ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ದಕ್ಕಿದ `ಗಾಂಧಿ'

ಚಿತ್ರ: ಕೂರ್ಮಾವತಾರ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕ: ಬಸಂತ್‌ಕುಮಾರ್ ಪಾಟೀಲ್, ನಿರ್ದೇಶಕ: ಗಿರೀಶ್ ಕಾಸರವಳ್ಳಿ, ತಾರಾಗಣ: ಡಾ.ಶಿಕಾರಿಪುರ ಕೃಷ್ಣಮೂರ್ತಿ, ಅಪೂರ್ವ ಕಾಸರವಳ್ಳಿ, ಚಸ್ವಾ, ಜಯಂತಿ ಮತ್ತಿತರರು.

ಚಿತ್ರರಂಗ ಗಾಂಧೀಜಿಯನ್ನು ನೋಡುವ ಹಲವು ಯತ್ನಗಳನ್ನು ಮಾಡಿದೆ. ಅಟೆನ್‌ಬರೋ ಚಿತ್ರಿಸಿದ `ಗಾಂಧೀ' ಇಂಗ್ಲಿಷ್ ಚಿತ್ರ ಮಹಾತ್ಮನ ಬದುಕಿನ ಪುಟಗಳನ್ನು ತೋರಿ, ವರ್ಷಗಟ್ಟಲೆ ಅದೇ ಗಾಂಧಿ ಕುರಿತ ಮಾದರಿ ಸಿನಿಮಾ ಎಂಬಂಥ ಭಾವನೆಯನ್ನು ಅನೇಕರಲ್ಲಿ ಹುಟ್ಟುಹಾಕಿತ್ತು. `ಲಗೇ ರಹೋ ಮುನ್ನಾಭಾಯಿ' ಹಿಂದಿ ಚಿತ್ರದಲ್ಲಿ ರೌಡಿಯೊಬ್ಬನ ಮೇಲೆ ಗಾಂಧೀ ತತ್ತ್ವಗಳನ್ನು ಹರಿಬಿಟ್ಟು, ವಾಚ್ಯವಾದರೂ ಅಪರೂಪ ಎನ್ನಬಹುದಾದ ಸನ್ನಿವೇಶಗಳನ್ನು ತೋರಿಸಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಗೆದ್ದಿದ್ದರು.

ಗಿರೀಶ್ ಕಾಸರವಳ್ಳಿ ಆ ಮಾದರಿಗಳಿಗೆ ಸಂಪೂರ್ಣವಾಗಿ ಹೊರತಾದ ರೀತಿಯಲ್ಲಿ ಗಾಂಧೀ ತತ್ತ್ವಗಳನ್ನು ತೆರೆಗೆ ತಂದಿದ್ದಾರೆ. ಈ ಕಾಲದ ಚೌಕಟ್ಟಿನೊಳಗೆ ಆ ತತ್ತ್ವಗಳನ್ನಿಟ್ಟು ನೋಡುತ್ತಲೇ, ಆಗೀಗ ವ್ಯಂಗ್ಯದ ಕಿಟಕಿಗಳನ್ನು ತೆರೆದು ಇನ್ನೇನನ್ನೋ ಹೇಳುವ ಅವರ ಉಮೇದು ಬೆರಗು ಮೂಡಿಸುತ್ತದೆ.

`ಕೂರ್ಮಾವತಾರ' ಕುಂ. ವೀರಭದ್ರಪ್ಪನವರ ಕತೆ ಆಧರಿಸಿದ್ದು. ಯಥಾಪ್ರಕಾರ ಕತೆಯ ಆತ್ಮ ಇಟ್ಟುಕೊಂಡು, ಭಿತ್ತಿಯನ್ನು ತಮ್ಮತನದ ಆಕಾರಕ್ಕೆ ಒಗ್ಗಿಸಿ ಕಾಸರವಳ್ಳಿ ಚಿತ್ರಕತೆ ಹೆಣೆದಿದ್ದಾರೆ.

ನಿವೃತ್ತಿಯ ಅಂಚಿನಲ್ಲಿರುವ ನಿಸ್ಪೃಹ ಸರ್ಕಾರಿ ನೌಕರರೊಬ್ಬರನ್ನು ಧಾರಾವಾಹಿಯಲ್ಲಿ ಗಾಂಧಿ ಪಾತ್ರ ಮಾಡುವ ಅವಕಾಶ ಹುಡುಕಿಕೊಂಡು ಬರುತ್ತದೆ. ಅಭಿನಯದ ಗಂಧ ಗಾಳಿಯೇ ಇಲ್ಲದ ಆ ವ್ಯಕ್ತಿ ಅದುವರೆಗೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದುಬಿಟ್ಟಿದ್ದವರು. ಗಾಂಧಿ ಪಾತ್ರ ಒಪ್ಪಿಕೊಳ್ಳುವುದು ಅವರಿಗೆ ಅನಿವಾರ್ಯವಾಗುತ್ತದೆ.

ಪಾತ್ರಕ್ಕೆ ನ್ಯಾಯ ಒದಗಿಸಬೇಕೆಂಬ ಹೆಣಗಾಟದಲ್ಲಿ ಅವರು ಗಾಂಧಿಯನ್ನು ಓದಿಕೊಳ್ಳುತ್ತಾರೆ. ಆಗ ದಾಟಿಕೊಳ್ಳುವ ಮೌಲ್ಯಗಳು ತಮ್ಮ ಹಳೆಯ ಬದುಕನ್ನು ಪುನರ್‌ವಿಮರ್ಶಗೆ ಒಡ್ಡುವಂತೆ ಮಾಡುತ್ತವೆ. ಗಾಂಧಿ ಕುರಿತ ಅವರ ಜ್ಞಾನದ ಪರಿಧಿ ಹಿಗ್ಗುತ್ತಾ ಹೋದಂತೆ ಧಾರಾವಾಹಿಯ ನಿರ್ದೇಶಕರಲ್ಲಿ ತಾತ್ವಿಕ ಪ್ರಶ್ನೆಗಳನ್ನು ಎತ್ತತೊಡಗುತ್ತಾರೆ. ಆ ನಿರ್ದೇಶಕರಿಗೆ ಬೇಕಿರುವುದು ಟಿ.ಆರ್.ಪಿ. ರೇಟಿಂಗ್ ಏರಿಸುವ ಗಾಂಧಿಯಷ್ಟೆ. ಅವರು ಮಾಡುವ ಗಾಂಧಿ ಪಾತ್ರ ಕಾಣುವ ಸಮಾಜ ಅವರನ್ನು ಎಂತೆಂಥ ಕೆಲಸಕ್ಕೆ ಬಳಸಿಕೊಳ್ಳುತ್ತದೆ ಎಂಬುದು ಸಹಜವೂ ವ್ಯಂಗ್ಯವೂ ಗಮನಾರ್ಹವೂ ಆದದ್ದು.

ಎಂಥ ಸಾಮಾನ್ಯನನ್ನೂ ಗಾಂಧೀ ತತ್ತ್ವಗಳು ಕಾಡುತ್ತವೆ ಎಂಬ `ಜಾಗತಿಕ ಸತ್ಯ'ವನ್ನು ಗಿರೀಶರು ಚಿತ್ರಿಕೆಗಳಾಗಿಸಿರುವ ರೀತಿಯಲ್ಲಿಯೇ ಕುಸುರಿತನವಿದೆ. ಕುಟುಂಬ ವ್ಯವಸ್ಥೆಯಲ್ಲಿನ ಸ್ವಾರ್ಥ, ನಟಿಯ ಬಗೆಗೆ ಗಾಂಧೀ ಪಾತ್ರಧಾರಿಯಲ್ಲಿ ಹುಟ್ಟುವ ಪ್ರೇಮ, ದಾರಿ ತಪ್ಪಿದ ಮಗನ ವಿಷಯದಲ್ಲಿ ಹುಟ್ಟುವ ಬೇಸರ, ಆಪ್ತರೊಬ್ಬರಿಗೆ ಪಾತ್ರ ಕೊಡಿಸುವುದಾಗಿ ಮಾಡಿದ ವಾಗ್ದಾನ ಈಡೇರಿಸಿಕೊಳ್ಳಲಾಗದ ಸಂದಿಗ್ಧ ಇವೆಲ್ಲ ಭಾವಗಳು ಸಾಮಾನ್ಯನಲ್ಲೇ ಮೂಡುವಂಥವು. ಆದರೆ ಆ ಭಾವಜಗತ್ತಿನಲ್ಲಿ ಗಾಂಧೀ ತತ್ತ್ವಗಳ ಚುಚ್ಚುಮದ್ದೂ ಬೆರೆತಿದೆ. ಇಲ್ಲಿ ಪಾತ್ರ ತಾನೇ ಗಾಂಧಿ ಆಗುವ ಪ್ರಕ್ರಿಯೆ ಏನೂ ಇಲ್ಲ, ಗಾಂಧಿ ಆ ಪಾತ್ರವನ್ನು ಬಹುವಾಗಿ ಕಾಡುತ್ತದೆ.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳವಳಿಯ ಸದ್ದು ಇದ್ದ ಸಂದರ್ಭದಲ್ಲಿ, ಎರಡು ವರ್ಷಗಳ ಹಿಂದೆ ಕಾಸರವಳ್ಳಿ ಈ ಚಿತ್ರಿಕೆಗಳನ್ನು ಮೂಡಿಸಿದ್ದರು. ಆ ಕಾಲಘಟ್ಟದ ವ್ಯಂಗ್ಯಸೂಕ್ಷ್ಮವನ್ನು ಚಿತ್ರ ಕಾಣಿಸುತ್ತದೆ. ಹಾಗಾಗಿ ಚಿತ್ರದ ಬಿಡುಗಡೆ ಹೆಚ್ಚೇ ತಡವಾಗಿ ಆಗಿದೆ ಎನ್ನಬೇಕು.

ಮುಖ್ಯಪಾತ್ರದಲ್ಲಿ ಡಾ.ಶಿಕಾರಿಪುರ ಕೃಷ್ಣಮೂರ್ತಿ ಅವರದ್ದು ಸಹಜ ಅಭಿನಯ. ಧಾರಾವಾಹಿ ನಿರ್ದೇಶಕರ ಪಾತ್ರದಲ್ಲಿ ಅಪೂರ್ವ ಕಾಸರವಳ್ಳಿ ಅವರಿಗೂ ಹೆಚ್ಚು ಅಂಕಗಳು ಸಲ್ಲುತ್ತವೆ. ಚಸ್ವಾ, ಜಯಂತಿ ಅವರದ್ದೂ ಹದವರಿತ ಅಭಿನಯ. ನೆರಳು, ಬೆಳಕಿನ ಆಟದಲ್ಲಿ ಜಿ.ಕೆ. ಭಾಸ್ಕರ್ ಮೂಡಿಸಿರುವ ಚಿತ್ರಿಕೆಗಳಂತೂ ದೀರ್ಘ ಕಾಲ ಕಾಡುತ್ತವೆ.

ಚಿತ್ರ ಸಾಗುವ ವೇಗದ ದೃಷ್ಟಿಯಿಂದಲೂ ಗಿರೀಶ ಕಾಸರವಳ್ಳಿಯವರು ಇಲ್ಲಿ ಹೊಸತನಕ್ಕೆ ಒಡ್ಡಿಕೊಂಡಿದ್ದಾರೆಂಬುದು ಸ್ಪಷ್ಟ. ಮನಸ್ಸಿನಲ್ಲಿ ಉಳಿಯುವ ಈ ಪರಿಯ ಗಾಂಧಿಯನ್ನು `ಇವ ನಮ್ಮವ' ಎಂದು ಹೆಮ್ಮೆಯಿಂದ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT