಗೂ ಪ್ರಸ್ತುತನಾಗುತ್ತಾನೆ ಎಂದು ನುಡಿದರು.

ಜಾಗತೀಕರಣದ ಇಂದಿನ ದಿನಗಳಲ್ಲಿ ಕನ್ನಡ ತಾಂತ್ರಿಕವಾಗಿ ಅಭಿವೃದ್ಧಿಯಾಗಬೇಕಾಗಿದೆ ಎಂದು ಪ್ರತಿಪಾದಿಸಿದರು. ಎಲ್ಲಿಯವರೆಗೆ ಕನ್ನಡ ವೃತ್ತಿ ಭಾಷೆ ಉದ್ಯಮ ಭಾಷೆ ಆಗುವುದಿಲ್ಲವೋ ಅಲ್ಲಿಯವರೆಗೂ ಆತಂಕ ತಪ್ಪಿದ್ದಲ್ಲ ಎಂದರು. ಈ ನಿಟ್ಟಿನಲ್ಲಿ ಜನಪ್ರತಿನಿಗಳು, ರಾಜಕೀಯ ಪಕ್ಷಗಳು ಹಾಗೂ ವಿದ್ವಾಂಸರು ಯೋಚಿಸಬೇಕು ಎಂದು ಪ್ರತಿಪಾದಿಸಿದರು. 

ಸಾಹಿತ್ಯ ಸಮ್ಮೇಳನವು ಯಾವುದೇ ಒಂದು ದಿನಕ್ಕೆ ಆಚರಿಸುವ ಹಬ್ಬವಾಗಬಾರದು. ಅನ್ಯ ಭಾಷೆಯನ್ನು ಸ್ವೀಕರಿಸುವುದರ ಜತೆಗೆ ಮಾತೃ ಭಾಷೆ ನಮ್ಮ ಕನ್ನಡವನ್ನು ಇತರರಿಗೆ ಉಣಬಡಿಸುವ ಅತಿಥಿ ಮನೋಭಾವ  ನಮ್ಮಲ್ಲಿ ಇದ್ದಾಗ ಯಾವ ಭಾಷೆಯ ದಬ್ಬಾಳಿಕೆ ನಡೆಯುವುದಿಲ್ಲ ಎಂದರು.
ಜಾತಿ-ಕುಲಗಳು ನಾಶವಾಗಿ ಮಾನವ ಕುಲವೊಂದೆ ಆದಾಗ ಭಾವನೆಗಳನ್ನು ಹಂಚಿಕೊಳ್ಳವುದಕ್ಕಾಗಿ ಹುಟ್ಟಿದ ಪ್ರತಿಯೊಂದು ಭೌಗೋಳಿಕ ಭಾಷೆಯು ಶಾಶ್ವತವಾಗಿ ಜೀವಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಮಧು ಬಂಗಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ರಾಜಶೇಖರ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್,ತಾ,ಕಸಾಪ ಅಧ್ಯಕ್ಷ ಜಿ ಮಧುರಾಯ ಶೇಟ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯೆ ಕೋಮಲ ನಿರಂಜನ, ಮಲ್ಲಮ್ಮ ಮಲ್ಲಿಕಾರ್ಜುನ್, ತಾ. ಪಂ ಅಧ್ಯಕ್ಷ ಸದಾನಂದಗೌಡ, ಆನವಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ ಹಾಜರಿದ್ದರು. ಆನವಟ್ಟಿ ಘಟಕದ ಅಧ್ಯಕ್ಷ ಉಮೇಶ್ ಬಿಚ್ಚುಗತ್ತಿ ಸ್ವಾಗತಿಸಿದರು. ಮಂಜಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT