ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಘಟನೆಗಳ ಪ್ರತಿಭಟನೆ

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದ ಡಾ. ಚಂದ್ರಶೇಖರ ಕಂಬಾರರ ಅಭಿನಂದನಾ ಗೊತ್ತುವಳಿಗೆ ವಿರೋಧ ವ್ಯಕ್ತಪಡಿಸಿದ ಬೆಳಗಾವಿ ಮಹಾನಗರ ಪಾಲಿಕೆಯ ಮರಾಠಿ ಪರ ಸದಸ್ಯರ ನಿಲುವನ್ನು ನಗರದ ಹಲವು ಕನ್ನಡಪರ ಸಂಘಟನೆಗಳು ಶುಕ್ರವಾರ ತೀವ್ರ ಖಂಡಿಸಿವೆ.

ಬೆಳಗಾವಿ ಜಿಲ್ಲೆಯವರೇ ಆದ ಡಾ. ಚಂದ್ರಶೇಖರ ಕಂಬಾರರಿಗೆ ಅಭಿನಂದನೆ ಸಲ್ಲಿಸುವ ಗೊತ್ತುವಳಿಗೆ ಗುರುವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ಮರಾಠಿ ಪರ ಸದಸ್ಯರ ಪ್ರತಿಕೃತಿಯನ್ನು ದಹಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

`ಮಹಾನಗರ ಪಾಲಿಕೆಯ ಕೆಲವು ಸದಸ್ಯರು ಸ್ವಾರ್ಥದಿಂದ ಕಂಬಾರರ ಅಭಿನಂದನೆಗೆ ವಿರೋಧ ಸೂಚಿಸಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ~ ಎಂದು ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರು ಹೇಳಿದ್ದಾರೆ.

  ಮಾಜಿ ಮೇಯರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಪಾಟೀಲ, `ಕಂಬಾರರಿಗೆ ಅಭಿನಂದನೆ ಸಲ್ಲಿಸುವ ಗೊತ್ತುವಳಿ ಸ್ವೀಕರಿಸಲು ಅಡ್ಡಿಪಡಿಸುವ ಮೂಲಕ ಎಂಇಎಸ್ ಸದಸ್ಯರು ರಾಜ್ಯಕ್ಕೇ ಅವಮಾನ ಮಾಡಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯನ್ನು ಕೂಡಲೇ ವಿಸರ್ಜಿಸಬೇಕು~ ಎಂದು ಒತ್ತಾಯಿಸಿದ್ದಾರೆ.

`ಮಹಾನಗರ ಪಾಲಿಕೆಯಲ್ಲಿ ಮರಾಠಿ ಪರ ಸದಸ್ಯರ ಕಿತಾಪತಿಯಿಂದಾಗಿ ಕನ್ನಡ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಅವರು ಕಂಬಾರರ ಅಭಿನಂದನೆಯನ್ನು ವಿರೋಧಿಸಿರುವುದು ಖಂಡನೀಯ. ಅವರ ಇಂತಹ ವರ್ತನೆ ವಿರುದ್ಧ ಕನ್ನಡ ಪರ ಸದಸ್ಯರೆಲ್ಲ ಧ್ವನಿ ಎತ್ತುವ ಮೂಲಕ ಕನ್ನಡವನ್ನು ಉಳಿಸಬೇಕು~ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ ಪ್ರತಿಕ್ರಿಯಿಸಿದ್ದಾರೆ.
ಮಹಾಗನರ ಪಾಲಿಕೆಯ ಮರಾಠಿ ಭಾಷಿಕರ ನಿಲುವಿಗೆ ಜಿಲ್ಲೆಯಾದ್ಯಂತ ವಿವಿಧ ಕನ್ನಡಪರ ಸಂಘಟನೆಗಳಿಂದ ತೀವ್ರವಾದ ಖಂಡನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT