ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣದಲ್ಲಿ ಶಾಸಕರ ಖರೀದಿ

Last Updated 1 ಏಪ್ರಿಲ್ 2011, 7:20 IST
ಅಕ್ಷರ ಗಾತ್ರ

ಬಂಗಾರಪೇಟೆ: ರಾಜ್ಯದ ಸಂಪನ್ಮೂಲವನ್ನೆಲ್ಲಾ ಹಗಲು ದರೋಡೆ ಮಾಡಿ ಗಳಿಸಿರುವ ಕಪ್ಪುಹಣದಲ್ಲಿ ಇತರೆ ಪಕ್ಷಗಳ ಶಾಸಕರಿಗೆ ಆಮಿಷ ತೋರಿಸಿ ಉಪಚುನಾವಣೆಗೆ ಕಾರಣವಾಗಿರುವ ಬಿಜೆಪಿಯನ್ನು ತಿರಸ್ಕರಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು. ತಾಲ್ಲೂಕಿನ ಹುಲಿಬೆಲೆ ಗ್ರಾಮದಲ್ಲಿ ಗುರುವಾರ ರಾಮರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾಹನದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ವೆಂಕಟೇಶಪ್ಪ ಪರ ಚುನಾವಣಾ ಪ್ರಚಾರ ಮಾಡಿದರು.
 

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರೈತರ ಕಷ್ಟ ಏನೆಂಬುದೇ ಅರ್ಥವಾಗಿಲ್ಲ. ಅವರು ರಸಗೊಬ್ಬರ ಕೇಳಿದರೆ ಗೋಲಿಬಾರ್ ಮಾಡಿಸುತ್ತಾರೆ. ಉದ್ಯೋಗ ಖಾತ್ರಿ ಕೂಲಿ ಹಣ ಕೇಳಿದರೆ ಪೊಲೀಸರಿಂದ ಬೂಟುಗಾಲಲ್ಲಿ ಒದೆಸುತ್ತಾರೆ. ಟೊಮೆಟೊ ಬೆಳೆದು ಬೆಲೆ ಸಿಗದೇ ರೈತರು ರಸ್ತೆಗೆ ಸುರಿದು ದಿನಗಟ್ಟಲೆ ಮುಷ್ಕರ ಮಾಡಿದರೂ ಅವರು ಇತ್ತ ತಿರುಗಿ ನೋಡುವುದೇ ಇಲ್ಲ ಎಂದು ಟೀಕಿಸಿದರು.
 

ಆಕ್ಷೇಪ: ನಂತರ ಮಾತನಾಡಿದ ವೆಂಕಟೇಶಪ್ಪ ಅವರು ಉದ್ವೇಗದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿಯಾಗಿ, ಏಕವಚನದಲ್ಲಿಮಾತನಾಡಲಾರಂಭಿಸಿದಾಗ ಹಾಜರಿದ್ದ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕುಮಾರಸ್ವಾಮಿಯವರೂ ಕೂಡ ಅವರ ಮಾತುಗಳಿಂದ ಮುಜುಗರ ಅನುಭವಿಸಿದ್ದು ಕಂಡುಬಂತು. ಸುತ್ತಮುತ್ತಲಿದ್ದವರು ವೆಂಕಟೇಶಪ್ಪ ಅವರನ್ನು ಸಮಾಧಾನಗೊಳಿಸಿದರು.
 

ಮಾಜಿ ಸಚಿವರಾದ ಕೆ.ಶ್ರೀನಿವಾಸಗೌಡ, ಆಲಂಗೂರ್ ಶ್ರೀನಿವಾಸ್, ಚೆಲುವರಾಯಸ್ವಾಮಿ, ಜಿಲ್ಲಾ ಜೆಡಿಎಸ್   ಘಟಕದ ಅಧ್ಯಕ್ಷ ಜಿ.ಕೆ.ವೆಂಕಶಿವಾರೆಡ್ಡಿ, ಮಾಜಿ ಶಾಸಕರಾದ ಭಕ್ತವತ್ಸಲಂ, ಎ.ನಾಗರಾಜ್, ಜಿ.ಪಂ. ಸದಸ್ಯೆಯ ಪತಿ ನಂಜೇಗೌಡ,  ಅರುಣ್‌ಕುಮಾರ್, ಮಂಜು, ಗಾಂಧಿನಗರ ನಾರಾಯಣಸ್ವಾಮಿ, ಶ್ರೀಕೃಷ್ಣ ಹಾಜರಿದ್ದರು.ಜೆಡಿಎಸ್ ಬಾವುಟ: ಹಳ್ಳಿಯಲ್ಲೆಲ್ಲಾ ಜೆಡಿಎಸ್ ಬಾವುಟಗಳೇ ತುಂಬಿ ತುಳುಕುತ್ತಿದ್ದವು. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅವರಿಗಾಗಿ ಕಾಯುತ್ತಿದ್ದರು. ಕುಮಾರಸ್ವಾಮಿ ಹಿಂದೆಯೇ ಉದ್ದದ ಸಾಲಿನಲ್ಲಿ ಬಂದ ಕಾರುಗಳಲ್ಲಿ 500 ಕ್ಕೂ ಹೆಚ್ಚು ಜನ ಅಲ್ಲಿ ಬಂದು ಸೇರಿದರು. ನಿರಂತರವಾಗಿ ಪಟಾಕಿಸಿ ಸಿಡಿಸಿದರು. ಕುಮಾರಸ್ವಾಮಿ, ಸಿ.ವೆಂಕಟೇಶಪ್ಪ ಭಾಷಣ ಮುಗಿದ ಕೂಡಲೇ ಬಂದವರೆಲ್ಲರೂ ನಿರ್ಗಮಿಸಿದರು.
 

ಕುಮಾರಸ್ವಾಮಿ ಅವರು ಕ್ಷೇತ್ರದ ಬೂದಿಕೋಟೆ, ಕಾಮಸಮುದ್ರ ಹೋಬಳಿಯ ಕೇತಗಾನಹಳ್ಳಿ, ದೋಣಿಮಡುಗು, ಬಲಮಂದೆ, ಕಾಮಸಮುದ್ರ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪ್ರಚಾರ ಕೈಗೊಂಡರು.

ಗುಪ್ತ ಮಾತುಕತೆ !
 ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಅಭ್ಯರ್ಥಿ ಸಿ.ವೆಂಕಟೇಶಪ್ಪ ಇಬ್ಬರೂ ಗುರುವಾರ ಹುಲಿಬೆಲೆ ಗ್ರಾಮದ ಸ್ಮಶಾನವೊಂದರ ಬಳಿ ತಾಂತ್ರಿಕರೊಬ್ಬರ ಜೊತೆ ಅರ್ಧ ಗಂಟೆಗೂ ಹೆಚ್ಚುಹೊತ್ತು ಗೌಪ್ಯವಾಗಿ ಸಮಯ ಕಳೆದಿರುವುದು ಕುತೂಹಲ ಮೂಡಿಸಿದೆ.
 

ಚುನಾವಣಾ ಪ್ರಚಾರಕ್ಕಾಗಿ ಗ್ರಾಮಕ್ಕೆ ಬಂದ ಕುಮಾರಸ್ವಾಮಿ ಅವರೊಡನೆಯೇ ಕಾರಿನಲ್ಲಿ ಬಂದವರೆನ್ನಲಾದ ತಾಂತ್ರಿಕರೊಬ್ಬರು, ಅಭ್ಯರ್ಥಿಯು ಸುಮಾರು ಅರ್ಧ ಗಂಟೆ ಕಾಲಕ್ಕೂ ಹೆಚ್ಚು ಹೊತ್ತು ಕಾರಿನಲ್ಲಿ ಕಾಲ ಕಳೆದರು. ಆ ಸಂದರ್ಭದಲ್ಲಿ ಅವರ ಕಾರಿನಲ್ಲಿದ್ದ ಜಿಲ್ಲಾ ಘಟಕ ಅಧ್ಯಕ್ಷ ಜಿ.ಕೆ.ವೆಂಕಶಿವಾರೆಡ್ಡಿ, ಚೆಲುವರಾಯಸ್ವಾಮಿ ಕಾರಿನಿಂದ ಹೊರಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT