ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಸ್ವಾಮಿ ಶಾಂತಲಿಂಗ ಶ್ರೀ

Last Updated 4 ಆಗಸ್ಟ್ 2013, 8:31 IST
ಅಕ್ಷರ ಗಾತ್ರ

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ವಯಸ್ಸಿನಲ್ಲಿ ಕಿರಿಯರಾದರೂ ಕಾರ್ಯವಿಧಾನದಿಂದ, ಅನುಭವದಿಂದ ಮಾಗಿದ ಹಿರಿಯರು.

ಶ್ರೀಗಳ ಸರಳತೆ, ಸಜ್ಜನಿಕೆ, ಶಿವಾಚಾರ, ನಡೆ-ನುಡಿ, ವಿನಯಶೀಲತೆ, ಒಳ್ಳೆಯದನ್ನು ಮಾಡುವ, ಮಾಡಿಸುವ ಗುಣ, ಎಲ್ಲರಿಗೂ ಲೇಸನ್ನೆ ಬಯಸುವ ಬಗೆ, ಇದು ಅಲ್ಲದೇ ಅವರ ಭಾಷೆ, ಶೈಲಿ, ನಿರೂಪಣೆ, ಆಶೀರ್ವಚನ, ಬದುಕು, ಆದರ್ಶ, ಜೀವನದ ಸಾಧನೆ ಅವೆಲ್ಲ ತಪೋಮಯ ಶೈಲಿಯಿಂದ ಕೂಡಿವೆ. `ಗಗನಂ ಗಗನಸದೃಶಂ ಸಾಗರೊ ಸಾಗರಸದೃಶಂ' ಎಂಬಂತೆ ಅವರಿಗೆ ಅವರೇ ಸಾಟಿ ಅವರೊಂದು ನಿರಂತರವಾಗಿ ಹರಿಯುವ ಸಲಿಲ.

ನರಗುಂದದಿಂದ ಬಾಗಲಕೋಟೆಗೆ ಸಾಗುವ ಹೆದ್ದಾರಿಯ ಮೇಲೆ 13 ಕಿ.ಮೀ ಅಂತರದಲ್ಲಿರುವ ಭೈರನಹಟ್ಟಿಯು ಗ್ರಾಮೀಣ ಸೊಗಡನ್ನು ಇರಿಸಿಕೊಂಡ ಊರು. ಊರಿಗೆ ದೇವದೂತರಂತೆ ಶಿಕ್ಷಕರಾಗಿ ಬಂದು ಪಾಠ ಮಾಡಿದವರು ರಾಷ್ಟ್ರಪತಿ ಪುರಸ್ಕೃತ ಶಿಕ್ಷಕ ವಿಠ್ಠಲ ಠಾಣೆಯವರು. ಊರಿನ ವಿರಕ್ತಮಠದ ಶ್ರೀಗಳು ಜನರ ಪ್ರೀತಿ, ವಿಶ್ವಾಸ, ಭಕ್ತಿಯನ್ನು ಬಿತ್ತಿ ಬೆಳೆಯುವ ಅವರು, ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಭ್ರಾಂತಿಯ ಬೇರನ್ನು ಅಗಿಯುವ ಆಧ್ಯಾತ್ಮ ಕೃಷಿಕರೂ ಆಗಿದ್ದಾರೆ. ಅವರ ಮನ ಕನ್ನಡ, ನುಡಿ ಕನ್ನಡ, ಭಾಷೆ ಕನ್ನಡ, ಭಾವ ಕನ್ನಡ, ಉಸಿರು ಕನ್ನಡ, ಕಾವ್ಯ ಕನ್ನಡ, ಉಸಿರು ಕನ್ನಡ ಅವರು ಕನ್ನಡದ ಸ್ವಾಮಿ ಎಂದೇ ಚಿರಪರಿಚಿತರು.
ಶ್ರೀಗಳ ಮೊದಲಿನ ಹೆಸರು ಗುರುಪುತ್ರಯ್ಯ ಸ್ವಾಮಿ ದೊರೆಸ್ವಾಮಿಮಠ. ಜನನ ಫೆ. 5, 1976. ತಂದೆ ಭದ್ರಯ್ಯ, ತಾಯಿ ಅಕ್ಕಮಹಾದೇವಿ. ಶ್ರೀಗಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಚಾಮರಸ ಕವಿಯ ಆಡುಂಬೊಲವಾದ ಕೋಟುಮಚಗಿಯಲ್ಲಿ ಪಡೆದರು.

1996ರಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಅಧಿಕಾರವನ್ನು ಪಡೆದ ಮೇಲೆ ಅಲ್ಲಿ ಹೊಳೆಯುವ ಬೆಳಕು, ಸುಳಿಯುವ ಗಾಳಿ, ಪಠಿಸುವ ವಚನ-ಮಂತ್ರಗಳು ಬೇರೆಯೇ ಆದವು.

ತೋಂಟದ ಜಗದ್ಗುರುಗಳು ಕನ್ನಡದ ಜಗದ್ಗುರು ಎಂದು ಕೀರ್ತಿ ಪಡೆದರೆ, ಶಾಂತಲಿಂಗ ಶ್ರೀಗಳು ಕನ್ನಡದ ಸ್ವಾಮಿ ಎಂದು ಹೆಸರು ಪಡೆದರು. ಇವರಿಬ್ಬರು ತಮ್ಮ ಜೀವನವನ್ನು ಪಳಗಿಸಿಕೊಂಡದ್ದು ಸಿಂದಗಿಯ ಶಾಂತವೀರ ಸ್ವಾಮೀಜಿಯವರ ಗರಡಿಯಲ್ಲಿ. ಕಷ್ಟ ಕಾಲದಲ್ಲಿದ್ದವರಿಗೆ, ಸಹಾಯಕ್ಕೆ ಬಂದ ಶ್ರೀಗಳು ಬರಗಾಲದ ದಿನಗಳಲ್ಲಿ ಭೈರನಹಟ್ಟಿಯಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳ ರಕ್ಷಣೆ ಮಾಡಿದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ವಿವಿಧ ಮಠಗಳ ಶ್ರೀಗಳ ನೇತೃತ್ವದಲ್ಲಿ ಭಕ್ತ ಮಂಡಳಿಯೊಂದಿಗೆ ಭೈರನಹಟ್ಟಿ ಮಠದಿಂದ ನರಗುಂದದ ತಹಶೀಲ್ದಾರ್ ಕಚೇರಿಯವರೆಗೆ 13 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದರು.

ಒಂದು ಮಹಾಕಾವ್ಯದ ನಾಯಕನಿಗೆ ಇರುವ ಜನ ಮನ್ನಣೆ, ಸಮೂಹ ಮನ್ನಣೆ ಇವರಿಗಿದೆ. ಅವರಿಗೆ ಅವರೇ ಮಾದರಿ. ಅವರ ಶಿಸ್ತುಬದ್ಧ ಜೀವನ ಇತರರಿಗೆಲ್ಲ ಮಾದರಿಯಾದದ್ದು. ಅವರು ಬರುವ ಮತ್ತು ಹೋಗುವ ಸಮಯವನ್ನು ನೋಡಿ ನಮ್ಮ ಕೈಗಡಿಯಾರದಲ್ಲಿ ವೇಳೆ ಕರಾರುವಾಕ್ ಮಾಡಿಕೊಳ್ಳಬೇಕು, ಅಷ್ಟೊಂದು ಸಮಯಪಾಲಕರು ಅವರು.

ಭೈರನಹಟ್ಟಿಯ ಶ್ರೀಗಳು ಬೆಳಕಿನ ಪುಂಜ. ಹತ್ತಿರ ಬಂದವರಿಗೆಲ್ಲ ಬೆಳಕು ನೀಡಿ ದಾರಿ ತೋರಿಸುತ್ತಾರೆ. ಅವರೊಡನೆ ಮಾತನಾಡಿದಾಗಲೆಲ್ಲ ನೂರು ಪುಸ್ತಕ ಓದಿದ ಅನುಭವ ಉಂಟಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT