ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಮುಂಗಡ ಬೆಲೆ ನಿಗದಿ ಮಾಡದಿದ್ದರೆ ದಸರಾಗೆ ಅಡ್ಡಿ

Last Updated 19 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಮಂಡ್ಯ: ಪ್ರಸಕ್ತ ಸಾಲಿನ ಕಬ್ಬಿನ ಮುಂಗಡ ಬೆಲೆ ನಿಗದಿ ಮಾಡದಿದ್ದರೆ, ಅ.19 ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು. ಆಗಲೂ ಸ್ಪಂದಿಸದಿದ್ದರೆ, ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸುವ ಮೂಲಕ, ದಸರಾಕ್ಕೆ ಬರುವ ಪ್ರವಾಸಿಗರಿಗೆ  ಅಡ್ಡಿ ಪಡಿಸುತ್ತೇವೆ ಎಂದು ರೈತ ಮುಖಂಡರು ಪುನರುಚ್ಚರಿಸಿದರು.

ಕಬ್ಬಿನ ಮುಂಗಡ ಬೆಲೆ ನಿಗದಿಗೆ ಸಂಬಂಧಿಸಿದಂತೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರು, ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತವಾಯಿತು.

ರೈತ ಸಂಘದ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ರೈತರಿಗೆ ಪೂರಕವಾದ ಸಭೆಗಳಾಗಿಲ್ಲ. ಬೆಲೆ ಬಗೆಗೆ ತೀರ್ಮಾನ ತೆಗೆದುಕೊಳ್ಳುವವರು ಕಾರ್ಖಾನೆಗಳ ವತಿಯಿಂದ ಸಭೆಗೆ ಬರುವುದಿಲ್ಲ. ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿ. ಅಶೋಕ್ ಮಾತನಾಡಿ, ರಸ್ತೆ ತಡೆ ಮಾಡಲಾಗುವುದು ಎಂದ ಮೇಲೆ ಸಭೆ ಕರೆಯಲಾಗಿದೆ. ಕೂಡಲೇ ಮುಂಗಡ ಬೆಲೆ ನಿಗದಿ ಮಾಡಬೇಕು. ಹಿಂದಿನ ವರ್ಷದ ಬಾಕಿ ನೀಡಬೇಕು. ಇಲ್ಲದಿದ್ದರೆ ರಸ್ತೆ ತಡೆ ಮಾಡುವುದು ಖಂಡಿತ. ಜೈಲಿಗೆ ಹೋಗಲೂ ಸಿದ್ಧರಾಗಿದ್ದೇವೆ ಎಂದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಬೆಲೆ ನಿಗದಿ ಮಾಡುವಂತೆ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ. ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಬೆಲೆ ನಿಗದಿಯಾಗದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ನೀವೇ ಮೈಷುಗರ್ಸ್‌ಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದೀರಿ. ಸಭೆ ಕರೆದು ಬೆಲೆ ನಿಗದಿ ಮಾಡಿ ಎಂದು ಜಿಲ್ಲಾಧಿಕಾರಿಗೆ ಮೈಷುಗರ್ಸ್‌ ಕಬ್ಬು ಒಪ್ಪಿಗೆದಾರರ ಸಂಘದ ಎಸ್.ಕೃಷ್ಣ ಮನವಿ ಮಾಡಿದರು.

ದಾವಣಗೆರೆಯ ಶ್ಯಾಮನೂರು ಶಿವಶಂಕರಪ್ಪ ಕಾರ್ಖಾನೆಯವರು ಮುಂಗಡವಾಗಿ ಪ್ರತಿ ಟನ್‌ಗೆ 2,500 ರೂಪಾಯಿ ನೀಡುತ್ತಿದ್ದಾರೆ. ಅದನ್ನೇ ಇಲ್ಲಿಯೂ ನೀಡಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಲಾಗುವುದು ಎಂದು ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ 2,800 ರೂಪಾಯಿ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಅದಕ್ಕೆ ಬದ್ಧರಾಗಿದ್ದೇವೆ. ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿಗಳ ಮನೆ ಮುಂದಿನ ಧರಣಿಯಲ್ಲಿ ನಾವೂ ಪಾಲ್ಗೊಳ್ಳಬೇಕಾಗುತ್ತದೆ ಎಂದರು.

ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಮಾತನಾಡಿ, ಕಾರ್ಖಾನೆಯವರು ಉದಾರತೆ ತೋರಬೇಕು. ಚರ್ಚೆ ಮೂಲಕ ಬೆಲೆ ನಿಗದಿಗೆ ಸಮ್ಮತಿಸಬೇಕು. ಇಲ್ಲಿಯೇ ಬೆಲೆ ನಿಗದಿ ಮಾಡಿದ ಉದಾಹರಣೆಗಳಿವೆ ಎಂದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ದಾವಣೆಗೆರೆಯ ಕಾರ್ಖಾನೆಯವರು ಕೊಟ್ಟಾಗಿದೆ. ನೀವು ಕೊಡಿ ಎಂದು ಸಲಹೆ ಮಾಡಿದರು.

ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಪವನ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ರಚಿಸಿರುವ ಸಮಿತಿ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ಸಮಿತಿ ಸೂಚಿಸಿದ ಬೆಲೆ ನೀಡಲಾಗುವುದು ಎಂದರು.
ವಿ.ಅಶೋಕ್ ಮಾತನಾಡಿ, ಕಾರ್ಖಾನೆಯವರು ಹಾಗೂ ಜಿಲ್ಲಾಧಿಕಾರಿಗಳು ಪ್ರತ್ಯೇಕವಾಗಿ ಮಾತಾಡಿಕೊಂಡು ಬರಲಿ. ಅಂತಿಮವಾಗಿ ಬೆಲೆ ನಿಗದಿಗೆ ಮುಂದಾಗಲಿ ಎಂದರು.

ಅವರ ಸಲಹೆಯಂತೆ ಹೊರನಡೆದ ಅಧಿಕಾರಿಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರಾದರೂ, ನಿರ್ಧಾರಕ್ಕೆ ಬರಲಾಗಲಿಲ್ಲ. ಮರಳಿ ಬಂದ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರು, ನಿಮ್ಮ ಬೇಡಿಕೆಗಳ ಬಗೆಗೆ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಈ ಕುರಿತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು. ದೊಡ್ಡ ಹಬ್ಬವಾದ ದಸರಾ ಉತ್ಸವಕ್ಕೆ ಅಡ್ಡಿ ಪಡಿಸಬಾರದು ಎಂದು ಮನವಿ ಮಾಡಿದರು.

ಮುಂಗಡ ಬೆಲೆ ನಿರ್ಧರಿಸಿದರೆ ಸರಿ. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.

ಕೊಣಸಾಲೆ ನರಸರಾಜು, ಶಂಭೂನಹಳ್ಳಿ ಸುರೇಶ್, ಮರಿಲಿಂಗೇಗೌಡ, ಹಲ್ಲೆಗೆರೆ ಶಿವರಾಮು, ಕಿರಂಗೂರು ಪಾಪು, ಹನಿಯಂಬಾಡಿ ನಾಗರಾಜು, ಕೃಷ್ಣಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

ರೈತ ಮುಖಂಡರ ನಡುವೆ ಮಾತಿನ ಚಕಮಕಿ
ಮಂಡ್ಯ: ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡುತ್ತಿದ್ದಾಗ, ಕೃಷ್ಣಪ್ರಕಾಶ್ ಮಾತನಾಡಿದರು. ಇದರಿಂದ ಸಿಟ್ಟಿಗೆದ್ದ ಪುಟ್ಟಣ್ಣಯ್ಯ ಅವರು, ನಾನು ಮಾತನಾಡಿದ ನಂತರ ನೀನು ಮಾತನಾಡು. ಮಧ್ಯೆ ಮಾತನಾಡಬೇಡ ಎಂದರು.

ಇದಕ್ಕೆ ಕೃಷ್ಣಪ್ರಕಾಶ್ ಪ್ರತಿಕ್ರಿಯಿಸಿದರು. ಆಗ ಪುಟ್ಟಣ್ಣಯ್ಯ ಅವರ ಬೆಂಬಲಿಗರು ಕೃಷ್ಣಪ್ರಕಾಶ್ ಅವರೊಂದಿಗೆ ಮಾತಿನ ವಾಗ್ವಾದಕ್ಕೆ ಇಳಿದರು. ಉಳಿದವರು ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT