ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಬಾಕಿ ಹಣ ಬಿಡುಗಡೆಗೆ ಆಗ್ರಹ

Last Updated 4 ಜುಲೈ 2013, 6:11 IST
ಅಕ್ಷರ ಗಾತ್ರ

ಮದ್ದೂರು:  ರೈತ ಕಬ್ಬಿನ ಬಾಕಿ ಹಣವನ್ನು ಬಿಡುಗಡೆಗೊಳಿಸುವಲ್ಲಿ ತಾಲ್ಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಬುಧವಾರ ಕಾರ್ಖಾನೆ ಎದುರು ರೈತ ಕಾರ್ಯಕರ್ತರು ಬಾರಕೋಲು ಚಳವಳಿ ನಡೆಸಿದರು.

ಬಾರುಕೋಲು ಹಿಡಿದು ಕಾರ್ಖಾನೆ ಎದುರು ಬೆಳಿಗ್ಗೆಯಿಂದ ಸಂಜೆಯವರೆಗೆ ಧರಣಿ ನಡೆಸಿದ ಕಾರ್ಯಕರ್ತರು ಆಡಳಿತ ಮಂಡಳಿ ಹಾಗೂ ಕ್ಷೇತ್ರ ಶಾಸಕರು ಹಾಗೂ ಜಿಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ವಿ. ಅಶೋಕ್ ಮಾತನಾಡಿ, ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ರೈತರಿಗೆ ಒಟ್ಟು 20ಕೋಟಿ ರೂಪಾಯಿ ಬಾಕಿ ನೀಡಬೇಕಿದ್ದು, ಜೂನ್ 30ರೊಳಗಾಗಿ ವಿತರಣೆ ಮಾಡುವುದಾಗಿ ಮಾತು ನೀಡಿದ್ದರು. ಆದರೆ ಇದೀಗ ಆಡಳಿತ ಮಂಡಳಿ ಮಾತಿಗೆ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಎಲ್ಲಾ ಬಾಕಿ ಹಣ ಬಿಡುಗಡೆಗೊಳಿಸುವವರೆಗೂ ಕಾರ್ಖಾನೆಯಿಂದ ಹೊರ ಹೋಗುವ ಹಾಗೂ ಒಳ ಹೋಗುವ ಎಲ್ಲಾ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು. ಈ ವಿಚಾರದಲ್ಲಿ ಯಾವುದೇ ರಾಜಿಗೆ ಅಸ್ಪದ ಇಲ್ಲ ಎಂದು ರೈತಸಂಘದ ಅಧ್ಯಕ್ಷ ಕೀಳಘಟ್ಟ ನಂಜುಂಡಯ್ಯ ಘೋಷಿಸಿದರು.

ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಮನಗೋಳಿ, ಉಪ ವ್ಯವಸ್ಥಾಪಕ ತಿರುವೆಂಕಟಂ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಮಹಾಂತೇಶ್ ಅವರುಗಳು ಉದ್ರಿಕ್ತ ರೈತರನ್ನು ಸಮಾಧಾನಗೊಳಿಸಿದರು.

ಜು.12ರೊಳಗಾಗಿ ಎಲ್ಲಾ 20ಕೋಟಿ ರೂಪಾಯಿ ಬಾಕಿಯನ್ನು ರೈತರಿಗೆ ಸಕಾಲದಲ್ಲಿ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ವಿಭಾಗೀಯ ಕಾರ್ಯದರ್ಶಿ ರಾಮಕೃಷ್ಣಯ್ಯ, ಮುಖಂಡರಾದ ಸೀತರಾಮು, ಜಿ. ಅಶೋಕ್, ಹುರುಗಲವಾಡಿ ಉಮೇಶ್, ರವಿ, ಆನಂದ್, ಮೂಡ್ಯಚನ್ನಪ್ಪ, ವಕೀಲ ಸತ್ಯ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT