ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನ್ನಡದ ಹಿತಾಸಕ್ತಿ ರಕ್ಷಿಸುವ ಪಕ್ಷ ಬೆಂಬಲಿಸಿ'

Last Updated 11 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: `ಕನ್ನಡದ ಹಿತಾಸಕ್ತಿ ಕಾಪಾಡುವ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡುವ ರಾಜಕೀಯ ಪಕ್ಷವನ್ನು ಕನ್ನಡಿಗರು ಪಕ್ಷಾತೀತರಾಗಿ ಬೆಂಬಲಿಸಬೇಕು' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಸಲಹೆ ನೀಡಿದರು.

ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಪ್ರಧಾನ ವೇದಿಕೆಯಲ್ಲಿ ನಡೆದ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಪ್ರಭುತ್ವದ ಜುಟ್ಟು ಪ್ರಜೆಗಳಲ್ಲಿದೆ. ಅದನ್ನು ಅಲ್ಲಾಡಿಸುವ ಶಕ್ತಿ ಐದು ವರ್ಷಗಳಿಗೆ ಒಮ್ಮೆ ಕೈಗೆ ಬರುತ್ತದೆ. ಕನ್ನಡದ ಶಕ್ತಿ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡಿಗರ ಬದುಕು ಕಟ್ಟಿಕೊಡುವ ರಾಜಕೀಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು' ಎಂದು ಆವೇಶದಿಂದ ಹೇಳಿದರು.

`ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆ; ಬಾಲಂಗೋಚಿ ಸಂಸ್ಥೆ ಅಲ್ಲ. ಆರ್ಥಿಕ ನೆರವು ನೀಡುವಂತೆ ಸರ್ಕಾರ ಸೇರಿದಂತೆ ಯಾರನ್ನೂ ಓಲೈಸಲು ಅದು ಸಿದ್ಧವಿಲ್ಲ' ಎಂದ ಅವರು, `ಕನ್ನಡದ ಸಹಸ್ರಾರು ತಲೆಗಳು ಮಾತ್ರ ಕಾಣಿಸುವ ಈ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು' ಎಂದೂ ಆಗ್ರಹಿಸಿದರು.

`ವಿಜಾಪುರದ ಜನರ ಮನೆಯಲ್ಲಿ ಶ್ರೀಮಂತಿಕೆ ಇಲ್ಲ. ಆದರೆ ಹೃದಯದಲ್ಲಿ ಶ್ರೀಮಂತಿಕೆ ಇದೆ ಎನ್ನುವುದು ಸಮ್ಮೇಳನದಿಂದ ಅರಿವಾಯಿತು. ಕಳೆದ 15 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಲೇ ಬಂದ ನಾನು ಇಲ್ಲಿ ಕಂಡಷ್ಟು ಜನಸಾಗರವನ್ನೂ ಬೇರೆಲ್ಲೂ ಕಂಡಿಲ್ಲ. ಊಟದ ಮನೆ, ಪುಸ್ತಕ ಮಳಿಗೆ, ಗೋಲಗುಮ್ಮಟ, ರಸ್ತೆಗಳಲ್ಲಿ ಲಕ್ಷಾಂತರ ಕನ್ನಡಿಗರನ್ನು ಕಂಡು ಪುಳಕಿತನಾದೆ. ಈ ಜನಸಾಗರವನ್ನು ಸಾಕ್ಷೀಕರಿಸಿ ಪರಿಷತ್ತು ನಿರ್ಣಯಗಳನ್ನು ಕೈಗೊಂಡಿದೆ' ಎಂದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ, ಕಸಾಪ ನಿಕಟಪೂರ್ವ ಅಧ್ಯಕ್ಷ ನಲ್ಲೂರು ಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT