ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಯೋಗ್ಯ ಬೆಲೆ ಕೊಟ್ಟವರಿಗೆ ಮತ ಕೊಡಿ

Last Updated 19 ಅಕ್ಟೋಬರ್ 2012, 6:30 IST
ಅಕ್ಷರ ಗಾತ್ರ

ಮುಧೋಳ: ಕೃಷಿಕರು ದೇಶದ ಬೆನ್ನೆಲುಬು ಎಂದು ಹೇಳಿ ಆಯ್ಕೆಗೊಂಡ ಜನಪ್ರತಿನಿಧಿಗಳು,ಆಯ್ಕೆಗೊಂಡ ನಂತರ ಕೃಷಿಕರನ್ನೇ ಮರೆಯುತ್ತಾರೆ. ಅಂಥವರಿಗೆ ತಕ್ಕ ಪಾಠಕಲಿಸಿ. ಯೋಗ್ಯ ಕೃಷಿಕನನ್ನೇ ನಿಮ್ಮ ಪ್ರತಿನಿಧಿಯಾಗಿ ಆಯ್ಕೆಗೊಳಿಸಿ ಎಂದು ಮಹಾರಾಷ್ಟ್ರದ ಹಾತಕಣಗಲೆ ಲೋಕಸಭಾ ಕ್ಷೇತ್ರದ ಸಂಸದ, ಶೇತ್ಕರಿ ಸಂಘದ ಅಧ್ಯಕ್ಷ ರಾಜು ಶೆಟ್ಟಿ ರೈತರಿಗೆ  ಹೇಳಿದರು.

ನಗರದ ಉಸುಕಿನ ಮೈದಾನದಲ್ಲಿ ಗುರುವಾರ ನಡೆದ ಕಬ್ಬುಬೆಳೆಗಾರರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಕೃಷ್ಣಾ ನದಿ ತೀರದಲ್ಲಿ ಬೆಳೆಯುವ ಕಬ್ಬು ಜಗತ್ತಿನಲ್ಲಿ ಬೆಲೆಯುವ ಕಬ್ಬಿನ ಬೆಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಇಂಥ ಅತಿ ಹೆಚ್ಚು ರಿಕವರಿ ಬರುವ ಕಬ್ಬಿಗೆ ಕನಿಷ್ಟ ರೂ 3050 ಪ್ರಥಮ ಕಂತಿನಲ್ಲಿ ಕೊಡುವ ಕಾರ್ಖಾನೆಗಳಿಗೆ ಮಾತ್ರ ಕಬ್ಬು ಕಳಿಸಿ ಎಂದರು.

ಕಾರ್ಖಾನೆಗಳನ್ನು ನಡೆಸುವುದು ದೊಡ್ಡ ಸಾಹಸದ ಕೆಲಸವಲ್ಲ. ರೈತರು ಕಬ್ಬು ಕಳಿಸುತ್ತಾರೆ ನುರಿಸಿ ಸಕ್ಕರೆ ತಯಾರಿಸಿ ಮಾರಾಟ ಮಾಡಿಕೊಂಡು ಲಾಭ ಮಾಡಿಕೊಳ್ಳುವುದನ್ನು ರೈತರೂ ಮಾಡಿ ತೋರಿಸಬಲ್ಲರು. ಸಕ್ಕರೆ ಪ್ರತಿ ಕ್ವಿಂಟಾಲಿಗೆ ರೂ 3.5 ಸಾವಿರ ಮಾರುತ್ತದೆ. ವಿದ್ಯುತ್, ಸ್ಪಿರಿಟ್ ಸೇರಿದಂತೆ ಇನ್ನುಳಿದ ಉಪ ಉತ್ಪನ್ನಗಳಿಂದ ಬರುವ ಆದಾಯವನ್ನು ಲೆಕ್ಕ ಹಾಕಿದರೆ, ಪ್ರತಿ ಟನ್ ಕಬ್ಬುಗೆ ರೈತರಿಗೆ ರೂ 3500 ಕೊಟ್ಟರೂ ಕಾರ್ಖಾನೆಗಳಿಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು  ಶಾಂತಕುಮಾರ ಮಾತನಾಡಿ, ದೇಶದ ಸಕ್ಕರೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ ಈ ಬಾರಿ 40 ಲಕ್ಷ ಟನ್ ಸಕ್ಕರೆ ಹೊರದೇಶಗಳಿಗೆ ಹೋಗಲಿದೆ. ಆದರೆ ಕಬ್ಬು ಪ್ರತಿ ಸಲಕ್ಕಿಂತ ಈಬಾರಿ ಪ್ರತಿಶತ 50 ರಷ್ಟು ಕಡಿಮೆ ಇದೆ.

ರೈತರು ಹೆದರಬೇಡಿ ಒಗ್ಗಟ್ಟಾಗಿ ಹೋರಾಡಿ, ಹೋರಾಟದಲ್ಲಿಯೂ ಇದ್ದು, ಕಾರ್ಖಾನೆಗಳಿಗೆ ಕಬ್ಬು ಕಳಿಸುವ ರೈತರನ್ನು ಕಟ್ಟಿಹಾಕಿ ಬಹಿರಂಗವಾಗಿ ಮಾನ ಹರಾಜು ಹಾಕಿ, 10-12 ದಿನಗಳಲ್ಲಿ ನಿಮ್ಮ ಹೋರಾಟಕ್ಕೆ ನ್ಯಾಯ ಸಿಗುತ್ತದೆ, ಅವಸರ ಮಾಡಬೇಡಿ ಎಂದು ತಿಳಿಸಿದರು.

ರಾಯಬಾಗದ   ನಿವೃತ್ತ ಪೊಲೀಸ್ ಅಧಿಕಾರಿ ಪಿ.ರಾಜು ಮಾತನಾಡಿ,  ಇಂಥ ಹೋರಾಟಗಳ ಸಂಧರ್ಬದಲ್ಲಿ ರೈತರ ಮೇಲೆ ಹಲ್ಲೆಯಾಗುವುದು ಸಾಮಾನ್ಯ, ಅಂಥ ಹಲ್ಲೆಗಳು ತಮ್ಮ ಮೇಲೆ, ರಾಜು ಶೆಟ್ಟಿಯವರ ಮೇಲೆ ಸಾಕಷ್ಟು ಬಾರಿ ಆಗಿವೆ. ರಾಜು ಶೆಟ್ಟಿ ಸತ್ತೇ ಹೋಗಿದ್ದಾರೆಂದು ಬಿಟ್ಟು ಹೋಗಿದ್ದರು. ಆದರೆ ದೈವ ವಶಾತ್ ಅವರು ಬದುಕಿ ಹೋರಾಟವನ್ನು ಮತ್ತೆ ಮುಂದುವರಿಸಿದರು ಎಂದು ಹೇಳಿದರು.

ರೈತರು ಹಕ್ಕುಗಳಿಗಾಗಿ ಹೋರಾಡುವುದು ತಪ್ಪಲ್ಲ.  ಈ ಅಧಿಕಾರಿಗಳು ಬಳಸುವ ಜೀಪು, ಕಾರಿಗೆ ಡೀಸೆಲ್‌ಗೆ ಹಣ ಕೊಡುವವರು ಶ್ರೀಸಾಮಾನ್ಯರು, ಕೆಂಪುದೀಪದ ವಾಹನಗಳಿಗೆ ತಗಲುವ ಖರ್ಚು ಕೊಡುವವರು ಜನಸಾಮಾನ್ಯರು ಅಂದಮೇಲೆ ಈ ಅಧಿಕಾರಿಗಳು ಜನಸಾಮಾನ್ಯರ ಸೇವಕರಂತೆ ಕೆಲಸಮಾಡಬೇಕು. ಅದನ್ನು ಬಿಟ್ಟು ಉದ್ಧಟತನ ಪ್ರದರ್ಶಿಸಿದರೆ ಪರಿಸ್ಥಿತಿ ಕೈ ಮೀರಿತು ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡ ರಮೇಶ ಗಡದಣ್ಣವರ ಮಾತನಾಡಿ, ಯಾವುದೇ ಕಾರಣಕ್ಕೂ ಕಬ್ಬು ಕಳಿಸಬೇಡಿ, ಕಾರ್ಖಾನೆಗಳನ್ನು ಬಂದ್‌ಗೊಳಿಸಿ ಹೋರಾಡೋಣ, ನ್ಯಾಯ ಖಂಡಿತವಾಗಿಯೂ ಸಿಗುತ್ತದೆ. ರೈತರ ಹೋರಾಟಕ್ಕೆ ಬೆಂಬಲಿಸಿ ಎಂದು   ಕೇಳಿಕೊಂಡರು.

 ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಬಸವರಾಜ ಕುಂಬಾರ, ಪಂಚಪ್ಪ ಕೌಜಲಗಿ, ಜೆ.ಡಿ.ಎಸ್ ಅಧ್ಯಕ್ಷ ಶಂಕರ ನಾಯಕ, ಗಣಪತರಾವ ದೇಶಪಾಂಡೆ, ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಬಸವರಾಜ ಮಳಲಿ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಶ ಸೋರಗಾಂವಿ, ಮುತ್ತಪ್ಪ ಕೋಮಾರ, ಸುಭಾಷ ಶಿರಬೂರ, ನಾಗರಾಜ ಪೂಜಾರಿ, ರಾಮಪ್ಪಾ ಬಿಳ್ಳೂರ, ಸಿದ್ದಪ್ಪ ಸಿರಗುಪ್ಪಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT