ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಉಳಿವಿಗೆ ಓಡಾಟ-ಹೋರಾಟ!

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಕನ್ನಡಿಗರ ಭಾಷಾಭಿಮಾನದ ಶೂನ್ಯತೆಯಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲೆದೋರಿದೆ. ಎಲ್ಲೆಡೆ ಇಂಗ್ಲಿಷ್ ಭಾಷೆಯದ್ದೇ ಮೇಲುಗೈ.  ಪರಿಸ್ಥಿತಿ ಹೀಗೆ ಆಗಲು ಬಿಟ್ಟರೆ ಕನ್ನಡಕ್ಕೆ ಉಳಿಗಾಲವಿಲ್ಲ ಎಂದುಕೊಂಡಿರುವ ಈ ವ್ಯಕ್ತಿಯೇ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಪಿ.ಬಸವನಗೌಡ ಕೂಡ ಒಬ್ಬರು.

ಕನ್ನಡ ಭಾಷೆ, ಪ್ರೇಮ ಬೆಳೆಸಲು ಟೊಂಕಕಟ್ಟಿ ನಿಂತಿರುವ ಬಸವನಗೌಡ, ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿರಸ್ಥಹಳ್ಳಿಯವರು. ಬಿಎ, ಬಿಎಡ್ ಮುಗಿಸಿದ್ದಾರೆ.  ಪತ್ರಿಕೆಯಲ್ಲಿ, ಶಾಲೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದರು. ಇದ್ಯಾವುದೂ ಕೈ ಹಿಡಿಯಲಿಲ್ಲ. ಆಗ ಹೊಳೆದಿದ್ದು  ಶಾಲೆಗಳಿಗೆ ಹೋಗಿ ಕನ್ನಡ ಪುಸ್ತಕಗಳನ್ನು ಮಾರಿದರೆ ಹೇಗೆ ಎಂಬ ಯೋಚನೆ. ಆಲೋಚನೆ ಬಂದಿದ್ದೇ ತಡ.

ಶಿಕ್ಷಕರು, ಸ್ನೇಹಿತರ ಮಾರ್ಗದರ್ಶನ ಸಲಹೆ ಪಡೆದು ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ  ರಸಪ್ರಶ್ನೆ ಮಾದರಿಯ ವಿಜ್ಞಾನ, ಸಮಾಜ, ಸಾಹಿತ್ಯ, ಗಣಿತ, ಇಂಗ್ಲಿಷ್ ಪ್ರಶ್ನೋತ್ತರ ಪುಸ್ತಕವನ್ನು ಸಿದ್ಧಗೊಳಿಸಿದರು.  ತಮ್ಮದೇ `ಜ್ಯೋತಿ ಪ್ರಕಾಶನ'ದಲ್ಲಿ  ಪುಸ್ತಕಗಳನ್ನು ಹೊರ ತಂದಿದ್ದೂ ಆಯಿತು. ಬೈಕ್‌ನಲ್ಲಿ ಕ್ವಿಜ್ ಪುಸ್ತಕಗಳನ್ನು ಹೇರಿಕೊಂಡು ಹಳ್ಳಿ ಹಳ್ಳಿಗಳ ಕನ್ನಡ ಶಾಲೆಗಳ ಭೇಟಿ ನೀಡಿ ಅವುಗಳನ್ನು ಮಾರಲು ಹೊರಟು ನಿಂತರು. ಅವರ ಈ ಕನ್ನಡ ಕಾಯಕಕ್ಕೆ ಈಗ ನಾಲ್ಕು ವರ್ಷ. ಕುಗ್ರಾಮವಾಗಿರಲಿ, ರಾಜ್ಯದ ಗಡಿ ಪ್ರದೇಶದ ಕನ್ನಡ ಶಾಲೆಯಾಗಿರಲಿ ಅಲ್ಲಿಗೆ ತೆರಳಿ  ಕನ್ನಡ ಪ್ರೇಮ, ಜ್ಞಾನದ ದೀವಿಗೆಯನ್ನು ಬೆಳಗಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಕಮ್ಮಿ ಬೆಲೆಗೆ ಮಾರಾಟ
`ನಮ್ಮ ಹಳ್ಳಿಯ ವಿದ್ಯಾರ್ಥಿಗಳು ನಗರ, ಪಟ್ಟಣದ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ. ಅವರಲ್ಲಿ ಓದಿನ ದಾಹ ಹೆಚ್ಚಬೇಕು. ಸಾಮಾನ್ಯ ಜ್ಞಾನ ವೃದ್ಧಿಯಾಗಬೇಕು. ಅದಕ್ಕಾಗಿ ಐದು ರೂಪಾಯಿ ಮುಖ  ಬೆಲೆಯ ನನ್ನ ಪುಸ್ತಕಗಳನ್ನು ಹಳ್ಳಿಯ ವಿದ್ಯಾರ್ಥಿಗಳಿಗೆ ಕೇವಲ 2 ರೂಪಾಯಿಗೆ ಮಾರುತ್ತೇನೆ. ಪ್ರತಿಭಾವಂತರಿದ್ದರೆ ಉಚಿತವಾಗಿ ಕೊಡುತ್ತೇನೆ' ಎನ್ನುತ್ತಾರೆ ಬಸವನಗೌಡ. ಹೀಗೆ ಒಮ್ಮೆ ಮನೆ ಬಿಟ್ಟರೆಂದರೆ ತಿಂಗಳಾದರೂ ಮನೆ ಕಡೆ ತಿರುಗಿಯೂ ನೋಡುವುದಿಲ್ಲ. ಬಳ್ಳಾರಿ, ರಾಯಚೂರು, ಗುಲ್ಬರ್ಗ, ಬೀದರ್, ವಿಜಾಪುರ, ಬೆಳಗಾವಿ, ಧಾರವಾಡ ಜಿಲ್ಲೆಗಳ ಪ್ರತಿ ಗ್ರಾಮಗಳಲ್ಲಿನ ಕನ್ನಡ ಶಾಲೆಯ ಕದತಟ್ಟಿ ಪುಸ್ತಕ ಮಾರಿದ್ದಾರೆ.

ಇವರ ಕನ್ನಡದ ಮೇಲಿನ ಪ್ರೇಮವೇ ಒಮ್ಮೆ ಇವರಿಗೆ ಕಹಿ ಅನುಭವವನ್ನೂ ನೀಡಿದೆ. ಅವರೇ ಹೇಳುವಂತೆ `ಒಮ್ಮೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಇಟಗಿ ಗ್ರಾಮದ ಕನ್ನಡ ಶಾಲೆಯಲ್ಲಿ ಪುಸ್ತಕವನ್ನು ಮಾರುತ್ತಿದ್ದಾಗ ಇದ್ದಕ್ಕಿದಂತೆ ನನ್ನ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಹಲ್ಲೆ ಮಾಡಿದರು.  ಪುಸ್ತಕಗಳನ್ನು ಹರಿದುಹಾಕಿದರು. ಇದರಿಂದ ನಾನೇನು ಧೃತಿಗೆಡಲಿಲ್ಲ. ಹೆದರಿ ಊರಿಗೆ ಬರಲಿಲ್ಲ. ಅಲ್ಲಿನ ಕನ್ನಡಿಗರು ನನ್ನ ಬೆಂಬಲಕ್ಕೆ ಬಂದರು. ಅದೇ ಊರಿನಲ್ಲಿ ಪುನಃ ಪುಸ್ತಕಗಳನ್ನು ಮಾರಿದೆ' ಎಂದು ಬಸವನಗೌಡ ಎದೆಯುಬ್ಬಿಸಿ ಹೇಳುತ್ತಾರೆ.

`ಪುಸ್ತಕ ಮಾರಲು ಹೋದಾಗ, ನಮ್ಮನ್ನು ಯಾರೂ ಮನೆಗೆ ಕರೆಯುವುದಿಲ್ಲ. ಲಾಡ್ಜ್‌ನಲ್ಲಿರುವಷ್ಟು ಆದಾಯವಿಲ್ಲ. ಕತ್ತಲಾದರೆ ದೇವಸ್ಥಾನ, ಶಾಲೆ, ಹಾಸ್ಟಲ್‌ನಲ್ಲಿ  ಮಲಗಿ ಮುಂದಿನ ಊರಿನ ಶಾಲೆಗೆ ಪ್ರಯಾಣ ಮಾಡುತ್ತೇನೆ. ಕನ್ನಡಾಂಬೆ ಕೃಪೆಯಿಂದ ಎಲ್ಲಿಯೂ ಕೆಟ್ಟದ್ದಾಗಿಲ್ಲ' ಎನ್ನುವುದೂ ಅವರ ಮಾತು.

`ಪುಸ್ತಕ ಮಾರಾಟದಿಂದ ಲಾಭವೇನೂ ಆಗಿಲ್ಲ. ಕೊಟ್ಟೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಸಂಸಾರ ಕುಂಟುತ್ತಾ ಸಾಗಿದೆ.  ಕನ್ನಡ ಭಾಷೆ ಬೆಳೆಯಬೇಕು. ಹಳ್ಳಿಯ ಮಕ್ಕಳು ಶಿಕ್ಷಣವಂತರಾಗಬೇಕು'  ಎಂಬುದೇ ನನ್ನ ಅದಮ್ಯ ಬಯಕೆ' ಎನ್ನುವ ಬಸವನಗೌಡ ಅವರಿಗೆ ಈಗ ಜೀವನ ನಡೆಸುವುದೇ ಕಷ್ಟವಾಗಿದೆ.  ಒಂದು ಹೆಣ್ಣು, ಒಂದು ಗಂಡು ಮಗುವಿದೆ. ಯಾರಾದರೂ ದಾನಿಗಳು ಇಲ್ಲವೆ  ಶಿಕ್ಷಣ ಸಂಸ್ಥೆಯವರು ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಮುಂದಾದರೆ, ಜೀವನಪೂರ್ತಿ ರಾಜ್ಯ ಸುತ್ತಿ  ಕನ್ನಡ ಪುಸ್ತಕ ಮಾರಿ ಭಾಷೆಯನ್ನು ಬೆಳಸಬೇಕು ಎಂಬ ಆಸೆ ಅವರದ್ದು.

ಶಿಕ್ಷಕರ ಸಹಕಾರ ಬೇಡುವ ಇವರು,  `ನಾಲ್ಕು ವರ್ಷಗಳಿಂದ ನಿತ್ಯ ಬೈಕ್‌ನಲ್ಲಿ ಪ್ರಯಾಣ ಮಾಡಿದ್ದೇನೆ. ದಾನಿಗಳು ಸಣ್ಣದೊಂದು ಕಾರು, ಜೀಪ್ ಕೊಡಿಸಿದರೆ ಕನ್ನಡ ಭಾಷಾ, ಪ್ರೇಮ ಬೆಳಸಲು ಅನುಕೂಲವಾಗುತ್ತದೆ' ಎಂಬ ವಿನಂತಿ ಮುಂದಿಡುತ್ತಾರೆ.
`ಪತಿ ತಿಂಗಳುಗಟ್ಟಲೆ ಊರಿಗೆ ಬರುವುದಿಲ್ಲ. ಇಬ್ಬರು ಮಕ್ಕಳೊಂದಿಗೆ ನಾನು ಮನೆಯಲ್ಲಿರಬೇಕು. ಆಗ ತುಸು ಆತಂಕವಾಗುತ್ತದೆ.

ಅದು ಬಿಟ್ಟರೆ ಹಳ್ಳಿ ಹಳ್ಳಿ ತಿರುಗಿ ಗಡಿ ಮತ್ತು ಹಳ್ಳಿಯ ವಿದ್ಯಾರ್ಥಿಗಳಿಗೆ ಕನ್ನಡ ಪ್ರೇಮ, ಜ್ಞಾನ ಬೆಳಸುತ್ತಿದ್ದಾರೆ ಎನ್ನುವುದು ನನಗೆ ಸಂತೋಷ. ಮಕ್ಕಳು ದೊಡ್ಡವರಾದ ಮೇಲೆ ಹೇಗೆ ಎಂಬ ಚಿಂತೆ ಕಾಡುತ್ತಿದೆ' ಎನ್ನುತ್ತಾರೆ ಬಸವನಗೌಡರ ಪತ್ನಿ ಮಂಜುಳ.
ಪಿ. ಬಸವನಗೌಡ ಅವರ ಕನ್ನಡ ಭಾಷಾಭಿಮಾನಕ್ಕೆ ಪ್ರೋತ್ಸಾಹಿಸುವವರು. ಬೆಂಬಲಿಸುವವರು. ಸಹಕಾರ ನೀಡುವವರು ದೂರವಾಣಿ: 9902873143 ಇಲ್ಲಿ ಸಂಪರ್ಕಿಸಬಹುದು..
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT