ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಗೆರೆಗಳಲ್ಲಿ ಅವಿತ ಭಾವ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಕಲಾಪ

ಕಲೆ ಒಂದು ಸೃಜನಶೀಲ ಅಭಿವ್ಯಕ್ತಿ. ಹಾಡುಗಾರ ತನ್ನ ನೋವು ನಲಿವನ್ನು ಆಲಾಪದ ಮೂಲಕ ಅಭಿವ್ಯಕ್ತಿಗೊಳಿಸಿದರೆ, ಸಂಗೀತಗಾರ ಹೊಸ ರಾಗಗಳ ಮೂಲಕ ತನ್ನೆಲ್ಲಾ ನೋವು ಮರೆಯುತ್ತಾನೆ. ಹಾಗೆಯೇ ಚಿತ್ರ ಕಲಾವಿದ ಮನಸ್ಸಿನಲ್ಲಿ ನಡೆವ ಎಲ್ಲ ಬಗೆಯ ತಾಕಲಾಟಗಳನ್ನು ಕ್ಯಾನ್ವಾಸ್ ಮೇಲೆ ಬಿಂಬಿಸುತ್ತಾನೆ. ಭಾವತೀವ್ರತೆಯ ವಿಷಯಗಳಿಗೆಲ್ಲಾ ಮೂರ್ತರೂಪ ಕೊಟ್ಟು ಅದ್ಭುತ ಕಲೆ ಸೃಷ್ಟಿಸುತ್ತಾನೆ.

ಯುವ ಕಲಾವಿದ ಪ್ರಸನ್ನ ಕುಮಾರ್ ತಮ್ಮ ವಿಭಿನ್ನತೆಯಿಂದ ಇಷ್ಟವಾಗುತ್ತಾರೆ. ಇವರು ಗಾಢ ಹಳದಿ, ಕೆಂಪು, ಹಸಿರು ಹಾಗೂ ನೀಲಿ ಬಣ್ಣವನ್ನು ಹದವಾಗಿ ಬಳಸಿಕೊಂಡು ರಚಿಸಿರುವ ಅಮೂರ್ತ ಕಲಾಕೃತಿಗಳು ನೋಡುಗರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತವೆ. ಕಲೆಯನ್ನು ಆಸ್ವಾದಿಸಲು ಶಕ್ತಿ ಇರುವ ಕಲಾರಾಧಕರೆಲ್ಲರಿಗೂ ಇವರ ವಿಶಿಷ್ಟ ಪ್ರಯೋಗ ಇಷ್ಟವಾಗುತ್ತದೆ.

ಇವರ ಕಲಾಕೃತಿಗಳೆಲ್ಲವೂ ಅಮೂರ್ತವಾದವು. ಕಲಾಕೃತಿಯಲ್ಲಿರುವ ಕಪ್ಪು ಗೆರೆಗಳು ಅವರ ಕಲಾ ನೈಪುಣ್ಯ ಹಾಗೂ ಕೈಚಳಕಕ್ಕೆ ಸಾಕ್ಷಿಯಾಗಿವೆ. ಬಿಳಿ ಬಣ್ಣವನ್ನು ಕಲಾಕೃತಿಗಳ ಹಿನ್ನೆಲೆಯಾಗಿರಿಸಿಕೊಂಡಿರುವುದರಿಂದ ಅವುಗಳಿಗೊಂದು ಲಾಲಿತ್ಯ ಬಂದಿದೆ. ನೋಡಿದವರ ಮನಸ್ಸಿನ ಗ್ರಹಿಕೆಗೆ ಅನುಗುಣವಾಗಿ ಅದು ಮೂರ್ತರೂಪ ಪಡೆದುಕೊಳ್ಳುತ್ತಾ ಹೋಗುತ್ತದೆ.
ಇಂದ್ರಿಯಗಳಿಗೆ ಅಗೋಚರವಾದ ಭಾವಕ್ಕೆ ನಿಲುಕುವ ಇವರ ಕಲಾಕೃತಿಯಲ್ಲಿರುವ ಪ್ರತಿ ಗೆರೆಯೂ ಒಂದೊಂದು ಕಥೆ ಹೇಳುತ್ತವೆ. ಇವು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಇವರು ತಮ್ಮ ಮನದಾಳದ ಸಂವೇದನೆಗಳೆಲ್ಲವನ್ನೂ ರೇಖೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಆಕೃತಿಗಳು ಕಲಾವಿದನ ಮನೋಇಂಗಿತವನ್ನು ಪ್ರತಿಬಿಂಬಿಸುವಂತಿವೆ. ಈ ಕಲಾಕೃತಿಗಳು ಒಮ್ಮಮ್ಮೆ ನಮ್ಮನ್ನು ಭಾವುಕ ಜಗತ್ತಿನಿಂದ ಲೌಕಿಕ ಜಗತ್ತಿಗೂ ತಂದು ನಿಲ್ಲಿಸುವ ಗುಣಹೊಂದಿವೆ. 

ಭಾವನೆಯೊಂದನ್ನು ಅದರ ಮೂರ್ತರೂಪ ಗುಣ, ಲಕ್ಷಣಗಳಿಂದ ಪ್ರತ್ಯೇಕಿಸುವ ಕಲೆ ಪ್ರಸನ್ನ ಅವರಿಗೆ ಸಿದ್ಧಿಸಿದೆ. ಇದೇ ಅವರ ಕಲೆಯ ಶಕ್ತಿ. ಅವರು ಪ್ರದರ್ಶಿಸಿರುವ `ಮೀರ್‌ಲಿ ರಾ~ ಇದೇ ಮಾದರಿಯವು. ಇವು ಅವರ ಕಲೆಗೆ ಹಿಡಿದ ಕೈಗನ್ನಡಿ. ಸಣ್ಣ ಹಾಗೂ ದೊಡ್ಡ ಕಲಾಕೃತಿಗಳು ಆಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸುವ ಗಾಢ ಬಣ್ಣಗಳಿಂದ ಸೃಜಿಸಿವೆ. ಈ ಕಲಾಕೃತಿಗಳ ಒಡಲಲ್ಲಿ ಎಲ್ಲವೂ ಹುದುಗಿದೆ.

ಈ ಕಲಾಕೃತಿಗಳು ಯಾವುದೇ ನಿರ್ದಿಷ್ಟ ವಿಚಾರಧಾರೆ, ಸಂದೇಶ ಹೊಂದಿಲ್ಲ. ಆದರೆ, ನೋಡುವವರ ಕಣ್ಣು ಇವರ ಕಲೆಯನ್ನು ಗ್ರಹಿಸುವ ಗುಣ ಹೊಂದಿದ್ದರೆ ಈ ಕಲಾಕೃತಿಗಳು ಇಡೀ ವಿಶ್ವವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ನಮ್ಮನ್ನು ಬೇರೊಂದು ಗಮ್ಯಕ್ಕೆ ತಲುಪಿಸುತ್ತದೆ.

`ನನ್ನ ಎಲ್ಲ ಸಂವೇದನೆಗಳು ಗೆರೆಗಳಲ್ಲಿ ಜನ್ಮ ತಳೆದಿವೆ. ಈ ಕಲಾಕೃತಿಗಳು ಸೀಮಿತ ಚೌಕಟ್ಟಿನಲ್ಲಿ ಮೈದಳೆದಿಲ್ಲ. ಇದು ಭಾವಕ್ಕೆ ಸಂಬಂಧಿಸಿದ್ದಾದ್ದರಿಂದ ಇಲ್ಲಿ ಕಲೆಯ ಸೀಮೋಲ್ಲಂಘನವಾಗಿದೆ.
 

ಈ ಕಲಾಕೃತಿಗಳೆಲ್ಲವೂ ಗೆರೆ, ಬಣ್ಣ, ನೆರಳು ಬೆಳಕಿನ ಸಂಯೋಜನೆ ಹಾಗೂ ಎಳೆಗಳ ವಿನ್ಯಾಸದಲ್ಲಿ ಮೈದಳೆದಿದೆ. ನೋಡುಗರ ವೀಕ್ಷಣಾ ಜ್ಞಾನ ಹೆಚ್ಚಿಸುತ್ತವೆ. ಭಾವನೆಗಳಿಗೆ ಅನುಗುಣವಾಗಿ ಕಲಾಕೃತಿಗಳು  ರೂಪುಗೊಂಡಿರುವುದರಿಂದ ಇವುಗಳ ವೀಕ್ಷಣೆ ಒಂದು ಸುಂದರ ಪ್ರಯಾಣದ ಅನುಭೂತಿ ಕಟ್ಟಿಕೊಡುತ್ತದೆ~ ಎನ್ನುತ್ತಾರೆ ಪ್ರಸನ್ನ. ಇವರ ಕಲಾಕೃತಿಗಳು ಜ.14ರ ವರೆಗೆ ಲ್ಯಾವೆಲ್ಲೆ ರಸ್ತೆಯಲ್ಲಿರುವ ಟೈಮ್ ಅಂಡ್ ಸ್ಪೇಸ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT