ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲೊಂದು ರಕ್ತಚರಿತ್ರೆ!

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಅನುಮಾನವೇ ಬೇಡ. ಅಲ್ಲಿ ಸೇರಿದ್ದು `ದಂಡುಪಾಳ್ಯ~ ಗ್ಯಾಂಗ್. ತಂಡದ ಲೀಡರ್ ಬಾಯಲ್ಲಿ ಹಿಂಸೆಯ ರುದ್ರನಾಟಕವೊಂದು ಮಾತಿಗಿಳಿದಿತ್ತು. ಕಥೆ ಕೇಳುತ್ತಿದ್ದವರಲ್ಲೂ ಬಿಸಿ, ಹೇಳುತ್ತಿದ್ದವರಲ್ಲೂ ಬಿಸಿ.

`ಗುಟ್ಟಾಗಿ ಚಿತ್ರೀಕರಣ ಮುಗಿಸಲಾಗಿದೆ~ ಎಂಬ ರಹಸ್ಯ ತಿಳಿಸಲು ಕರೆಯಲಾದ ಪತ್ರಿಕಾಗೋಷ್ಠಿ ಅದು. ಎಲ್ಲಿಯ ದಂಡುಪಾಳ್ಯ, ಎಲ್ಲಿಯ ಚಿತ್ರೀಕರಣ ಅಂದಿರಾ? ಅಲ್ಲೇ ಇರುವುದು ಥ್ರಿಲ್. ಕನ್ನಡ- ತೆಲುಗು ಸೀಮೆಯಲ್ಲಿ ದಶಕದುದ್ದಕ್ಕೂ ನಡೆದ ರಕ್ತಚರಿತೆಯೊಂದು ಬೆಳ್ಳಿತೆರೆ ಮೇಲೆ ಮೂಡಲಿದೆ.

`ಶೂಟಿಂಗ್ ವೇಳೆ ನಡೆಯಬಾರದ್ದು ನಡೆದರೆ ಎಂಬ ಭೀತಿ ಇತ್ತು. ಹೀಗಾಗಿ ಗಪ್‌ಚುಪ್ ಆಗಿ ಚಿತ್ರೀಕರಣ ಮುಗಿಸಲಾಯಿತು~ ಎಂದು ಪಾತಕವೊಂದನ್ನು ಬಯಲು ಮಾಡಿದಂತೆ ನಿಟ್ಟುಸಿರು ಬಿಟ್ಟರು ಶ್ರೀನಿವಾಸರಾಜು. ಮೊದಲೇ ಹೇಳಿದ ಹಾಗೆ ಅವರು `ದಂಡುಪಾಳ್ಯ~ ತಂಡದ ಲೀಡರ್. ಅರ್ಥಾತ್ `ದಂಡುಪಾಳ್ಯ~ ಚಿತ್ರದ ಕತೆ, ಚಿತ್ರಕತೆ, ನಿರ್ದೇಶನದ ನೊಗ ಹೊತ್ತವರು.

`ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಯಿತು. ಬೆಂಗಳೂರು ಮೈಸೂರಿನಲ್ಲಿ ಚಿತ್ರ ತಂಡ ದುಡಿದಿದೆ. ಐದು ಹಾಡುಗಳಿವೆ. ಇದು ಹಿಂಸೆಯ ಕುರಿತಾದ ಚಿತ್ರ. ಹಾಗೆಂದು ಹಿಂಸೆಗಷ್ಟೇ ಒತ್ತು ನೀಡಿಲ್ಲ, ಮಾನವೀಯ ಸಂಬಂಧಗಳ ಬಗ್ಗೆ ಗಮನ ಹರಿಸಲಾಗಿದೆ~ ಎಂದರು.

ಶೇ 90ರಷ್ಟು ವಾಸ್ತವ ಹಾಗೂ ಶೇ 10ರಷ್ಟು ಕಲ್ಪನೆಯನ್ನು ಬೆರೆಸಿ ಚಿತ್ರ ತಯಾರಾಗಿದೆಯಂತೆ. ದಂಡುಪಾಳ್ಯ ತಂಡದ ಕುರಿತು ಮಾಧ್ಯಮಗಳಲ್ಲಿ ಬಂದ ವರದಿ, ಪೊಲೀಸರ ಹೇಳಿಕೆಗಳು, ಅಪರಾಧಿಗಳ ವಿಡಿಯೋ ತುಣುಕುಗಳನ್ನು ಅಧ್ಯಯನ ಮಾಡಿದ್ದರಿಂದ ಚಿತ್ರದ ಸೊಗಸು ಹೆಚ್ಚಿದೆಯಂತೆ. ಸ್ವತಃ ನಿರ್ದೇಶಕರು ಬೆಳಗಾವಿಯವರೆಗೆ ಪಯಣಿಸಿ ಹಂತಕರನ್ನು ಮಾತನಾಡಿಸಿ ಬಂದಿದ್ದಾರಂತೆ. ಚಿತ್ರದ ಒಂದು ಭಾಗ ಹತ್ಯೆಗಳ ಕಥೆ ಹೇಳಿದರೆ ಮತ್ತೊಂದು ಭಾಗ ಹಂತಕರ ಪ್ರಸ್ತುತ ಸ್ಥಿತಿ ಹೇಳಲಾಗಿದೆಯಂತೆ.

`ಚಿತ್ರದಲ್ಲಿ ಹಂತಕರ ಬಗ್ಗೆ ಅನುಕಂಪ ವ್ಯಕ್ತವಾಗುವುದಿಲ್ಲ. ವಾಸ್ತವ ಏನಿದೆ ಎಂಬುದನ್ನು ಬಿಂಬಿಸುವ ಕೆಲಸವಷ್ಟೇ ನಡೆದಿದೆ. ಹಿಂಸೆಯ ವೈಭವೀಕರಣ ನಡೆದಿಲ್ಲ~ ಎಂದು ರಾಜು ಸ್ಪಷ್ಟಪಡಿಸಿದರು.

ಮೈಕ್ ನಟಿ ಪೂಜಾಗಾಂಧಿ ಅವರ ಕೈಗೆ ಬಂದಾಗ ಸುದ್ದಿಗೋಷ್ಠಿ ಮತ್ತಷ್ಟು ಕಾವೇರಿತು. ಚಿತ್ರದಲ್ಲಿ ಪೂಜಾ ಅರೆನಗ್ನವಾಗಿ ಕಾಣಿಸಿಕೊಂಡ ಬಗ್ಗೆ ಪ್ರಶ್ನೆಗಳಿದ್ದವು. `ಶಬಾನಾ ಅಜ್ಮಿ, ರೇಖಾ ಮುಂತಾದ ಹಿರಿಯ ನಟಿಯರೆಲ್ಲಾ ಹಿಂದಿ ಚಿತ್ರಗಳಲ್ಲಿ ಬಿಸಿಬಿಸಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಕಥೆ ಸಿದ್ಧಮಾದರಿಗಳನ್ನು ಒಡೆಯುತ್ತದೆ ಅನ್ನಿಸಿತು. ಹಾಗಾಗಿ ಒಪ್ಪಿಕೊಂಡೆ~ ಎನ್ನುವುದು ಅವರ ಮಾತಿನ ಒಕ್ಕಣೆ.

`ಇದೊಂದು ಸಾಮಾನ್ಯ ಚಿತ್ರ ಅಲ್ಲ. ಚಿತ್ರದಲ್ಲಿ ನನ್ನ ಮುಖಚರ್ಯೆಯೇ ಅದನ್ನು ಹೇಳುತ್ತದೆ. ನನ್ನನ್ನು ಉತ್ತಮ ಅಭಿನೇತ್ರಿಯನ್ನಾಗಿ ದಂಡುಪಾಳ್ಯದ ಲಕ್ಷ್ಮಿ ಪಾತ್ರ ರೂಪಿಸಬಲ್ಲದು~ ಎಂದೂ ಹೇಳಿದರು.

ಚಿತ್ರದ ನಿರ್ಮಾಪಕರಾದ ಗಿರೀಶ್ ಹಾಗೂ ಪ್ರಶಾಂತ್ ಮೀನು ಉದ್ಯಮಿಗಳು. ದೇಶ ವಿದೇಶ ಸುತ್ತಿಬಂದವರು. ಪ್ರಶಾಂತ್ ಉಗಾಂಡದ ಸರ್ವಾಧಿಕಾರಿ ಇದಿ ಅಮಿನ್‌ನ ಕತೆ ಹೇಳಿದರು. ಅವನ ಬದುಕಿನಂತೆಯೇ ಇದೂ ಒಂದು ನೆತ್ತರ ಕತೆ ಎಂದರು. ಅಲ್ಲಿಗೆ ಚಿತ್ರಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಂತಾಯಿತು!

ಚಿತ್ರದಲ್ಲಿ ರಘು ಮುಖರ್ಜಿ ಅವರದ್ದು ಸೌಮ್ಯ ಪಾತ್ರವಂತೆ. ಅದನ್ನವರು ಅಷ್ಟೇ ಸೌಮ್ಯವಾಗಿ ವಿವರಿಸಿದರು. ಚಿತ್ರದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರ ಇದೆ. ಅತ್ಯಂತ ಮುಖ್ಯವಾಗಿರುವುದು ಕತೆ ಎಂದರು.

ಚಿತ್ರಕ್ಕೆ ಸಂಭಾಷಣೆ ಬರೆದ ವಿ.ಆನಂದಪ್ರಿಯ, ಗ್ಯಾಂಗ್‌ನ ಸದಸ್ಯರಾಗಿ ನಟಿಸಿರುವ ಪೆಟ್ರೋಲ್ ಪ್ರಸನ್ನ, ಮುನಿ, ಕರಿಸುಬ್ಬು, ಜೈದೇವ್, ಯತಿರಾಜ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT