ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಧಕ್ಕೆ ತಂದರೆ ತಕ್ಕ ಶಾಸ್ತಿ: ಸಿ.ಎಂ

ಕಿತ್ತಳೆ ನಾಡು ಕೊಡಗಿನಲ್ಲಿ ಕನ್ನಡದ ಕಹಳೆ...
Last Updated 7 ಜನವರಿ 2014, 20:32 IST
ಅಕ್ಷರ ಗಾತ್ರ

ಭಾರತೀಸುತ ವೇದಿಕೆ (ಮಡಿಕೇರಿ): ‘ಕನ್ನಡದ ಭಾವನೆಗೆ ಯಾರೇ ಧಕ್ಕೆ ತಂದರೂ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಇಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಮಾತನಾಡಿದ ಎಂಇಎಸ್‌ ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ ಎಂದರು.

‘ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇದಕ್ಕೆ ಸರ್ಕಾರ ಕಟಿಬದ್ಧ­ವಾಗಿದೆ. ಇಂಗ್ಲಿಷ್‌ನಲ್ಲಿ ಬರೆದ ಕಡತಗಳನ್ನು ನಾನು ವಾಪಸು ಕಳುಹಿಸುತ್ತಿದ್ದೇನೆ. ಕನ್ನಡ ಮಾಧ್ಯಮ­ದಲ್ಲಿಯೇ ಶಿಕ್ಷಣ ಇರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.

ಶಾಸ್ತ್ರೀಯ ಭಾಷೆ ಮನ್ನಣೆ ಪಡೆದಿರುವ ಕನ್ನಡದ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡಲಾಗಿದೆ. ಆದರೆ, ಇದು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ದೂರು ಇದೆ. ಸಂಬಂಧಿಸಿದವರು ಜವಾಬ್ದಾರಿಯಿಂದ ಈ ಹಣವನ್ನು ವಿನಿಯೋಗಿಸಬೇಕು. ಕರ್ತವ್ಯಲೋಪ ಕಂಡು ಬಂದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ. ಕನ್ನಡ–ಕನ್ನಡಿಗ–ಕರ್ನಾಟಕಕ್ಕೆ ಸಂಬಂಧಿ­ಸಿದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

‘ಇತ್ತೀಚೆಗೆ ಕೊಡಗಿನಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಇದೆ ಎಂದು ನಾನು ನಂಬಿದ್ದೇನೆ. ಸಮಸ್ಯೆಗಳಿದ್ದರೆ ಜೊತೆ­ಯಲ್ಲಿ ಕುಳಿತು ಪರಿಹರಿಸಿ­ಕೊಳ್ಳುವ. ಅನ್ಯ ಮಾರ್ಗ ತುಳಿಯುವುದು ಬೇಡ’ ಎಂದು ಮನವಿ ಮಾಡಿಕೊಂಡರು.
ಸಾಹಿತಿಗಳಿಗೆ ಬುದ್ಧಿವಾದ: ‘ಸಾಹಿತಿಗಳು ಸಾಮಾಜಿಕ ಬದ್ಧತೆ­ಯಿಂದ ಹೊರತಾಗಿಲ್ಲ. ಉಳಿದೆಲ್ಲಾ ನಾಗರಿಕರಂತೆ ಸಾಹಿತಿಗಳಿಗೂ ಈ ಜವಾಬ್ದಾರಿ ಇದೆ. ಸಮಾಜ ಸುಧಾರಣೆಯ ಕೆಲಸವನ್ನು ರಾಜಕಾರಣಿ­ಗಳಿಗೆ ಬಿಟ್ಟು ನಾವು ಹೊರಗೆ ನಿಂತು ಟೀಕೆ ಟಿಪ್ಪಣೆ ಮಾಡುತ್ತಿರುತ್ತೇವೆ ಎನ್ನುವ ಧೋರಣೆ ಸರಿಯಲ್ಲ’ ಎಂದರು.

‘ಸಾಹಿತ್ಯ ಸಮಾರಂಭಗಳಲ್ಲಿ ರಾಜ­ಕಾರಣಿ­ಗಳ ಪಾತ್ರ ಗೌಣ. ಇಲ್ಲಿ ಸಾಹಿತಿಗಳೇ ಪ್ರಧಾನ ಪಾತ್ರಧಾರಿಗಳು. ನಮ್ಮದು ಪೋಷಕ ಪಾತ್ರ

ಅಷ್ಟೆ. ನಾನು ಮುಖ್ಯಮಂತ್ರಿಯಾದ ತಕ್ಷಣ ಮಠ ಮಂದಿರಗಳಿಗೆ ಹೋಗಲಿಲ್ಲ. ಸಾಹಿತಿಗಳ ಮನೆಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಂಡಿದ್ದೇನೆ. ಅವರ ಚಿಂತನೆ­ಗಳಿಂದ ಪ್ರಭಾವಿತನಾಗಿದ್ದೇನೆ. ಇದೇ ಉದ್ದೇಶದಿಂದಲೇ ರಾಜಕಾರಣಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿ­ಸುತ್ತಾರೆ’ ಎಂದರು.

ನಿಘಂಟು ರಚನೆಗೆ ನೆರವು: ಬೃಹತ್‌ ನಿಘಂಟುಗಳ ಮುದ್ರಣಕ್ಕಾಗಿ ಒಂದು ಕೋಟಿ ರೂಪಾಯಿ ನೀಡಲಾಗಿದೆ. ನಿಘಂಟು ಕಚೇರಿಯನ್ನು ಪುನರಾರಂಭಿಸಬೇಕಾಗಿದೆ. ನಿಘಂಟು ರಚನೆ ಒಮ್ಮೆ ಆಗಿ ಮುಗಿಯುವ ಕೆಲಸವಲ್ಲ. ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

‘ಸಮ್ಮೇಳನಗಳು ಜಾತ್ರೆಯಂತೆ ನಡೆಯಬೇಕೋ ಇಲ್ಲವೇ ಕೇವಲ ಸಾಹಿತಿಗಳಷ್ಟೇ ಸೇರಿಕೊಂಡು ಸಾಹಿತ್ಯದ ಗಂಭೀರ ಚರ್ಚೆ ನಡೆಸಬೇಕೋ ಎಂಬ ಜಿಜ್ಞಾಸೆ ಇದೆ. ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ ಸಾಹಿತ್ಯ ಮತ್ತು ಸಂಸ್ಕೃತಿಯ ಸಂವೇದನೆಗಳಿಗೆ ನೆರವಾಗು­ವುದಷ್ಟೇ ಸರ್ಕಾರದ ಕೆಲಸವಾಗಿದೆ’ ಎಂದರು.

ಸಾಹಿತ್ಯ–ಸಾಂಸ್ಕೃತಿಕ ಸಂವರ್ಧನೆಗೆ ರಾಜ್ಯ ಬಜೆಟ್‌ನಲ್ಲಿ ₨ 250 ಕೋಟಿ ನೀಡಲಾಗಿದೆ. ದೇಶದ ಬೇರೆ ಯಾವುದೇ ಸರ್ಕಾರ ಇಷ್ಟೊಂದು ಹಣ ನೀಡಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಿಗೂ ನೆರವು ನೀಡುವು­ದನ್ನು ಮುಂದುವರಿಸ­ಲಾಗುವುದು. ಆಧುನಿಕ ಅಗತ್ಯಕ್ಕೆ ಅನುಗುಣವಾಗಿ ವಿಕಿಪೀಡಿಯಾ ಮಾದರಿಯಲ್ಲಿ ‘ಕನ್ನಡ ಕಣಜ’ ಎಂಬ ಜ್ಞಾನ ಕೋಶಕ್ಕೆ ಚಾಲನೆ ನೀಡಲಾಗಿದೆ. ಜ್ಞಾನಪೀಠ ಪುರಸ್ಕೃತರ ಕೃತಿಗಳ ಭಾಷಾಂತರಕ್ಕೆ ನೆರವು ನೀಡಲಾಗಿದೆ ಎಂದರು.

ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊ­ಳ್ಳುವ ನಿರ್ಣಯಗಳನ್ನು ಪರಿಶೀಲಿಸಿ ಅನುಷ್ಠಾನಕ್ಕೆ ತರಲಾಗುವುದು. ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿ­ವಿಧಾನಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಶ್ರಮಿಸಲಿದೆ. ಕನ್ನಡದ ಅಭಿವೃದ್ಧಿಗೆ ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಅವುಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರೇಕ್ಷಕರೊಬ್ಬರು ಮೂಢನಂಬಿಕೆ ಕಾಯ್ದೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ‘ಮೂಢ ನಂಬಿಕೆ ಕಾಯ್ದೆ ಬಗ್ಗೆ ರಾಜ್ಯದ ಎಲ್ಲೆಡೆ ಚರ್ಚೆ ನಡೆಯಲಿ. ಯಾವುದು ಮೂಢ ನಂಬಿಕೆ ಮತ್ತು ಯಾವುದು ನಂಬಿಕೆ ಎನ್ನುವುದು ಖಚಿತವಾದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಪದ್ಯದಿಂದ ಆರಂಭ, ಪದ್ಯದಿಂದ ಮುಕ್ತಾಯ!

ಮುಖ್ಯಮಂತ್ರಿ ಅವರು ತಮ್ಮ ಭಾಷಣವನ್ನು ಪಂಜೆ ಮಂಗೇಶರಾಯರ ಕವಿತೆಯಿಂದಲೇ ಆರಂಭಿಸಿದರು. ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ, ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಲ್ಲಿ ನಿಂದಳೋ’ ಎಂಬ ಪದ್ಯವನ್ನು ಹೇಳುತ್ತಲೇ ಭಾಷಣಕ್ಕೆ ಮುನ್ನುಡಿ ಬರೆದ ಸಿದ್ದರಾಮಯ್ಯ ,‘ನಿನ್ನದೇ ನೆಲ ನಿನ್ನದೇ ಜಲ, ನಿನ್ನದೇ ಆಕಾಶ ಕಿಂಚಿತ್ತೂ ಅನುಮಾನಕೆ ಇಲ್ಲವೋ ಅವಕಾಶ’ ಎಂದು ಹೇಳಿ ಮಾತು ಮುಗಿಸಿದರು.

ಪರಿಷತ್‌ ಅಧ್ಯಕ್ಷರು ಅವಸರದಲ್ಲಿದ್ದಾರೆ!
1915ರ ಮೇ 5ರಂದು ಆರಂಭವಾದ ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ ಆಚರಿಸಿಕೊಳ್ಳಲು ಇನ್ನೂ ಒಂದೂವರೆ ವರ್ಷದ ಕಾಲ ಇದೆ. ಆದರೆ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಯಾಕೋ ಅವಸರದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆಗ ಎದ್ದು ನಿಂತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಒಂದು ವರ್ಷ ಪೂರ್ತಿ ಶತಮಾನೋತ್ಸವ ಆಚರಿಸಬೇಕಾಗಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ‘ಪರಿಷತ್‌ ಅಧ್ಯಕ್ಷರು ಸಂಯಮ ವಹಿಸಬೇಕು. ಇಲ್ಲಿ ವೈಯಕ್ತಿಕವಾದುದು ಏನೂ ಇಲ್ಲ. ಇದು ಶಂಕುಸ್ಥಾಪನೆ ಅಥವಾ ಉದ್ಘಾಟನಾ ಫಲಕದ ಮೇಲೆ ಹೆಸರು ಹಾಕಿಸಿ ಬಿಡುವ ಅವಸರದ ಕಾರ್ಯಕ್ರಮ ಅಲ್ಲ. ನಾಡು ನುಡಿಯ ಗೌರವಕ್ಕೆ ಧಕ್ಕೆ ಬರದಂತೆ ಅರ್ಥ­ಪೂರ್ಣವಾಗಿ ಎಲ್ಲರೂ ಸೇರಿ ಆಚರಿಸೋಣ’ ಎಂದರು.

ಶತಮಾನೋತ್ಸವ ಸಮಾರಂಭಕ್ಕೆ ಅನುದಾನ ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಿಯಾ ಯೋಜನೆಯನ್ನು ಸಲ್ಲಿಸಿದೆ. ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸು­ತ್ತದೆ, ಇದನ್ನು ವಿವಾದವನ್ನಾಗಿ ಮಾಡಿ ಮನಸ್ಸು ಕಹಿ ಮಾಡಿಕೊಳ್ಳುವುದು ಬೇಡ ಎಂದು  ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT