ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೆ ಗೀತಾಂಜಲಿಯ ಆಕರ್ಷಣೆ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗುರುದೇವ ರವೀಂದ್ರನಾಥ ಠಾಕೂರರು ಹುಟ್ಟಿ 150 ವರ್ಷಗಳು ತುಂಬಿವೆ. ಈಗ ದೇಶವಿದೇಶಗಳಲ್ಲಿ ಅವರ ಶತಮಾನೋತ್ತರ ಸ್ವರ್ಣ ಜಯಂತಿ ಆಚರಣೆ. ಅವರ ಸಾಹಿತ್ಯ, ಸಂಸ್ಕೃತಿ ಚಿಂತನೆ, ವಸಾಹತು ಸಂದರ್ಭದಲ್ಲಿ ಭಾರತದ ಎಲ್ಲ ಭಾಷೆಗಳ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಪ್ರಭಾವ ಬೀರಿದೆ. ಕನ್ನಡದ ಮಟ್ಟಿಗೆ ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ.

ಹಾಗೆಯೇ ಅವರ ಎಲ್ಲ ಬಗೆಯ ಸಾಹಿತ್ಯ ನಿರಂತರವಾಗಿ ಕನ್ನಡಕ್ಕೆ ಅನುವಾದಗೊಂಡಿವೆ. 

ಪ್ರಾಚ್ಯ ಮತ್ತು ಪಾಶ್ಚಾತ್ಯ ಮೌಲ್ಯಗಳ ಸಂಘರ್ಷ ಮೊತ್ತಮೊದಲು ಎದುರಾದದ್ದು ಬಂಗಾಳದಲ್ಲಿ; ಅನಂತರ ಮಹಾರಾಷ್ಟ್ರ ಕರ್ನಾಟಕಗಳಲ್ಲೂ ಪ್ರಬಲವಾದ ಹೋರಾಟಕ್ಕೆ ಎಡೆಮಾಡಿಕೊಟ್ಟಿತು. ಠಾಕೂರರ ವಿಚಾರಧಾರೆಗಳು ಕನ್ನಡದಂಥ ಭಾರತದ ಇನ್ನಿತರ ಸಂಸ್ಕೃತಿಗಳ ಸಂವೇದನೆಯನ್ನು ಆರೋಗ್ಯಕರವಾದ ನೆಲೆಯಲ್ಲಿ ಪ್ರಭಾವಿಸಿತು. ಕನ್ನಡದ ಎಂ. ಗೋವಿಂದ ಪೈ, ಟಿ. ಎಸ್. ವೆಂಕಣ್ಣಯ್ಯ, ಮಾಸ್ತಿ, ಎಂ. ಎನ್. ಕಾಮತ್, ಎ. ಆರ್. ಕೃಷ್ಣಶಾಸ್ತ್ರಿ, ಕುವೆಂಪು, ಬೇಂದ್ರೆ, ಮಧುರ ಚೆನ್ನ, ನರೇಗಲ್ಲ ಪ್ರಹ್ಲಾದರಾಯ, ಅಹೋಬಲ ಶಂಕರ, ಎಚ್.ವಿ. ಸಾವಿತ್ರಮ್ಮ, ಶಂಕರಾನಂದ ಸರಸ್ವತಿ, ಅಂಬುಜಾಕ್ಷಿ, ಗಜಾನನ ಶರ್ಮ, ಸಿ.ಪಿ.ಕೆ., ಜಿ. ರಾಮನಾಥ ಭಟ್ ಮೊದಲಾದ ಲೇಖಕರ ಕೃತಿಗಳಿಗೆ ಬೇಕಾದ ಜೀವದ್ರವ್ಯ ಠಾಕೂರರ ಕೃತಿಗಳಿಂದ ದೊರೆತಿದೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂಗಾಳ ಸಾಹಿತ್ಯ ಅನುವಾದಗಳಿಂದಲೆ ಪ್ರೇರಣೆ ನೀಡಿತು. ಹಾಗೆಯೇ ನವೋದಯ ಕಾಲದ ಆಧುನಿಕ ಸಂವೇದನೆಯಲ್ಲಿ ಹೊಸ ಪ್ರಭೆಯೊಂದು ಸಮ್ಮಿಳಿತವಾಯಿತು. ವಂಗ ಸಾಹಿತ್ಯ ಪರಿಷತ್ತಿನ ಪ್ರಭಾವ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಪ್ರೇರಣೆ ಒದಗಿಸಿತು. 

ಜಾಗತಿಕ ಮಟ್ಟದ ಠಾಕೂರರ ಪ್ರಸಿದ್ಧಿಗೆ, ಅನೇಕರು ತಮ್ಮ ತಮ್ಮ ಭಾಷೆಗಳಿಗೆ ಮಾಡಿಕೊಂಡ ಅನುವಾದಗಳೇ ನೆಲೆ. ಅವರ ಪ್ರಖ್ಯಾತಿ ಹಾಗೂ ನಿರಂತರ ಜೀವಂತಿಕೆಗೆ  ಅನುವಾದ ಮತ್ತು ಅನುವಾದಕರೇ ಕಾರಣ.  `ಗೀತಾಂಜಲಿ~ಯಿಂದ ಠಾಕೂರರ ಕೀರ್ತಿ ಹಬ್ಬಿದ ಕ್ಷಣದಿಂದ ಜಾಗತಿಕ ಮಟ್ಟದಲ್ಲಿ ಅನೇಕ ಭಾಷೆಗಳಲ್ಲಿ ನಡೆದಿರುವ ಅನುವಾದ ಪ್ರಕ್ರಿಯೆ ಅವರನ್ನು ಸಾಂಸ್ಕೃತಿಕ ಪ್ರತಿಭೆಯಾಗಿ ಶಾಶ್ವತಗೊಳಿಸಿದೆ. ಅವರ ಕೃತಿಗಳ ಜಾಗತಿಕ ಹಾಗೂ ಭಾರತೀಯ ಅನುವಾದಗಳಿಗೆ ಲೆಕ್ಕವೇ ಇಲ್ಲ. 

ಕನ್ನಡಕ್ಕೆ ಠಾಕೂರರ ಕೃತಿಗಳು ಹಲವು ಭಾಷೆಗಳಿಂದ ಬಂದಿವೆ. ಅನೇಕ ಕೃತಿಗಳು  ಕನ್ನಡಿಗರು ನೇರವಾಗಿ ಬಂಗಾಲಿಯನ್ನು ಕಲಿತು ಮಾಡಿದ್ದಾದರೆ, ಬಂಗಾಲಿ ಕಲಿಯದ ಇನ್ನಿತರರು ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು ಮೊದಲಾದ ಭಾಷೆಗಳಿಂದ ಕನ್ನಡಕ್ಕೆ ತಂದುಕೊಂಡಿದ್ದಾರೆ. ಕರ್ನಾಟಕದ ಎಲ್ಲ ಭಾಗದ ಲೇಖಕ ಅನುವಾದಕರು ಈ ಕಾರ್ಯದಲ್ಲಿ ತಮ್ಮನ್ನು ಪ್ರೀತ್ಯಾದರಗಳಿಂದ ತೊಡಗಿಸಿಕೊಂಡಿದ್ದಾರೆ.

ಅನುವಾದ ಮಾತ್ರವಲ್ಲದೆ, ರವೀಂದ್ರರ ಕೃತಿಗಳನ್ನು ಕುರಿತು ನಡೆದಿರುವ ಅಧ್ಯಯನವೂ ಹೆಚ್ಚಾಗಿದೆ. ಒಟ್ಟಿನಲ್ಲಿ ಠಾಕೂರರ ವಿಚಾರಧಾರೆ ಕೇವಲ ಬಂಗಾಳಕ್ಕೆ ಮಾತ್ರ ಸೀಮಿತವಾಗದೆ ಅನುವಾದಗಳಿಂದ ಇಡೀ ರಾಷ್ಟ್ರದ ಮೇಲೆ ತನ್ನ ಪ್ರಭಾವವನ್ನು ಬೀರಿ,  ರಾಷ್ಟ್ರೀಯ ಚಳವಳಿ ಮತ್ತು ಸಾಂಸ್ಕೃತಿಕ ಸಂಘರ್ಷಕ್ಕೆ ಅನೇಕ ಪ್ರತಿಭೆಗಳು ಎಚ್ಚರಗೊಳ್ಳುವಂತೆ ಮಾಡಿದೆ. ಅಂತೆಯೇ ಅವರ ಚಿಂತನೆಗಳು ಕನ್ನಡದ ನೆಲೆಯಲ್ಲಿ ಅನೇಕ ಪ್ರಯೋಗಗಳಿಗೆ ಅನುವು ಮಾಡಿಕೊಡಲು ಪ್ರೇರಕವಾಗಿದೆ. ಈ ಮುಖೇನ ಠಾಕೂರರಿಂದ ಶೋಧಿತಗೊಂಡ ಭಾರತೀಯ ನವೋತ್ಥಾನ ಅಥವಾ ಪುನರುತ್ಥಾನ ಕನ್ನಡದ ನವೋದಯಕ್ಕೆ ನಾಂದಿಯಾಗಿರುವುದನ್ನು ನಿಚ್ಚಳವಾಗಿ ಕಾಣಬಹುದು.

ನೊಬೆಲ್ ಪ್ರಶಸ್ತಿ ವಿಜೇತ `ಗೀತಾಂಜಲಿ~ಯ ಬಗ್ಗೆ  ಕನ್ನಡಿಗರಿಗೆ ಕುಂದದ ಆಕರ್ಷಣೆ. ಮಂಜೇಶ್ವರ ಗೋವಿಂದ ಪೈ ಅವರು 1925-26ರಲ್ಲೇ `ಶ್ರೀ ರವೀಂದ್ರನಾಥ ತಾಗೋರರ ಗೀತಾಂಜಲಿ~ ಎಂಬ ಹೆಸರಿನಲ್ಲಿ 35 ಕವಿತೆಗಳ ಅನುವಾದ ಮಾಡಿದರು. ಇವು `ಗೋವಿಂದ ಪೈ ವಾಙ್ಮಯ ದರ್ಶನ~ ದಲ್ಲಿ ಉಲ್ಲೇಖಗೊಂಡಿಲ್ಲ.

1995ರಲಿ ್ಲಹೇರಂಜೆ ಕೃಷ್ಣಭಟ್ಟ ಮತ್ತು ಮುರಳೀಧರ ಉಪಾಧ್ಯ ಹಿರಿಯಡ್ಕ ಸಂಪಾದಿಸಿ, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿದ `ಗೋವಿಂದ ಪೈ ಸಂಶೋಧನ ಸಂಪುಟ~ ದಲ್ಲಿ  ಸೇರಿವೆ.


ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 82 ಪುಟಗಳ `ಠಾಕೂರ ಕವಿವರರ ಗೀತಾಂಜಲಿ~ ಹೆಸರಿನ ಅನುವಾದವನ್ನು ತಮ್ಮ ಬೆಂಗಳೂರಿನ ಜೀವನ ಕಾರ‌್ಯಾಲಯದಿಂದ ಪ್ರಕಟಿಸಿದ್ದಾರೆ. ಎಂ.ಬಿ. ಬೂದಿಹಾಳಮಠ ಅವರು 1943ರಲಿ ್ಲಮೊದಲಿಗೆ ಪ್ರಕಟಿಸಿದ `ಗೀತಾಂಜಲಿ~ ಅನುವಾದ 1945, 1957, 1985, 2002 ಹೀಗೆ ಐದು ಬಾರಿ ಮರುಮುದ್ರಣಗೊಂಡಿದೆ. ವಿದ್ವಾಂಸ ಶಿ.ಶಿ. ಬಸವನಾಳ ಅವರು ಮುನ್ನುಡಿ ಬರೆದಿದ್ದಾರೆ. 1952ರಲ್ಲಿ ನರೇಗಲ್ಲ ಪ್ರಹ್ಲಾದರಾವ್ ಅವರು ನೇರ ಬಂಗಾಳಿಯಿಂದ ಅನುವಾದ ಮಾಡಿ ಪ್ರಕಟಿಸಿದ `ಕನ್ನಡ ಗೀತಾಂಜಲಿ~ 2003ರಲಿ ್ಲಎರಡನೆಯ ಮುದ್ರಣ ಕಂಡಿದೆ. ಇವರು ಒಟ್ಟು 157 ಕವಿತೆಗಳನ್ನು ಅನುವಾದಿಸಿದ್ದು ಪ್ರಸ್ತುತ ಎರಡನೆಯ ಆವೃತ್ತಿಯಲ್ಲಿ 75 ಕವನಗಳು ಮಾತ್ರ ಇವೆ. 1954ರಲ್ಲಿ `ಕನ್ನಡ ಗೀತಾಂಜಲಿ~ ಯನ್ನು ಎರಡು ಭಾಗಗಳಲಿ ್ಲಧಾರವಾಡದ ಮಿಂಚಿನಬಳ್ಳಿ ಕಾರ‌್ಯಾಲಯದಿಂದ ಮರು ಪ್ರಕಟಿಸಿದ್ದಾರೆ. ಅನುವಾದಕರ `ಜಯ ಗುರುದೇವ~  ನಾಂದಿ ಪದ್ಯವಾಗಿ ಪ್ರಕಟವಾಗಿದೆ. ನಾರಾಯಣ ಸಂಗಮ ಮುನ್ನುಡಿ ಬರೆದಿದ್ದಾರೆ.

ಹೊಸಪೇಟೆಯ ಡಿ. ನಾರಾಯಣ ಭಟ್ಟ 1955ರಲ್ಲಿ ಅನುವಾದಿಸಿ `ಕನ್ನಡ ಗೀತಾಂಜಲಿ~ಯನ್ನು ಪ್ರಕಟಿಸಿದ್ದಾರೆ. ಗೀತಾಂಜಲಿಯನ್ನು ಗದ್ಯಶೈಲಿಯಲ್ಲಿ ಅನುವಾದ ಮಾಡಿರುವ ಮೃತ್ಯುಂಜಯ ಬಸವಯ್ಯ ಬೂದಿಹಾಳಮಠ ಅವರು ಇದನ್ನು ಶಾಲೆಗಳ ಉಪಯೋಗಕ್ಕಾಗಿ 1956ರಲ್ಲಿ ಮರು ಮುದ್ರಿಸಿದ್ದಾರೆ. ಈ ಕೃತಿಯ ಮೊದಲ ಆವೃತ್ತಿಯ ಬಗ್ಗೆ ನಮೂದುಗಳಿಲ್ಲ.  ವೆಂಕಟ್ರಾಯ ಆನಂದ ಶೆಣೈ 1959ರಲ್ಲಿ ಗೀತಾಂಜಲಿ ಅನುವಾದ ಪ್ರಕಟಿಸಿದ್ದು ಶಿವರಾಮ ಕಾರಂತರು ಎರಡು ಪುಟಗಳ ಮುನ್ನುಡಿ ಬರೆದಿದ್ದಾರೆ. ಬೆನ್ನಿನ ಪುಟದಲ್ಲಿ ರವೀಂದ್ರರು ತಮ್ಮ ಶಸ್ತ್ರ ಚಿಕಿತ್ಸೆಯ ಹಿಂದಿನ ದಿನ ಬರೆದ ಕೊನೆಯ ಕವಿತೆ ಇದೆ.  ಇಂಗ್ಲಿಷ್‌ನಿಂದ ಅನುವಾದ ಮಾಡಿದ 103 ಕವಿತೆಗಳು ವಚನ/ ಗದ್ಯ ಶೈಲಿಯಲ್ಲಿವೆ. 

1962ರಲ್ಲಿ ಮಂಡ್ಯದ ಬಿ. ಬೊಮ್ಮಯ್ಯ ಅವರು ಗೀತಾಂಜಲಿಯ ಅನುವಾದ ಪ್ರಕಟಿಸಿದ್ದಾರೆ. ಸ.ಪ. ಗಾಂವಕಾರ ಅವರೂ 1962ರಲ್ಲಿ ಅನುವಾದಿಸಿ ಪ್ರಕಟಿಸಿದ್ದು, ಅದರ ಮೂರನೆಯ ಮುದ್ರಣ 1988ರಲ್ಲಿ  ಧಾರವಾಡದ ಸಮಾಜ ಪುಸ್ತಕಾಲಯದಿಂದ ಹೊರಬಂದಿದೆ. ಅನಂತ/ ಬಿ.ಎಸ್. ಅನಂತಸ್ವಾಮಿರಾವ್ ಅವರು  ಮೂಲ ಬಂಗಾಲಿ ಮತ್ತು ಇಂಗ್ಲಿಷ್ ಅನುವಾದಗಳನ್ನು ಆಧರಿಸಿ ಗೀತಾಂಜಲಿಯನ್ನು 1959ರಲಿ ್ಲಅನುವಾದಿಸಿದ್ದರೂ 1983ರಲ್ಲಿ ಪ್ರಕಟಿಸಿದರು.

2007ರಲ್ಲಿ ಎರಡನೆಯ ಮುದ್ರಣ ಹೊರತಂದಿದ್ದಾರೆ. ಗೋಕಾಕರ ಬೆನ್ನುಡಿಯಿದೆ.
 ಜಗತ್ತಿನ ವಿವಿಧ ಕವಿಗಳ ಕಾವ್ಯಾನುವಾದ ಮಾಡಿ 1986ರಲ್ಲಿ `ಕಾವ್ಯ ಜಗತ್ತು~  ಪ್ರಕಟಿಸಿದ ಗೋಪಾಲಕೃಷ್ಣ ಅಡಿಗರು ಇದರಲ್ಲಿ ಗೀತಾಂಜಲಿಯ 30 ಕವಿತೆಗಳ ಅನುವಾದ ನೀಡಿದ್ದಾರೆ. 1998ರಲ್ಲಿ ಒಟ್ಟು 103 ಕವಿತೆಗಳನ್ನು ಜಿ.ಎಸ್. ಶಾಮಣ್ಣ ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ತಮ್ಮ ಅನುವಾದವನ್ನು `ಕನ್ನಡ ಭಾವಾನುವಾದ~ ಎಂದು ಕರೆದುಕೊಂಡಿದ್ದಾರೆ.

ರವೀಂದ್ರರ ಸಾವಿರಾರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಜಿ. ರಾಮನಾಥ ಭಟ್ ಅವರು 1999ರಲ್ಲಿ `ಗೀತಾಂಜಲಿ~ ಯಲ್ಲಿ ಒಟ್ಟು 207 ಕವಿತೆಗಳನ್ನು ಪ್ರಕಟಿಸಿದ್ದು, ಅದರ ಪರಿಷ್ಕೃತ ಮುದ್ರಣವನ್ನು 2007ರಲ್ಲಿ ಪ್ರಕಟಿಸಿದರು. ಅದರಲ್ಲಿ  ಡಬ್ಲ್ಯು. ಬಿ. ಯೇಟ್ಸ್ ಗೀತಾಂಜಲಿಯ ಇಂಗ್ಲಿಷ್ ಆವೃತ್ತಿಗೆ ಬರೆದ ಮುನ್ನುಡಿ, ರವೀಂದ್ರರು ನೊಬೆಲ್ ಸ್ವೀಕಾರ ಸಮಾರಂಭದಲ್ಲಿ ಮಾಡಿದ ಭಾಷಣ, ಹೆರಾಲ್ಡ್ ಜಾರ್ನ್ ಅವರ ನೊಬೆಲ್ ಪ್ರಶಸ್ತಿ ಪ್ರದಾನ ಭಾಷಣ, 1913-ನೊಬೆಲ್ ಪ್ರಶಸ್ತಿ ಸಮಾರಂಭದಲ್ಲಿ  ಠಾಕೂರರು ನೀಡಿದ ಸಂದೇಶ ಇವೆಲ್ಲ ಸೇರಿವೆ.

ಬಿ.ವಿ. ಮಹೀದಾಸ ಅವರು ಇಂಗ್ಲಿಷ್‌ನಿಂದ ಒಟ್ಟು 103 ಕವಿತೆಗಳನ್ನು ಅನುವಾದ ಮಾಡಿ ಟಿಪ್ಪಣಿ ಸಹಿತ `ಕನ್ನಡ ಗೀತಾಂಜಲಿ~ಯನ್ನು 2002ರಲಿ ್ಲಪ್ರಕಟಿಸಿದ್ದಾರೆ. ಇಂಗ್ಲಿಷ್ ಅನುವಾದವನ್ನು ಆಧರಿಸಿ ಗೀತಾಂಜಲಿಯನ್ನು ಗದ್ಯಶೈಲಿಯಲಿ ್ಲಅನುವಾದಿಸಿ 2004ರಲ್ಲಿ ಪ್ರಕಟಿಸಿದ ಸಿಪಿಕೆ ಅವರ ಕೃತಿಗೆ ಎಲ್.ಎಸ್.ಶೇಷಗಿರಿರಾವ್ ಅವರ ಮುನ್ನುಡಿಯಿದೆ. ನವೀನ್ ಹಳೇಮನೆ 2007ರಲಿ ್ಲ?ಗೀತಾಂಜಲಿ?ಯಲಿ ್ಲಕನ್ನಡದ ಅನುವಾದಿತ ಕವನಗಳ ಮೊದಲ ಸಾಲುಗಳೊಂದಿಗೆ ಮೂದ ಮೊದಲ ಸಾಲುಗಳ ಅನುಕ್ರಮಣಿಕೆ ನೀಡಿದ್ದಾರೆ. ಒಟ್ಟು 103 ಕವಿತೆಗಳು ಇವೆ.

157 ಕವಿತೆಗಳನ್ನು ಎಂ.ಆರ್.ಸಿ. ನಾಗರಾಜನ್ ಅವರು 2007ರಲ್ಲಿ ಅನುವಾದಿಸಿ `ಗೀತಾಂಜಲಿ~ ಪ್ರಕಟಿಸಿದ್ದಾರೆ.  ಮೂಲ ಇಂಗ್ಲಿಷ್  ಪಾಠ ಮತ್ತು ಕನ್ನಡ ಅನುವಾದ ಎರಡನ್ನೂ ನೀಡಿರುವ ಮಹಿಪಾಲ ದೇಸಾಯಿ ಚಿಕ್ಕಮ್ಯಾಗೇರಿಯವರು  2007ರಲ್ಲಿ `ಗೀತಾಂಜಲಿ~ ಪ್ರಕಟಿಸಿದ್ದಾರೆ. ಚಂಪಾ ಅವರ ಮುನ್ನುಡಿಯಿದೆ. ಎ. ಕೃಷ್ಣ ಸುರಪುರ 2008ರಲ್ಲಿ ಜಿ. ಆರ್. ಕುಲಕರ್ಣಿ ಇಂಗ್ಲಿಷ್‌ನಿಂದ ಕನ್ನಡ ಗದ್ಯಾನುವಾದ ಮಾಡಿದ್ದನ್ನು ಆಧರಿಸಿ ಕನ್ನಡ ಪದ್ಯಾನುವಾದ ಮಾಡಿದ್ದಾರೆ. ಇವೆರಡೂ ಇಲ್ಲಿವೆ.  ಸೀತಾರಾಮ ಜಾಗೀರ್‌ದಾರ್ ಮುನ್ನುಡಿಯಿದೆ. ಮೈಸೂರಿನ ಶಶಿಕಲಾ ಸುಬ್ಬಣ್ಣ, ಇತ್ತೀಚೆಗೆ ದೇವರ ಕೊಂಡಪ್ಪ ಗೀತಾಂಜಲಿಯ ಅನುವಾದ ಪ್ರಕಟ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT