ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ: ಸಂಪತ್ತಿನ ಲೂಟಿ

Last Updated 1 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕಪ್ಪು ಹಣ ಇಂದು ಬಹು ಚರ್ಚಿತ ವಿಷಯ. ದೇಶದಲ್ಲಿ ಇರುವ ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಟು ಹಣದ ಪ್ರಮಾಣ ಭಾರಿ ದೊಡ್ಡದು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ, ಯಾರೊಬ್ಬರಿಗೂ ನಿಖರ ಲೆಕ್ಕ ಗೊತ್ತಿಲ್ಲ. ಖಚಿತ ಸಾಕ್ಷ್ಯದೊಂದಿಗೆ ಇಂತಹ ವ್ಯಕ್ತಿಯಲ್ಲಿ ಇಂತಿಷ್ಟು ಕಪ್ಪು ಹಣ ಇದೆ ಎಂದು ಹೇಳಿದ್ದೇ ಆದರೆ ಅಕ್ರಮವಾಗಿ ಸಂಪಾದಿಸಿದ ಈ ಹಣವನ್ನು ಮುಟ್ಟುಗೋಲು ಹಾಕಲು ಸರ್ಕಾರದ ಮೇಲೆ ಒತ್ತಡ ತರಬಹುದು. ಇಂತಹ ಸಾಕ್ಷ್ಯವೇ ಇಲ್ಲದಿದ್ದಾಗ ಏನು ಮಾಡಲು ಸಾಧ್ಯ. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರದೂ ಇದೇ ಅಸಹಾಯಕತೆ!

ಕಪ್ಪು ಹಣ ಎಂದರೆ ತೆರಿಗೆ ವಂಚಿತ ಭೂಗತ ಹಣ. ಸ್ವಿಸ್ ಬ್ಯಾಂಕ್‌ಗಳಲ್ಲಿ ಅಂತಹ ಕೋಟಿ ಕೋಟಿ ಹಣ ಕೊಳೆಯುತ್ತಿದೆ. ಇದರ ಬಗ್ಗೆ ಸರ್ಕಾರಕ್ಕೆ ಕೆಲವೊಂದು ಮಾಹಿತಿ ಗೊತ್ತಿಲ್ಲದೆ ಇಲ್ಲ. ಆದರೆ, ಬೇರೆ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ಇದನ್ನು ಬಹಿರಂಗಪಡಿಸುವುದಕ್ಕೆ ಅಡ್ಡಿ ಮಾಡುತ್ತಿವೆ.

ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವವರಿಗೆ ಇದು ಬಹಳ ದೊಡ್ಡ ರಕ್ಷಣೆಯಾಗಿ ನಿಂತುಬಿಟ್ಟಿದೆ. ಜರ್ಮನಿಯ ಲೈಚ್‌ಟೆನ್‌ಸ್ಟೈನ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟ 26 ಮಂದಿಯ ಹೆಸರನ್ನು ಸರ್ಕಾರ ಬಹಿರಂಗಪಡಿಸುವುದಕ್ಕೆ ಎದುರಾಗಿರುವ ಅಡ್ಡಿಯೂ ಇದೇ. ಇವರೆಲ್ಲರ ಹೆಸರನ್ನು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಒದಗಿಸಿದ್ದರೂ ಇದೆಲ್ಲ ನ್ಯಾಯಾಲಯದ ಪರಿಶೀಲನೆಗೆ ಮಾತ್ರವೇ ಹೊರತು ಬಹಿರಂಗಪಡಿಸಲು ಅಲ್ಲ ಎಂಬ ತಾಕೀತು ಮಾಡಿದೆ.

ನ್ಯಾಯಾಲಯ ಇದರಿಂದ ಸಹಜವಾಗಿಯೇ ಬೇಸರಗೊಂಡಿದೆ. ‘ಇದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದುದಕ್ಕೆ ಸಿಕ್ಕಿರುವ ಸರಳ ಮತ್ತು ಪರಿಪೂರ್ಣ ನಿದರ್ಶನ. ಭಾರಿ ಭಾರಿ ಅಪರಾಧಗಳ ಬಗ್ಗೆ ನಾವೆಲ್ಲ ಮಾತನಾಡುತ್ತೇವೆ. ಆದರೆ, ನಾವು ಯಾರೂ ವಿವಿಧ ಒಪ್ಪಂದಗಳ ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದಿಲ್ಲ....’ ಇಂತಹ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸರ್ಕಾರ ಅನರ್ಹ ಎಂಬುದಕ್ಕೆ ನ್ಯಾಯಾಲಯದ ಈ ಒಂದು ಸಾಲಿನ ಹೊರತು ಬೇರೇನು ಬೇಕು.

ಮೂಲ ಎಲ್ಲಿಯದು?
ಕಪ್ಪು ಹಣ ಉತ್ಪಾದನೆಯಾಗುತ್ತಿರುವುದಾದರೂ ಹೇಗೆ? ಇದಕ್ಕೆ ಹಣಕಾಸು ಸಚಿವರಲ್ಲೂ ಉತ್ತರ ಇಲ್ಲ. ಗೊತ್ತಿದ್ದರೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕಪ್ಪು ಹಣದ ಮೂಲ ಮತ್ತು ಲೋಪದೋಷ ಎಲ್ಲಿದೆ ಎಂಬುದು ಸಚಿವ ಪ್ರಣವ್ ಮಾತ್ರವಲ್ಲ, ಎಲ್ಲ ಅಧಿಕಾರಿಗ, ರಾಜಕಾರಣಿಗಳಿಗೆಲ್ಲ ಗೊತ್ತಿದೆ. ಸ್ವತಃ ಸರ್ಕಾರಗಳೂ ಭಾರಿ ಅಕ್ರಮದಲ್ಲಿ ತೊಡಗಿರುವಾಗ ಕಪ್ಪು ಹಣ ಸಂಗ್ರಹದಲ್ಲಿ ಅದರ ಪಾತ್ರವೂ ಇರುವುದು ನಿಶ್ಚಿತ. ಹೀಗಾಗಿ ತಮ್ಮ ಪೋಷಣೆಯಲ್ಲೇ ಇರುವ ಕಪ್ಪು ಹಣವನ್ನು ಅವರು ಬಹಿರಂಗಪಡಿಸುವುದಾದರೂ ಹೇಗೆ ಸಾಧ್ಯವಾದೀತು.

ಹೀಗಿದ್ದರೂ ಕಪ್ಪು ಹಣ ಸಂಗ್ರಹವಾಗಬಾರದು, ಮುಕ್ತ, ನ್ಯಾಯಸಮ್ಮತ ವ್ಯವಹಾರದ ಮೂಲಕ ತೆರಿಗೆ ವಂಚನೆಗೆ ಅವಕಾಶ ನೀಡಬಾರದು ಎಂದು ಹೇಳಿ ಅದೆಷ್ಟೋ ಕ್ರಮಗಳನ್ನು ಜಾರಿಗೆ ತರಲಾಗಿದೆ. ಕಡಿಮೆ ಪ್ರಮಾಣದ ತೆರಿಗೆ ಸಂಗ್ರಹ, ತೆರಿಗೆ ಸುಧಾರಣೆ, ಸ್ವಯಂ ಘೋಷಿತ ಆಸ್ತಿ ವಿವರ ಯೋಜನೆ, ಚೆಕ್‌ಗಳ ಮೂಲಕವಷ್ಟೇ ದೊಡ್ಡ ಬ್ಯಾಂಕಿಂಗ್ ವ್ಯವಹಾರ, ಅಧಿಕ ಮುಖಬೆಲೆಯ ನೋಟುಗಳನ್ನು ಪಡೆಯುವವರ ಮೇಲೆ ನಿಗಾ... ಇಂತಹ ಯಾವ ಕ್ರಮಗಳಿಂದಲೂ ಕಪ್ಪು ಹಣಕ್ಕೆ  ಕಡಿವಾಣ ಬಿದ್ದಿಲ್ಲ.

ಚುನಾವಣೆಯಲ್ಲಿ ಸರ್ಕಾರವೇ ಹಣ ನೀಡಿ ಅಭ್ಯರ್ಥಿಗಳ ಖರ್ಚು, ವೆಚ್ಚ ನೋಡಿಕೊಳ್ಳಬೇಕು, ಇದರಿಂದ ಚುನಾವಣಾ ಆಕ್ರಮಗಳು ಕಡಿಮೆಯಾದೀತು ಎಂಬ ಇನ್ನೊಂದು ಸಲಹೆಯೂ ಇದೆ. ಆದರೆ ಸರ್ಕಾರದಿಂದ ಸಿಗುವ ದುಡ್ಡನ್ನು ಅಧಿಕೃತವಾಗಿ ಬಳಸಿಕೊಂಡು ಅನಧಿಕೃತವಾಗಿ ಅಕ್ರಮ ಹಣ ಬಳಸುವುದರಿಂದ ಈ ಸಲಹೆ ಸಹ ಯಶಸ್ವಿಯಾಗಲು ಸಾಧ್ಯವಿಲ್ಲ.

ಭ್ರಷ್ಟ ವ್ಯವಸ್ಥೆ ನಾವೆಲ್ಲ ಹೇಳುವಂತೆ ಮತ್ತು ಸರ್ಕಾರವೂ ಉತ್ಸಾಹ ತೋರಿಸಿದಂತೆ ಹೊಸದೊಂದು ಸಂಸ್ಥೆಯನ್ನು ಹುಟ್ಟುಹಾಕಿ ಕಪ್ಪು ಹಣಕ್ಕೆ ಮಟ್ಟ ಹಾಕುವ ಪ್ರಯತ್ನ ನಡೆಸಿದರೂ ಅದೂ ಸಫಲವಾಗುವ ಸಾಧ್ಯತೆ ಇಲ್ಲ. ಏಕೆಂದರೆ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿಬಿಟ್ಟಿದೆ. ಹೊಸ ಸಂಸ್ಥೆಯೂ ಭ್ರಷ್ಟಾಚಾರದಿಂದ ದೂರ ಉಳಿಯುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಈಗಿರುವ ಹಣಕಾಸು ವಂಚನೆ ತಡೆಗಟ್ಟುವ ಸಂಸ್ಥೆಗಳು, ಇಲಾಖೆಗಳೆಲ್ಲ ಈ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ ಜನರ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.
 
ಭ್ರಷ್ಟ ವ್ಯವಸ್ಥೆಯೇ ಕಪ್ಪು ಹಣ ಸಂಗ್ರಹಕ್ಕೆ ಮುಖ್ಯ ಕಾರಣ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ರಾಜಕೀಯ ಪಕ್ಷಗಳಿಗೆ ಹಲವು ಉದ್ಯಮಗಳು ಹಣಕಾಸಿನ ನೆರವು ನೀಡಿರುತ್ತವೆ. ಹೀಗಾಗಿ ಸರ್ಕಾರದ ನೀತಿ ನಿರೂಪಣೆಯಲ್ಲಿ ಇಂತಹ ಉದ್ಯಮಗಳ ಪ್ರತಿನಿಧಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರಿರುತ್ತಾರೆ. ಉದ್ಯಮಗಳು ಮತ್ತು ರಾಜಕಾರಣಿಗಳ ನಡುವಿನ ಭ್ರಷ್ಟ ವ್ಯವಹಾರಗಳಿಗೆ ಯೋಜನೆಗಳನ್ನು ಜಾರಿಗೆ ತರುವ ಹೊಣೆ ಹೊತ್ತಿರುವ ಅಧಿಕಾರಿಗಳ ಸಹಕಾರವೇ ಕಾರಣ. ಅವರ ಸಹಕಾರ ಇಲ್ಲದಿದ್ದರೆ ಈ ಭ್ರಷ್ಟಾಚಾರ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಉದ್ಯಮಗಳ ಕೈಯಲ್ಲೇ ನಿಜವಾದ ಅಧಿಕಾರ ಇರುತ್ತದೆ, ಇವರನ್ನು ಎದುರು ಹಾಕಿಕೊಂಡು ಬದುಕಲು ಅಧಿಕಾರಿಗಳಿಗೂ ಸಾಧ್ಯವಿಲ್ಲ.

ಪ್ರಜಾಪ್ರಭುತ್ವದ ಇತರ ಎರಡು ಆಧಾರ ಸ್ತಂಭಗಳಾದ ನ್ಯಾಯಾಂಗ ಮತ್ತು ಮಾಧ್ಯಮಗಳಿಂದಲಾದರೂ ಇಂತಹ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲವೇ? ಇವುಗಳ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ.

ಒಟ್ಟಾರೆ ವ್ಯವಸ್ಥೆಯೇ ಅಕ್ರಮ ಹಣ ಸಂಪಾದನೆ ರೂಪದಲ್ಲಿ ಕಪ್ಪು ಹಣದ ಸೃಷ್ಟಿಗೆ ನೆರವು ನೀಡುತ್ತಿದೆ. ತಮ್ಮ ಖಾತೆದಾರರ ಹಿತಾಸಕ್ತಿ ಕಾಪಾಡುವುದು ವಿದೇಶಿ ಬ್ಯಾಂಕ್‌ಗಳ ಬದ್ಧತೆಯಾಗಿರುತ್ತದೆ. ಅಂತಹ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಅಕ್ರಮವಾಗಿ ಹಣ ಸಂಪಾದಿಸಿ ತಮ್ಮ ಬ್ಯಾಂಕ್‌ಗಳಲ್ಲಿ ಇಟ್ಟ ಖಾತೆದಾರರ ಬಗೆಗೆ ಗೋಪ್ಯತೆ ಕಾಪಾಡುವಂತಹ ಷರತ್ತಿಗೆ ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ ಅಂತರರಾಷ್ಟ್ರೀಯ ಒಪ್ಪಂದಗಳ ಉರುಳು ನಮ್ಮ ಕುತ್ತಿಗೆಯನ್ನು ಸುತ್ತಿಕೊಂಡರೆ, ಅಕ್ರಮ ಹಣ ಸಂಪಾದನೆ ಮಾಡಿದವರಿಗೆ ರಕ್ಷಣೆಯ ಗುರಾಣಿಗಳಾಗಿ ಮಾರ್ಪಡುತ್ತವೆ.

ಕಪ್ಪು ಹಣದ ಇತಿಹಾಸ ನೋಡಿದರೆ ಸರ್ಕಾರದ ಸಹಕಾರದಿಂದಲೇ ಇಷ್ಟೆಲ್ಲ ಅಕ್ರಮ ದುಡ್ಡು ಸಂಗ್ರಹವಾಗಿರುವುದು ಗೊತ್ತಾಗುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್ ಎಷ್ಟೇ ತರಾಟೆಗೆ ತೆಗೆದುಕೊಂಡರೂ ಅತ್ಯಂತ ಪ್ರಾಮಾಣಿಕರೆನಿಸಿಕೊಂಡ ಪ್ರಧಾನಿ ಅವರೂ ಕಪ್ಪುಹಣಕೋರರ ಹೆಸರು ಬಹಿರಂಗಪಡಿಸುವುದು ಸಾಧ್ಯವಿಲ್ಲ. ಸರ್ಕಾರದ ಅಳಿವು, ಉಳಿವಿನ ಪ್ರಶ್ನೆಯೇ ಇಲ್ಲಿ ಬಂದುಬಿಡುತ್ತದೆ. ಕಪ್ಪು ಹಣಕ್ಕೆ ಒಂದು ರೀತಿಯಲ್ಲಿ ಸರ್ಕಾರವೇ ಪೋಷಕ. ಹೀಗಾಗಿ ಖಾತೆದಾರರ ಹೆಸರನ್ನು ಬಹಿರಂಗಪಡಿಸದಿರುವಂತೆ ಸರ್ಕಾರದ ಮೇಲೆ ಭಾರಿ ಒತ್ತಡ ಬರುತ್ತದೆ. ಎಂತಹ ಛಡಿಯೇಟಿನ ಬಳಿಕವೂ ಸತ್ಯ ತೆರೆಮರೆಯಲ್ಲೇ ಉಳಿದುಬಿಡುತ್ತದೆ.

ಭ್ರಷ್ಟಾಚಾರ ಮತ್ತು ಕಪ್ಪು ಹಣ ಉತ್ಪಾದನೆಗೆ ಕಾರಣವಾಗುವ ಮೂಲಭೂತ ಕಾರಣಗಳತ್ತ ಗಮನ ಹರಿಸದೆ ಇದ್ದರೆ ಯಾವ ವಿಧಾನದಿಂದಲೂ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ. ಹಣಕಾಸು ಸಚಿವರು ಈಚೆಗೆ ಪ್ರಕಟಿಸಿದ ಐದು ಅಂಶಗಳ ಕಾರ್ಯತಂತ್ರವೂ ಫಲ ನೀಡುವುದು ಸಾಧ್ಯವಿಲ್ಲ. ಕಪ್ಪು ಹಣವನ್ನು ಬಯಲುಗೊಳಿಸುವ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕವಾಗಿದ್ದರೆ ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣದ ಖಾತೆದಾರರ ಹೆಸರು ಬಹಿರಂಗಪಡಿಸಿ ಅಂತಹ ಅಕ್ರಮ ದುಡ್ಡನ್ನು ದೇಶಕ್ಕೆ ತರುವ ಕೆಲಸವನ್ನು ಮಾಡಬೇಕು. ಸರ್ಕಾರ ಹೀಗೆ ಮಾಡಲೇಬೇಕು.

ಯಾಕೆಂದರೆ ಕಪ್ಪು ಹಣ ದೇಶದ ಆಸ್ತಿ. ಈ ದಿಟ್ಟ ಕ್ರಮದೊಂದಿಗೆ ಮತ್ತಷ್ಟು ಕಪ್ಪು ಹಣ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರದ ಬೇರು ಕತ್ತರಿಸುವುದು ಮತ್ತು ಉದ್ಯಮಿಗಳು-ರಾಜಕಾರಣಿಗಳು-ಅಧಿಕಾರಿಗಳ ಮಧ್ಯೆ ಇರುವ ಸಖ್ಯವನ್ನು ತುಂಡರಿಸಿದರೆ ಮಾತ್ರ ಇದು ಸಾಧ್ಯ. ಹಾಗಿದ್ದಾಗ ಮಾತ್ರ ಜನತೆ ಸರ್ಕಾರದ ಮೇಲೆ ನಂಬಿಕೆ ಇರಿಸುವುದೂ ಸಾಧ್ಯ. ದುರದೃಷ್ಟವೆಂದರೆ ಈಗಿನ ಸರ್ಕಾರದಿಂದ ನಾವು ಇದನ್ನು ನಿರೀಕ್ಷಿಸುವುದು ಅತಿಯಾದೀತು.

ಕಳೆದ 18 ತಿಂಗಳಲ್ಲಿ ಕೈತಪ್ಪಿ ಹೋದ ಆದಾಯ  ರೂ 15 ಸಾವಿರ ಕೋಟಿ  ಎಂಬುದು ಆದಾಯ ತೆರಿಗೆ ಇಲಾಖೆಯ ಅಂದಾಜು.  ಅದಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ಕಪ್ಪು ಹಣ ಇರುವುದು ನಿಶ್ಚಿತ. ಗ್ಲೋಬಲ್ ಫೈನಾನ್ಷಿಯಲ್ ಇಂಟೆಗ್ರಿಟಿ ಹೆಸರಿನ ವಾಷಿಂಗ್ಟನ್ ಮೂಲದ ಸಂಘಟನೆಯೊಂದು ಅಂದಾಜು ಮಾಡಿರುವ ಪ್ರಕಾರ 2002-06ರ ನಡುವೆ ದೇಶದಿಂದ ಪ್ರತಿ ವರ್ಷ 27.2 ಶತಕೋಟಿ ಡಾಲರ್ ಹಣ ಕಪ್ಪು ಹಣದ ರೂಪದಲ್ಲಿ ದೇಶದಿಂದ ಹೊರಕ್ಕೆ ಹರಿದು ಹೋಗಿದೆ. ಈ ಸಂಸ್ಥೆಯ ಅರ್ಥಶಾಸ್ತ್ರಜ್ಞ ದೇವ್‌ಕಾರ್ ಹೇಳುವ ಪ್ರಕಾರ 1948-2008ರ ನಡುವೆ ದೇಶದಿಂದ ಹರಿದು ಹೋದ ಕಪ್ಪುಹಣದ ಪ್ರಮಾಣ 462 ಶತಕೋಟಿ ಡಾಲರ್ ( ರೂ   20 ಲಕ್ಷ ಕೋಟಿ!). ದೇಶದಲ್ಲಿ ಅಕ್ರಮವಾಗಿ ಸಂಪಾದಿಸಿದ ದುಡ್ಡಿನ ಶೇ 72ರಷ್ಟು ಭಾಗ ವಿದೇಶಕ್ಕೆ ಹೋಗುತ್ತದೆ. ಇನ್ನೊಂದು ಅಂದಾಜಿನ ಪ್ರಕಾರ ಕಪ್ಪು ಹಣದ ಪ್ರಮಾಣ  ರೂ  72 ಲಕ್ಷ ಕೋಟಿಗಳಷ್ಟು ಇದೆ.

ದೇಶದ ಜಿಡಿಪಿಯ ಶೇ 50ರಷ್ಟುಪ್ರಮಣದ ಕಪ್ಪು ಹಣ ಇದೆ ಎಂದು ಪ್ರೊ. ಅರುಣ್ ಕುಮಾರ್ ಅಂದಾಜಿಸುತ್ತಾರೆ. 462 ಶತಕೋಟಿ ಡಾಲರ್‌ನಿಂದ 1,200 ಶತಕೋಟಿ ಡಾಲರ್‌ನಷ್ಟು ಕಪ್ಪು ಹಣ ಇರಬಹುದು ಎಂದು ಪ್ರಣವ್ ಮುಖರ್ಜಿ ಅವರೂ ಅಂದಾಜಿಸುತ್ತಾರೆ.

ಇಷ್ಟೆಲ್ಲ ದುಡ್ಡಿನಲ್ಲಿ ಏನೇನನ್ನು ಮಾಡಬಹುದು ಎಂಬ ಬಗ್ಗೆ ಇದೀಗ ಭಾರಿ ಚರ್ಚೆ ನಡೆಯುತ್ತಿದೆ. ಈ ಹಣದಲ್ಲಿ 40 ಕೋಟಿ ಜನರಿಗೆ ತಲಾ ಒಂದು ರೂ 1 ಲಕ್ಷ ಯಂತೆ ವಿತರಿಸಬಹುದು ಎಂದು ಒಂದು ಅಂದಾಜು ಹೇಳಿದರೆ, ವಿದೇಶಿ ಸಾಲಗಳನ್ನೆಲ್ಲ ತೀರಿಸಿ, ಸಾಮಾಜಿಕ ಕ್ಷೇತ್ರಕ್ಕೆ ಹಣ ತೊಡಗಿಸಿದ ಬಳಿಕವೂ ಹಣ ಮಿಕ್ಕಬಹುದು ಎಂದು ಇನ್ನೊಂದು ಅಂದಾಜು ಹೇಳುತ್ತದೆ. ಆದರೆ ಬೇರೆಲ್ಲೋ ಇಟ್ಟ ಹಣ ನಿಜವಾಗಿಯೂ ಮರಳಿ ಪಡೆಯದೆ ಇದ್ದರೆ ಕುತೂಹಲದ ಚರ್ಚೆಗಳಿಂದ ಏನು ಪ್ರಯೋಜನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT