ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಪರ ದನಿಯಾಗಿದ್ದ ಸರೋಜಿನಿ ಮಹಿಷಿ

ವ್ಯಕ್ತಿ ಸ್ಮರಣೆ
Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ರಾಜಕೀಯ, ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮ, ಮಹಿಳಾಪರ ಚಿಂತನೆ, ಚಿತ್ರ ಕಲೆ.. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಾ.ಸರೋಜಿನಿ ಮಹಿಷಿ ಅವರು ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡಬೇಕೆಂಬ ತಮ್ಮ ವರದಿಯಿಂದಲೇ ಖ್ಯಾತರಾದವರು.

ಅವಿಭಜಿತ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನವರಾದ ಸರೋಜಿನಿ ಮಹಿಷಿ (1927– 2015) ಪ್ರಗತಿಪರ ಚಿಂತನೆಯ ಆಧುನಿಕ ಮಹಿಳೆ. ಇವರ ತಂದೆ ಸಂಸ್ಕೃತ ಪಂಡಿತ ಮತ್ತು ವಕೀಲರಾದ ಬಿಂದುರಾವ್ ಮಹಿಷಿ. ತಾಯಿ ಕಮಲಾಬಾಯಿ. ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಸರೋಜಿನಿ ಮಹಿಷಿ ಎರಡನೆಯವರು.

೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕನ್ನಡಿಗರಿಗೆ  ಪರ ಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ರಾಜ್ಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಸರ್ಕಾರ ಸರೋಜಿನಿ ಮಹಿಷಿಯವರನ್ನು ಕೇಳಿಕೊಂಡಿತ್ತು.
ಮಹಿಷಿಯವರು ನೀಡಿದ ವರದಿಯು ‘ಸರೋಜಿನಿ ಮಹಿಷಿ ವರದಿ’ ಎಂದು ಖ್ಯಾತವಾಯಿತು. ರಾಜ್ಯದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದನ್ನು ಪ್ರತಿಪಾದಿಸುವ ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಬುನಾದಿಯಾಗಿದೆ.

ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೂ  ಕೈಗೆಟುಕದ ಕಾಲದಲ್ಲಿ ಇವರು ಪಟ್ಟು ಬಿಡದೆ   ಪಡೆದ ಶೈಕ್ಷಣಿಕ ಪದವಿಗಳ ಪಟ್ಟಿ ಉದ್ದವಿದೆ.
ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲಿಯೇ ಪೂರ್ಣಗೊಳಿಸಿ, ಸಾಂಗ್ಲಿಯ ಮಿಲಿಂಗಟನ್‌ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿ.ಎ ಹಾಗೂ ಎಂ.ಎ. ಪದವಿ ಪಡೆದಿದ್ದರು. ಎಲ್‌ಎಲ್‌ಬಿ ಪದವಿ ಪಡೆದಿದ್ದ ಇವರು, ಧಾರವಾಡದಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ  ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಹಿಂದಿ ಎಂ.ಎ.ಗೆ ಸರಿಸಮನಾದ ಸಾಹಿತ್ಯ ರತ್ನ, ಹೊಲಿಗೆ ಮತ್ತು ಕಸೂತಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರು. ಸಿತಾರ್‌ ಕಲಿತಿದ್ದರು. ಚೆನ್ನಾಗಿ ಹಾಡುತ್ತಿದ್ದರು. ಉತ್ತಮವಾಗಿ ಪೇಂಟಿಂಗ್‌ ಮಾಡುತ್ತಿದ್ದರು. ಕರ್ನಾಟಕ, ವಿಜಯಪುರ, ಹಂಪಿ  ಹಾಗೂ ಉಜ್ಜಯಿನಿ ವಿಶ್ವವಿದ್ಯಾಲಯಗಳು ಸರೋಜಿನಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿವೆ.

ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸರೋಜಿನಿ ಮಹಿಷಿ 4 ಸಲ ಲೋಕ­ಸಭೆ, 2 ಅವಧಿಗೆ ರಾಜ್ಯಸಭಾ ಸದಸ್ಯರಾಗಿ­ದ್ದರು. 1962ರಲ್ಲಿ ಧಾರವಾಡದ ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದಾಗ ಇವರು ಖರ್ಚು ಮಾಡಿದ ಹಣ ಕೇವಲ ₨10 ಸಾವಿರ. ನಂತರ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ವಿಮಾನಯಾನ, ಪರಿಸರ ಹಾಗೂ ಕಾನೂನು ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಇಂದಿರಾ­ಗಾಂಧಿ ‘ಬಲಗೈ’ ಎಂದೇ ಬಿಂಬಿತರಾಗಿದ್ದ ಇವರು, ಇಂದಿರಾ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದರು. ಇಂದಿರಾ ಗಾಂಧಿ ಅವರ ಸಖ್ಯದಿಂದ ದೂರವಾದ ನಂತರ ಮಹಿಷಿಯವರ ರಾಜಕೀಯ ಜೀವನವೂ ಮಸುಕಾಯಿತು.­ಕಸೂತಿ ಕೆಲಸದಿಂದ ಜಾನಪದ ಸಾಹಿತ್ಯದವರೆಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸರೋಜಿನಿ ಮಹಿಷಿಯವರು ಸಮಯ ವ್ಯರ್ಥ ಮಾಡದೆ ಒಂದಿಲ್ಲೊಂದು ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

‘ರೂಪಾ’ (ಕಥಾ ಸಂಕಲನ), ‘ಸಾಹಿತ್ಯ ಮಂಥನ’, ‘ಕಸೂತಿ ಕಲೆ’, ‘ಶಕುಂತಲಾ’ (ಕಾದಂಬರಿ ಅನುವಾದ), ‘ಸ್ವಾತಂತ್ರ್ಯ ಕಹಳೆ’, ‘ಹಿಮಾಲಯದಿಂದ ರಾಮೇಶ್ವರ’ (ಕವನ ಸಂಕಲನ), ‘ಕಾಳಿದಾಸ’, ‘ಶ್ರೀಹರ್ಷ’, ‘ಭವಭೂತಿ’ ಸೇರಿದಂತೆ ಮೂವತ್ತೈದು ಕೃತಿಗಳನ್ನು ರಚಿಸಿದ್ದಾರೆ.
ಡಿ.ವಿ.ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ ಹಾಗೂ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗಳನ್ನು ಅವರು ಹಿಂದಿಗೆ ಭಾಷಾಂತರಿಸಿದ್ದಾರೆ. ಸಂಸ್ಕೃತದ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಇವರು, ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ ಆರಂಭಿಸಲು ಕಾರಣವಾದವರಲ್ಲಿ ಪ್ರಮುಖರು. ವೇದಕಾಲದಿಂದ ಇಪ್ಪತ್ತನೇ ಶತಮಾನದವರೆಗಿನ ಕರ್ನಾಟಕದ ಕವಯತ್ರಿಯರನ್ನು ಕುರಿತು ಸಂಶೋಧನೆ ಮಾಡಿ ಸಲ್ಲಿಸಿದ್ದ ‘ಕರ್ನಾಟಕ ಕವಯತ್ರಿಯರು’ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ ಲಭಿಸಿದೆ.

ಕಳೆದ ಕೆಲವು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದ ಸರೋಜಿನಿ ಮಹಿಷಿ ಅವರು ದೆಹಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ದೆಹಲಿಯ ಹಿಂದಿ ಭವನ ನೀಡುವ ಪ್ರತಿಷ್ಠಿತ ‘ಹಿಂದಿ ರತ್ನ ಸಮ್ಮಾನ್‌’ ಪ್ರಶಸ್ತಿ ಕೂಡ ಇವರಿಗೆ ಸಂದಿದೆ. ಅತ್ಯಂತ ಕ್ರಿಯಾಶೀಲ  ಮಹಿಳೆಯಾಗಿದ್ದ ಮಹಿಷಿ ಅವರು ಉತ್ತಮ ವಾಗ್ಮಿಯೂ ಹೌದು. ಶಿಕ್ಷಣ, ರಾಮಾಯಣ, ರಾಜಕೀಯ ಯಾವುದೇ ವಿಷಯವಿರಲಿ ಗಂಟೆಗಟ್ಟಲೆ ಸಲೀಸಾಗಿ ಮಾತನಾಡುವ ಕಲೆ ಸಿದ್ಧಿಸಿಕೊಂಡಿದ್ದರು.  ದೇವಸ್ಥಾನಗಳಲ್ಲಿ ರಾಮಾಯಣ, ಮಹಾಭಾರತವನ್ನು ಕುರಿತು ಪ್ರವಚನಗಳನ್ನು ನೀಡಿದ್ದೂ ಇದೆ.

ಧಾರವಾಡದ ವನಿತಾ ಸೇವಾ ಸಮಾಜ,1950ರ ಸುಮಾರಿಗೆ ಹೊರತರುತ್ತಿದ್ದ ‘ವೀರಮಾತೆ’ ಮಾಸ ಪತ್ರಿಕೆಗೆ ಇವರು ಸಂಪಾದಕಿಯಾಗಿದ್ದರು. ಸರೋಜಿನಿ ಮಹಿಷಿಯವರು ಅನೇಕ ಮಹಿಳಾ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಮಹಿಳೆಯರ ಏಳಿಗೆಗಾಗಿ ವನಿತಾ ಸೇವಾ ಸಮಾಜವನ್ನು ಸ್ಥಾಪಿಸಿದ್ದಾರೆ. ತಮ್ಮ ಸಹೋದರ, ಸಹೋದರಿಯರೊಡಗೂಡಿ ಶಿಕ್ಷಣ ಸಂಸ್ಥೆಗಳು ಹಾಗೂ ಚಾರಿಟಬಲ್‌ ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.

ಜ್ಯೋತಿಷ್ಯವನ್ನು ಅಪಾರವಾಗಿ ನಂಬುತ್ತಿದ್ದುದು ಅವರ ವ್ಯಕ್ತಿತ್ವದ ಇನ್ನೊಂದು ಆಯಾಮ. ದೆಹಲಿಯಲ್ಲೇ ಉಳಿದರೆ ರಾಜಕೀಯ ಪುನರ್ವಸತಿ ದೊರೆಯುವ ಸಾಧ್ಯತೆಯಿದೆ ಎಂದು ಜ್ಯೋತಿಷಿಗಳು ಹೇಳಿದ್ದರಿಂದ ಅವರು ಅಲ್ಲೇ ಉಳಿಯಲು ನಿರ್ಧರಿಸಿದರು. ಬಳಿಕ ಸಮೀಪದ ಗಾಜಿಯಾಬಾದಿಗೆ ಹೋಗಿದ್ದರು. ಇದೊಂದು ವಿಪರ್ಯಾಸ. ಕಡೆಗೂ ಅವರಿಗೆ ರಾಜಕೀಯ ಮರುಜೀವ ದೊರೆಯಲಿಲ್ಲ. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ವಾದ ಮಂಡಿಸಿರುವ ಮಹಿಷಿ ವರದಿಗೆ ಹೊಸ ಕಾಲದಲ್ಲಿ ಮರಳಿ ಜೀವ ತುಂಬುವುದೇ ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT