ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಗೊಣ್ಣೆಹುಳು ಬಾಧೆ: ಬೆಳೆಗಾರ ತತ್ತರ

Last Updated 30 ಜೂನ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಂಗಾರು ವಿಳಂಬಗೊಂಡು ಒಣ ಹವೆ ಮುಂದುವರೆದ ಪರಿಣಾಮ ಕಬ್ಬು ಬೆಳೆಗೆ ಗೊಣ್ಣೆ ಹುಳು ಬಾಧೆ ತೀವ್ರಗೊಂಡಿದೆ. ಒಂದೆಡೆ ಮಳೆಯ ಕೊರತೆ ಇನ್ನೊಂದೆಡೆ ಪೈರಿಗೆ ಹುಳು ಬಾಧಿಸುತ್ತಿರುವುದು ಕಬ್ಬು ಬೆಳೆಗಾರರಲ್ಲಿ ಆತಂಕಕ್ಕೆ ಕಾಣವಾಗಿದೆ.

ಕಬ್ಬಿನ ಬೇರು ತಿನ್ನುವ ಗೊಣ್ಣೆ ಹುಳುವಿನ ಹಾವಳಿ ಸಾಮಾನ್ಯವಾಗಿ ಬರಗಾಲದ ಸಂದರ್ಭದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹುಳು ಬೇರನ್ನು ಸಂಪೂರ್ಣ ತಿಂದು ಹಾಕುವುದರಿಂದ ಶೇ 100ರಷ್ಟು ಬೆಳೆ ನಾಶವಾಗುತ್ತದೆ. ಕೃಷಿ ಇಲಾಖೆಯ ಮನವಿಯ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರ ವಿಭಾಗ ಗೊಣ್ಣೆಹುಳು ಬಾಧಿತ ಪ್ರದೇಶದ ಸಮೀಕ್ಷೆ ನಡೆಸಿದ್ದು, ಉತ್ತರ ಕರ್ನಾಟಕ ಭಾಗದ 3200 ಹೆಕ್ಟೇರ್‌ನಲ್ಲಿ ಈ ಬಾಧೆ ಕಾಣಿಸಿಕೊಂಡಿದೆ.

ಬೆಳಗಾವಿ, ವಿಜಾಪುರ ಭಾಗದಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ, ಮುಧೋಳ, ಮಹಾಲಿಂಗಪುರದಲ್ಲಿ ಗೊಣ್ಣೆ ಹುಳು ಈ ಬಾರಿ ತೀವ್ರ ಹಾವಳಿ ಮಾಡಿದೆ. ವಿವಿಯ ಸಮೀಕ್ಷೆಯಂತೆ ಈ ಭಾಗದಲ್ಲಿ ಈಗಾಗಲೇ 2600 ಹೆಕ್ಟೇರ್ ಕಬ್ಬು ಬೆಳೆ ನಾಶವಾಗಿದೆ. ಕಲಘಟಗಿ, ಅಳ್ನಾವರ ಭಾಗದಲ್ಲಿ 80 ಎಕರೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ 130 ಹೆಕ್ಟೇರ್ ಹಾಗೂ ದಾವಣಗೆರೆಯ ನಾಗರಕಟ್ಟೆ, ಕಾಡಜ್ಜಿ, ಎಲೇಬೇತೂರು, ಕೊಳೇನಹಳ್ಳಿ, ಕಾರಿಗನೂರು ಕ್ರಾಸ್, ಹೊನ್ನಾಳಿ, ಮುತ್ತೇನಹಳ್ಳಿ ಪ್ರದೇಶದಲ್ಲಿ 270 ಎಕರೆಗೆ ಬಾಧೆ ತಗುಲಿದೆ. ಒಣ ಬೇಸಾಯದ ಜೊತೆಗೆ ನೀರಾವರಿ ಆಶ್ರಿತ ಜಮೀನುಗಳಲ್ಲಿಯೂ ಕಾಣಿಸಿಕೊಂಡಿದೆ.

`ಬೇರಿಗೆ ಹುಳು ಬಾಧಿಸುತ್ತಿದ್ದಂತೆಯೇ ಕ್ರಮೇಣ ಕಬ್ಬು ಹಳದಿ ಬಣ್ಣಕ್ಕೆ ತಿರುಗಿ ಒಣಗಲಾರಂಭಿಸುತ್ತದೆ. ಮಣ್ಣಿನಲ್ಲಿ ಒಣಗಿದ ಕಡ್ಡಿ ನೆಟ್ಟಂತೆ ಕಾಣುವ ಕಬ್ಬಿನ ದಂಟು ಎಳೆದರೆ ಹೊರಗೆ ಬರುತ್ತದೆ~ ಎನ್ನುತ್ತಾರೆ ಬೆಳಗಾವಿ ಜಿಲ್ಲೆ ಸಂಕೇಶ್ವರದ ಅಣ್ಣಾರಾವ್ ಪಾಟೀಲ. ಹುಳು ಬಾಧೆಗೆ ಪಾಟೀಲರ 17 ಎಕರೆ ಕಬ್ಬು ಒಣಗಿದೆ.

ಇತರೆ ಬೆಳೆಗೂ ಭೀತಿ: ಕಬ್ಬಿನ ಗದ್ದೆಯ ಜೊತೆಗೆ ಸುತ್ತಲಿನ ಇತರೆ ಬೆಳೆಗೂ ದಾಳಿ ಇಡುವ ಗೊಣ್ಣೆಹುಳು, ಗೋಧಿ, ತೆಂಗು, ಬಾಳೆ, ಅಡಿಕೆ, ಅಲೂಗಡ್ಡೆ, ಭತ್ತ, ಅರಿಶಿಣ ಬೆಳೆಗೂ ಬಾಧಿಸುತ್ತದೆ ಎನ್ನುತ್ತಾರೆ ಕೃಷಿ ವಿವಿ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ಆರ್. ಪಾಟೀಲ. ಒಣ ಹವೆ ಇದೇ ರೀತಿ ಮುಂದುವರೆದರೆ ಬೇರೆ ಬೆಳೆಗಳಿಗೂ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ.

ಗೊಣ್ಣೆಹುಳು ಬಾಧಿತ ಗದ್ದೆಗಳಲ್ಲಿ ನೀರು ನಿಲ್ಲಿಸುವುದು ಅಥವಾ ಕಟಾವು ಮಾಡಿದ ನಂತರ ಉಳಿಯುವ ಕೂಳೆ ಕಬ್ಬಿಗೆ ಎಕರೆಗೆ ಐದು ಕೆಜಿಯಂತೆ ಕೃಷಿ ವಿವಿ ಅಭಿವೃದ್ಧಿಪಡಿಸಿರುವ ಮೆಟಾರೈಜಿಯಂ ಎಂಬ ಶಿಲೀಂಧ್ರ ನಾಶಕವನ್ನು ಸಗಣಿ ಗೊಬ್ಬರದೊಂದಿಗೆ ಸೇರಿಸಿ ನೀಡುವುದರಿಂದ ಹುಳು ನಿಯಂತ್ರಿಸಬಹುದು ಎಂದು ಡಾ.ಪಾಟೀಲ ಹೇಳುತ್ತಾರೆ.

ವಿಜ್ಞಾನಿಗಳೊಂದಿಗೆ ಸಂಪರ್ಕ: ಜಿಲ್ಲೆಯಲ್ಲಿ ಕಬ್ಬು ಬೆಳೆ ವಿಸ್ತೀರ್ಣ ಕಡಿಮೆ ಇರುವುದರಿಂದ ಅಕ್ಕಪಕ್ಕದ ಜಿಲ್ಲೆಗಳಷ್ಟು ಬಾಧೆಯ ತೀವ್ರತೆ ಇಲ್ಲ. ಬೇರೆ ಬೆಳೆಗಳಿಗೆ ಹುಳು ವ್ಯಾಪಿಸದಂತೆ ತಡೆಯಲು ಅಗತ್ಯ ಮುಂಜಾಗರೂಕತಾ ಕ್ರಮಕ್ಕಾಗಿ ಕೃಷಿ ವಿವಿ ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ~ ಎನ್ನುತ್ತಾರೆ ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಗಡಾದ್.

ಹುಳು ನಿಯಂತ್ರಿಸುವ ಕುರಿತು ಜೂನ್ 15ರಂದು ಕೃಷಿ ವಿವಿಯಲ್ಲಿ ಸಭೆ ನಡೆಸಲಾಗಿದೆ. ರೈತರ ಹೊಲಗಳಿಗೆ ತೆರಳಿ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಕೃಷಿ ಇಲಾಖೆ ಸಿಬ್ಬಂದಿಯ ಸಮನ್ವಯ ತಂಡ ರಚಿಸಲಾಗಿದೆ. ಮೆಟಾರೈಜಿಯಂ ಶಿಲಿಂಧ್ರ ನಾಶಕವನ್ನು ಇಲಾಖೆಯಿಂದ ಬೆಳೆಗಾರರಿಗೆ ವಿತರಿಸಲಾಗುವುದು. ಅಗತ್ಯವಿದ್ದವರು ಕೃಷಿ ವಿವಿಯಿಂದಲೂ ಪಡೆಯಬಹುದು ಎಂದು ಗಡಾದ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT