ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ ನಿಗ್ರಹಕ್ಕೆ ಇಚ್ಛಾಶಕ್ತಿ ಅಗತ್ಯ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿನ ಕಪ್ಪುಹಣ ನಿಯಂತ್ರಣಕ್ಕೆ ಸಮಿತಿಗಳು ಹಾಗೂ ಅಧ್ಯಯನ ತಂಡಗಳ ನೇಮಕ ಮಾಡುವಂತಹ ನಿರ್ಧಾರಗಳಿಂದಾಗಿ ಈ ದಿಸೆಯಲ್ಲಿನ ಮೂಲ ಉದ್ದೇಶವೇ ನೇಪಥ್ಯಕ್ಕೆ ಸರಿದಿದೆ ಎಂದು ಜವಾಹರ ನೆಹರು ವಿಶ್ವವಿದ್ಯಾಲಯದ ತಜ್ಞರು ವಿಷಾದಿಸಿದ್ದಾರೆ.

ದೇಶದಲ್ಲಿ ತಾಂಡವವಾಡುತ್ತಿರುವ ಕಪ್ಪುಹಣದ ನಿಗ್ರಹಕ್ಕೆ ಸರ್ಕಾರ ಕೇವಲ ಅಧ್ಯಯನ ಸಮಿತಿ ಅಥವಾ ಇತರೆ ಸಮಿತಿಗಳನ್ನು ನೇಮಕ ಮಾಡುವತ್ತ ಗಮನ ಹರಿಸುತ್ತಿದೆಯೇ ಹೊರತು ಅಕ್ಷರಶಃ ಅದರ ನಿಗ್ರಹದ ಗುರಿ ಸಾಧನೆಗೆ ಹೆಜ್ಜೆ ಹಾಕುತ್ತಿಲ್ಲ ಎಂದು ಈ ಶಿಕ್ಷಣವೇತ್ತರು ಗಮನ ಸೆಳೆದಿದ್ದಾರೆ.

ಭ್ರಷ್ಟ ರಾಜಕಾರಣಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಅಧಿಕಾರಿ ವರ್ಗದವರು ಅಕ್ರಮವಾಗಿ ಗಳಿಸಿದ ಹಣವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಾಗೂ ವಿದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಜೆಎನ್‌ಯು ಅರ್ಥಶಾಸ್ತ್ರ ಅಧ್ಯಯನಗಳ ಕೇಂದ್ರ ಮತ್ತು ಯೋಜನಾ ವಿಭಾಗದ ಪ್ರೊಫೆಸರ್ ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

“ದಿ ಬ್ಲ್ಯಾಕ್ ಎಕಾನಮಿ ಇನ್ ಇಂಡಿಯಾ” ಎಂಬ ಪುಸ್ತಕದ ಕರ್ತೃವೂ ಆಗಿರುವ ಅರುಣ್ ಕುಮಾರ್, `ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ~ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ಇಂತಹುದೇ ಅಭಿಪ್ರಾಯಗಳನ್ನು ಸಾರ್ವಜನಿಕ ಹಣಕಾಸು ಮತ್ತು ಯೋಜನಾ ವಿಭಾಗದ ರಾಷ್ಟ್ರೀಯ ಸಂಸ್ಥೆಯ ಪ್ರೊಫೆಸರ್ ಇಳಾ ಪಟ್ನಾಯಕ್ ಕೂಡಾ ವ್ಯಕ್ತಪಡಿಸಿದ್ದಾರೆ.

1970ರ ಸುಮಾರಿನಲ್ಲಿ ದೇಶದಲ್ಲಿ ಕಪ್ಪು ಹಣದ ಪ್ರಮಾಣ ಶೇಕಡ 7ರಷ್ಟಿತ್ತು. ಈಗ ಇದು ಶೇಕಡ 21ರಷ್ಟು ಏರಿಕೆಯಾಗಿದೆ ಎಂದು ಜಾಗತಿಕ ವರದಿಗಳು ಹೇಳುತ್ತಿವೆ. 60 ವರ್ಷಗಳಲ್ಲಿ ನಾವು ಹತ್ತಾರು ಸಮಿತಿಗಳನ್ನು ಈ ದಿಸೆಯಲ್ಲಿ ನೇಮಕ ಮಾಡಿದ್ದೇವೆ. ನೂರಾರು ಸಲಹೆ, ಸೂಚನೆಗಳನ್ನು ಸ್ವೀಕರಿಸಿದ್ದೇವೆ, ಜಾರಿ ಕೂಡ ಮಾಡಿದ್ದೇವೆ. ವಿರೋಧಾಭಾಸ ಎಂಬಂತೆ ಕಪ್ಪುಹಣ ಸವಾಲಾಗಿ ಬೆಳೆಯುತ್ತಲೇ ಇದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT