ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಬೆಳ್ಳಿತೆರೆಗೆ ‘ಸುವರ್ಣ’ ಚೌಕಟ್ಟು

Last Updated 10 ಡಿಸೆಂಬರ್ 2013, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸುಂದರನಾಥ ಸುವರ್ಣ ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಛಾಯಾ­ಗ್ರಾಹಕ. ಕನ್ನಡ ಬೆಳ್ಳಿತೆರೆಗೆ ತಮ್ಮ ಹೆಸರಿನಲ್ಲಿರುವ ಚಿನ್ನದ ಬಣ್ಣದ ಸುಂದರ ಚೌಕಟ್ಟೊಂದನ್ನು ಹಾಕಿದ ಅವರು ಚಿತ್ರರಂಗ­ದಲ್ಲಿ ಸವೆಸಿದ ಸಿನಿಮಾ ಹಾದಿ ದೀರ್ಘ­ವಾದದ್ದು. ಅದು ದಕ್ಷಿಣ ಕನ್ನಡದ ಬಡಹುಡುಗ ಕನ್ನಡ ಬೆಳ್ಳಿತೆರೆಗೆ ಜೀವಂತ ಮಾಯದ ಬಿಂಬ­ಗಳನ್ನು ಕೊಟ್ಟಿದ್ದರ ಯಶೋಗಾಥೆಯೂ ಹೌದು.

ಚಿಕ್ಕಂದಿನಲ್ಲೇ ಕ್ಯಾಮೆರಾದ ಬಗ್ಗೆ ಅಪಾರ ಮೋಹವನ್ನು, ಛಾಯಾಗ್ರಹಣ­ದಲ್ಲಿ ಅದಮ್ಯ­ವಾದ ದಾಹವನ್ನು ಬೆಳೆಸಿಕೊಂಡ ಸುವರ್ಣ ಮೊದಲು ಕಲಿತದ್ದು ಸ್ಥಿರಛಾಯಾಗ್ರಹಣವನ್ನು. ‘ಸ್ಥಿರ ಛಾಯಾ­ಗ್ರಹಣವನ್ನು ಚಿಕ್ಕಂದಿ­ನಲ್ಲೇ ಆಸಕ್ತಿಯಿಂದ ಕಲಿತೆ. ಚಿಕ್ಕಂದಿನಲ್ಲಿ ಅಪ್ಪನೊಂದಿಗೆ ನೇಗಿಲು ಹಿಡಿದು ಉಳುಮೆ­­ಯನ್ನೂ ಮಾಡುತ್ತಿದ್ದೆ. ನೇಗಿಲು ಹಿಡಿದ ಕೈ, ಕ್ಯಾಮೆರಾ ಹಿಡಿದು ಅದೇ ಆಸಕ್ತಿಯಿಂದ ಕೆಲಸ ಮಾಡಿದ್ದೇ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಉಳಿ­ಯಲು ಕಾರಣ’ ಎಂದು ಅವರು ಒಮ್ಮೆ ಹೇಳಿ­ಕೊಂಡಿದ್ದರು.

ಈ ಕ್ಯಾಮೆರಾ ಮೇಲಿನ ಪ್ರೀತಿ ಅವರಲ್ಲಿ ಬೆಳೆದದ್ದು ಅವರ ಊರಾದ ಮಂಗಳೂರಿನಲ್ಲಿ. ಬೆಳಕಿ­ನಲ್ಲಿ ಮೂಡುವ ಬಿಂಬಗಳನ್ನು ಸೆರೆಹಿಡಿಯುವ ಈ ಕೆಲಸವೇ ಮುಂದೆ ಅವರ ಕನಸುಗಳಿಗೆ, ಅನ್ನಕ್ಕೆ ಕೂಡ ದಾರಿ ಮಾಡಿಕೊಟ್ಟಿತು.

ಸುಂದರನಾಥ್‌ ಸುವರ್ಣ ಇನ್ನಿಲ್ಲ
ಮಂಗಳೂರು:
ಸುಂದರ ಛಾಯಾಗ್ರಹಣ ಮೂಲಕ ನಾಡಿನ ಜನರ ಹೃದಯ ಗೆದ್ದ ಖ್ಯಾತ ಸಿನಿಮಾ ಛಾಯಾಗ್ರಾಹಕ ಹಾಗೂ ನಿರ್ದೇಶಕ ಸುಂದರ­ನಾಥ ಸುವರ್ಣ (61) ಮಂಗಳವಾರ ಮುಂಜಾನೆ ಬೆಂಗ­ಳೂರಿನ ಹನುಮಂತ­ನಗರದಲ್ಲಿ­ರುವ ತಮ್ಮ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ರಾತ್ರಿ ಇಲ್ಲಿನ ಬೋಳೂರಿನ ಚಿತಾಗಾರ­ದಲ್ಲಿ ಅಂತ್ಯಸಂಸ್ಕಾರ ನೆರವೇರಿಸ­ಲಾಯಿತು. ಅವರಿಗೆ ತಾಯಿ ಪದ್ಮಾವತಿ, ಪತ್ನಿ ಹರಿಣಾಕ್ಷಿ, ಪುತ್ರಿಯರಾದ ಅಮೃತಾ, ಅಕ್ಷತಾ, ಸತ್ಯಾ, ಆರು ಮಂದಿ ಸಹೋದರರು, ಮೂವರು ಸಹೋದರಿ­ಯರು ಇದ್ದಾರೆ.

   ಕನ್ನಡ, ಹಿಂದಿ, ತೆಲುಗು, ತುಳು ಸಹಿತ ಸುಮಾರು 164 ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಸುವರ್ಣ ಅವರು, ಆರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಶ್ರೇಷ್ಠ ಸಿನಿಮಾ ರಾಜ್ಯ ಪ್ರಶಸ್ತಿ, ಬೆಳ್ಳಿಹೆಜ್ಜೆ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ­ಗಳಿಗೆ ಅವರು ಪಾತ್ರ­ರಾಗಿ­ದ್ದಾರೆ.

ಕಾರ್ಯಕ್ಷೇತ್ರ ಬೆಂಗಳೂರು ಆಗಿ­ದ್ದರೂ, ಹುಟ್ಟೂ­ರಿನ ಜತೆಗೆ ಗಾಢ ಸಂಬಂಧ ಇಟ್ಟು­­ಕೊಂಡಿ­­ದ್ದರು. ಮಂಗ­ಳೂರಿನಲ್ಲೇ ಅವರು ಮೊದ­ಲಿಗೆ ಸ್ಟುಡಿಯೊ ಒಂದನ್ನು ಇಟ್ಟುಕೊಂಡು ತಮ್ಮ ವೃತ್ತಿ­ಜೀವನ ಆರಂಭಿಸಿ, ಬಳಿಕ ಬೆಂಗಳೂರಿಗೆ ತೆರಳಿದ್ದರು. ಮಂಗಳೂರು ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ತೀಯಾ ಸಮಾಜದ ಪ್ರಮುಖ­ರಾಗಿದ್ದರು.

ಬಲ್ಲಾಳ್‌ಬಾಗ್‌ನಲ್ಲಿನ ಕುಟುಂಬದ ಮನೆಗೆ ಮಂಗಳವಾರ ಸಂಜೆ ಪಾರ್ಥಿವ ಶರೀರವನ್ನು ತಂದಾಗ ನೂರಾರು ಮಂದಿ ಅಶ್ರುತರ್ಪಣ ಸಲ್ಲಿಸಿದರು.

ಸುವರ್ಣ ಅವರು ಸಹಾಯಕರಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ಕಲ್ಯಾಣಿ’. ‘ಅಪರೂಪದ ಅತಿಥಿಗಳು’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ಛಾಯಾಗ್ರಾಹಕ­ರಾದರು. ನಿರ್ದೇಶಕ ಪ್ರಭಾ­ಕರ್‌ ಅವರ ‘ಬಂಧಮುಕ್ತ’ಕ್ಕೆ ಛಾಯಾಗ್ರಾಹಕ­ರಾಗಿ ಮಾಡಿದ ಕೆಲಸ ಒಳ್ಳೆಯ ಹೆಸರನ್ನು ತಂದು­ಕೊಟ್ಟಿದ್ದ­ಲ್ಲದೆ, ಅವರಿಗೆ ಸಾಕಷ್ಟು ಅವಕಾಶಗಳನ್ನೂ ಒದಗಿಸಿತು.

ಸುವರ್ಣ ಜೊತೆಗಿದ್ದರೆ ಸಿನಿಮಾ ನಿರ್ದೇಶಕರಿಗೆ, ನಿರ್ಮಾಪಕರಿಗೆ ಹೆಚ್ಚಿನ ಭರವಸೆ.

ನಿರ್ದೇ­ಶಕ­ರಿಗೆ ತಮ್ಮ ಕಲ್ಪನೆಯ ಸಿನಿಮಾ­ವನ್ನು ಬೆಳ್ಳಿ­ತೆರೆಯ ಮೇಲೆ ಸರಿಯಾಗಿ ಮೂಡಿ­ಸು­ತ್ತಾರೆ ಎಂಬ ಭಾವನೆಯಿದ್ದರೆ, ನಿರ್ಮಾಪಕ­ರಿಗೆ ನೆಗೆಟಿವ್‌ ಕಡಿಮೆ ಬಳಸುತ್ತಾರೆ ಎಂಬ ನಂಬಿಕೆ. ಈ ನಂಬಿಕೆ­ಯನ್ನು ಸಿನಿಮಾ ಒಂದರ ಸೀಮಿತ ಬಜೆಟ್‌­­ನಲ್ಲೂ ಉಳಿಸಿ­­ಕೊಂಡು ಉತ್ತಮ ಸಿನಿಮಾ ಒಂದನ್ನು ಪ್ರೇಕ್ಷಕರಿಗೆ ಕೊಡುವ ವೃತ್ತಿಪರತೆ ಸುವರ್ಣ ಅವರಿಗೆ ಇತ್ತು.

ಸುವರ್ಣ 164 ಸಿನಿಮಾಗಳಿಗೆ ಛಾಯಾ­ಗ್ರಹಣ ಮಾಡಿದ್ದಾರೆ. ‘ನಮ್ಮೂರ ಮಂದಾರ ಹೂವೇ’, ‘ಅನುಭವ’, ‘ರಾಜಕೀಯ’, ಅನುರಾಗ ಸಂಗಮ’, ‘ಅಗ್ನಿಪರ್ವ’, ‘ಮಹಾನದಿ’, ‘ಅಂಜದಿರು’, ‘ಆಪರೇಷನ್ ಅಂತ’, ‘ಲಾಕಪ್ ಡೆತ್’, ‘ಗೋಲಿ­ಬಾರ್’ ಅವರು ಛಾಯಾಗ್ರಹಣ ಮಾಡಿದ ಕೆಲವು ಸಿನಿಮಾಗಳು. ‘ಅಗ್ನಿಪರ್ವ’, ‘ಕಿಲಾಡಿ ತಾತ’, ‘ನೀ ನನ್ನ ದೈವ’, ‘ಟೈಗರ್ ಗಂಗು’ ಸಿನಿಮಾಗಳನ್ನು ನಿರ್ದೇಶಿಸಿ­ದ್ದಾರೆ. ‘ಆರಂಭ’ ಎಂಬ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿ­ಸಿದ್ದರು. ‘ಹಳ್ಳಿಯಾದರೇನು ಶಿವ’ ಅವರು ನಿರ್ಮಿಸಿದ ಇನ್ನೊಂದು ಸಿನಿಮಾ. ಇವುಗಳಲ್ಲಿ ‘ನಮ್ಮೂರ ಮಂದಾರ ಹೂವೇ’ ರೀತಿಯ ಸಿನಿಮಾಗಳು ಅವರ ಕಸುಬುದಾರಿಕೆ, ಕೌಶಲ್ಯ, ಪ್ರತಿಭೆ, ವೃತ್ತಿಪರತೆಯನ್ನು ತೋರುವಂಥವುಗಳಾಗಿವೆ.

ಅವರ ಮೆಚ್ಚಿನ ಛಾಯಾಗ್ರಾಹಕ ಕನ್ನಡಿಗರಾದ ವಿ.ಕೆ.ಮೂರ್ತಿ. ಅವರ ಕಲಾತ್ಮಕತೆ, ವೃತ್ತಿಪರತೆ ಸುವರ್ಣ ಅವರಲ್ಲೂ ಇತ್ತು. ದ್ವಿಪಾತ್ರದ ಸಿನಿಮಾ­ಗಳನ್ನು ತೆಗೆಯುವುದರಲ್ಲಿ ಅವರನ್ನು ಮೀರಿಸುವ ಛಾಯಾ­ಗ್ರಾಹಕರು ಇರಲಿಲ್ಲ. ಅದಕ್ಕೆ ಬೇಕಾದ ಸೂಕ್ಷ್ಮತೆ, ತಾಳ್ಮೆ, ರಾಜಿಯಾಗದ ಮನೋಭಾವ, ಪ್ರತಿಭೆ ಅವರಿಗಿತ್ತು.

ಸಾಹಿತಿಗಳ ಜತೆಗೂ ನಿಕಟ ಸಂಬಂಧ: ಅವರು ಕೇವಲ ಸಿನಿಮಾದ ರಂಗಿನ ಲೋಕಕ್ಕೆ ಸೀಮಿತ­ರಾದವರಲ್ಲ. ಲೇಖಕರಾದ ಪಿ.ಲಂಕೇಶ್‌, ಕೆ.ಪಿ. ಪೂರ್ಣಚಂದ್ರ­ತೇಜಸ್ವಿ, ಚಂದ್ರಶೇಖರ ಕಂಬಾರ, ಶ್ರೀಕೃಷ್ಣ ಆಲನಹಳ್ಳಿ ಅವರೊಂದಿಗೆ, ಅವರ ಸಾಹಿತ್ಯದೊಂದಿಗೆ ನಿಕಟ ಸಂಬಂಧವಿತ್ತು.

ಚಂದ್ರಶೇಖರ ಕಂಬಾರರು ಸಿನಿಮಾ ಮಾಧ್ಯಮಕ್ಕೆ ಕೈಹಾಕಬೇಕು ಎಂದುಕೊಂಡಾಗ ಅವರ ನೆರವಿಗೆ ನಿಂತಿದ್ದು ಇದೇ ಸುವರ್ಣ. ಕಂಬಾರರು ಅವರ ಗುರು, ಮಾರ್ಗದರ್ಶಿ. ‘ಉಡುಗೊರೆ’ ಎಂಬ ಸಿನಿಮಾಕ್ಕೆ ಕಂಬಾರರು ಸಂಗೀತ ನೀಡಿ ಹಾಡುಗಳನ್ನೂ ಬರೆ­ದಿದ್ದರು.

ಅದರ ಬಳಿಕ ಅವರು ತಮ್ಮ ಮೊದಲ ಸಿನಿಮಾ ‘ಕರಿಮಾಯಿ’ಯನ್ನು ನಿರ್ದೇಶಿಸಿದ್ದರು. ಆದರೆ, ನಾನು ಛಾಯಾಗ್ರಹಣ ಮಾಡಿದ ಕಪ್ಪು ಬಿಳುಪಿನ ‘ಕರಿಮಾಯಿ’ ಬೆಳ್ಳಿತೆರೆಗೆ ಬರಲೇ ಇಲ್ಲ. ಚಿತ್ರೀಕರಣ ಮಾತ್ರ ಆಗಿತ್ತು’ ಎಂದು ಸುವರ್ಣ ಚಿತ್ರರಂಗದಲ್ಲಿ ಕಂಬಾರರ ಸಿನಿಮಾಪ್ರಯತ್ನದ ಬಗ್ಗೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ­ದಲ್ಲಿ ನೆನಪಿಸಿಕೊಂಡಿದ್ದರು. ಬಳಿಕ ಕಂಬಾರರ ಇನ್ನು ಕೆಲವು ಸಿನಿಮಾ ಪ್ರಯತ್ನ­ಗಳಿಗೂ ಅವರು ಕ್ಯಾಮೆರಾದ ಸಾಥ್‌ ಕೊಟ್ಟಿದ್ದುಂಟು.

ಅವರ ಸಿನಿಮಾ ಕನಸುಗಳಲ್ಲಿ ತೇಜಸ್ವಿ ಅವರ ಕಥೆ ‘ಕೃಷ್ಣೇಗೌಡನ ಆನೆ’ಯನ್ನು ಸಿನಿಮಾ ಮಾಡಬೇಕು ಎಂಬುದಾಗಿತ್ತು. ತೇಜಸ್ವಿಗೆ ಯಾರೋ ‘ಸುವರ್ಣ ನಿಮ್ಮ ಕಥೆಯನ್ನು ಕಲಾತ್ಮಕ ಸಿನಿಮಾ ಮಾಡಿ ಜನ ನೋಡದಂತೆ ಮಾಡುತ್ತಾರೆ’ ಎಂದು ಹೇಳಿದ ಪರಿಣಾಮವಾಗಿ ತೇಜಸ್ವಿ ಅವರಿಂದ ಆ ಕಥೆಯನ್ನು ಸಿನಿಮಾ ಮಾಡಲು ಅವರಿಗೆ ಅನುಮತಿ ಸಿಕ್ಕಿರಲಿಲ್ಲ.

ತಾವಾಯಿತು ತಮ್ಮ ಛಾಯಾಗ್ರಹಣ­ವಾಯಿತು ಎನ್ನುವಂತಿದ್ದ ಸುವರ್ಣ ಅವರಿಗೆ ‘ಕಳ್ಳರಸಂತೆ’ ಸಿನಿಮಾದ ಛಾಯಾಗ್ರಹಣಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ (2009-–10) ಹಾಗೂ ರಾಜ್ಯೋತ್ಸವ ಪ್ರಶಸ್ತಿ (2013) ಅವರ ಕೊನೆಯ ಕಾಲದಲ್ಲಿ ಬಂದವು. ಇಂಥ ವಿಳಂಬಕ್ಕೆ ಯಾವುದನ್ನೂ ಕೇಳಿ ಪಡೆಯದ ಅವರ ಗುಣವೇ ಕಾರಣವಾಗಿತ್ತು.

ಕ್ಯಾಮೆರಾ ಕೋನ, ಚೌಕಟ್ಟನ್ನೇ ಅರಿಯದ ಕೆಲವು ನಿರ್ದೇಶಕರ ಸಿನಿಮಾಗಳ ಹಿಂದೆ ಅವುಗಳ ಛಾಯಾಗ್ರಾಹಕರಾಗಿದ್ದ ಸುವರ್ಣ ಅವರ ಪರಿಶ್ರಮ ತುಂಬಾ ಇತ್ತು. ಕಪ್ಪು ಬಿಳುಪಿನಿಂದ ಬಣ್ಣದ ಸಿನಿಮಾಗಳಿಗೆ, ಕಲಾತ್ಮಕ ಸಿನಿಮಾಗಳಿಂದ ಹಿಡಿದು ವ್ಯಾಪಾರಿ ಸಿನಿಮಾಗಳವರೆಗೆ ಛಾಯಾಗ್ರಹಣ ಮಾಡಿದ ಅಪರೂಪದ ಅನುಭವ ಅವರದ್ದಾಗಿತ್ತು.

ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕ್ಯಾಮೆರಾದ ಹಿಂದೆಯೇ ಕಣ್ಣುನೆಟ್ಟು ನಿಂತು ಸಿನಿಮಾರಂಗದಲ್ಲಿ ದುಡಿದ ಅವರು ಹೆಚ್ಚಿನ ಹಣವನ್ನೇನೂ ಕಾಣಲಿಲ್ಲ. ಅವರು ಬೆಳ್ಳಿತೆರೆಯ ಮೇಲೆ ಮೂಡಿಸಿದ ಸುವರ್ಣರೇಖೆಗಳೇ ಕನ್ನಡ ಪ್ರೇಕ್ಷಕರಿಗೆ ಅವರು ಬಿಟ್ಟುಹೋದ ಬಹುದೊಡ್ಡ ಕೊಡುಗೆಯಾಗಿದೆ.

ಸುಂದರನಾಥ್‌ ಸುವರ್ಣ ಇನ್ನಿಲ್ಲ
ಮಂಗಳೂರು:
ಸುಂದರ ಛಾಯಾಗ್ರಹಣ ಮೂಲಕ ನಾಡಿನ ಜನರ ಹೃದಯ ಗೆದ್ದ ಖ್ಯಾತ ಸಿನಿಮಾ ಛಾಯಾಗ್ರಾಹಕ ಹಾಗೂ ನಿರ್ದೇಶಕ ಸುಂದರ­ನಾಥ ಸುವರ್ಣ (61) ಮಂಗಳವಾರ ಮುಂಜಾನೆ ಬೆಂಗ­ಳೂರಿನ ಹನುಮಂತ­ನಗರದಲ್ಲಿ­ರುವ ತಮ್ಮ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ರಾತ್ರಿ ಇಲ್ಲಿನ ಬೋಳೂರಿನ ಚಿತಾಗಾರ­ದಲ್ಲಿ ಅಂತ್ಯಸಂಸ್ಕಾರ ನೆರವೇರಿಸ­ಲಾಯಿತು. ಅವರಿಗೆ ತಾಯಿ ಪದ್ಮಾವತಿ, ಪತ್ನಿ ಹರಿಣಾಕ್ಷಿ, ಪುತ್ರಿಯರಾದ ಅಮೃತಾ, ಅಕ್ಷತಾ, ಸತ್ಯಾ, ಆರು ಮಂದಿ ಸಹೋದರರು, ಮೂವರು ಸಹೋದರಿ­ಯರು ಇದ್ದಾರೆ.

   ಕನ್ನಡ, ಹಿಂದಿ, ತೆಲುಗು, ತುಳು ಸಹಿತ ಸುಮಾರು 164 ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಸುವರ್ಣ ಅವರು, ಆರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಶ್ರೇಷ್ಠ ಸಿನಿಮಾ ರಾಜ್ಯ ಪ್ರಶಸ್ತಿ, ಬೆಳ್ಳಿಹೆಜ್ಜೆ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ­ಗಳಿಗೆ ಅವರು ಪಾತ್ರ­ರಾಗಿ­ದ್ದಾರೆ.

ಕಾರ್ಯಕ್ಷೇತ್ರ ಬೆಂಗಳೂರು ಆಗಿ­ದ್ದರೂ, ಹುಟ್ಟೂ­ರಿನ ಜತೆಗೆ ಗಾಢ ಸಂಬಂಧ ಇಟ್ಟು­­ಕೊಂಡಿ­­ದ್ದರು. ಮಂಗ­ಳೂರಿನಲ್ಲೇ ಅವರು ಮೊದ­ಲಿಗೆ ಸ್ಟುಡಿಯೊ ಒಂದನ್ನು ಇಟ್ಟುಕೊಂಡು ತಮ್ಮ ವೃತ್ತಿ­ಜೀವನ ಆರಂಭಿಸಿ, ಬಳಿಕ ಬೆಂಗಳೂರಿಗೆ ತೆರಳಿದ್ದರು. ಮಂಗಳೂರು ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ತೀಯಾ ಸಮಾಜದ ಪ್ರಮುಖ­ರಾಗಿದ್ದರು.

ಬಲ್ಲಾಳ್‌ಬಾಗ್‌ನಲ್ಲಿನ ಕುಟುಂಬದ ಮನೆಗೆ ಮಂಗಳವಾರ ಸಂಜೆ ಪಾರ್ಥಿವ ಶರೀರವನ್ನು ತಂದಾಗ ನೂರಾರು ಮಂದಿ ಅಶ್ರುತರ್ಪಣ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT