ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಹಿಸ್ಟರಿ ಚಾನೆಲ್

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಹಿಸ್ಟರಿ ಚಾನೆಲ್ ಅವರು ತಮ್ಮ ಕಾರ್ಯಕ್ರಮಗಳನ್ನು ಭಾರತೀಯ ಭಾಷೆಗಳಲ್ಲಿ ತೋರಿಸಲು ನಿರ್ಣಯಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ `ಕನ್ನಡದಲ್ಲಿ ಡಬ್ಬಿಂಗ್ ಮಾಡುವುದನ್ನು ನಿಷೇಧಿಸಿರುವುದರಿಂದ ತಮ್ಮ ವಾಹಿನಿಯನ್ನು ಕನ್ನಡದಲ್ಲಿ ಶುರು ಮಾಡಲು ಸಾಧ್ಯವಿಲ್ಲ~ ಎಂದು ಹಿಸ್ಟರಿ ಚಾನೆಲ್‌ನವರು ತಿಳಿಸಿದ್ದಾರೆ.
 
ಇದೊಂದು ಆಘಾತಕಾರಿ ಉತ್ತರದಂತೆ ಮೇಲ್ನೋಟಕ್ಕೆ ಕಾಣಿಸಿದ್ದರೂ ಇದರ ಹಿಂದೆ ಅಡಗಿರುವ ಮರ್ಮವೇ ಬೇರೆ. ಈ ಚಾನೆಲ್ ಅವರಿಗೆ ಕನ್ನಡ ಚಿತ್ರರಂಗ, ಕಿರುತೆರೆಗಳಲ್ಲಿ ಹಿಡಿತ ಹೊಂದಿರುವ ಒಂದಷ್ಟು ಜನ ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧ ಮಾಡಲಾಗಿದೆ ಅಂತ ಖಾಸಗಿ ಒಡೆತನದ ಹಿಸ್ಟರಿ ವಾಹಿನಿಯವರಿಗೆ ಹೇಳಿರುವಂತಿದೆ.

ಆದರೆ ಈ ನಿಷೇಧಕ್ಕೆ ಯಾವುದೇ ಸಾಮಾಜಿಕ ಒಪ್ಪಿಗೆಯಾಗಲೀ, ಸಂವಿಧಾನದ ಒಪ್ಪಿಗೆಯಾಗಲೀ ಇಲ್ಲ. ಯಾವುದೇ ರಾಜ್ಯದಲ್ಲಾದರೂ ಏನನ್ನಾದರೂ ನಿಷೇಧಿಸಬೇಕೆಂದರೆ, ಅದು ಆಯಾ ರಾಜ್ಯದ ವಿಧಾನಮಂಡಲದಲ್ಲಿ ಅಂಗೀಕಾರವಾಗಬೇಕು.
 
ಆದರೆ ಇವರು ಹೇಳುತ್ತಿರುವ ಈ ಡಬ್ಬಿಂಗ್ ನಿಷೇಧಕ್ಕೆ ಯಾವುದೇ ಕಾನೂನು ಕಟ್ಟುಪಾಡಿಲ್ಲ. ಚಿತ್ರರಂಗವಾಗಲೀ ಅಥವಾ ಟಿವಿ ಚಾನೆಲ್ಲುಗಳಾಗಲೀ ಒಂದು ಉದ್ಯಮದಂತೆ ನಡೆಯಬೇಕು. ತಮಗೆ ಬೇಕಾದ ರೀತಿಯ ಮನರಂಜನೆ ಪಡೆಯುವ ಸಂಪೂರ್ಣ ಹಕ್ಕು ಜನರಿಗಿದೆ. ತಮ್ಮ ದುಡ್ಡು ಕೊಟ್ಟು ಜನ ಸಿನಿಮಾ ಅಥವಾ ಯಾವುದೇ ವಾಹಿನಿಯನ್ನು ನೋಡಬಯಸುವಾಗ ಇಂಥದ್ದನ್ನು ನೋಡಬೇಡಿ ಅನ್ನುವ ಹಕ್ಕನ್ನು ಸಂವಿಧಾನ ಯಾರಿಗೂ ಕೊಟ್ಟಿಲ್ಲ.

ಕನ್ನಡದ ಮಕ್ಕಳು ಇಂತಹ ಎಷ್ಟೋ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳ ವ್ಯಕ್ತಿವಿಕಾಸಕ್ಕೆ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್, ಪೋಗೋ, ಕಾರ್ಟೂನ್ ನೆಟ್‌ವರ್ಕ್, ಹಿಸ್ಟರಿ ಚಾನೆಲ್ ಮುಂತಾದ ವಾಹಿನಿಗಳ ಅಗತ್ಯ ತುಂಬಾ ಇದೆ.
 
ನಮ್ಮ ಹಳ್ಳಿಗಾಡಿನ ಮಕ್ಕಳು ಸಹ ಪ್ರಪಂಚದೆಲ್ಲೆಡೆ ತಯಾರಾಗುವ ಇಂತಹ ಉತ್ತಮ ಶೈಕ್ಷಣಿಕ ಮತ್ತು ಮನರಂಜನೆ ಭರಿತ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡುವಂತೆ ಆಗಬೇಕು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನುವ ಹಾಗೆ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡ ಗ್ರಾಹಕನೇ ಸಾರ್ವಭೌಮ ಅನ್ನುವುದು ಸತ್ಯ. ಆಯ್ಕೆಯ ಸ್ವಾತಂತ್ರ್ಯ ಜನರಿಗೆ ಬಿಡಬೇಕೇ ಹೊರತು ಸರ್ವಾಧಿಕಾರದ ವರ್ತನೆಯನ್ನು ಅನುಸರಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಮನರಂಜನೆ ಕನ್ನಡದಲ್ಲಿ ಸಿಗಬೇಕು ಅನ್ನುವ ಅಪೇಕ್ಷೆಯೊಂದೇ ಕನ್ನಡಿಗರಿಗಿರುವುದು.

`ಡಬ್ಬಿಂಗ್ ಮಾಡಬಾರದು~ ಎಂದು ಯಾವ ಕಾನೂನು ನಿಯಮವೂ ಇಲ್ಲ. ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಕಾನೂನುಬಾಹಿರವಾದ ನಿರ್ಬಂಧನೆಗಳನ್ನು ಹಾಕಿ, ಕನ್ನಡಿಗರಿಗೆ ಕನ್ನಡದ ಮನೋರಂಜನೆಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ.
 
ಹಿಸ್ಟರಿ ಚಾನೆಲ್ ಅಲ್ಲದೆ, ಕಾರ್ಟೂನ್ ನೆಟ್‌ವರ್ಕ್, ಪೋಗೋ, ಡಿಸ್ಕವರಿ ಹಾಗೆ ಎಲ್ಲ ಚಾನೆಲ್‌ಗಳೂ ಕನ್ನಡದಲ್ಲಿ ಲಭ್ಯವಾಗಬೇಕು. ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT