ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಾಲೆಗಳ ಗುಣಮಟ್ಟ ವೃದ್ಧಿಸಿ

Last Updated 1 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಧರ್ಮಸ್ಥಳ: `ಕನ್ನಡ ಭಾಷೆ, ನಾಡಿನ ಬಗ್ಗೆ ಹೆತ್ತವರಲ್ಲಿ ಜಾಗೃತಿ ಮೂಡಿಸಬೇಕು. ಕನ್ನಡ ಶಾಲೆಗಳ ಬಗ್ಗೆಯೂ ಅರಿವು ಮೂಡಿಸಿ ಅವುಗಳ ಗುಣಮಟ್ಟ ಹೆಚ್ಚಿಸುವ ಕೆಲಸ ಆಗಬೇಕು~ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್, ಧರ್ಮಸ್ಥಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

`ಎರಡು ವರ್ಷಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಕನ್ನಡ ಶಾಲೆಗಳ ಕುರಿತು ಎಚ್ಚರ ಮೂಡಿಸಬೇಕು. ಅವುಗಳನ್ನು ಮುಚ್ಚಬಾರದು. ಇಂಗ್ಲಿಷ್ ಮಾಧ್ಯಮ ಶಾಲೆಗಳ ಜತೆಗೆ ಸ್ಪರ್ಧೆ ಒಡ್ಡುವಂತೆ ಕನ್ನಡ ಶಾಲೆಗಳನ್ನು ಬೆಳೆಸಬೇಕು~ ಎಂದು ಹೇಳಿದರು.

`ನಮ್ಮ ತಲೆಮಾರಿನಲ್ಲಿ ಕನ್ನಡ ಪರಿವರ್ತನೆ ಆಗುತ್ತಿದೆ. ಇಂದಿನ ಕನ್ನಡ ಸಿನಿಮಾಗಳಲ್ಲಿ ಇಂಗ್ಲಿಷ್ ಶಬ್ದಗಳೇ ತುಂಬಿರುತ್ತವೆ. ಕನ್ನಡವನ್ನು ಮರೆಸುವ ಭಾಷೆ ಬೆಳೆಯುತ್ತಿದೆ. ಕಾರ್ಯಕ್ರಮಗಳಲ್ಲಿ, ಶಾಲೆಗಳಲ್ಲಿ ಶುದ್ಧ ಕನ್ನಡ ಬಳಸುವ ಪ್ರವೃತ್ತಿ ಬೆಳೆಸಬೇಕು~ ಎಂದರು.

ಇತರ ಭಾಷೆಗಳ ಪ್ರಭಾವವೂ ಕನ್ನಡ ಭಾಷೆಯ ಉಳಿವಿಗೆ ತೊಡಕಾಗಿದೆ. ಜತೆಗೆ ಮಾಧ್ಯಮಗಳಲ್ಲಿ ಬಳಕೆಯಾಗುವ ಹೊಸ ಶಬ್ದ, ಇಂಗ್ಲಿಷ್ ಭಾಷೆ ತಿಳಿಯದಿದ್ದವರೂ ಬಳಸುವ ಆಂಗ್ಲ ಶಬ್ದಗಳಿಂದ ಕನ್ನಡಕ್ಕೆ ಅಪಾಯ ಇದೆ. ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರಬಾರದು. ಕನ್ನಡ, ಭಾಷೆ, ನಾಡಿನ ಕುರಿತ ಹೋರಾಟಕ್ಕೆ ಸಿದ್ಧವಾಗಿರಬೇಕು ಎಂದರು.


ಕನ್ನಡ ಮಾಧ್ಯಮ ಶಾಲೆಗಳಲ್ಲೂ ಇಂಗ್ಲಿಷ್ ಭಾಷೆಯನ್ನು ಸಮರ್ಪಕವಾಗಿ ಕಲಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲಭಾಷೆಯನ್ನು ಶುದ್ಧಿಕರಿಸಬೇಕು. ಈ ನಿಟ್ಟಿನಲ್ಲಿ ಉಜಿರೆಯಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಶುದ್ಧ ಆಂಗ್ಲ ಭಾಷೆ ಮಾತನಾಡಲು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತಿದೆ. ಇದಕ್ಕಾಗಿ ಹೈದರಾಬಾದಿನ ಸಂಸ್ಥೆ ಜತೆಗೆ ಮಾತುಕತೆ ನಡೆದಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ಗ್ರಂಥಾಲಯದ ಸಂಗ್ರಹದಲ್ಲಿರುವ ಕನ್ನಡದ ತಾಡಪ್ರತಿಗಳು ಸಂಶೋಧಕರಿಗೆ ನೆರವಾಗಲಿದೆ. ಕನ್ನಡ ಭಾಷೆಯ ಸಾವಿರ ವರ್ಷಗಳ ಬದಲಾವಣೆಗೆ ಇವುಗಳು ಸಾಕ್ಷ್ಯಗಳಾಗಿವೆ ಎಂದರು.

ಮಕ್ಕಳಲ್ಲಿ ಕನ್ನಡ ಭಾಷೆ, ಸಂಸ್ಕಾರದ ಬಗ್ಗೆ ಅರಿವು ಮೂಡಿಸಲು ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಮೂಲಕ 3-4 ಜಿಲ್ಲೆಗಳ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ತಲಾ 50 ಸಾವಿರ ಪುಸ್ತಕ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಮಾತನಾಡಿ, ಕನ್ನಡ ಭಾಷೆಯ ಕುರಿತು ದನಿ ಎತ್ತದೆ ಇದ್ದರೆ ಕನ್ನಡ ಹರಾಜು ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ಎಲ್ಲ ವಿಧದಲ್ಲೂ ಅನ್ಯಾಯವಾಗುತ್ತಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟುಕೊಡಬಾರದು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಿ ಎಂದು ಕೈಒಡ್ಡುವ ಪರಿಸ್ಥಿತಿ ಬಂದೊದಗಿದೆ. ಇದು ಸಮ್ಮತವಲ್ಲ. ಕೂಡಲೇ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ವಿರೇಂದ್ರ ಹೆಗ್ಗಡೆ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಬೆಳಾಲು ಪ್ರೌಢಶಾಲೆ ಮುಖ್ಯಶಿಕ್ಷಕ ರಾಮಕೃಷ್ಣ ನಿರೂಪಿಸಿದರು.

ಕಸಾಪ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ಡಾ.ಕೋ.ವೆಂ.ರಾಮಕೃಷ್ಣೇ ಗೌಡ ಮತ್ತಿತರರು ಉಪಸ್ಥಿತರಿದ್ದರು.
 
`ದತ್ತಿ ಆಶಯಗಳಿಗೆ ಧಕ್ಕೆ ಆಗದಿರಲಿ~
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್‌ನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಪರಿಷತ್‌ನಲ್ಲಿ ಸ್ಥಾಪಿಸಲಾಗಿರುವ 1530 ದತ್ತಿಗಳ ಆಶಯಕ್ಕೆ ಧಕ್ಕೆ ಆಗಬಾರದು. ಅವುಗಳ ಉದ್ದೇಶವನ್ನು ಅರಿತುಕೊಂಡು ಅವುಗಳ ಕಾರ್ಯಕ್ರಮಗಳನ್ನು ತಪ್ಪದೆ ನಡೆಸಬೇಕು ಎಂದರು.

ಜಿಲ್ಲಾ ಸಮಾವೇಶಕ್ಕೆ 5 ಲಕ್ಷ:ಮುಂದಿನ ದಿನಗಳಲ್ಲಿ ಪರಿಷತ್‌ನ ಜಿಲ್ಲಾ ಮಟ್ಟದ ಸಮಾವೇಶಗಳಿಗೆ ರೂ. 5 ಲಕ್ಷ ನೀಡಲಾಗುವುದು. ಜತೆಗೆ 175 ತಾಲ್ಲೂಕು ಘಟಕಗಳ ತಾಲ್ಲೂಕು ಸಮ್ಮೇಳನಕ್ಕೂ ತಲಾ ರೂ. 1ಲಕ್ಷ ನೀಡಲಾಗುವುದು ಎಂದರು.

ಸಮಾವೇಶಗಳ ಲೆಕ್ಕ ಪತ್ರಗಳನ್ನು ಪರಿಷತ್‌ಗೆ ತಪ್ಪದೇ ನೀಡಬೇಕು ಎಂದು ಹೇಳಿದರು.
ವಿವಿಧ ಕಾರ್ಯಕ್ರಮ: `ಪ್ರಾಚೀನ ಕನ್ನಡ ಕಾವ್ಯ~ ಕುರಿತು ಪ್ರತಿ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯಮಟ್ಟದಲ್ಲಿಯೂ ಈ ಕುರಿತ ಒಂದು ಕಾರ್ಯಕ್ರಮ ನಡೆಸಲಾಗುವುದು. ಇದಕ್ಕಾಗಿ ಸೂಕ್ತ ಸಿದ್ಧತೆಗಳೂ ನಡೆಯಲಿವೆ ಎಂದರು.

 ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಪರಿಷತ್ ವತಿಯಿಂದ ರೂ. 25 ಸಾವಿರ ನೀಡಲಾಗುವುದು.
ಕನ್ನಡ ಸಾಹಿತ್ಯ ಪರಿಷತ್‌ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪುಸ್ತಕ ಪ್ರಕಟಣೆ, ಮುದ್ರಣಾಲಯಕ್ಕೆ ಹೊಸತನ ನೀಡುವ ಕೆಲಸಗಳೂ ನಡೆಯಲಿವೆ ಎಂದರು.

ಸದಸ್ಯರಿಗೆ ಗುರುತಿನ ಚೀಟಿ: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಒಟ್ಟು 1ಲಕ್ಷ 49 ಸಾವಿರ ಸದಸ್ಯರಿದ್ದಾರೆ. 45 ಸಾವಿರ ಸದಸ್ಯರಿಗೆ ಅಕ್ಟೋಬರ್ ತಿಂಗಳಿನಲ್ಲಿ ಗುರುತಿನ ಚೀಟಿ ನೀಡಲಾಗುವುದು. ಪರಿಷತ್‌ನ ಪ್ರಕಟಣೆಯಾದ `ಕನ್ನಡ ನುಡಿ~ಯನ್ನು ಎಲ್ಲ ಸದಸ್ಯರಿಗೂ ಕಳುಹಿಸಲಾಗುವುದು ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT