ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಹಾಕಾವ್ಯ ಪರಂಪರೆ ಉತ್ತಮ

Last Updated 10 ಜುಲೈ 2012, 7:55 IST
ಅಕ್ಷರ ಗಾತ್ರ

ಮೈಸೂರು: ಆಧುನಿಕ ಕಾಲಘಟ್ಟದ ಕನ್ನಡ ಭಾಷೆಯಲ್ಲಿ ರಚನೆಯಾದಷ್ಟು ಮಹಾಕಾವ್ಯಗಳು ದಕ್ಷಿಣ ಭಾರತದ ಬೇರಾವ ಭಾಷೆಯಲ್ಲೂ ಹೊರ ಬಂದಿಲ್ಲ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ನೀಲಗಿರಿ ಎಂ.ತಳವಾರ್ ಹೇಳಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಡಾ.ಲತಾ ರಾಜಶೇಖರ್ ಅವರ ಮಹಾಕಾವ್ಯಗಳಲ್ಲಿ ಜೀವನ ಮೌಲ್ಯಗಳು- ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೈಗಾರಿಕಾ ಕ್ರಾಂತಿಯ ಬಳಿಕ ಮಾನವನ ಜೀವನಕ್ಕೆ ಯಂತ್ರಗಳು ಪದಾರ್ಪಣೆ ಮಾಡಿದವು. ಆಧುನಿಕತೆ ಬೆಳೆದಂತೆ ಜೀವನ ಯಾಂತ್ರಿಕವಾಗತೊಡಗಿತು. ಇದು ಸಾರಸ್ವತಲೋಕದ ಮೇಲೆ ಪರಿಣಾಮ ಬೀರಲಿದ್ದು, ಮಹಾಕಾವ್ಯಗಳ ಪರಂಪರೆ ಮುಕ್ತಾಯವಾಯಿತು ಎಂದು ವಿಮರ್ಶಕರು ನಿರ್ಧರಿಸಿದ್ದರು. ಆದರೆ ಕುವೆಂಪು ಅವರು `ಶ್ರೀರಾಮಾಯಣದರ್ಶನಂ~ ಹೊರತರುವ ಮೂಲಕ ಸಾಹಿತ್ಯ ಲೋಕವನ್ನು ಚಕಿತಗೊಳಿಸಿದರು.

ಆನಂತರ ವಿ.ಕೃ.ಗೋಕಾಕ ಅವರ `ಭಾರತ ಸಿಂಧು ರಶ್ಮಿ~ ಸೇರಿದಂತೆ ಸಾಲು ಸಾಲು ಮಹಾಕಾವ್ಯಗಳು ರಚನೆಯಾದವು. ಇದರಿಂದ ಹೊಸ ವಿಮರ್ಶೆಯೇ ತಲೆಕೆಳಗಾಯಿತು ಎಂದು ಕನ್ನಡದ ಮಹಾಕಾವ್ಯ ಪರಂಪರೆಯನ್ನು ಸ್ಮರಿಸಿಕೊಂಡರು.

ಈ ರೀತಿಯ ಮಹಾಕಾವ್ಯಗಳು ಇತರ ಭಾಷೆಯಲ್ಲಿ ರಚನೆಯಾಗಲಿಲ್ಲ. ಒಬ್ಬ ಕವಿ ಮೂರು ಮಹಾಕಾವ್ಯ ಬರೆದ ಉದಾಹರಣೆ ಕೂಡ ಲಭಿಸುವುದಿಲ್ಲ. ಡಾ.ಲತಾ ರಾಜಶೇಖರ್ ಅವರು ಬುದ್ಧ, ಯೇಸು, ಬಸವ ಮಹಾಕಾವ್ಯಗಳನ್ನು ರಚಿಸುವ ಮೂಲಕ ವಿಸ್ಮಯ ಮೂಡಿಸಿದ್ದಾರೆ. ಆದರೆ ವಿಮರ್ಶಕರು ಇದನ್ನು ಸಕಾರಾತ್ಮಕವಾಗಿ ನೋಡುತ್ತಿಲ್ಲ. ಇದರಿಂದ ಮೂರು ಮಹಾಕಾವ್ಯಗಳಲ್ಲಿ ಇರುವ ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳು ಪ್ರಸಾರವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾಕಾವ್ಯಗಳು ಸಾಧಾರಣ ಪರಿಸ್ಥಿತಿಯಲ್ಲಿ ಹುಟ್ಟುವುದಿಲ್ಲ. ನಾಡಿನ ಪುಣ್ಯದ ಫಲವಾಗಿ ಅವು ರೂಪುಗೊಳ್ಳುತ್ತವೆ. ಪಂಪನಿಗೆ ಉತ್ತಮ ರಾಜಾಶ್ರಯ ದೊರೆತರೂ ಅವನ ಕಾವ್ಯ ಅರಮನೆಯಲ್ಲಿ ಹುಟ್ಟಲಿಲ್ಲ ಎಂದರು.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ ಮಾತನಾಡಿ, ಪಂಪ, ಕುಮಾರವ್ಯಾಸ, ಕುವೆಂಪು, ಗೋಕಾಕ ಸೇರಿದಂತೆ ಅನೇಕ ಕವಿಗಳು ಮಹಾಕಾವ್ಯ ನೀಡುವ ಮೂಲಕ ಕನ್ನಡ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಕ್ಷೇತ್ರವನ್ನು ರಮಣೀಯ ವಾಗಿಸಿದ್ದಾರೆ. ಅವರ ಸಾಲಿಗೆ ಡಾ.ಲತಾ ರಾಜಶೇಖರ್ ಕೂಡ ಸೇರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಬಿ.ಆರ್. ಗೋಪಾಲ, ಭಾರತೀಯ ಭಾಷಾ ಸಂಸ್ಥಾನದ ಉಪ ನಿರ್ದೇಶಕ ಡಾ.ಆರ್.ಸುಬ್ಬಕೃಷ್ಣ, ಕವಯತ್ರಿ ಡಾ.ಲತಾ ರಾಜಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT