ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನಕ್ಕೆ ಶೀಘ್ರ ಮರುನಾಮಕರಣ

ಶ್ರೀಚಾಮರಾಜೇಂದ್ರ ಉದ್ಯಾನವೆಂದು ಕರೆಯಲು ತೀರ್ಮಾನ
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಐತಿಹಾಸಿಕ ಇತಿಹಾಸವುಳ್ಳ ಬೆಂಗಳೂರಿನ ಕಬ್ಬನ್‌ ಉದ್ಯಾನಕ್ಕೆ ಶ್ರೀ ಚಾಮರಾಜೇಂದ್ರ ಉದ್ಯಾನ ಎಂದು ಮರು ನಾಮಕರಣ ಮಾಡಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ (ಕಬ್ಬನ್‌ ಉದ್ಯಾನ) ಮಹಾಂತೇಶ್‌ ಮುರಗೋಡ ತಿಳಿಸಿದರು.   

ಕಬ್ಬನ್‌ ಉದ್ಯಾನದ ಅಭಿವೃದ್ಧಿ ಕುರಿತು ತೋಟಗಾರಿಕಾ ಇಲಾಖೆ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಕಬ್ಬನ್‌ ಉದ್ಯಾನಕ್ಕೆ ಎಲ್ಲೂ ನಾಮಫಲಕ ಗಳೇ ಇಲ್ಲ. ಈ ಹಿನ್ನೆಲೆಯಲ್ಲಿ 1948ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ  ‘ಶ್ರೀ ಚಾಮರಾಜೇಂದ್ರ ಉದ್ಯಾನ’ ಎಂದು ಉದ್ಯಾನದ ಮೂರು ದ್ವಾರಗಳಲ್ಲಿ ನಾಮ ಫಲಕಗಳನ್ನು ಹಾಕಲಾಗುವುದು ಎಂದರು.

1927ರಲ್ಲಿ ಮೈಸೂರು ಸಂಸ್ಥಾನ ದಲ್ಲಿ ಕೃಷ್ಣರಾಜ ಒಡೆಯರ್‌ 25 ವರ್ಷಗಳ ಆಡಳಿತವನ್ನು ಪೂರೈಸಿದ ನೆನಪಿಗಾಗಿ ಕಬ್ಬನ್‌ ಉದ್ಯಾನಕ್ಕೆ ಶ್ರೀ ಚಾಮರಾಜೇಂದ್ರ ಉದ್ಯಾನ ಎಂದು ನಾಮಕರಣ ಮಾಡಿರುವ ಬಗ್ಗೆ ದಾಖಲೆಗಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸು ತ್ತಿದ್ದೇವೆ ಎಂದು ತಿಳಿಸಿದರು.

ಇದರೊಂದಿಗೆ ಕಬ್ಬನ್‌ ಉದ್ಯಾನದಲ್ಲಿ ಹೊಸದಾಗಿ ಮೂರು ಶೌಚಾಲಯಗಳು ಮತ್ತು ಮಳೆ ಬಂದಾಗ ರಕ್ಷಣೆ ಪಡೆಯಲು ಎರಡು ಛಾವಣಿಗಳನ್ನು ನಿರ್ಮಿಸಲಾಗುವುದು. ಹೊಸ ಸಿಮೆಂಟ್‌ ಆಸನಗಳು ಹಾಗೂ ಇರುವ ಐದು ಪ್ರತಿಮೆಗಳ ಮುಂದೆ ಮಾಹಿತಿ ಫಕಲಗಳನ್ನು ಹಾಕಲಾಗುವುದು ಎಂದರು.

ಉದ್ಯಾನದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿ ಸಿ ಕ್ಯಾಮರಾಗಳನ್ನು ಅಳವಡಿಸಲು, ಹಸು ಹಾಗೂ ದನಗಳು ಉದ್ಯಾನವನ್ನು ಪ್ರವೇಶಿಸದಂತೆ ’ಕೌ ಕ್ಯಾಚರ್‌’  ವ್ಯವಸ್ಥೆ ಮಾಡಲಾಗುವುದು. ಜೊತೆಗೆ  ಉದ್ಯಾನದಲ್ಲಿ ಹಾಪ್‌ಕಾಮ್ಸ್‌ ಮತ್ತು ಒಂದು ನರ್ಸರಿಯನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.

ಕಬ್ಬನ್‌ ಉದ್ಯಾನದಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಉದ್ಯಾನಗಳು ಕೇವಲ ಉದ್ಯಾನಗಳಾಗಿ ಉಳಿಯಬೇಕೆ ವಿನಃ  ಜನರು ವೈಯಕ್ತಿಕ ಅನುಕೂಲಗಳಿಗೆ ತಕ್ಕಂತೆ ಉದ್ಯಾನಗಳನ್ನು ಬಳಸಿಕೊಳ್ಳ ಬಾರದು ಎಂದು ಕಬ್ಬನ್‌ ಉದ್ಯಾನದಲ್ಲಿ ವಾಹನಗಳ ನಿಲುಗಡೆ ವಿಷಯಕ್ಕೆ ಸಂಬಂಧಿಸಿದಂತೆ ‘ಬಿ ಪ್ಯಾಕ್‌’ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉಪ ಲೋಕಾಯುಕ್ತ ಸುಭಾಷ್‌ ಅಡಿ ಪ್ರತಿಕ್ರಿಯಿಸಿದರು.

ಕಬ್ಬನ್‌ ಉದ್ಯಾನದ ಒಳಗಿರುವ ಏಳು ರಸ್ತೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ವಾಹನ ಸವಾರರಿಗಾಗಿ ಉದ್ಯಾನದ ಸುತ್ತಲೂ  ಫೆರಿಫೆರಿಯಲ್‌ ರಸ್ತೆಯನ್ನು ನಿರ್ಮಿಸಿದರೆ ಉದ್ಯಾನವನ್ನು ಕಾಪಾಡಬಹುದು ಎಂದು ಅವರು ಸಲಹೆ ನೀಡಿದರು.  

‘ಬಿ ಪ್ಯಾಕ್‌’ ಸದಸ್ಯೆ ಜ್ಯೋತಿ ತ್ಯಾಗರಾಜನ್‌ ಮಾತನಾಡಿ, ಕಬ್ಬನ್‌ ಉದ್ಯಾನದಲ್ಲಿ ವಾಹನಗಳ ವೇಗದ ಮಿತಿಯನ್ನು ಕಡಿಮೆ ಮಾಡಿ, ‘ಹಾರ್ನ್‌’   ಮಾಡದಂತೆ ನಿಷೇಧಿಸಬೇಕು. ಜೊತೆಗೆ  ವಾಹನ ಸಂಚಾರ ಕಡಿಮೆ ಇರುವ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಮಕ್ಕಳಿಗೆ ‘ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌’ನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್‌ ಅಡಿ ವಾಹನ ಸಂಚಾರವನ್ನು ನಿಷೇಧಿಸುವುದು ಸೂಕ್ತವಾದ ಸಲಹೆ. ಆದರೆ ಉದ್ಯಾನದಲ್ಲಿ ಆಟದ ಮೈದಾನಗಳನ್ನು ನಿರ್ಮಿಸುವುದು ಸರಿಯಲ್ಲ ಎಂದು ಖಾರವಾಗಿ ನುಡಿದರು. ಬಿಬಿಎಂಪಿ ವಲಯ ಆಯುಕ್ತ ವೆಂಕಟೇಶಪ್ಪ, ನಡಿಗೆದಾರರ ಸಂಘದ ಸದಸ್ಯರು ಮತ್ತು ’ಬಿ ಪ್ಯಾಕ್‌’ ನ ಸದಸ್ಯರು ಉಪಸ್ಥಿತರಿದ್ದರು.

ಹೋಟೆಲ್‌ ಆರಂಭಿಸಿ
ಕಬ್ಬನ್‌ ಉದ್ಯಾನದಲ್ಲಿರುವ ಮಕ್ಕಳ ಗ್ರಂಥಾಲಯಕ್ಕೆ ಬರುವ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಗ್ರಂಥಾಲಯದ ಬದಲಾಗಿ ಹಿಂದೆ ಇದ್ದಂತೆ ಹೋಟೆಲನ್ನು ಪ್ರಾರಂಭಿಸಬೇಕು. ಜೊತೆಗೆ ಮೊಬೈಲ್‌ ಕಾಫಿ ವ್ಯಾನ್‌ ಸೌಲಭ್ಯವನ್ನು ಒದಗಿಸಿದರೆ  ಉದ್ಯಾನಕ್ಕೆ ಬರುವ ನಡಿಗೆದಾರರು ಒಂದೆಡೆ ತಿಂಡಿ ತಿನ್ನುವ ನೆಪದಲ್ಲಿ ಒಟ್ಟಾಗಿ ಸ್ವಲ್ಪ ಕಾಲ ಕಳೆಯಲು ಅನುಕೂಲವಾಗುತ್ತದೆ.  ಕಬ್ಬನ್‌ ಉದ್ಯಾನದಲ್ಲಿರುವ ಬೀದಿ ನಾಯಿಗಳಿಂದ ಸಾಕು ನಾಯಿಗಳಿಗೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರಿಸುವ ವ್ಯವಸ್ಥೆಯಾದರೆ ಸೂಕ್ತ ವಾಗಿರುತ್ತದೆ.
    – ಸಿ .ಸೋಮಶೇಖರ್‌, ವ್ಯವಸ್ಥಾಪಕ ನಿರ್ದೇಶಕ,
ಕರ್ನಾರ್ಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT