ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ: ತನಿಖೆಗೆ ಆಗ್ರಹ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗದಗದ ಕಪ್ಪತಗುಡ್ಡದಲ್ಲಿ ಭಾರಿ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆದಿದ್ದು, ಈ ಕುರಿತು ತಕ್ಷಣವೇ ರಾಜ್ಯ ಸರ್ಕಾರ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್. ಆರ್. ಹಿರೇಮಠ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಪ್ಪತಗುಡ್ಡದಲ್ಲಿ ಲಭ್ಯವಿದ್ದ ಅದಿರಿನಲ್ಲಿ ಶೇಕಡ 40ರಷ್ಟು ಲೂಟಿಯಾಗಿದೆ. ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಆಶ್ರಯದಲ್ಲೇ ಇದು ನಡೆದಿದೆ. ಆದರೆ, ಈವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಈ ಪ್ರಕರಣದ ಬಗ್ಗೆ ತಕ್ಷಣವೇ ತನಿಖೆಗೆ ಆದೇಶಿಸಬೇಕು~ ಎಂದು ಆಗ್ರಹಿಸಿದರು.

ಕಪ್ಪತಗುಡ್ಡದ ರಕ್ಷಣೆಗಾಗಿ `ಕಪ್ಪತಗುಡ್ಡ ಉಳಿಸಿ~ ಆಂದೋಲನ ನಡೆಸಲಾಗುವುದು. ಪಶ್ಚಿಮಘಟ್ಟ, ಬಳ್ಳಾರಿಯ ಸುಗ್ಗಲಮ್ಮ ದೇವಾಲಯ, ಕಾರವಾರದ ಬೇಲೆಕೇರಿ ಬಂದರಿನಿಂದ ಆರಂಭವಾಗುವ ಜಾಥಾಗಳು ಜನವರಿ 25ರಂದು ಕಪ್ಪತಗುಡ್ಡದಲ್ಲಿ ಸಮಾವೇಶಗೊಳ್ಳಲಿವೆ. ಅಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಗುಡ್ಡದ ರಕ್ಷಣೆ ನಿರ್ಣಯ ಕೈಗೊಳ್ಳಲಾಗುವುದು. ಜನ ಜಾಗೃತಿ, ಹೋರಾಟ, ವಿಚಾರ ಸಂಕಿರಣದ ಮೂಲಕ ಆಂದೋಲನ ನಡೆಯಲಿದೆ ಎಂದರು.

`ಬಳ್ಳಾರಿಯ ವಿವಿಧೆಡೆ ನಡೆದ ಅಕ್ರಮ ಗಣಿಗಾರಿಕೆಗೆ ಸರಿಸಮನಾದ ರೀತಿಯಲ್ಲೇ ಕಪ್ಪತಗುಡ್ಡದಲ್ಲೂ ಅದಿರು ಲೂಟಿ ನಡೆದಿದೆ. ಕಬ್ಬಿಣವಷ್ಟೇ ಅಲ್ಲ ಚಿನ್ನದ ಅದಿರಿನ ಅಕ್ರಮ ಗಣಿಗಾರಿಕೆ ಮತ್ತು ಸಾಗಣೆಯೂ ಇಲ್ಲಿ ನಡೆದಿದೆ.

ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ (ಎನ್‌ಸಿಪಿಎನ್‌ಆರ್) ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದಾಗ ಇದು ಅರಿವಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲೂ ಆಗದ ಸ್ಥಿತಿ ಇದೆ. ಲೋಕಾಯುಕ್ತರ ನೇಮಕವೇ ಆಗದಿರುವುದು ಕಪ್ಪತಗುಡ್ಡ ಸಂರಕ್ಷಣೆಗೆ ಅಡ್ಡಿಯಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಜನತೆಯ ಬದುಕನ್ನೇ ನಲುಗಿಸುವ ಹಂತ ತಲುಪಿದ್ದ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮಾಜ ಪರಿವರ್ತನಾ ಸಮುದಾಯ ಆರಂಭಿಸಿರುವ ಹೋರಾಟಕ್ಕೆ ದೊಡ್ಡ ಪ್ರಮಾಣದ ಯಶಸ್ಸು ದೊರೆತಿದೆ. ಈ ವರ್ಷವೂ ಹೋರಾಟ ಮುಂದುವರಿಯಲಿದೆ ಎಂದರು. `ಪೋಸ್ಕೊ ಒದ್ದೋಡಿಸುತ್ತೇವೆ~:ಜನ ಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಠಗಿ ಮಾತನಾಡಿ, `ಕಪ್ಪತಗುಡ್ಡ ಮತ್ತು ಸುತ್ತಮುತ್ತಲಲ್ಲಿ  ಅದಿರು ಲೂಟಿ ಮಾಡುವ ಉದ್ದೇಶದಿಂದಲೇ ಪೋಸ್ಕೊ ಉಕ್ಕು ಕಂಪೆನಿ ಗದಗ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಆಸಕ್ತಿ ತಳೆದಿದೆ.

ಭೂಸ್ವಾಧೀನ ಪ್ರಕ್ರಿಯೆ ವಿಷಯದಲ್ಲಿ ಸತ್ಯಾಂಶ ಮುಚ್ಚಿಡುತ್ತಿರುವ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಜನತೆಗೆ ಮೋಸ ಮಾಡುತ್ತಿದ್ದಾರೆ. ದಬ್ಬಾಳಿಕೆಯಿಂದ ಕೈಗಾರಿಕೆ ಸ್ಥಾಪನೆಗೆ ಮುಂದಾದರೆ ಪೋಸ್ಕೊ ಒದ್ದೋಡಿಸುತ್ತೇವೆ~ ಎಂದರು.

ಗ್ರಾಮ ಗಣರಾಜ್ಯ ವೇದಿಕೆ ಮುಖಂಡ ಮೋಹನ ಹಿಪ್ಪರಗಿ, ಜನಸಂಗ್ರಾಮ ಪರಿಷತ್ ಮುಖಂಡ ರಾಮನಗೌಡ ಜಾಲಿಬೆಂಚಿ ಮತ್ತು ಭ್ರಷ್ಟಾಚಾರದ ವಿರುದ್ಧ ಭಾರತ ಸಂಘಟನೆಯ ದೀಪಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT