ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ: ವಿದೇಶಾಂಗ ವಿಭಾಗದಲ್ಲಿ ನೂತನ ಘಟಕ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಪ್ಪುಹಣದ ಪಿಡುಗು ನಿಗ್ರಹಿಸುವ ದಿಸೆಯಲ್ಲಿ ಹಣಕಾಸು ಸಚಿವಾಲಯದಲ್ಲಿರುವ ಮಹತ್ವದ ವಿದೇಶಿ ತೆರಿಗೆ ವಿಭಾಗದ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.

ವಿದೇಶಿ ತೆರಿಗೆ ಇಲಾಖೆಯು ಭಾರತ ಹಾಗೂ ತೆರಿಗೆದಾರರ ಸ್ವರ್ಗ ಎನಿಸಿಕೊಂಡಿರುವ ದೇಶಗಳು ಮತ್ತು ಇತರ ದೇಶಗಳ ನಡುವೆ ವರ್ಗೀಕೃತ ತೆರಿಗೆಗೆ ಸಂಬಂಧಿಸಿದ ಮಾಹಿತಿಗಳ ಮೇಲ್ವಿಚಾರಣೆ ನಡೆಸುತ್ತದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಡಿಯಲ್ಲಿ ವಿದೇಶ ತೆರಿಗೆ ಹಾಗೂ ತೆರಿಗೆ ಸಂಶೋಧನಾ (ಎಫ್‌ಟಿ ಮತ್ತು ಟಿಆರ್) ವಿಭಾಗ ತೆರೆಯಲು ಸಚಿವಾಲಯವು ಇತ್ತೀಚೆಗೆ ಅನುಮೋದನೆ ನೀಡಿದೆ.

ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹಾಗೂ ಅಧೀನ ಕಾರ್ಯದರ್ಶಿ ಮಟ್ಟದ ಇಬ್ಬರು ಅಧಿಕಾರಿಗಳು ನೂತನ ವಿಭಾಗವನ್ನು ನಿರ್ವಹಿಸುವರು.

ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಈ ವಿಭಾಗವು ಕಾನೂನು ಜಾರಿ ನಿರ್ದೇಶನಾಲಯದ ನಡುವೆ ಸಂಪರ್ಕ ಸಾಧಿಸಲು ಅಂಚೆ ಕಚೇರಿಯಂತೆ ಕಾರ್ಯ ನಿರ್ವಹಿಸಲಿದೆ.

ಎಫ್‌ಟಿ ಹಾಗೂ ಆರ್‌ಟಿ ವಿಭಾಗದಲ್ಲಿ ಈವರೆಗೆ ಇಬ್ಬರು ನಿರ್ದೇಶಕರು ಇದ್ದರು. ಇದೀಗ ಹೊಸ ಘಟಕಗಳ ಸೇರ್ಪಡೆಯೊಂದಿಗೆ ಇಲ್ಲಿ ಐವರು ನಿರ್ದೇಶಕರು ಹಾಗೂ ಹಲವು ಅಧಿಕಾರಿಗಳು ಕಾರ್ಯ ನಿರ್ವಹಿಸುವರು. ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಕ್ರೋಡೀಕರಿಸಿದ ಅನುಮಾನಾಸ್ಪದ ವ್ಯವಹಾರಕ್ಕೆ ಸಂಬಂಧಿಸಿದ ವರದಿಗಳನ್ನು ಈ ಅಧಿಕಾರಿಗಳು ಪರಿಶೀಲಿಸುವರು.

ವಿವಿಧ ದೇಶಗಳೊಂದಿಗೆ ಭಾರತವು, ದ್ವಿತೆರಿಗೆ ರದ್ದತಿ ಒಪ್ಪಂದ (ಡಿಟಿಎಎ) ಕುರಿತು ಮರುಸಂಧಾನ ಮಾಡಿಕೊಳ್ಳುತ್ತಿದೆ. 22 ದೇಶಗಳ ಜತೆ ಈಗಾಗಲೇ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೆ ಈವರೆಗೆ ಇಷ್ಟೇ ಸಂಖ್ಯೆಯಲ್ಲಿ ತೆರಿಗೆ ಮಾಹಿತಿ ವಿನಿಮಯ ಒಪ್ಪಂದ (ಟಿಐಇಎ) ಮಾಡಿಕೊಳ್ಳಲಾಗಿದೆ.

ಎಫ್‌ಟಿ ಹಾಗೂ ಆರ್‌ಟಿ ವಿಭಾಗದ ಅಡಿಯಲ್ಲಿ `ಮಾಹಿತಿ ವಿನಿಮಯ ಘಟಕ~ ರಚಿಸಲು ಸಚಿವಾಲಯವು ನಿರ್ಧರಿಸಿದೆ. ದೇಶದಾದ್ಯಂತ ಆದಾಯ ತೆರಿಗೆ ಅಧಿಕಾರಿಗಳು ಅಕ್ರಮ ಹಣದ ಬಗ್ಗೆ ವಿದೇಶಗಳಿಂದ ಮಾಹಿತಿ ಪಡೆಯಲು ಈ ಘಟಕವನ್ನು ಸಂಪರ್ಕಿಸಬಹುದು.

ದೇಶದ ಪ್ರಜೆಗಳ ಅನುಮಾನಾಸ್ಪದ ವ್ಯವಹಾರ ಕುರಿತಂತೆ ಭಾರತವು ಈವರೆಗೆ 9,900ಕ್ಕೂ ಮೇಲ್ಪಟ್ಟು ಮಾಹಿತಿ ತುಣುಕುಗಳನ್ನು ಪಡೆದುಕೊಂಡಿದೆ. ಈ ಮಾಹಿತಿಗಳು ಪರಿಷ್ಕರಣೆ ಹಾಗೂ ತನಿಖೆಯ ವಿವಿಧ ಹಂತಗಳಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT