ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನ್ನಡ ಭಾಷೆ ಸದೃಢಗೊಳಿಸುವುದು ಅಗತ್ಯ'

Last Updated 3 ಜೂನ್ 2013, 12:46 IST
ಅಕ್ಷರ ಗಾತ್ರ

ಬೆಳಗಾವಿ: `ಜಾಗತೀಕರಣದ ಪ್ರಭಾವ ಭಾರತೀಯ ಭಾಷೆಗಳ ಮೇಲೆಯೂ ಆಗುತ್ತಿದೆ. ನಮ್ಮ ಭಾಷೆಗಳಿಗೆ ಸಾವಿಲ್ಲದಿದ್ದರೂ ಸೊರಗುವಿಕೆ ಮಾತ್ರ ಶತಃಸಿದ್ಧ. ನುಡಿ ಮರಣ ಅಥವಾ ಭಾಷಾ ಸಾವು ಕೆಲವೇ ದಿನ, ವರ್ಷಗಳಲ್ಲಿ ಆಗುವ ಕ್ರಿಯೆಯಲ್ಲ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಸದೃಢಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ' ಎಂದು ಬೆಳಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ನೀಲಗಂಗಾ ಚರಂತಿಮಠ  ಹೇಳಿದರು.

ತಾಲ್ಲೂಕಿನ ಕಾಕತಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಭಾನುವಾರ ನಡೆದ ಬೆಳಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

`ನುಡಿ ಮರಣಕ್ಕೆ ಜಾಗತೀಕರಣ ಒಂದೇ ಕಾರಣವಲ್ಲ. ಬರ, ಅತಿ ವೃಷ್ಟಿ, ವಲಸೆ ಹೋಗುವುದು, ಸಾಂಕ್ರಾಮಿಕ ರೋಗಗಳು ಕೂಡ ಒಂದು ಸಮುದಾಯದ ಭಾಷೆಯ ಸಾವಿಗೆ ಕಾರಣವಾಗುತ್ತವೆ. ಜಾಗತೀಕರಣ ಭರಾಟೆಯಲ್ಲಿ ಸಾಹಿತ್ಯ ಕುಂದಿದೆ. ಕಂಪ್ಯೂಟರ್ ಗುಂಡಿಗಳನ್ನು ಒತ್ತುತ್ತ ನಾವೂ ಯಂತ್ರವೇ ಆಗಿದ್ದೇವೆ. ಇದರಿಂದ ಕುಟುಂಬದಲ್ಲಿ ಪರಸ್ಪರರ ನಡುವೆ ವಿಶ್ವಾಸ, ಪ್ರೀತಿ, ನಂಬಿಕೆ ಕಡಿಮೆಯಾಗುತ್ತಿದೆ. ಎಲ್ಲ ರಂಗಗಳಲ್ಲೂ ಮೌಲ್ಯಗಳು ಕುಸಿದು ಹೋಗಿವೆ. ನೈತಿಕ ದಿವಾಳಿತನದ ಅಧಃಪತನ ಆಗುತ್ತಿದೆ. ಮಾನವ ಪ್ರೀತಿ ಗಟ್ಟಿಗೊಳಿಸುವ ಸಾಹಿತ್ಯ ನಿರ್ಮಾಣದ ಅವಶ್ಯಕತೆ ಇದೆ. ಈ ದೃಷ್ಟಿಯಲ್ಲಿ ಸಾಹಿತ್ಯದಲ್ಲಿ ಬದಲಾವಣೆಯಾಗುವ ಮೂಲಕ ಮನುಷ್ಯ- ಮನುಷ್ಯರ ಸಂಬಂಧ ಗಟ್ಟಿಗೊಳ್ಳಬೇಕಿದೆ' ಎಂದು ಅಭಿಪ್ರಾಯಪಟ್ಟರು.

`ಮನುಷ್ಯ ಮನುಷ್ಯನಾಗಿರುವುದರ ಮುಖ್ಯ ಲಕ್ಷಣ ಭಾಷೆಯಾಗಿದೆ. ಭಾಷೆಯ ಸಾವಿನಿಂದ ಭಾಷಿಕ ಸಂವಹನ ಮುರಿದು ಬಿದ್ದರೆ, ಪರಂಪರೆಯಿಂದ ಹರಿದು ಬಂದ ಜ್ಞಾನ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಭಾಷೆ ಒಂದು ಜನಾಂಗದ ಅಸ್ಮಿತೆ. ಭಾಷೆ ಇಲ್ಲದಾಗ ಆ ಜನಾಂಗಕ್ಕೆ ಅಸ್ಮಿತಯೇ ಇಲ್ಲವಾಗುವುದು. ಸ್ಥಳೀಯ ಭಾಷೆ ನಿಸರ್ಗದ ಸಂಪನ್ಮೂಲವಿದ್ದ ಹಾಗೆ. ಒಮ್ಮೆ ಕಣ್ಮರೆಯಾದರೆ ಮರು ಸೃಷ್ಟಿ ಸಾಧ್ಯವಿಲ್ಲ. ಮನುಷ್ಯ ಸಂಸ್ಕೃತಿಯ ಸ್ವಾಸ್ಥ್ಯಕ್ಕೆ ಭಾಷಾ ವೈವಿಧ್ಯ ಅಗತ್ಯವಿದೆ. ಯಾವ ಭಾಷಾ ವರ್ಗದಲ್ಲಿ ಹೆಚ್ಚು ವೈವಿಧ್ಯತೆವಿದೆಯೋ ಆ ಭಾಷೆ ಅತ್ಯಂತ ಸದೃಢವಾಗಿರುತ್ತದೆ' ಎಂದರು.

`ಇಂಗ್ಲಿಷ್ ಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡ ಭಾಷೆಗೆ ಕುತ್ತು ಬಂದಂತಾಗಿದೆ. ಪಾಲಕರು ತಮ್ಮ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಮ್ಮ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ          ಭರಾಟೆಯಲ್ಲಿರುವುದು ದುರದೃಷ್ಟಕರ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲಿಯೇ ಇರಬೇಕು. ಭಾಷೆ ಕಟ್ಟುವ ಕೆಲಸ ನಡೆಯಬೇಕಿದೆ. ಆಡಳಿತದಲ್ಲಿ ಶೇ. 100 ರಷ್ಟು ಕನ್ನಡ ಜಾರಿಗೆ ಬರಬೇಕು. ಡಾ. ಮಹಿಷಿ, ಡಾ. ನಂಜುಂಡಪ್ಪ ವರದಿಗಳು ಯಥಾವತ್ತಾಗಿ ಜಾರಿಗೆ ಬರಬೇಕು' ಎಂದು ಚರಂತಿಮಠ ಒತ್ತಾಯಿಸಿದರು.

`ಸಾಹಿತ್ಯ ಮನಸ್ಸನ್ನು ಹದಗೊಳಿಸುವುದು, ಮುದಗೊಳಿಸುವುದು, ಮಧುರಗೊಳಿಸುವುದು, ಪಕ್ವಗೊಳಿಸುವುದು. ಸತ್ಯ ಮಾರ್ಗ, ಸತ್ಯಾನ್ವೇಷಣೆ ಮಾಡುವುದೇ ಉತ್ಕೃಷ್ಟ ಸಾಹಿತ್ಯ. ಸಾಹಿತ್ಯಕ್ಕೆ ಸ್ವಂತಿಕೆ, ಸಿರಿವಂತಿಕೆ ಮುಖ್ಯವಾಗಿದೆ. ಸಾಹಿತ್ಯವು ಲಿಂಗ, ಜಾತಿ. ಭಾಷೆಯನ್ನು ಮೀರಿದ್ದಾಗಿರಬೇಕು. ಇಂದು ಮಹಿಳೆಯ ಭಾವನೆಗಳನ್ನು ಅರಿಯುವ ಕೆಲಸ ಆಗಬೇಕಿದೆ' ಎಂದರು.

`ಮಹಿಳಾ ಸಾಹಿತ್ಯ, ಪುರುಷ ಸಾಹಿತ್ಯ ಎಂಬ ಭೇದಭಾವ   ಅಳಿಸಿ ಹಾಕಬೇಕು. ಮಹಿಳಾ ಮತ್ತು ಪುರುಷ    ಸಾಹಿತ್ಯವನ್ನು     ಒರೆಗೆ ಹಚ್ಚುವ ಕೆಲಸವಾಗಬೇಕಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಮಹಿಳೆಯರಿಗೆ ನಿಜವಾದ ನ್ಯಾಯ ದೊರಕಬೇಕು. ಅನ್ಯಾಯ ಎದುರಿಸುವ ತಾಕತ್ತು ಮಹಿಳೆಯರಲ್ಲಿ ಬರಬೇಕು. ಫ್ಯಾಶನ್ ಹೆಸರಿನಲ್ಲಿ ಅರೆಬೆತ್ತಲೆ ಪ್ರದರ್ಶನಗೊಳ್ಳುವ ಮಹಿಳೆಯರ ದೃಶ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಮಹಿಳಾ ಸಂಕಷ್ಟಕ್ಕೆ ದನಿಯಾಗುವ ಸಾಹಿತ್ಯ ರಚನೆಯಾಗಬೇಕು. ಮಹಿಳಾ ಸಂವೇದನಗೆ ಸ್ಪಂದಿಸುವ ಬರಹ ನಮ್ಮದಾಗಬೇಕು' ಎಂದು ಹೇಳಿದರು.

`ಕನ್ನಡದ ನುಡಿ, ಗಡಿ, ಜಲ ಬಗ್ಗೆ ನಾವೆಂದಿಗೂ ರಾಜಿಯಾಗಲು ಸಾಧ್ಯವಿಲ್ಲ. ಇದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ' ಎಂದು ಹೇಳುವ ಮೂಲಕ ಗಡಿ ಸಮಸ್ಯೆ ಕಿಡಿ ಹೊತ್ತಿಸುವವರಿಗೆ ಅಧ್ಯಕ್ಷರು ಎಚ್ಚರಿಕೆ ನೀಡಿದರು.

ಕಿತ್ತೂರಿನಷ್ಟೇ ರಾಣಿ ಚೆನ್ನಮ್ಮನ ಹುಟ್ಟೂರಾದ ಕಾಕತಿಗೂ ಮಹತ್ವ ದೊರೆಯಬೇಕು ಎಂದ ಅವರು, ತಮ್ಮ ಭಾಷಣದಲ್ಲಿ ಬೆಳಗಾವಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಚಿತ್ರಕಲೆ, ಇತಿಹಾಸದ ಸಮಗ್ರ ಮಾಹಿತಿಯನ್ನು ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT