ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್ ಉದ್ಯಾನ: ಸಂಗೀತ ವೇದಿಕೆಗೆ ಹೊಸ ಮೆರುಗು

Last Updated 9 ಜುಲೈ 2013, 19:23 IST
ಅಕ್ಷರ ಗಾತ್ರ

ಬೆಂಗಳೂರು:  ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ನಗರದ ಕಬ್ಬನ್ ಉದ್ಯಾನದ ಕೇಂದ್ರ ಭಾಗದಲ್ಲಿ ನಿರ್ಮಾಣಗೊಂಡ ಸಂಗೀತ ವೇದಿಕೆ (ಬ್ಯಾಂಡ್ ಸ್ಟಾಂಡ್) ಹೊಸ ರೂಪ ಪಡೆಯಲು  ಸಜ್ಜಾಗಿದೆ!

192.19 ಎಕರೆ ವಿಸ್ತ್ರೀರ್ಣವಿರುವ ಕಬ್ಬನ್ ಉದ್ಯಾನದಲ್ಲಿ ವಿವಿಧ ಜಾತಿಯ ಸಸ್ಯ ಸಂಪತ್ತಿನ ನಡುವೆ ಬಣ್ಣ ಕಳೆದುಕೊಂಡು ನಿಂತಿರುವ ಈ ವೇದಿಕೆಯ ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ವಿಶೇಷ ಮೆರುಗು ನೀಡಲು ತೋಟಗಾರಿಕಾ ಇಲಾಖೆ ಈಗ ಮುಂದಾಗಿದೆ.

ಉದ್ದೇಶ ಈಡೇರಿತ್ತೇ?: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೀರ್ಘಾವಧಿಯ ಆಡಳಿತದ ನೆನಪಿನಾರ್ಥ ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು 1917ರಲ್ಲಿ ಈ ಸಂಗೀತ ವೇದಿಕೆಯನ್ನು ನಿರ್ಮಾಣ ಮಾಡಿದ್ದರು. ಪ್ರಕೃತಿಯ ಆಸ್ವಾದನೆಯೊಂದಿಗೆ ಪ್ರವಾಸಿಗರು ಹಾಗೂ ನಾಗರಿಕರಿಗೆ ಸಂಗೀತವನ್ನು ಉಣಬಡಿಸುವ ಸಲುವಾಗಿ ಈ ವೇದಿಕೆ ಬಳಕೆಯಾಗಿತ್ತು.

ವಾರಾಂತ್ಯಗಳಲ್ಲಿ ಸಂಗೀತ ಗೋಷ್ಠಿಗಳು ನಡೆದಿದ್ದವು. ಅಲ್ಲದೇ ಬ್ರಿಟಿಷ್ ನೌಕಾ ಪಡೆಯಿಂದಲೂ ಸಂಗೀತ ಕಾರ್ಯಕ್ರಮ ಜರುಗಿತ್ತು.
ಕ್ರಮೇಣ ಉದ್ಯಾನದಲ್ಲಿದ್ದ ಸಂಗೀತ ವೇದಿಕೆಯು ಕೇವಲ ಪಾಳು ಬಿದ್ದ ಕಟ್ಟಡವಾಗಿ ರೂಪುಗೊಂಡಿತ್ತು. ಯಾವುದೇ ಸಂಗೀತ ಕಾರ್ಯಕ್ರಮಗಳು ನಡೆಯಲಿಲ್ಲ. ಇದಕ್ಕೆ ಮರು ರೂಪ ನೀಡಿ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಹೆಜ್ಜೆ ಇಟ್ಟಿದೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೆ.ಎನ್.ಸುರೇಶ್ ಚಂದ್ರ, `ಶತಮಾನ ಪೂರೈಕೆಗೆ ವರ್ಷಗಳ ಎಣಿಕೆಯಲ್ಲಿರುವ ಈ ವೇದಿಕೆಯ ಗೋಡೆಗಳು, ಮೇಲ್ಛಾವಣಿಗಳು ಕುಸಿದು ಬೀಳುವ ಹಂತದಲ್ಲಿರುವುದರಿಂದ ಇದನ್ನು ದುರಸ್ತಿಗೊಳಿಸುವ ಬಗ್ಗೆ ಚರ್ಚೆ ನಡೆದಿತ್ತು.

ಐತಿಹಾಸಿಕ ಮಹತ್ವವಿರುವುದರಿಂದ ಕಟ್ಟಡದ ರಚನೆಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ಮಾಡಲಾಯಿತು. ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ' ಎಂದು ತಿಳಿಸಿದರು.

`ಕಟ್ಟಡದ ಸೌಂದರ್ಯಕ್ಕೆ ಕಿಂಚಿತ್ತು ಧಕ್ಕೆ ಬಾರದಂತೆ , ವಿನ್ಯಾಸದಲ್ಲಿ ಬದಲಾವಣೆಯಾಗದಂತೆ ಜಾಗ್ರತೆ ವಹಿಸಲಾಗುವುದು. ಈ ವೇದಿಕೆಯ ಸುತ್ತಮುತ್ತ ನೂರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಕುಳಿತುಕೊಳ್ಳಲು ಸ್ಥಳಾವಕಾಶವಿದೆ. ಇದರಿಂದ ಸಂಗೀತಾಸಕ್ತರನ್ನು ಪೋತ್ಸಾಹಿಸಿದಂತಾಗುತ್ತದೆ' ಎಂದು ಮಾಹಿತಿ ನೀಡಿದರು.

`ತೋಟಗಾರಿಕಾ ಇಲಾಖೆಯ 11 ಲಕ್ಷ ರೂಪಾಯಿ ಠೇವಣಿ ಲೋಕೋಪಯೋಗಿ ಇಲಾಖೆಯಲ್ಲಿದೆ. ಈಗಾಗಲೇ ಕಾಮಗಾರಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆದಿದ್ದು, ಇನ್ನೆರಡು ತಿಂಗಳುಗಳಲ್ಲಿ ಕಾಮಗಾರಿ ಮುಗಿಯುವ ಭರವಸೆಯಿದೆ. ನಂತರದ ದಿನಗಳಲ್ಲಿ ಎಂದಿನಂತೆ ಸಂಗೀತ ಕಾರ್ಯಕ್ರಮಗಳು ಜರುಗಲಿವೆ' ಎಂದು ಹೇಳಿದರು.

ಬರಲಿದೆ ಸಂಗೀತ ಕಾರಂಜಿ!:  ಕರ್ನಾಟಕ ರಾಜ್ಯ ಟೆನಿಸ್ ಅಸೋಸಿಯೇಷನ್ ಜಂಕ್ಷನ್‌ನಲ್ಲಿ ನಿರ್ಮಾಣಗೊಂಡ ಮೊದಲ ಕಾರಂಜಿಯು ಸಂಗೀತ ಕಾರಂಜಿಯಾಗಿ ಮಾರ್ಪಡಾಗಲಿದೆ.

ಈ ಕಾರಂಜಿಯು 1935-36ರಲ್ಲಿ  ನೇಪಾಳದ ರಾಣಿ ನೀಡಿದ್ದ ಐದು ಸಾವಿರ ರೂಪಾಯಿಯ ದೇಣಿಗೆ ಹಣದಲ್ಲಿ ನಿರ್ಮಾಣಗೊಂಡಿತ್ತು. ತಾಂತ್ರಿಕ ದೋಷದಿಂದ ಕಾರ್ಯಸ್ಥಗಿತವಾಗಿದ್ದ ಈ ಕಾರಂಜಿಯನ್ನು ಸಂಗೀತ  ಕಾರಂಜಿ ಮಾಡುವ ಉದ್ದೇಶ ಇಲಾಖೆಯ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT