ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ಬೆಂಬಲಿಗರ ಕರಾಳ ನೆನಪು

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಪೊಲೀಸರು ಭಾನುವಾರ ಬೆಳಗಿನ ಜಾವ ರಾಜಧಾನಿಯಲ್ಲಿ ನಡೆಸಿದ `ಕಾರ್ಯಾಚರಣೆ ರುಚಿ~ ಉಂಡವರಲ್ಲಿ ಬಾಬಾ ರಾಂದೇವ್ ಅವರ ಕರ್ನಾಟಕದ ಶಿಷ್ಯರೂ ಇದ್ದಾರೆ. ಮಧ್ಯರಾತ್ರಿ ರಾಮಲೀಲಾದಿಂದ ಬೀದಿಗೆ ಬಿದ್ದ ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ `ಬಾಂಗ್ಲಾ ಸಾಹೇಬ್ ಗುರುದ್ವಾರದಲ್ಲಿ ಆಶ್ರಯ ಕೊಟ್ಟಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಬಾಬಾ ಶಿಷ್ಯರು ದೆಹಲಿಗೆ ಬಂದಿದ್ದಾರೆ.ಬೆಳಗಾವಿಯಿಂದ ಆಗಮಿಸಿರುವ ಸುಮಾರು 30 ಜನರ ತಂಡಕ್ಕೆ ಪೊಲೀಸರ `ಕರಾಳ ಕಾರ್ಯಾಚರಣೆ ಷಾಕ್~ನಿಂದ ಇನ್ನು ಹೊರಬರಲು ಆಗಿಲ್ಲ. ತಾವು ನೋಡಿರುವ ದೌರ್ಜನ್ಯ ಕನಸಿನಲ್ಲಿ ಕಂಡಿದ್ದೆ- ಕಣ್ಣ ಮುಂದೆ ಆಗಿದ್ದೆ ಎಂಬ ಮನವರಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.

ಬೆಳಗಾವಿಯಿಂದ ಶುಕ್ರವಾರವೇ ದೆಹಲಿಗೆ ಬಂದಿರುವ ಡಾ. ಗೌಡಪ್ಪ ಪಡಗುರಿ, ಡಾ. ಎ.ಎಸ್. ಕೋಣೆ, ಶೇಖರ್ ಹಲಗಿ, ಶ್ರೀಶ್ಯಲ ದೊಡ್ಡಮನಿ, ಅಮರೇಂದ್ರ ಕಾನಗೋ, ಶೀಪತ್ ಪಾಟೀಲ್, ಮೋಹನ ಬಾಗೇವಾಡಿ, ಪುರುಷೋತ್ತಮ ಪಾಟೀಲ್, ಅಣ್ಣಪ್ಪ ಮರಾಠೆ, ವಿದ್ಯಾ ಶ್ಯಾನ್‌ಭಾಗ್, ಶೀತಲ್ ಉರಣಕರ್ ಅವರಿದ್ದಾರೆ. ರಾಮಲೀಲಾ ಮೈದಾನದಿಂದ ಬಲವಂತವಾಗಿ ಹೊರಗೆ ಹಾಕಲ್ಪಟ್ಟ ಈ ತಂಡ ಬೆಳಗಿನ 6 ಗಂಟೆವರೆಗೆ ರಸ್ತೆ ಮೇಲೆ ಕಾಲ ಕಳೆದಿದೆ. ಅನಂತರ ಆಶ್ರಯಕ್ಕಾಗಿ ಗುರುದ್ವಾರಕ್ಕೆ ಬಂದಿದೆ.

ಬೆಳಗಾವಿಯಂತೆ ಬೇರೆ ಬೇರೆ ಊರುಗಳಿಂದ ಬಂದಿರುವ ತಂಡಕ್ಕೆ ಗುರುದ್ವಾರ ಆಶ್ರಯ ಕೊಟ್ಟಿದೆ.ಗುರುದ್ವಾರಕ್ಕೆ ತೆರಳಿದ್ದ `ಪ್ರಜಾವಾಣಿ~ಗೆ `ಕರಾಳ ರಾತ್ರಿ~ಯ ಕೆಟ್ಟ ಅನುಭವಗಳನ್ನು ಬೆಳಗಾವಿ ತಂಡ ವಿವರಿಸಿತು. `ಪೊಲೀಸರಿಗಿಂತ ನಕ್ಸಲಿಯರೇ ಮೇಲು. ಅವರಿಗೆ ಮಾನವೀಯತೆ ಇರುತ್ತದೆ. ಇವರು ಅವರಿಗಿಂತ ಕೆಟ್ಟದಾಗಿ ನಡೆದುಕೊಂಡರು. ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರು. ಲಾಠಿ ಬೀಸಿದರು. ಮೈಕೈ ಹಿಡಿದು ಎಳೆದಾಡಿದರು~ ಎಂದು ವಿದ್ಯಾ ಶ್ಯಾನ್‌ಭಾಗ್ ಗೋಳಾಡಿದರು.

ಮಧ್ಯರಾತ್ರಿ ಮಫ್ತಿಯಲ್ಲಿದ್ದ ಪೊಲೀಸರು ಒಬ್ಬೊಬ್ಬರಾಗಿ ವೇದಿಕೆಯತ್ತ ನುಸುಳುತ್ತಿದ್ದರು. ಶಿಷ್ಯರಿರಬಹುದು ಎಂದು ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ವೇದಿಕೆ ಸುತ್ತುವರಿಯುತ್ತಿದ್ದಂತೆ ಬಾಬಾ ಅಂಗರಕ್ಷಕರು ಜಾಗೃತಗೊಂಡರು. ಬಂದವರನ್ನು ಪ್ರಶ್ನಿಸಿದರು.
 
ಅವರಿಗೆ ಪ್ರತಿರೋಧವೊಡ್ಡಿ ನಿದ್ದೆಯಲ್ಲಿದ್ದ ಬಾಬಾ ಅವರನ್ನು ಎಬ್ಬಿಸಿ ಸುದ್ದಿ ಮುಟ್ಟಿಸಿದರು. ಸುದ್ದಿ ಹರಡಿತು. ಬಾಬಾ ರಕ್ಷಣೆಗೆ ಗುರು ಕುಲದ ಶಿಷ್ಯರು, ಮಹಿಳೆಯರು ಧಾವಿಸಿ ಬಂದರು ಎಂದು ಮಾಜಿ ಸೈನಿಕ ಕರ್ನಾಟಕದ ಅಣ್ಣಪ್ಪ ಮರಾಠೆ ವಿವರಿಸಿದರು.

ಭಕ್ತರ ಸರ್ಪಗಾವಲಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾಬಾ ವೇದಿಕೆಯಿಂದ ಕೆಳಗೆ ಜಿಗಿದರು. ಅಲ್ಲೂ ಮಹಿಳಾ ಶಿಷ್ಯರು ಸುತ್ತುವರಿದರು. ಮಹಿಳೆಯರ ಮಧ್ಯದಲ್ಲೇ ಬಾಬಾ `ಸಲ್ವಾರ್ ಕಮೀಜ್~ ಧರಿಸಿದರು. ಪೊಲೀಸರ ಕಣ್ಣು ತಪ್ಪಿಸಲು ಈ  ಉಪಾಯ ಮಾಡಿದ್ದರು.

ಅಷ್ಟರೊಳಗೆ ಮತ್ತೊಂದು ಬದಿಯಿಂದ ಪೊಲೀಸರು ನುಗ್ಗಿದರು. ಕೆಲ ಹೊತ್ತಿನಲ್ಲಿ ಭಾರಿ ಸಂಖ್ಯೆಯ ಪೊಲೀಸರು ರಾಮಲೀಲಾ ಮೈದಾನವನ್ನು ಸುತ್ತುವರಿದರು. ಕ್ಷಿಪ್ರ ಕಾರ್ಯಾಚರಣೆ ಪೊಲೀಸರು ಇದ್ದರೂ ಕಾರ್ಯಾಚರಣೆಗೆ ಇಳಿದಿರಲಿಲ್ಲ ಎಂದು ಅಣ್ಣಪ್ಪ ಕಂಡದ್ದನ್ನು ಕಂಡಂತೆ ಬಿಚ್ಚಿಟ್ಟರು.

ಪೊಲೀಸರು `ಡಮ್ಮಿ ಗುಂಡು~ಗಳನ್ನು ಗಾಳಿಯಲ್ಲಿ ಹಾರಿಸಿದರು. ಅನಂತರ ಅಶ್ರುವಾಯು ಸಿಡಿಸಿದರು. ಎಲ್ಲರೂ ಕಣ್ಣುರಿಯಿಂದ ಕಣ್ಣುಜ್ಜಿಕೊಳ್ಳಲು ಶುರುಮಾಡಿದರು. ಕಣ್ಣು ಬಿಡುವುದರೊಳಗೆ ಬಾಬಾ ಕಣ್ಮರೆ ಆಗಿದ್ದರು. ಅವರನ್ನು ಹೊತ್ತೊಯ್ಯುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದರು.

ಇಷ್ಟಾದರೂ ಪೊಲೀಸರು ಅಶ್ರವಾಯು ಸೆಲ್‌ಗಳನ್ನು ಸಿಡಿಸುತ್ತಲೇ ಇದ್ದರು. ಲಾಠಿ ಬಳಸಿ ಸಾವಿರಾರು ಸಂಖ್ಯೆಯಲ್ಲಿದ್ದ ಜನರನ್ನು ಬಲವಂತವಾಗಿ ಹೊರಗೆ ದಬ್ಬಿದರು. ಮೈದಾನಕ್ಕೆ ಕಲ್ಪಿಸಲಾಗಿದ್ದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿದು ಹಾಕಿದರು. ಮೈಕ್ ಕಿತ್ತೊಗೆದರು. ಹೂ ಕುಂಡಗಳನ್ನು ತೂರಿದರು. ವೇದಿಕೆ ಮೇಲಿದ್ದ ಗಾದಿಗೆ (ಹಾಸಿಗೆ) ಒಟ್ಟುಗೂಡಿಸಿ ಬೆಂಕಿ ಹಚ್ಚಿದರು ಎಂದು ಡಾ. ಗೌಡಪ್ಪ ಪಡಗುರಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಘಟನೆ ಕಟ್ಟಿಕೊಡುವಾಗ ಪಡಗುರಿ ಬಿಕ್ಕಳಿಸಿ ಅತ್ತರು.

ಅಹಿಂಸಾತ್ಮಕ ಮಾರ್ಗದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರು.ಇದು ಸರ್ಕಾರದ ಹೇಡಿತನಕ್ಕೆ ನಿದರ್ಶನ ಎಂದು ಡಾ. ಕೋಣೆ ದನಿಗೂಡಿಸಿದರು.

ನಾಳೆ ನಾವು ಊರಿಗೆ ಮರಳುವ ಉದ್ದೇಶವಿತ್ತು. ಸ್ವಲ್ಪ ತಡೆಯಿರಿ ಹೋಗಬೇಡಿ ಎಂಬ ಸಂದೇಶ ಗುರುಗಳಿಂದ ಬಂದಿದೆ. ಅವರ ಮುಂದಿನ ಆದೇಶಕ್ಕಾಗಿ ಕಾದಿದ್ದೇವೆ ಎಂದು ದೊಡ್ಡಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT