ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ, ಜೈನ ಸಾಹಿತ್ಯದಿಂದ ಶ್ರೀಮಂತ

Last Updated 2 ಜನವರಿ 2012, 20:05 IST
ಅಕ್ಷರ ಗಾತ್ರ

ಬೆಂಗಳೂರು: `ಜೈನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಶ್ರೀಮಂತಗೊಂಡಿದೆ. ಪಂಪನಿಂದ ಹಂಪನಾವರೆಗೆ ರಚನೆಗೊಂಡಿರುವ ಹಲವು ಶೇಷ್ಠ ಕೃತಿಗಳು ಕನ್ನಡ ಸಾಹಿತ್ಯದ ಒಂದು ಭಾಗವೇ ಆಗಿದೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಜೈನ ವಿಶ್ವವಿದ್ಯಾಲಯವು ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಕಲೆ, ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ಜೈನ ಧರ್ಮದ ಪ್ರಭಾವ~ ಕುರಿತ ಅಂತರರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

`ಅಲೌಕಿಕ ಅಂಶವನ್ನು ಕೃತಿಯಲ್ಲಿ ಸಮರ್ಪಕವಾಗಿ ವ್ಯಕ್ತಪಡಿಸದೇ ಹೋದರೆ ಕವಿಯು ಪೂರ್ಣಗೊಳ್ಳಲಾರ. ಲೌಕಿಕ ಮತ್ತು ಅಲೌಕಿಕ ಅಂಶಗಳ ನಡುವೆ ಅರ್ಥಪೂರ್ಣ ಸಮನ್ವಯ ಸಾಧಿಸಿದ ಜೈನಕವಿ ಪಂಪ ಎಲ್ಲಾ ಕವಿಗಳಿಗೂ ಮಾರ್ಗದರ್ಶಕ~ ಎಂದರು.

`ಜೈನ ಸಾಹಿತ್ಯದಲ್ಲಿರುವ ಭರತ, ಬಾಹುಬಲಿ, ಶಾಂತಲೆ ಎಲ್ಲಾ ಪಾತ್ರಗಳು ಸಾರ್ವಕಾಲಿಕ ಕಥೆಯನ್ನು ಹೇಳುತ್ತವೆ. ಈ ನಿಟ್ಟಿನಲ್ಲಿ ಜೈನ ಸಾಹಿತ್ಯದ ಪರಂಪರೆಯು ಶ್ರೀಮಂತವಾಗಿದೆ. ಕುಮಾರವ್ಯಾಸ ಕಾವ್ಯದಲ್ಲಿ ಭಕ್ತಿಪಂಥದ ಸಾರವಿದೆ. ಆದರೆ ಪಂಪ ಲೌಕಿಕದಲ್ಲಿದ್ದುಕೊಂಡೇ ಅಲೌಕಿಕ ತತ್ವಕ್ಕೆ ಸಲ್ಲುವಂತೆ ಕೃತಿಗಳನ್ನು ರಚಿಸಿರುವುದು ಆತನ ಹೆಚ್ಚುಗಾರಿಕೆ~ ಎಂದರು.

ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, `ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಜೈನ ಧರ್ಮದ ಅನುಯಾಯಿಗಳು ನೀಡಿರುವ ಕೊಡುಗೆ ಅಪಾರ. ಭರತ ಮತ್ತು ಬಾಹುಬಲಿಯ ಸಂಘರ್ಷವು ಅಹಂಕಾರ ಹಾಗೂ ಆತ್ಮಗಳ ನಡುವಿನ ಸಂಘರ್ಷವಾಗಿದ್ದು, ಜೈನ ಧರ್ಮವು ಅಹಂಕಾರದಿಂದ ಆತ್ಮದೆಡೆಗೆ ಸಾಗಲು ಇರುವ ದಾರಿದೀಪ~ ಎಂದರು.

ಜೈನ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಚೆನ್‌ರಾಜ್ ಜೈನ್, `ರಾಜಸ್ತಾನ್~ ಪತ್ರಿಕೆಯ ಸಂಪಾದಕ ಡಾ.ಗುಲಾಬ್ ಕೊತಾರಿ, ಹಿರೋಶಿಮಾ ವಿಶ್ವವಿದ್ಯಾಲಯದ ಪ್ರೊ.ಹಿಡೆಯೋ ಒಗವಾ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT