ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ಮೂರ್ತಿ ಪ್ರಮಾಣ

ಅಮೆರಿಕದ ಸರ್ಜನ್ ಜನರಲ್‌ ಹುದ್ದೆಗೇರಿದ ಅತಿ ಕಿರಿಯ ವೈದ್ಯ
Last Updated 24 ಏಪ್ರಿಲ್ 2015, 15:12 IST
ಅಕ್ಷರ ಗಾತ್ರ

ಫೋರ್ಟ್‌ ಮೈಯೆರ್ (ವರ್ಜೀನಿಯಾ) (ಪಿಟಿಐ):  ಅಮೆರಿಕದ 19ನೇ ಪ್ರಧಾನ ಸರ್ಜನ್ ಆಗಿ ಕನ್ನಡಿಗ ಡಾ. ವಿವೇಕ್ ಮೂರ್ತಿ ಅವರು ಗುರುವಾರ ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಲ್ಲಿನ ಸೇನಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೋ ಬಿಡೆನ್ ಪ್ರತಿಜ್ಞಾವಿಧಿ ಬೋಧಿಸಿ ದರು. ವಿವೇಕ್ ಅವರ ಪೋಷಕರು, ಅಜ್ಜಿ ಮತ್ತು ಕುಟುಂಬದ ಹಲವು ಸದಸ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಈ ಮೂಲಕ ಮಂಡ್ಯ ಮೂಲದ ವಿವೇಕ್ ಅವರು ಒಬಾಮ ಆಡಳಿತದಲ್ಲಿ ಅತ್ಯಂತ ಉನ್ನತ ಪದವಿ ಪಡೆದ ಭಾರತ ಮೂಲದ ವ್ಯಕ್ತಿ ಎನಿಸಿದ್ದು, ಸರ್ಜನ್ ಜನರಲ್‌ ಹುದ್ದೆಗೆ ಏರಿದ ಅತಿ ಕಿರಿಯ (37 ವರ್ಷ) ವೈದ್ಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹುದ್ದೆಯೊಂದಿಗೆ ವಿವೇಕ್‌, ವೈಸ್‌ ಅಡ್ಮಿರಲ್ ಶ್ರೇಣಿಯನ್ನು ಪಡೆದಿದ್ದಾರೆ.

ಹಾರ್ವರ್ಡ್‌ನಿಂದ ಸ್ನಾತಕ ಪದವಿ ಪಡೆದ ವಿವೇಕ್, ಯೇಲ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಮತ್ತು ವಾಣಿಜ್ಯ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಬ್ರಿಗ್ಹಾಮ್ ಆ್ಯಂಡ್‌ ವಿಮೆನ್ಸ್‌ ಆಸ್ಪತ್ರೆಯಲ್ಲಿ ಆಂತರಿಕ ಔಷಧ ಅಭ್ಯಾಸ ಪ್ರಾರಂಭಿಸಿದ ಅವರು, 2009ರಲ್ಲಿ ಡಾಕ್ಟರ್ಸ್‌ ಫಾರ್ ಅಮೆರಿಕ ಎಂಬ ಲಾಭ ರಹಿತ ಸಂಸ್ಥೆ ಹುಟ್ಟುಹಾಕಿದರು. ಇದರಲ್ಲಿ ಸೇರಿಕೊಂಡ ಸಾವಿರಾರು ವೈದ್ಯರು ಒಬಾಮ ಅವರ ಆರೋಗ್ಯ ನೀತಿಗಳನ್ನು ಬೆಂಬಲಿಸಿದ್ದರು.

ಕೃತಜ್ಞತೆ: ‘ಸರ್ಜನ್ ಜನರಲ್‌ ಆಗಿ ಸೇವೆ ಸಲ್ಲಿಸುವ ಅವಕಾಶವು ಗೌರವಯುತ ಮತ್ತು ಗಹನವಾದ ಜವಾಬ್ದಾರಿ. ಈ ಕಚೇರಿಯ ಸಾರಥ್ಯವನ್ನು ನಂಬಿಕೆಯಿಂದ  ನನಗೆ ವಹಿಸಿರುವ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಕೃತಜ್ಞತೆ ಹೇಳಲು ಇಚ್ಛಿಸುತ್ತೇನೆ’ ಎಂದು ಪ್ರಮಾಣ ವಚನದ ನಂತರ ಹೇಳಿದರು.
‘ನನ್ನ ಅಜ್ಜಿಯ ನಂಬಿಕೆ, ತಂದೆಯ ಬಲ, ಅಮ್ಮನ ಪ್ರೀತಿ, ಸಹೋದರಿಯ ಬೆಂಬಲ ಮತ್ತು ಪತ್ನಿಯ ಮೇರೆಯಿಲ್ಲದ ನಂಬಿಕೆಯಿಂದ ನಾನು ಈ ಸ್ಥಾನಕ್ಕೆ ಏರಿದ್ದೇನೆ. ಅವರೆಲ್ಲರನ್ನೂ ಪಡೆದಿರುವುದು ನನ್ನ ಭಾಗ್ಯ. ನನಗಾಗಿ ಅವರು ಮಾಡಿರುವ ಎಲ್ಲಾ ತ್ಯಾಗಕ್ಕೂ ಕೃತಜ್ಞನಾಗಿರುತ್ತೇನೆ’ ಎಂದು ವಿವೇಕ್ ಭಾವುಕರಾಗಿ ನುಡಿದರು.

‘ಪೂರ್ವಿಕರು ಜೀವಿಸಿದ ಹಳ್ಳಿಯನ್ನು ಬಿಟ್ಟು ಹೋಗುವುದನ್ನು ನಮ್ಮ ಕುಟುಂಬ ಎಂದಿಗೂ ಬಯಸಿರಲಿಲ್ಲ. ನನ್ನ ತಂದೆ ಗ್ರಾಮೀಣ ಭಾರತದ ರೈತನ ಮಗ, ನಾನೂ ಕೂಡ. ಆದರೆ ನನ್ನ ತಾತ ಸಾಲದಲ್ಲಿ ಮುಳುಗಿದರೂ ತೊಂದರೆಯಿಲ್ಲ ಎಂದು ನನ್ನ ಶಿಕ್ಷಣಕ್ಕಾಗಿ ಪಟ್ಟುಹಿಡಿದರು. ನನ್ನ ತಾತ ಪಣ ತೊಡದಿದ್ದಿದ್ದರೆ ನಾವು ಹಳ್ಳಿಯನ್ನು ಬಿಟ್ಟು ಹೊರಗಿನ ಈ ಜಗತ್ತನ್ನು ನೋಡುತ್ತಿರಲಿಲ್ಲ’ ಎಂದು ವಿವೇಕ್ ಹೇಳಿದರು.

‘ನಾವು ಅಮೆರಿಕನ್ನರಾಗುತ್ತಿರಲಿಲ್ಲ. ನನ್ನ ಪೋಷಕರು ಅತಿ ಕೆಟ್ಟ ಸರ್ವಾಧಿಕಾರದ ದೇಶವೂ ಸೇರಿದಂತೆ ಮೂರು ಬೇರೆ ದೇಶಗಳಿಗೆ ತೆರಳಿದ್ದವರು, ಈ ಪಯಣದಲ್ಲಿ ಇಲ್ಲಿಗೆ ತಲುಪಿದರು. ಹಣವನ್ನು ಉಳಿಸಿಕೊಂಡು ಉದ್ಯೋಗಾವಕಾಶಕ್ಕಾಗಿ ಅಲೆದಾಡಿದರು. ಅಮೆರಿಕವೇ ಅದಕ್ಕೆ ಗಮ್ಯಸ್ಥಾನ ಎಂದು ಅವರಿಗೂ ತಿಳಿದಿತ್ತು’ ಎಂದು ತಿಳಿಸಿದರು.

‘ನಿರ್ವಾತದಲ್ಲಿ ಸಾರ್ವಜನಿಕ ಆರೋಗ್ಯ ಅಸ್ತಿತ್ವದಲ್ಲಿರುವುದಿಲ್ಲ. ಅದು ಶಿಕ್ಷಣ, ಉದ್ಯೋಗ ಮತ್ತು ನಮ್ಮ ಆರ್ಥಿಕತೆಯೊಂದಿಗೆ ಸ್ವಾಭಾವಿಕವಾಗಿಯೇ ತಳುಕು ಹಾಕಿಕೊಂಡಿದೆ. ಆಸ್ಪತ್ರೆ ಕಾರಿಡಾರ್‌ಗಳಾಚೆ ಇಡೀ ವಿಶ್ವವಿದೆ. ಕ್ಲಿನಿಕ್‌ಗಳ ವಿಶ್ರಾಂತಿ ಕೊಠಡಿಗಳೂ ಸಾರಿಗೆ, ಗೃಹ ಮತ್ತು ಅಭಿವೃದ್ಧಿಯ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿದೆ’ ಎಂದು ಆರೋಗ್ಯ ಸಮಸ್ಯೆಯ ವಿಸ್ತಾರವನ್ನು ಸೂಚ್ಯವಾಗಿ ಹೇಳಿದರು.

*ವಿವೇಕ್ ಈ ಹುದ್ದೆಗೆ ಅರ್ಹತೆಯಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಪೋಷಕರು ನೀಡಿರುವ ಪ್ರೋತ್ಸಾಹ ಅಸಾಧಾರಣವಾದುದು
ಜೋ ಬಿಡೆನ್, ಅಮೆರಿಕ ಉಪಾಧ್ಯಕ್ಷ

*ಮಂಡ್ಯದಲ್ಲಿ ಸಂಬಂಧಿಕರ ಖುಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT