ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿವಿ ಕಂಪು

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕರ್ನಾಟಕ ಏಕೀಕರಣದ ನಂತರ ಕನ್ನಡ ಭಾಷೆ ಹಾಗೂ ಬದುಕಿನ ತೌಲನಿಕ ಅಧ್ಯಯನದ ಅಗತ್ಯತೆ 80ರ ದಶಕದಲ್ಲಿ ಬಹು ಮುಖ್ಯವಾಗಿತ್ತು. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಕನ್ನಡ ವಿಭಾಗಗಳ ಮೂಲಕ ಈ ಕಾರ್ಯವನ್ನು ಮಾಡುತ್ತಿದ್ದರೂ ಅವು ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿದ್ದವು. ಈ ಕಾರಣಕ್ಕಾಗಿಯೇ ಕನ್ನಡದ ಬದುಕಿನ ಸಮಗ್ರ ಅಧ್ಯಯನ ಮಾಡುವ ಉದ್ದೇಶದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಹುಟ್ಟು ಹಾಕಲಾಯಿತು.

ಕನ್ನಡ ನಾಡು–ನುಡಿ, ಕಲೆ, ಸಾಹಿತ್ಯ, ಚರಿತ್ರೆ, ಬುಡಕಟ್ಟು, ಜಾನಪದ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಸಮಾಜ ವಿಜ್ಞಾನ ಮತ್ತು ಸಮಸ್ತ ಬದುಕಿನ ಸಮಗ್ರ ಸಂಶೋಧನೆ, ಪ್ರಕಟಣೆ ಹಾಗೂ ಪ್ರಸಾರ– ಇವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯ ಪ್ರಮುಖ ಉದ್ದೇಶಗಳು. ಇದರ ಉದ್ದೇಶಗಳಿಂದಲೇ ಇತರ ವಿಶ್ವವಿದ್ಯಾಲಯಗಳಿಗಿಂತ ಕನ್ನಡ ವಿವಿ ಭಿನ್ನ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಕನ್ನಡ ಭಾಷೆ ಮಾತನಾಡುವ ತುಳಿತಕ್ಕೊಳಗಾದ ಸಮುದಾಯಗಳ ಬದುಕು, ಸಂಸ್ಕೃತಿ, ಸಂಪ್ರದಾಯ, ಆಚಾರ–ವಿಚಾರ, ಆಚರಣೆ ಮತ್ತಿತರ ಕ್ಷೇತ್ರಗಳ ಸಮಗ್ರ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟಣೆಯೇ ಮುಖ್ಯ ಗುರಿಯಾಗಿಸಿಕೊಂಡಿರುವ ವಿ.ವಿ. ಬೋಧನೆಯಿಂದ ಹೊರತಾಗಿದೆ. ಇದಕ್ಕೆ ನಿರ್ದಿಷ್ಟ ವ್ಯಾಪ್ತಿ ಇಲ್ಲ. ಕನ್ನಡದ ಸಂಸ್ಕೃತಿ, ಸಮುದಾಯ ಪ್ರಪಂಚದ ಯಾವುದೇ ಭಾಗದಲ್ಲಿ ಇರಲಿ, ಆ ಕುರಿತ ಅಧ್ಯಯನ ಹಾಗೂ ಸಂಶೋಧನೆ ನಡೆಸುವುದು ಇದರ ವ್ಯಾಪ್ತಿಯಾಗಿದ್ದು, ತನ್ನ ಅಧ್ಯಯನದ ದಿಗಂತವನ್ನು ವಿಸ್ತರಿಸುತ್ತಾ ಹೋಗಿದೆ.

ಕನ್ನಡದ ಕುರಿತು ಇಂಥ ಧ್ಯೇಯೋದ್ದೇಶಗಳನ್ನು ಹೊತ್ತು ಬಂದ ಹಂಪಿ ಕನ್ನಡ ವಿ.ವಿ.ಗೆ ಮೊದಲು ಸಾರಥಿಯಾದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ. ವಿ.ವಿ. ಸ್ಥಾಪನೆ ಸಂಬಂಧಿತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಂಬಾರರು ವಿ.ವಿ. ಗುರಿ ಮತ್ತು ಉದ್ದೇಶಗಳ ಕುರಿತು ಸ್ಪಷ್ಟತೆ ಹೊಂದಿದ್ದರು. ಅಲ್ಲದೆ ಕಂಬಾರ ಅವರೊಂದಿಗೆ ವಿ.ವಿ. ಕನಸುಗಳಿಗೆ ಆರಂಭದಿಂದಲೂ ಬಣ್ಣ ಹಚ್ಚಿದವರು ಕೆ.ವಿ.ನಾರಾಯಣ ಅವರು. ಈ ಕಾರಣದಿಂದಲೇ ಪ್ರಕಟಣೆ ವಿಷಯದಲ್ಲಿ ರಾಜ್ಯದ ಯಾವ ವಿಶ್ವ ವಿದ್ಯಾಲಯವೂ ಮಾಡದ ಸಾಧನೆಯನ್ನು ಕನ್ನಡ ವಿ.ವಿ. ಮಾಡಿದೆ.

ಕನ್ನಡ ವಿ.ವಿ.ಯ ಜವಾಬ್ದಾರಿ ‘ವಿದ್ಯೆಯನ್ನು ಸೃಷ್ಟಿಸುವುದೇ ಹೊರತು ಕಲಿಸುವುದಲ್ಲ’ ಎಂದು ಡಾ.ಕಂಬಾರ ಅವರು ಪದೇ ಪದೇ ಹೇಳುತ್ತಿದ್ದರು. ಹೀಗೆ ಉನ್ನತ ಗುರಿ ಹಾಗೂ ವ್ಯಾಪ್ತಿಯೊಂದಿಗೆ ಆರಂಭವಾದ ವಿಶ್ವ ವಿದ್ಯಾಲಯಕ್ಕೆ ಈಗ 22 ವರ್ಷ ಆಯಸ್ಸು. 

ಈ ಮೊದಲೆ ಹೇಳಿದಂತೆ ತುಳಿತಕ್ಕೊಳಗಾದ ಕನ್ನಡದ ಸಮುದಾಯಗಳ ಬದುಕಿನ ಸಮಗ್ರ ಅಧ್ಯಯನ ಹಾಗೂ ಸಂಶೋಧನೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದರೂ ಇಲ್ಲಿಯವರೆಗೆ ಆಗಿರುವುದನ್ನು ಒಪ್ಪಿಕೊಳ್ಳಲೇಬೇಕು. ಅಲ್ಲದೆ ಕಾಲಮಾನಕ್ಕೆ ತಕ್ಕಂತೆ ವಿ.ವಿ.ಯ ಗುರಿ, ಉದ್ದೇಶಗಳು ಹಾಗೂ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ಹೀಗೆ ವಿಸ್ತರಿಸುತ್ತಾ ಹೋದ ವಿ.ವಿ.ಗೆ ಸರ್ಕಾರದಿಂದ ಅಗತ್ಯ ಅನುದಾನ ಹಾಗೂ ಸಹಕಾರ ಅವಶ್ಯ.

ಆದರೆ 1998ರ ನಂತರ ಬಂದ ಸರ್ಕಾರಗಳಿಂದ ವಿ.ವಿ.ಗೆ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ ಎಂದು ಸ್ವತಃ ಕಂಬಾರ ಅವರೇ ಒಪ್ಪಿಕೊಳ್ಳುತ್ತಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಸರ್ಕಾರ ಬದಲಾದ ಸಂದರ್ಭಗಳಲ್ಲೆಲ್ಲಾ ವಿ.ವಿ.ಯ ಮೇಲೆ ನಡೆದ ರಾಜಕೀಯ ಆಕ್ರಮಣ, ಕುಲಪತಿಗಳ ನೇಮಕಾತಿ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ವಿ.ವಿ.ಯ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಅಲ್ಲದೆ ಸಿಬ್ಬಂದಿ ಕೊರತೆಯಿಂದಲೂ ವಿ.ವಿ. ಬೆಳವಣಿಗೆಗೆ ಕೊಂಚ ಹಿನ್ನಡೆಯಾಗಿದೆ. ಇದೆಲ್ಲದರ ಮಧ್ಯೆ ವಿ.ವಿ.ಯಲ್ಲಿನ ಜಾತಿ, ಹುದ್ದೆ ಕುರಿತಾದ ಒಳ ರಾಜಕೀಯವೂ ನಿರೀಕ್ಷಿತ ಗುರಿ ಸಾಧನೆಗೆ ತಡೆಯೊಡ್ಡಿದೆ.

ಮುಖ್ಯವಾಗಿ ವಿ.ವಿ.ಯಿಂದ ಕನ್ನಡದ ವಿಷಯದಲ್ಲಿ ತಾಂತ್ರಿಕತೆಯ ಅಭಿವೃದ್ಧಿಯಾಗಬೇಕಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ವಿ.ವಿ.ಯಲ್ಲಿ ಈವರೆಗೂ ಯಾವುದೇ ಪರಿಣಾಮಕಾರಿ ಕ್ರಮಗಳು ಆಗಿಲ್ಲ. ಇದಕ್ಕೆ ಅನುದಾನದ ಕೊರತೆ ಎಂಬುದು ಆಡಳಿತ ವಿಭಾಗದಿಂದ ಬರುವ ಸ್ಪಷ್ಟನೆಯಾದರೂ ಇದನ್ನು ಗಂಭೀರವಾಗಿ ಪರಿಣಿಸುವ ಅಗತ್ಯವಿದೆ. 

ವಿ.ವಿ.ಆವರಣ: ಐತಿಹಾಸಿಕ ವಿಜಯನಗರ ಅರಸರ ರಾಜಧಾನಿ ‘ಹಂಪಿ’ ಪ್ರದೇಶದ ಸುಮಾರು 700 ಎಕರೆ ಪ್ರದೇಶದಲ್ಲಿ ಮೈದಳೆದಿರುವ ಕನ್ನಡ ವಿಶ್ವ ವಿದ್ಯಾಲಯದ ಆವರಣ 22 ವರ್ಷಗಳ ಹಿಂದೆ ಕೇವಲ ಕಲ್ಲು ಬಂಡೆಗಳಿಂದ ಕೂಡಿದ ಪ್ರದೇಶವಾಗಿತ್ತು. ಡಾ.ಕಂಬಾರ ಅವರು ತಮ್ಮ ಅವಧಿಯಲ್ಲಿ ಕನ್ನಡದ ಅಧ್ಯಯನದೊಂದಿಗೆ ಇಲ್ಲಿನ ಬೌತಿಕ ವಾತಾವರಣ ಬದಲಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಇವರ ನಂತರ ಬಂದ ಡಾ.ಎಂ.ಎಂ.ಕಲ್ಬುರ್ಗಿ, ಡಾ.ಎಚ್.ಜೆ.ಲಕ್ಕಪ್ಪಗೌಡ, ಡಾ.ಬಿ.ಎ.ವಿವೇಕ ರೈ, ಡಾ.ಎ.ಮುರಿಗೆಪ್ಪ ಹಾಗೂ ಡಾ.ಹಿ.ಚಿ.ಬೋರ­ಲಿಂಗಯ್ಯ ಅವರು ಕಂಬಾರರು ನೆಟ್ಟ ಸಸಿಗಳಿಗೆ ನೀರೆದು ಪೋಷಣೆ ಮಾಡಿದ್ದರಿಂದ ಇಂದು ಬಯಲು ಸೀಮೆಯಲ್ಲಿ ಮಲೆನಾಡು ವಾತಾವರಣ ಸೃಷ್ಟಿಯಾಗಿದೆ. ಅಷ್ಟೆ ಅಲ್ಲ ದಟ್ಟವಾಗಿ ಬೆಳೆದಿರುವ ಸಸ್ಯ ಸಂಪತ್ತು ಕೆಲವು ಕಾಡು ಪ್ರಾಣಿಗಳಿಗೂ ಆಶ್ರಯ ನೀಡಿದೆ.

ಹಂಪಿಯಲ್ಲಿ ಸ್ಥಾಪನೆಯಾಗುವ ಕನ್ನಡ ವಿ.ವಿ.ಯ ಕಟ್ಟಡಗಳು ವಿಜಯನಗರ ಕಾಲದ ಕಲ್ಲಿನ ಮಂಟಪಗಳ ಆಕಾರದಲ್ಲಿಯೇ ಇರಬೇಕು ಎಂಬ ಕಟ್ಟಳೆಯನ್ನೂ ಮೊದಲೇ ವಿಧಿಸಿಕೊಳ್ಳಲಾಗಿತ್ತು. ಇಂಥ ಕಟ್ಟಡಗಳಿಂದ ವಿ.ವಿ.ಯ ಗುರಿ ಮತ್ತು ಉದ್ದೇಶ ಈಡೇರಿಕೆ ಇದರ ಹಿಂದಿನ ಉದ್ದೇಶವಾಗಿತ್ತು. ಅದೇ ರೀತಿ ಆರಂಭದಲ್ಲಿ ಆಗಿರುವ ವಿವಿಧ ವಿಭಾಗ, ಆಡಳಿತ ಕಚೇರಿ, ಗ್ರಂಥಾಲಯ ಸೇರಿದಂತೆ ಬಹುತೇಕ ಕಟ್ಟಡಗಳು ಇದೇ ಮಾದರಿಯಲ್ಲಿವೆ. ಆದರೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಇತ್ತೀಚೆಗೆ ಇಲ್ಲಿನ ಕಟ್ಟಡಗಳ ಸ್ವರೂಪ ಸ್ವಲ್ಪಮಟ್ಟಿಗೆ ಬದಲಾಗಿದ್ದು, ಈ ಮೊದಲಿನ ಕಟ್ಟಡಗಳ ಸ್ವರೂಪಕ್ಕೆ ತೀಲಾಂಜಲಿ ಹಾಡಲಾಗಿದೆ.

ಕನ್ನಡ ವಿ.ವಿ. ಸ್ಥಾಪನೆಯ ಉದ್ದೇಶ
ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಪ್ರೇರಣೆಯಾಗಿದ್ದು ನೆರೆಯ ತಮಿಳುನಾಡಿನ ತಂಜಾವೂರಿನಲ್ಲಿರುವ ತಮಿಳು ವಿಶ್ವವಿದ್ಯಾಲಯ. ತಮಿಳು ಭಾಷೆ ಕುರಿತು ಸಮಗ್ರ ಅಧ್ಯಯನ ನಡೆಸುತ್ತಿರುವ ವಿಶ್ವ ವಿದ್ಯಾಲಯದಂತೆ ಕನ್ನಡಕ್ಕೂ ಒಂದು ಪ್ರತ್ಯೇಕ ವಿ.ವಿ. ಅಗತ್ಯವಿದೆ ಎಂದು ಅಂದಿನ ಕನ್ನಡ ಪರ ಹೋರಾಟಗಾರರು ಮನಗಂಡಿದ್ದರು.

ಹರಿದು ಹಂಚಿ ಹೋಗಿದ್ದ ಕರ್ನಾಟಕ ಹಾಗೂ ಕನ್ನಡದ ಬದುಕಿನ ತೌಲನಿಕ ಅಧ್ಯಯನ ಹಾಗೂ ಸಂಶೋಧನೆಗೆ ವಿಶ್ವ ವಿದ್ಯಾಲಯದ ಅಗತ್ಯವಿದೆ ಎಂಬ ಕೂಗು ಕರ್ನಾಟಕ ಏಕೀಕರಣ ಚಳವಳಿಯ ನಂತರ ತೀವ್ರಗೊಂಡಿತ್ತು. ಕನ್ನಡ ವಿ.ವಿ. ಸ್ಥಾಪನೆಗಾಗಿ ದೊಡ್ಡಮಟ್ಟದ ಹೋರಾಟವನ್ನೇ ರೂಪಿಸಿದ್ದ ಕನ್ನಡ ಕಾವಲು ಸಮಿತಿಯ ಚಿದಾನಂದಗೌಡರು, ಬೆಂಗಳೂರಿನಿಂದ ಹಂಪಿವರೆಗೆ ಪಾದಯಾತ್ರೆಯನ್ನೂ ಕೈಗೊಂಡಿದ್ದರು. ಅಲ್ಲದೆ 1984ರಲ್ಲಿ ಮೈಸೂರಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿ.ವಿ. ಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ಮಾಡಲಾಯಿತು.

ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ವಿ.ವಿ. ಸ್ಥಾಪನೆಯ ಅಗತ್ಯತೆ ಕುರಿತು ವರದಿ ನೀಡಲು ಒಡೆಯರ್ ಸಮಿತಿ ನೇಮಿಸಿದರು. ಒಡೆಯರ್ ಸಮಿತಿ ವರದಿ ನೀಡಿದ ಕೆಲವು ವರ್ಷಗಳ ನಂತರ, ಅಂದರೆ ನವೆಂಬರ್‌ 1, 1991ರಲ್ಲಿ ವಿ.ವಿ. ಕಾರ್ಯಾರಂಭ ಮಾಡಿತು.

ಕುಲಪತಿ ನೇಮಕದಲ್ಲಿ ವಸೂಲಿ ಬಾಜಿ ಬೇಡ

ವಿಶ್ವವಿದ್ಯಾಲಯ ಆರಂಭದಲ್ಲಿ ಎರಡು ಪ್ರಮುಖ ಉದ್ದೇಶಗಳನ್ನು ಹೊಂದಿತ್ತು. ನಮ್ಮಲ್ಲಿ ಮರೆಯಾದ ವಿದ್ಯೆಯನ್ನು ಪ್ರಸ್ತುತ ಅಗತ್ಯಕ್ಕೆ ಬಳಸಿಕೊಳ್ಳುವುದು ಹಾಗೂ ಸಂಶೋಧನೆ ಮಾಡುವುದು ಮೊದಲನೆಯದು. ಎರಡನೆಯದು ಜೀವನಕ್ಕೆ ಅಗತ್ಯ ವಿದ್ಯೆಗಳನ್ನು ಸೃಷ್ಟಿಸುವುದು. ಈ ಧ್ಯೇಯೋದ್ದೇಶಗಳನ್ನು ಈಡೇರಿಸುವ ದಾರಿ ಇನ್ನೂ ದೂರ ಇದೆ. ಆದರೆ, ಈ ವಿಶ್ವವಿದ್ಯಾಲಯ ಮುನ್ನಡೆಸಲು ಈ ಎರಡು ಉದ್ದೇಶಗಳನ್ನು ಅರ್ಥ ಮಾಡಿಕೊಂಡವರು ಬರಬೇಕೆ ಹೊರತು, ವಸೂಲಿ ಬಾಜಿಯಿಂದ ಅಲ್ಲ.
- ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ


ದ್ವಿಭಾಷಾ ಪ್ರಾಧ್ಯಾಪಕರ ನೇಮಕ ಅಗತ್ಯ

ಪುಸ್ತಕ ಪ್ರಕಟಣೆ, ಸಾಮಾಜಿಕ ಅಧ್ಯಯನ ವಿಭಾಗಗಳ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯ ಉತ್ತಮ ಹೆಜ್ಜೆ ಇಟ್ಟಿದೆ. ಸರ್ಕಾರ ಆರ್ಥಿಕವಾಗಿ ಹೆಚ್ಚು ಅನುಕೂಲ ಕಲ್ಪಿಸುವ ಮೂಲಕ ವಿ.ವಿ. ಅಭಿವೃದ್ಧಿಗೆ ಸಹಕರಿಸಬೇಕು. ಬೋಧಕ ಸಿಬ್ಬಂದಿಗೆ ಆಡಳಿತ ನಿರ್ವಹಣೆ ಜವಾಬ್ದಾರಿ ವಹಿಸದೇ ಅವರು ಅಧ್ಯಯನದಲ್ಲಿ ತೊಡಗುವಂತೆ ಮಾಡಬೇಕು.

ಯಾವುದೇ ವಿಶ್ವವಿದ್ಯಾಲಯಗಳ ಉದ್ದೇಶ, ಗುರಿ ಒಮ್ಮೆಲೆ ಈಡೇರುವುದಿಲ್ಲ. ಅದೇ ರೀತಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉದ್ದೇಶ, ಗುರಿಗಳು ಹಂತ ಹಂತವಾಗಿ ಈಡೇರುತ್ತಿವೆ.
- ಡಾ.ಎಂ.ಎಂ.ಕಲ್ಬುರ್ಗಿ, ವಿಶ್ರಾಂತ ಕುಲಪತಿ


ಸಮಗ್ರ ಕನ್ನಡದ ಶಕ್ತಿವೃದ್ಧಿ ವಿ.ವಿ. ಗುರಿ

ಕನ್ನಡ ಅಭಿವೃದ್ಧಿ ಎನ್ನುವುದು ಕೇವಲ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯಲ್ಲ. ಒಟ್ಟು ಕನ್ನಡದ ಶಕ್ತಿಯನ್ನು ಬೆಳೆಸುವುದು ಕನ್ನಡ ವಿ.ವಿ. ಗುರಿ ಹಾಗೂ ಧ್ಯೇಯ. 

ಡಾ.ಚಂದ್ರಶೇಖರ ಕಂಬಾರ ಹಾಗೂ ಡಾ.ಎಂ.ಎಂ.ಕಲ್ಬುರ್ಗಿ ಅವರು ಕಂಡ ಕನಸುಗಳನ್ನು ಸಾಕಾರಗೊಳಿಸುವತ್ತ ಕುಲಸಚಿವ ಡಾ.ವಿಜಯ ಪೊಣಚ್ಚ ತಂಬಂಡ ಅವರ ಸಹಕಾರದೊಂದಿಗೆ ವಿ.ವಿ.ಯ ಎಲ್ಲ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
- ಡಾ.ಹಿ.ಚಿ.ಬೋರಲಿಂಗಯ್ಯ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT