ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ: ಕ್ರಿಮಿನಲ್ ಅಪರಾಧ ಪರಿಗಣನೆ ಅಗತ್ಯ ಇಲ್ಲ

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ತೆರಿಗೆ ವಂಚನೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದರಿಂದ ಮಾತ್ರ ಕಪ್ಪು ಹಣದ ಚಲಾವಣೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಿರುವ ಆದಾಯ ತೆರಿಗೆ ಕಾಯ್ದೆಯನ್ವಯ ರೂ 1 ಲಕ್ಷಕಿಂತ ಹೆಚ್ಚಿನ ತೆರಿಗೆ ತಪ್ಪಿಸುವವರಿಗೆ 7 ವರ್ಷಗಳ ಕಠಿಣ ಶಿಕ್ಷೆ ನೀಡಬಹುದಾಗಿದೆ. ತೆರಿಗೆ ತಪ್ಪಿಸುವುದನ್ನು ತಡೆಯಲು ಆದಾಯ ತೆರಿಗೆ ಕಾಯ್ದೆಯಲ್ಲೇ ಹಲವಾರು ಅವಕಾಶಗಳಿವೆ. ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ.

ಈಗ, ತೆರಿಗೆ ವಂಚನೆಯನ್ನೂ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದರಿಂದ ಮಾತ್ರ ಕಪ್ಪು ಹಣವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ತೆರಿಗೆ ಮತ್ತು ನಿಯಂತ್ರಣ ಸೇವೆಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಗಾರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಈಗಿರುವ ಆದಾಯ ತೆರಿಗೆ ಕಾಯ್ದೆಯಲ್ಲಿ  3 ತಿಂಗಳಿಂದ 7 ವರ್ಷಗಳ ವರೆಗಿನ ಕಠಿಣ ಶಿಕ್ಷೆ ವಿಧಿಸುವ ಅವಕಾಶ ಇದೆ. ಆದರೆ,ನನ್ನ 25 ವರ್ಷಗಳ ವೃತ್ತಿ ಅನುಭವದಲ್ಲಿ ತೆರಿಗೆ ವಂಚಿಸಿದ್ದಕ್ಕೆ ಯಾವುದೇ ಒಬ್ಬ ವ್ಯಕ್ತಿ ಜೈಲಿಗೆ ಹೋಗಿರುವುದನ್ನು ನೋಡಿಲ್ಲ ಎಂದು `ಕೆಪಿಎಂಜಿ~ ಮುಖ್ಯಸ್ಥ ಉದಯ್‌ವೇದ್ ಹೇಳಿದ್ದಾರೆ.

`ನಾಗರಿಕ ಸಮಾಜ ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ಆದಾಯ ತೆರಿಗೆ ನಿರ್ದೇಶನಾಲಯ ರಚಿಸಿದೆ. ತೆರಿಗೆ ವಂಚನೆ ಪ್ರಕರಣಗಳ ಕುರಿತು ಈ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಕಪ್ಪು ಹಣವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಇಂತಹ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧ ಎಂದು ವರ್ಗೀಕರಿಸುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ವಿಚಾರ ಸಂಕಿರಣ:
`ಕಪ್ಪು ಹಣ ಮತ್ತು ತೆರಿಗೆ ಸುಧಾರಣೆಗೆ~ ಸಂಬಂಧಿಸಿದಂತೆ ಇಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು  ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸೋಮವಾರ ಉದ್ಘಾಟಿಸಲಿದ್ದಾರೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ ಸಹಯೋಗದಲ್ಲಿ ಈ ವಿಚಾರಗೋಷ್ಠಿ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT