ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಸಮಸ್ಯೆಗಳಿಗೆ ಮಾಹಿತಿ ಕೇಂದ್ರ ಬೆಳಕು

Last Updated 1 ಜೂನ್ 2011, 9:40 IST
ಅಕ್ಷರ ಗಾತ್ರ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಆಶ್ರಯದಲ್ಲಿ ನಗರದ `ಕನ್ನಡ ಅಧ್ಯಾಪಕರ ಭವನ~ದಲ್ಲಿ ಇತ್ತೀಚೆಗೆ ಚಾಲನೆಗೊಂಡ `ಕನ್ನಡಿಗರ ಮಾಹಿತಿ ಕೇಂದ್ರ~ ಗಡಿನಾಡ ಕನ್ನಡಿಗರಿಗೆ ಆಶಾಕಿರಣವಾಗಿದೆ.

ಪ್ರತಿ ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಕಾರ್ಯಾಚರಿಸುವ ಈ ಕೇಂದ್ರದಲ್ಲಿ ಹಲವಾರು ಮಂದಿ ಸಮಸ್ಯೆ, ಸಂಶಯಗಳನ್ನು ಪರಿಹರಿಸಿಕೊಂಡರು.ಹೊಸದಾಗಿ ಕನ್ನಡ ಮಾಧ್ಯಮದಲ್ಲಿ ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆ ಬರೆದು ಫಲಿತಾಂಶ ಲಭಿಸದೆ, ಪದವಿ ಪ್ರವೇಶದ ಅರ್ಜಿ ಹಾಕುವ ದಿನ ಕೊನೆಗೊಂಡು ತಳಮಳಗೊಂಡ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗೆ ಮಾಹಿತಿ ಕೇಂದ್ರದಿಂದ ಸಾಂತ್ವನ, ಮಾರ್ಗದರ್ಶನ ಲಭಿಸಿತು.

ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಅಧ್ಯಾಪಕರ ಸಂಘ ಹೈಯರ್ ಸೆಕೆಂಡರಿ ಪ್ರಭಾರ ನಿರ್ದೇಶಕರು, ಡಿ.ಪಿ.ಐ., ಕಾಲೇಜು ಶಿಕ್ಷಣ ನಿರ್ದೇಶಕರು, ಕಣ್ಣೂರು ವಿವಿ ನೋಂದಾವಣಾಧಿಕಾರಿಗಳ ಜತೆ ಸಂಪರ್ಕಿಸಿ ಶೀಘ್ರದಲ್ಲಿ ಫಲಿತಾಂಶ ಪ್ರಕಟಿಸುವ ಮತ್ತು ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು 3 ದಿನ ಮುಂದೂಡುವ ಭರವಸೆ ಲಭಿಸಿತು ಎಂದು ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ತಿಳಿಸಿದ್ದಾರೆ.

ವೇತನ ಪರಿಷ್ಕರಣೆ-ವೇತನ ನಿಗದಿ ಕುರಿತು ಮಾಹಿತಿ-ಸಮಸ್ಯೆಗಳ ಪರಿಹಾರಕ್ಕಾಗಿ ಬಂದ ಹಲವು ಶಿಕ್ಷಕರಿಗೆ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್‌ದಾಸ್, ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಪುಂಡರಿಕಾಕ್ಷ ಆಚಾರ್ಯ, ವಿದ್ಯಾಧಿಕಾರಿ ಕಚೇರಿಯ ನಿವೃತ್ತ ನೌಕರ ಶಶಿಭಾಟಿಯ, ಶಿಕ್ಷಕರಾದ ಎಂ.ವಿ.ಮಹಾಲಿಂಗೇಶ್ವರ ಭಟ್, ಡಿ.ಮಹಾಲಿಂಗೇಶ್ವರ ರಾಜ್ ಅವರಿಂದ ಮಾಹಿತಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಸತೀಶ್, ಶಿಕ್ಷಕರಾದ ಗುರುಪ್ರಸಾದ್ ರೈ ಕೆ, ಸತೀಶ್ ಕುಮಾರ್ ಎ, ಅಬ್ದುಲ್ ರಹಿಮಾನ್ ಶೇಣಿ ಇದ್ದರು.

ಕನ್ನಡ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸಲು ಮಾಹಿತಿ ಕೇಂದ್ರದ ಅಧಿಕಾರಿಗಳು ಸಂಬಂಧಪಟ್ಟವರ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು. ಜೂನ್ 4ರಂದು ಧರಣಿ: ಕಡ್ಡಾಯ ಮಲಯಾಳ ಹೇರಿಕೆಯನ್ನು ಖಂಡಿಸಿ ಜೂ.4ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ಅಂದು ಮಧ್ಯಾಹ್ನದ ಬಳಿಕ ಮಾಹಿತಿ ಕೇಂದ್ರ ತೆರೆಯಲಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT