ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಕನ್ನಡದ್ದೆ ವ್ಯಾಕರಣ ಇರಲಿ

ಪಂಪ ಪ್ರಶಸ್ತಿ ಪುರಸ್ಕಾರ ಡಾ.ಡಿ.ಎನ್.ಶಂಕರ ಭಟ್‌ ಅಭಿಮತ
Last Updated 18 ಡಿಸೆಂಬರ್ 2013, 6:53 IST
ಅಕ್ಷರ ಗಾತ್ರ

ಸಾಗರ: ಕನ್ನಡ ಭಾಷಾ ಬರಹವನ್ನು ಸಂಸ್ಕೃತದ ಪ್ರಭಾವಳಿಯಿಂದ ಸಾಧ್ಯವಾದಷ್ಟೂ ಮಟ್ಟಿಗೆ ಬಿಡಿಸಿ ಅದಕ್ಕೊಂದು ಸ್ವಂತಿಕೆಯ ನೆಲೆ ಕಲ್ಪಿಸುವ ದೃಷ್ಟಿಯಿಂದ ‘ಹೊಸ ಬರಹ’ ಎಂಬ ವಿಶಿಷ್ಟ ಪ್ರಯೋಗದಲ್ಲಿ ತೊಡಗಿರುವ ಭಾಷಾ ಶಾಸ್ತ್ರಜ್ಞ ಡಾ.ಡಿ.ಎನ್.ಶಂಕರ ಭಟ್‌ ಅವರಿಗೆ ಈ ಬಾರಿಯ ಪಂಪ ಪ್ರಶಸ್ತಿ ಪುರಸ್ಕಾರ ಲಭ್ಯವಾಗಿದೆ.

ಆಡು ಭಾಷೆ ಮತ್ತು ಬರಹದ ಭಾಷೆ ಸಂಪೂರ್ಣವಾಗಿ ಒಂದಾಗಲು ಸಾಧ್ಯವಿಲ್ಲದೆ ಇದ್ದರೂ ಅದು ಪರಸ್ಪರ ಹತ್ತಿರವಾಗಿರಬೇಕು. ಈ ಕಾರಣಕ್ಕೆ ಕನ್ನಡ ಲಿಪಿಯಲ್ಲಿನ 31 ಅಕ್ಷರಗಳ ಬಳಕೆ ಮಾತ್ರ ಬರಹಕ್ಕೆ ಸಾಕು ಎಂಬ ಪ್ರತಿಪಾದನೆ ಶಂಕರ ಭಟ್‌ ಅವರದ್ದು.

ಶಂಕರ ಭಟ್‌ ಅವರು ಸಂಶೋಧಿಸಿರುವ ‘ಹೊಸ ಬರಹ’ ಮಾದರಿಯ ಬರಹದಲ್ಲಿ ಶಂಕರ ಭಟ್ ಶಂಕರ ಬಟ್‌, ಅಜ್ಞಾನ ಅಜ್ನಾನ, ಮುಖ್ಯ ಮುಕ್ಯ, ಕ್ಲಿಷ್ಟತೆ ಕ್ಲಿಶ್ಟತೆ, ಸ್ಪಷ್ಟ ಸ್ಪಶ್ಟ ಆಗಿವೆ. ಈ ಮೂಲಕ ಕನ್ನಡ ಬರಹದಲ್ಲಿ ಹೊಸ ರೀತಿಯ ಲಿಪಿ ಕ್ರಾಂತಿಗೆ ಅವರು ಮುಂದಾಗಿದ್ದಾರೆ.

ಶಂಕರ ಭಟ್‌ ಅವರಿಗೆ ಪಂಪ ಪ್ರಶಸ್ತಿ ಪುರಸ್ಕಾರ ಪ್ರಕಟವಾದ ಹಿನ್ನಲೆಯಲ್ಲಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ಪಂಪ ಪ್ರಶಸ್ತಿ ನಿಮಗೆ ಸಂದಿದೆ. ಈ ವಿಷಯ ಗೊತ್ತಾದಾಗ ಯಾವ ಭಾವನೆ ಮೂಡಿತು?
ಹತ್ತು ದಿನಗಳ ಹಿಂದೆ ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನನ್ನ ಹೆಸರು ಇದೆ ಎಂದು ಗೊತ್ತಾಗಿತ್ತು. ಈ ದಿನ ಮಾಧ್ಯಮಗಳ ಮೂಲಕ ಪ್ರಶಸ್ತಿ ಘೋಷಣೆಯಾಗಿರುವುದು ತಿಳಿದು ಬಂತು. ನಾನು ಯಾವುದೇ ಪ್ರಶಸ್ತಿ ಅಥವಾ ಪುರಸ್ಕಾರಗಳನ್ನು ಬಯಸಿದವನಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತ ಬಂದಿದ್ದೇನೆ. ಕೆಲಸವನ್ನು ಗುರುತಿಸಿದ್ದಾರಲ್ಲ ಎನ್ನುವ ಸಮಾಧಾನವಿದೆ.

ಕನ್ನಡ ಭಾಷಾ ಬರವಣಿಗೆಯಲ್ಲಿ ಮಹಾಪ್ರಾಣದ ಬಳಕೆ ಅಗತ್ಯವಿಲ್ಲ ಎಂದು ನೀವು ಯಾಕೆ ಪ್ರತಿಪಾದಿಸುತ್ತಿದ್ದೀರಿ?
ಮಾತಿನಲ್ಲಿ ಇಲ್ಲದ ಮಹಾಪ್ರಾಣ ಬರಹಕ್ಕೂ ಅಗತ್ಯವಿಲ್ಲ. ಮಹಾಪ್ರಾಣದಿಂದಾಗಿ ಶಾಲೆಯಲ್ಲಿ ಮಕ್ಕಳು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ತಳ ಸಮುದಾಯದ ಮಕ್ಕಳು ಕೆಲವು ಉಚ್ಚಾರಣೆ ಮಾಡಲಾಗದೆ ಇಂದಿಗೂ ಶಿಕ್ಷಕರಿಂದ ಪೆಟ್ಟು ತಿನ್ನುತ್ತಿದ್ದಾರೆ. ಕೊನೆಗೆ ಶಾಲೆಯ ಸಹವಾಸವೇ ಬೇಡ ಎಂದು ದೂರ ಹೋಗುತ್ತಾರೆ. ಇದನ್ನು ತಪ್ಪಿಸಲು ನಾನು ಬರಹದಲ್ಲಿ ಮಹಾಪ್ರಾಣದ ಅಗತ್ಯವಿಲ್ಲ ಎಂದು ಹೇಳುತ್ತಿದ್ದೇನೆ.

ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿರುವ ನೀವು ಕನ್ನಡ ಬರವಣಿಗೆಯಲ್ಲಿ ಸಂಸ್ಕೃತದ ಬಳಕೆ ಇರಲೇಬಾರದು ಎಂದು ಹೇಳುತ್ತಿರುವುದು ಯಾಕೆ?
ನಾನು ಸಂಸ್ಕೃತ ದ್ವೇಷಿ ಅಲ್ಲ. ಆದರೆ ಕನ್ನಡ ಮಾತನಾಡುವಾಗ ಸಂಸ್ಕೃತವನ್ನು ಬಳಸದ ನಾವು ಬರಹದಲ್ಲಿ ಯಾಕೆ ಅದನ್ನು ಬಳಸಬೇಕು. ಇಷ್ಟಕ್ಕೂ ಸಾಹಿತ್ಯ ವಿಮರ್ಶೆ, ಪತ್ರಿಕಾ ಲೇಖನ, ವಿಜ್ಞಾನದ ಪಾರಿಭಾಷಿಕ ಪದಗಳಲ್ಲಿ ಮಾತ್ರ ಸಂಸ್ಕೃತವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಕನ್ನಡಕ್ಕೆ ಯಾವ ಪ್ರಯೋಜನವೂ ಆಗುತ್ತಿಲ್ಲ. ವಿಜ್ಞಾನದ ಪಾರಿಭಾಷಿಕ ಶಬ್ದಗಳಲ್ಲಿ ಸಂಸ್ಕೃತ ಬಳಸುವುದರಿಂದ ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳ ಕಂಠಪಾಠ ಮಾಡುತ್ತಾರೆ ವಿನಾ ವಿಷಯದ ಆಳಕ್ಕೆ ಇಳಿಯುವುದಿಲ್ಲ. ಹೀಗಾಗದೆ ಇರಲು ಕನ್ನಡದ್ದೆ ಪದಗಳ ಅವಶ್ಯಕತೆ ಇದೆ.

ಕನ್ನಡ ವ್ಯಾಕರಣ ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು ಎಂದು ಕೂಡ ಹೇಳಿದ್ದೀರಿ, ಅದು ಹೇಗೆ?
ಹೌದು. ಈಗ ನಾವು ಕನ್ನಡ ವ್ಯಾಕರಣದ ಹೆಸರಿನಲ್ಲಿ ನಮ್ಮ ಮಕ್ಕಳಿಗೆ ಸಂಸ್ಕೃತದ ವ್ಯಾಕರಣವನ್ನು ಕಲಿಸುತ್ತಿದ್ದೇವೆ. ಅದನ್ನು ಬಿಟ್ಟು ಕನ್ನಡಕ್ಕೆ ಕನ್ನಡದ್ದೆ ಆದ ವ್ಯಾಕರಣ ಇದೆ. ಅದನ್ನು ಕಲಿಸಬೇಕು ಎಂದು ಬಯಸುವವ ನಾನು.

ನೀವು ಪ್ರಯೋಗಿಸುತ್ತಿರುವ ‘ಹೊಸ ಬರಹ’ ಬಳಕೆಗೆ ಬರುತ್ತಿಲ್ಲ ಎನ್ನುವ ಬಗ್ಗೆ ನಿಮಗೆ ವಿಷಾದವಿದೆಯೇ?
ಹಾಗೇನಿಲ್ಲ. ಹಾಗೆ ಬಳಕೆಗೆ ಬರಲು ಸಮಯ ಬೇಕಾಗುತ್ತದೆ. ಆರಂಭದಲ್ಲಿ ಎಲ್ಲಾ ಹೊಸ ಸಂಗತಿಗಳು ಬಳಕೆಗೆ ಬರುವುದು ಕಷ್ಟ ಎನ್ನುವ ಭಾವನೆಯೇ ಇರುತ್ತದೆ. ನಂತರ ಅದೇ ರೂಢಿಯಾಗುತ್ತದೆ. ಹೊಸ ಬರಹದ ವಿಷಯದಲ್ಲೂ ಹಾಗೆ ಆಗುತ್ತದೆ ಎನ್ನುವ ನಂಬಿಕೆ ನನಗೆ ಇದೆ.

ಸಾಹಿತ್ಯ ಸಮ್ಮೇಳನದಂತಹ ಪ್ರಮುಖ ಸಂದರ್ಭಗಳಲ್ಲೂ ನಿಮ್ಮ ಸಂಶೋಧನೆ ಅಥವಾ ಪ್ರಯೋಗಗಳ ಪ್ರಸ್ತುತತೆ ಕುರಿತು ಚರ್ಚೆ ಆಗುತ್ತಿಲ್ಲವಲ್ಲ?
ಈ ಬಗ್ಗೆ ನನಗೆ ಬೇಸರವೇನೂ ಇಲ್ಲ. ಸಮ್ಮೇಳನ, ಸಭೆ ಸಮಾರಂಭಗಳ ಗದ್ದಲದಿಂದ ನಾನು ಯಾವತ್ತೂ ದೂರ. ಈ ಕಾರಣಕ್ಕಾಗಿಯೇ ಮಲೇನಾಡಿನ ಹಳ್ಳಿಯ ಪ್ರಶಾಂತ ವಾತಾವರಣವನ್ನು ಹುಡುಕಿಕೊಂಡು ಬಂದು ಇಲ್ಲಿಯೆ ನೆಲೆಸಿದ್ದೇನೆ.

ಹಂಪಿಯ ಕನ್ನಡ ವಿ.ವಿ. ನಾಡೋಜ ಪುರಸ್ಕಾರ ನೀಡಿದಾಗ ನೀವು ಹಂಪಿಗೆ ಹೋಗಿರಲಿಲ್ಲ. ವಿಶ್ಯವಿದ್ಯಾಲಯದವರೇ ಹೆಗ್ಗೋಡಿಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ಪಂಪ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಹೋಗುತ್ತೀರಾ?
ಈ ಬಗ್ಗೆ ಏನೂ ತೀರ್ಮಾನ ಮಾಡಿಲ್ಲ. ನೋಡೋಣ ಏನಾಗತ್ತೆ ಅಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT