ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೂಡಿಬಂದ ‘ವಚನ ಸಾಹಿತ್ಯ’ ಮತ್ತು ‘ದಾಸ ಸಾಹಿತ್ಯ’ ಪ್ರಕಾರಗಳು ವೇದಜ್ಞಾನದ ಮುಂದುವರಿದ ಭಾಗಗಳು ಎಂಬ ಪ್ರತೀತಿ. ವೇದಗಳು ಜೀವನವನ್ನು ಆನಂದಮಯವಾಗಿ ಪರಿವರ್ತಿಸುವ ವಿಚಾರಧಾರೆಗಳು. ನಾವು ಸಮಾಜದಲ್ಲಿ ಚಿರ ಉತ್ಸಾಹದಿಂದ ಸಂತೋಷದಿಂದ ಬಾಳಬೇಕೆಂಬ ಗೊತ್ತು ಗುರಿಯನ್ನು ರೂಪಿಸಿದ ಜ್ಞಾನ ಭಾಗಗಳೇ ಈ ಭಕ್ತಿ ಪ್ರಾಕಾರಗಳಾದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಪದ್ಯಭಾಗಗಳು.

ಸಂಸ್ಕೃತದಲ್ಲಿದ್ದ ವ್ಯಾಸ ಸಾಹಿತ್ಯದ ಸಾರವನ್ನು ಕನ್ನಡಕ್ಕೆ ಪದ್ಯರೂಪದಲ್ಲಿ ತಂದ ಕೀರ್ತಿ ಹರಿದಾಸರಿಗೆ ಸಲ್ಲುತ್ತದೆ. ಶ್ರೀ ನರಹರಿ ತೀರ್ಥ ಶ್ರೀಗಳವರಿಂದ ಹರಿದು ಬಂದ ಈ ಕನ್ನಡ ದಾಸ ಸಾಹಿತ್ಯವು ಕನಕದಾಸ, ಪುರಂದರದಾಸರೇ ಮುಂತಾದ ದಾಸವರೇಣ್ಯರಿಂದ ಇನ್ನೂ ಬೆಳೆಯಿತು. ಶ್ರೀ ಪುರಂದರದಾಸರ ಕೃತಿಗಳು ‘ಪುರಂದರೋಪನಿಷತ್’ ಎಂಬ ಹೆಗ್ಗಳಿಕೆ ಪಡೆದವು.

ಕನ್ನಡ ಸಾಹಿತ್ಯದ ಸಮಗ್ರ ಚರಿತ್ರೆಯಲ್ಲಿ 12-15ರ ಶತಕದಲ್ಲಿ ಒಡಮೂಡಿದ ವಚನ ಸಾಹಿತ್ಯ ಮತ್ತು ದಾಸಸಾಹಿತ್ಯಗಳು ಕನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳೆನಿಸಿವೆ. ಹಳಗನ್ನಡವು ನಡುಗನ್ನಡವಾಗಿ ಮಾರ್ಪಟ್ಟು ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮ ಪಡೆಯಿತು. ಸಂಗೀತ ಮತ್ತು ಸಾಹಿತ್ಯದ ಸಾಮರಸ್ಯದಿಂದ ಮೆರೆದಿರುವ ‘ಹರಿದಾಸ ಸಾಹಿತ್ಯ’ವು ವಿಶ್ವ ಸಾಹಿತ್ಯಕ್ಕೆ ಕನ್ನಡನಾಡು ನೀಡಿದ ವಿಶೇಷ ಕೊಡುಗೆ. ‘ಹರಿದಾಸ ಸಾಹಿತ್ಯ’ ಎಂಬುದು ಹರಿಯ ಭಕ್ತರಿಂದ ರಚಿತವಾದ ಸಾಹಿತ್ಯ. ಈ ಸಾಹಿತ್ಯಕ್ಕೆ ಮೂಲ ಪ್ರೇರಣೆ ಭಕ್ತಿ. ಭಕ್ತಿಯ ಮೂಲಕ ಮುಕ್ತಿಯನ್ನು ಬಯಸುವ ಹರಿದಾಸರು ತಮ್ಮನ್ನು ತಮ್ಮ ಸುತ್ತಲಿನ ಸಮಾಜವನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು.

‘ಹರಿಯೇ ಸರ್ವೋತ್ತಮ’ ಎಲ್ಲವೂ ಹರಿಯ ಅಧೀನ. ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನ. ಜೀವಾತ್ಮ- ಪರಮಾತ್ಮ ಭಿನ್ನವಾದದ್ದು. ಜಗತ್ತು ಸತ್ಯವಾದದ್ದು ಎಂದು ಸಾರುವ ಮಧ್ವ ಸಿದ್ಧಾಂತವು ದಾಸಸಾಹಿತ್ಯಕ್ಕೆ ಪ್ರೇರಣೆಯಾಯಿತು. ಮಧ್ವಾಚಾರ್ಯರ ‘ದ್ವಾದಶಸ್ತ್ರೋತ್ರ’ದಿಂದ ದಾಸವಾಙ್ಮಯದ ಬೀಜಾರೋಪಣೆ ಆಯಿತೆನ್ನಬಹುದು. ಇವರ ಶಿಷ್ಯರಾದ ನರಹರಿತೀರ್ಥರಿಂದ ಕನ್ನಡದ ಹರಿದಾಸ ಪಂಥವು ತಲೆ ಎತ್ತಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT